ಯಾರ್ಯಾರದ್ದೋ ಬಾಣಂತನ ಮಾಡಿದಿನಿ. ಇನ್ನು ನಂಗೆ ವಯಸ್ಸಾಗ್ತಾ ಬಂತು, ನಿನ್ನದೊಂದು ಬಾಣಂತನ ಮಾಡಿ ನಿಲ್ಲಿಸಿ ಬಿಡ್ತೀನಿ. ಕೂಡಲ್ಲ ಈಗೀಗ , ನನ್ನ ಕೈ ಕಾಲು ಗಟ್ಟಿ ಇರುವಾಗಲೇ ಒಂದು ಮಗು ಹೆತ್ತು ಬಿಡು ಅಂತ ಅವಳು ಹೇಳುವಾಗ ಹೌದು ನಿಂಗೆ ಕೂಡಲ್ಲ ಅಂತ ನಾನು ಬೇಗ ಮಗು ಹೇರಬೇಕು ನೋಡು ಅಂತ ಮುಸಿ ಮುಸಿ ನಗುವಾಗ ನಕ್ಕರೂ ಅವಳ ಕಣ್ಣಲ್ಲಿ ಮಿಂಚು ಹೊಡೆದ ಹಾಗೆ ಒಂದು ವೇದನೆಯ ಸೆಳೆ ಮಾಯವಾಗುತ್ತಿತ್ತು ಯಾಕೆ ಎಂದು ಅರ್ಥವೇ ಆಗುತ್ತಿರಲಿಲ್ಲ. ಈ ವಯಸ್ಸಾದವರ ಜೊತೆ ಮಾತಾಡೋದು ಕಷ್ಟ ಎನ್ನುವ ಭಾವ ಸುಳಿದು ಮಾಯವಾಗುತ್ತಿತ್ತು.
ಆಮೇಲೆ ಸಿಗುತ್ತೋ ಇಲ್ವೋ, ಯಾಕೆ ಬೇಕು ಕಷ್ಟ, ಮಾಡಿದ ಮೇಲೆ ಸರಿಯಾಗಿ ಮಾಡಬೇಕು ಅಂತ ಒಂದು ಎತ್ತಿಟ್ಟಿದ್ದೆ. ಎಲ್ಲಿ ಇಟ್ಟಿದ್ದೆ ಅಂತ ನೆನಪೇ ಆಗ್ತಿರಲಿಲ್ಲ. ಇವತ್ತು ಸಿಗ್ತು ನೋಡು. ಇನ್ನೆಲ್ಲಾ ಬಾಣಂತಿ ಖಾರಕ್ಕೆ ಗಜ್ಜುಗ ಸಿಗುತ್ತೋ ಇಲ್ವೋ ಎಂದು ಯಾವುದೋ ದೊಡ್ಡ ಬಹುಮಾನ ಸಿಕ್ಕಿದ ಖುಷಿಯಲ್ಲಿ ಅವಳು ಅಟ್ಟದಲ್ಲಿ ಸಿಕ್ಕ ಗಜ್ಜುಗದ ಬಗ್ಗೆ ಹೇಳುವಾಗ ನನಗಿಲ್ಲಿ ನಗು. ಆಫೀಸ್ ಅಲ್ಲಿ ಇದೀನಿ ಮಾರಾಯ್ತಿ ಜೋಪಾನವಾಗಿ ಎತ್ತಿಟ್ಕೋ ಮತ್ತೆ ಹುಡುಕುವ ಹಾಗಾಗುತ್ತೆ ಎಂದು ಕಿಚಾಯಿಸಿದರೆ ಎತ್ತಿಡೋದು ಏನಿಲ್ಲ ಬಿಸಿಲಿಗೆ ಒಣಹಾಕಿದ್ದೇನೆ ಎಂದವಳ ಮಾತಿನಲ್ಲಿ ಕಂಡೂ ಕಾಣದ ಆದೇಶ..
ಯಾವುದೊ ಬೇರು, ಇನ್ಯಾವುದೋ ನಾರು, ಹುಡುಕಿ ಹುಡುಕಿ ಸ್ವಚ್ಛ ಮಾಡಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಬಾಣಂತಿ ಖಾರ ಆಯ್ತು ನೋಡು ಎಂದಾಗ ಮಾತ್ರ ಅದು ಸುಗ್ರೀವಾಜ್ಞೆ ಎನ್ನುವುದಕ್ಕಿಂತ ನಿನ್ನ ಹಂಬಲ ಅರ್ಥವಾಗಿತ್ತು. ಬಾಣಂತಿ ಖಾರ ಮಾಡಿಸಿಕೊಂಡು ಆದ ಮೇಲೆ ಮಗು ಹೆತ್ತವಳು ನಾನೇ ಇರಬೇಕು ನೋಡು ಎಂದು ನಗುತ್ತಲೇ ಕಿಚಾಯಿಸಿದರೆ ನಿನ್ನ ಕಣ್ಣಲ್ಲಿ ಏನೋ ತೃಪ್ತಿ. ಆಮೇಲೆ ಅಮ್ಮನೂ ಬಂದು ನೀವಿಬ್ಬರೂ ಏನು ತಿನ್ನಬೇಕು, ತಿನ್ನಬಾರದು, ಮಾಡಬೇಕು, ಮಾಡಬಾರದು ಎನ್ನುವ ಮಾತಿನಲ್ಲಿ ಮಗ್ನರಾಗಿ ನನ್ನ ಮಗಳಿಗೋ ನಿಮ್ಮ ಕಾಳಜಿಗೆ ಕಂಡೆ ಬೇರೇನೂ ಬೇಡವೆನಿಸಿ ಬರೆದರೆ ದೊಡ್ಡ ಕತೆಯೇ ಬಿಡು..
ದಿನ ತುಂಬುವ ಹೊತ್ತಿಗೆ ಬರ್ತೀನಿ ಇದೊಂದು ಸಾಂಗವಾಗಿ ಮಾಡಿದ್ರೆ ಅಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು ನೋಡು ಎಂದಾಗ ಹೂ ನನ್ನ ಮಗಳಿಗೆ ಯಾರು ಮಾಡ್ತಾರೆ ಬಾಣಂತನ ಎಂದು ನಕ್ಕಿದ್ದು ಇನ್ನೂ ನಿನ್ನೆ ಮೊನ್ನೆಯ ಹಾಗಿದೆ.. ಡಾಕ್ಟರ್ ಇನ್ನೂ ನಾಲ್ಕು ದಿನವಿರಬಹುದು ಆದರೆ ದಿನಾ ಟೆಸ್ಟ್ ಗೆ ಬಂದು ಹೋಗು ವಾಕಿಂಗ್ ಆದ ಹಾಗೂ ಆಗುತ್ತೆ ಎಂದು ನಕ್ಕಿದ್ದರು. ಮರುದಿನ ಬೆಳಿಗ್ಗೆ ಏಳುವಾಗಲೇ ಏನೋ ಸುಸ್ತು. ಇವತ್ತು ಆಗುತ್ತೆ ಕಣೆ ಅವಳು ತೀರ್ಪುಕೊಟ್ಟಿದ್ದಳು. ನಗಲೂ ಶಕ್ತಿಯಿಲ್ಲದೆ ಸುಮ್ಮನೆ ದಿಟ್ಟಿಸಿದರೆ ಅವಳೆಲ್ಲಿದ್ದಳು ? ಏನು ಇಷ್ಟ ಹೇಳು ಮಾಡಿ ಬಿಡ್ತೀನಿ, ಆಮೇಲೆ ಒಂದಷ್ಟು ತಿಂಗಳು ಪಥ್ಯ, ಮತ್ತೇನೂ ತಿನ್ನೋ ಹಾಗಿಲ್ಲ ಅವಳಾಗಲೇ ಅಡುಗೆ ಮನೆಯಲ್ಲಿ..ಅವಳ ಅನುಭವದ ಮಾತು ಸುಳ್ಳಾಗಿರಲಿಲ್ಲ. ಸಂಜೆಯಾಗುತ್ತಿದ್ದ ಹಾಗೆ ಸಣ್ಣಗೆ ನೋವು ಶುರುವಾಗಿ ರಾತ್ರಿಯ ಹೊತ್ತಿಗೆ ಮಗಳು ಹುಟ್ಟಿದ್ದಳು. ಸಿಜೇರಿಯನ್ ಎಲ್ಲಾ ಔಷಧಿಯಲ್ಲೇ ಇರುತ್ತೆ ಜಾಸ್ತಿ ಖಾರ ಅದೂ ಇದೂ ಅಂತ ತಿನ್ನಬೇಡ, ಸುತ್ತು ಗಿತ್ತು ಅಂತ ಹಾಕ್ತಾರೆ ಬೇಡಾ ಅನ್ನು, ಹುಷಾರು ಅಂತ ಡಾಕ್ಟರ್ ಹೇಳಿ ಹೋದರೆ ಅವಳು ಮಗುವನ್ನು ನೋಡಲು ಬರುವಾಗ ತನ್ನದೊಂದು ಮೆತ್ತನೆಯ ಕಾಟನ್ ಸೀರೆಯನ್ನು ತಂದಾಗಿತ್ತು.
ಅವರ ವಯಸ್ಸಿನಷ್ಟು ನಂಗೆ ಬಾಣಂತನ ಮಾಡಿ ಗೊತ್ತು. ತಲೆ ಹರಟೆ ಮಾಡದೆ ಹೇಳಿದ ಹಾಗೆ ಕೇಳು. ಇದೊಂದು ಸಲ ಮಾಡ್ತೀನಿ ಅಚ್ಚುಕಟ್ಟಾಗಿ ಮಾಡಿಸ್ಕೋ, ಮತ್ತೆ ನಾನಿರ್ತೀನೋ, ನೀನು ಇನ್ನೊಂದು ಮಾಡ್ಕೋತಿಯೋ ಯಾರಿಗೆ ಗೊತ್ತು. ಯಾರ್ಯಾರಿಗೋ ಮಾಡಿದವಳಿಗೆ ನಾನು ಸಾಕಿದ ಮಗುಗೆ ಮಾಡೋಕೆ ಬರಲ್ವಾ ಸುತ್ತು ಸುತ್ತುತ್ತಲೇ ಹೇಳಿದ ಮಾತು ಕೇಳಿ ಡಾಕ್ಟರ್ ಕೂಡಾ ನಕ್ಕಿದ್ದೂ ಇನ್ನೂ ನೆನಪಿದೆ.. ಇವತ್ತಿಗೂ ಒಂದು ದಿನಕ್ಕೂ ನೋಯದ ಬೆನ್ನು ಸೊಂಟ ಕಂಡಾಗ ಸವರಿಕೊಂಡರೆ ಅವಳ ಕೈ ಬಿಸುಪು, ಸೀರೆಯ ಮೆತ್ತೆ ತಗುಲಿದ ಹಾಗಾಗುತ್ತದೆ. ಯಾವ ನೋವು ಇಲ್ವಾ ನಿಮಗೆ ಅಂತ ಕೇಳುವವರ ಕಣ್ಣಲ್ಲಿ ಆಶ್ಚರ್ಯ ಗಮನಿಸಿದಾಗ ಅವಳು ನಕ್ಕ ಹಾಗೆ ಆಗುತ್ತದೆ. ಅವಳು ಹೇಳಿದ ಹಾಗೆ ಚಕಾರವೆತ್ತದೆ ಒಂದು ತಿಂಗಳು ಬಾಣಂತನದ ಸುಖ ಅನುಭವಿಸುತ್ತಾ ಮಲಗಿದ್ದವಳ ಬಳಿಗೆ ಬಂದು ನಾಳೆಯಿಂದ ಮಗುಗೆ ಅಮ್ಮನೋ ಚಿಕ್ಕಿನೋ ಸ್ನಾನ ಮಾಡಿಸ್ತಾಳೆ ಆಯ್ತಾ, ಬೇಜಾರು ಮಾಡ್ಕೋಬೇಡಾ ನನ್ನ ಕಾಲು ಹಿಡಿಯೋಲ್ಲ ನಿನ್ನ ಮಗು ಉದ್ದ ಇದಾಳೆ ಹೇಳುವಾಗ ಕಣ್ಣಲ್ಲಿ ನೀರು. ಅಷ್ಟೇ ತಾನೇ ಹೋಗ್ಲಿ ಬಿಡು ಅಂತ ನಿನ್ನ ಗುಬ್ಬಿ ದೇಹ ನೋಡುತ್ತಾ ಹೇಳಿದರೂ ಮತ್ತದೇ ಪ್ರಶ್ನೆ ಇಷ್ಟಕ್ಕೆ ವೇದನೆ ಯಾಕೆ?
ವರ್ಷ ಉರುಳಿದಂತೆ, ಮಗಳು ಬೆಳೆದಂತೆ ಅವಳ ಶಕ್ತಿ ಕುಂದುತ್ತಾ ಹೋಗಿದ್ದು ಮಾತ್ರ ಸಹಿಸಲು ಕಷ್ಟವಾದರೂ ಇದು ಬದುಕಿನ ಗತಿ ಎನ್ನುವುದು ತಿಳಿದಿತ್ತು. ಮನೆಗೆ ಬಂದರೂ ಒಂದು ಎಣ್ಣೆ ನೀರು ಹಾಕೋಕೆ ನನ್ನ ಕೈಯಲ್ಲಿ ಆಗೋಲ್ಲ ಎಂದು ಅವಳು ಕಣ್ಣಿರು ಆಗುವುದು ನೋಡಿ ಯಾಕೆ ಇಷ್ಟೊಂದು ಸೆಂಟಿಮೆಂಟಲ್ ಇವ್ಳು ಅನ್ನಿಸಿದರೂ ಹೇಳಲಾಗದೆ ನಕ್ಕು ಸುಮ್ಮನಾಗುತ್ತಿದ್ದೆ. ಮಾಡುವಷ್ಟು ಮಾಡಿ ಆಗಿದೆ ಬಿಡು ಯಾಕೆ ಬೇಜಾರು ಮಾಡ್ಕೋತಿ ಎಂತ ಸಮಾಧಾನ ಮಾಡಿದರೂ ಅವಳ ಕಣ್ಣಲ್ಲಿ ಚಕ್ರ ಸುಳಿ. ಈಗ ಕೂರಿಸಿಕೊಂಡು ತಲೆಗೆ ಎಣ್ಣೆ ಒತ್ತಿ ಸ್ನಾನಕ್ಕೆ ಹೋಗು ಎಂದರೆ ನಾನೇ ಮಾಡ್ಕೊತೀನಿ ಬಿಡಮ್ಮ ಎಂದು ಟವೆಲ್ ಎತ್ತಿಕೊಂಡು ಹೋದ ಮಗಳು ನೋಡಿ ನನ್ನ ಕಣ್ಣು ಮಂಜಾಗಿದ್ದು ಯಾಕೆ, ಹೊಟ್ಟೆಯೊಳಗೆ ಸಂಕಟ ಹುಟ್ಟಿದ್ದು ಯಾಕೆ?
ಕೆಲವಷ್ಟು ಪ್ರಶ್ನೆಗಳು ಪ್ರಶ್ನೆಗಳಾಗಿ ಉಳಿದು ಹೋಗಬೇಕು. ಅವಳಿಲ್ಲ ಅನ್ನುವ ವಾಸ್ತವ ರಾಚಿ ಹೆದರಿಸುವ ಹೊತ್ತಿಗೆ ಹೀಗೆ ನನ್ನೆಲ್ಲಾ ಒಂದೊಂದೇ ಪ್ರಶ್ನೆಗಳಿಗೆ ಉತ್ತರ ಸಿಕ್ಕು ಅಂದು ನಾನು ನಕ್ಕ ಹಾಗೆ ಅವಳು ನಗುತ್ತಿರಬಹುದಾ … ಕಣ್ಣು ಮಂಜಾಗಿರುವ ನನಗೆ ಕಾಣಿಸುತ್ತಿಲ್ಲ. ನಾನೇ ಸ್ನಾನ ಮಾಡ್ತೀನಿ ಅಂದ್ರೆ ಹಾಗ್ಯಾಕೆ ಮುಖ ಮಾಡ್ತಿ ಅಂತ ಮಗಳು ಪ್ರಶ್ನಿಸುತ್ತಿದ್ದಾಳೆ. ನಾನೀಗ ಸುಮ್ಮನೆ ನಗುತ್ತೇನೆ. ಈ ಮೌನ ಅವಳಿಗೆ ಅರ್ಥವಾಗುವ ದಿನ ಅವಳು ಹೇಗೆ ಯೋಚಿಸಬಹುದು……
- ಬದುಕು ಸರಳ…. ನಾವೇ ಅದನ್ನು ಕ್ಲಿಷ್ಟ ಮಾಡ್ಕೊತಿವಿ ಅಷ್ಟೇ - August 10, 2020
- ಮಾತೃತ್ವಕ್ಕೆ ಜೀವ ಭೇಧವಿಲ್ಲಾ …. - July 30, 2020
- ಉಳಿಸಿಕೊಳ್ಳುವುದು ಎಷ್ಟು ಕಷ್ಟ…. - July 21, 2020