Write to us : Contact.kshana@gmail.com

ಒಡೆದದ್ದು ಬರಿ ಮಡಕೆಯಾ

4.2
(10)
ಹದಿನೈದು ಇಪ್ಪತ್ತು ಮನೆಗಳಿದ್ದ ನಮ್ಮೂರು ಇದ್ದಿದ್ದು ವಾರಾಹಿ ನದಿಯ ಮಡಿಲಲ್ಲಿ.ಎದುರಿಗೆ ಹರಡಿದ್ದ ವಿಶಾಲ ಗದ್ದೆಯ ಅಂಚಿನಲ್ಲಿ ಸುಮ್ಮನೆ ಹರಿಯುತ್ತಿದ್ದ ಹಳ್ಳಕ್ಕೆ ಮಳೆಗಾಲ ಬರುತ್ತಿದ್ದಂತೆ ಎಲ್ಲಿಲ್ಲದ ಕೊಬ್ಬು. ಎಲ್ಲಿಲ್ಲಿಂದಲೋ ಬಂದು ಸೇರುತ್ತಿದ್ದ ತೊರೆಗಳನ್ನು ಸೇರಿಸಿಕೊಂಡ ಸಂಭ್ರಮದಲ್ಲಿ ದಡವನ್ನೂ ಮೀರಿ ಗದ್ದೆಗಳ ಅತಿಕ್ರಮಣ ಮಾಡಿ ಬೀಗುತ್ತಿತ್ತು. ದಾರಿಗಳನ್ನು ನುಂಗಿ ಕೇಕೆಹಾಕುತ್ತಿತ್ತು.ಹಾಗಾಗಿ ಮಳೆಗಾಲ ಬರುವ ಮೊದಲೇ ಎಲ್ಲರೂ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡು ಅವಳ ಕೊಬ್ಬಿಗೆ ತಣ್ಣನೆಯ ನಗುಬೀರಿ ಬಿಸಿಕಾಫಿ ಹೀರುತ್ತಿದ್ದರು.
ಪೇಟೆಗೆ ಹೋಗಬೇಕಾದರೆ ಸುಮಾರು ಐದು ಮೈಲಿ ನಡೆಯಬೇಕಾಗಿದ್ದರಿಂದ ತೀರಾ ಅನಿವಾರ್ಯವಾಗದ ಹೊರತು ಯಾರೂ ಹೋಗುತ್ತಿರಲಿಲ್ಲ. ಆದಷ್ಟು ತಾವೇ ಬೆಳೆದ ಬೆಳೆ  ಉಪಯೋಗಿಸುತ್ತಾ, ಭತ್ತವನ್ನು ಕುಟ್ಟಿಕೊಂಡು ಅಕ್ಕಿ ಮಾಡಿಕೊಳ್ಳುತ್ತಾ, ತಮ್ಮ ಕೆಲಸ ತಾವೇ ಮಾಡಿಕೊಳ್ಳುವುದನ್ನು ಕಲಿತಿದ್ದರು. ಬೇಸಿಗೆ ಬರುವ ಮುನ್ನ ಸೀಗೆಕಾಯಿ, ಅಂಟುವಾಳ ಕಾಯಿ ಅರಿಸಿನ ಹೀಗೆ ಬೇಕು ಬೇಕಾದದನೆಲ್ಲ ಕುಟ್ಟಿಕೊಂಡು ನಾಲ್ಕೈದು ತಿಂಗಳ ಮಳೆಗಾಲಕ್ಕೆ ಸಿದ್ಧರಾಗುತ್ತಿದ್ದರು. ಈಗಿನ ಅರ್ಥದಲ್ಲಿ ಅದು ಅಕ್ಷರಶಃ ಕ್ವಾರನ್ಟೈನ್.
ಇಂತಿರ್ಪ ಒಂದು ಮಳೆಗಾಲದ ಮುನ್ನ ಕಣದ ಅಂಚಿನಲ್ಲಿದ್ದ  ಒರಳುಕಲ್ಲಿನ ಸುತ್ತ ನಾನು ಏಳುವ ಮೊದಲೇ ಊರಿನ ಹೆಂಗಳೆಯರ ಕಲರವ ಆರಂಭವಾಗಿತ್ತು. ಕಣ್ಣುಜ್ಜುತ್ತಲೇ ಬಂದವಳಿಗೆ ಒನಕೆಯನ್ನು ಹಿಡಿದು ರಾಗವಾಗಿ ಹಾಡುತ್ತಾ ಭತ್ತ ಕುಟ್ಟುವುದರಲ್ಲಿ ಮಗ್ನರಾಗಿದ್ದವರನ್ನು ನೋಡಿ ಖುಷಿಯೋ ಖುಷಿ. ಇನ್ನು ಅವತ್ತಿಡೀ ಅಲ್ಲಿ ಜನ , ಮಾತು, ಜಾತ್ರೆ. ಬಿಸಿಲು ಒಳಗೆ ಹೋಗು ಎಂದು ಬೈಯುವವರು ಯಾರೂ ಇಲ್ಲದೆ ಎಲ್ಲರ ಮಕ್ಕಳೂ ಒಂದು ಕಡೆ ಸೇರುವ ಸೌಭಾಗ್ಯ. ಆಡುವ ವಾತಾವರಣ ಇದ್ದರೂ  ಪರೋಪಕಾರದ ಬುದ್ಧಿ ಜಾಗೃತವಾಗಿ ಅಜ್ಜಿ ನಂಗೂ ಒನಕೆ ಕೊಡೇ ನಾನೂ ಸಹಾಯ ಮಾಡ್ತೀನಿ ಅನ್ನುವುದರೊಳಗೆ ಬೆಚ್ಚಿಬಿದ್ದ ಎಲ್ಲರೂ ಒಕ್ಕೊರಿಳಿನಿಂದ ನೀನು ಸುಮ್ಮನೆ ಆಚೆಹೋದರೆ ಅದೇ ದೊಡ್ಡ ಸಹಾಯ ಹೋಗಿ ಆಡ್ಕೋ ಅಂತ ಆಸೆಗೆ ತಣ್ಣೀರೆರಚಿದರು.
 
ಆಸೆಯ ಕಣ್ಣಿಂದ ತಿರುತಿರುಗಿ ನೋಡುತ್ತಾ ಬಂದವಳಿಗೆ ಅವತ್ತು ಯಾವ ಆಟವೂ ಸಮಾಧಾನ ಕೊಟ್ಟಿರಲಿಲ್ಲ. ನೀವು ಕೊಡದಿದ್ದರೆ ಏನಂತೆ ಸಂಜೆ ನಿಮ್ಮ ಒನಕೆ ತೆಗೆದುಕೊಂಡು ಕುಟ್ಟಿ ಅಕ್ಕಿ ಮಾಡದಿದ್ದರೆ ನೋಡಿ ಎಂದು ಮನಸ್ಸಿನಲ್ಲೇ ಶಪಥ ಮಾಡಿ ಆಡುತ್ತಿದ್ದರೂ ಕಣ್ಣು ಮಾತ್ರ ಕಣದ ಕಡೆಗೆ. ಅವರೆಲ್ಲರು ಕೆಲಸ ಮುಗಿಸಿ ಹೊರಟಾಗ ಒಂದೇ ಉಸಿರಿಗೆ ಹೋಗಿ ಹುಡುಕಿದರೆ ಒನಕೆಯೂ ಇಲ್ಲ, ಒರಳಲ್ಲಿ ಭತ್ತವೂ ಇಲ್ಲ. ಇಡೀ ದಿನ ಅಜ್ಜಿಯ ಮೇಲೆ ಮುನಿಸಿಕೊಂಡು ಚಾಡಿ ಹೇಳಲು ಇರದ ಮಾವನನ್ನು ನೆನಪಿಸಿಕೊಂಡು ಬೇಜಾರಾಗಿ ಆ ದಿನವೆಲ್ಲಾ ವಿಷಾದದಲ್ಲೇ ಕಳೆದುಹೋಗಿತ್ತು.
ಮಾರನೆಯ ದಿನ ಬೆಳಗ್ಗೆ ತಿಂಡಿ ತಿಂದು ಕೈ ತೊಳೆಯಲು ಹೊರಹೋಗುವಾಗ ಕೊಟ್ಟಿಗೆಯಲ್ಲಿ ಒರಗಿಸಿಟ್ಟ ಒನಕೆ ಕಂಡು ಕಳೆದುಹೋದ ಪ್ರಿಯ ವಸ್ತುವೊಂದು ಸಿಕ್ಕಷ್ಟು ಸಂಭ್ರಮವಾಗಿ ಮತ್ತೆಲ್ಲಿ ಸಿಗಲ್ವೋ ಅಂತ ಅದೇ ಎಂಜಲು ಕೈಯಲ್ಲೇ ಎತ್ತಿಕೊಂಡು ಕೈತೊಳೆಯಲು ಹೋದವಳಿಗೆ ನೀರು ತುಂಬಿಸಿಟ್ಟ ಮಡಿಕೆಯನ್ನು ಕಂಡು ಕಣದ ವರೆಗೂ ಹೋಗಲು ಸೋಮಾರಿತನವಾಗಿ ಭತ್ತದ ಬದಲು ನೀರನ್ನೇ ಕುಟ್ಟೋಣ ಅಂತ ಅವರು ಹಾಡಿದ್ದನ್ನೇ ನನ್ನ ರಾಗದಲ್ಲಿ ಹಾಡುತ್ತಾ ಕುಟ್ಟುತ್ತಿದ್ದೆ. ಹಾಡು ಮುಗಿಸಿ ಕೆಳಗೆ ನೋಡಿದರೆ ಮಡಕೆಯಲ್ಲಿ ನೀರಿಲ್ಲ. ಇನ್ನೇನು ಅಜ್ಜಿ ಪಾತ್ರೆ ತೊಳೆಯಲು ಬರುವ ಹೊತ್ತು…..
ಒಂದೇ ಉಸಿರಿಗೆ ಒಳಗೆ ಹೋದವಳು ಅಜ್ಜಿ ನಾನು ನೀರು ಚೆಲ್ಲಿಲ್ಲ ಕಣೇ, ನಿಜ್ವಾಗ್ಲೂ ಏನೂ ಮಾಡಿಲ್ಲ ಅಂದೆ. ಕೇಳದೆ ತಪ್ಪೊಪ್ಪಿಗೆ ಮಾಡುವವಳ ಕಂಡು ಅವಳಿಗೆ ಏನೋ ಭಯಂಕರವಾಗಿದ್ದೇ ಜರುಗಿದೆ ಎಂದರ್ಥವಾಗಿ ಕೊಂಚ ಭಯದಲ್ಲೇ ನಡುಗುವ ಧ್ವನಿಯಲ್ಲಿ ಏನು ಮಾಡಿದ್ಯೆ ಪುಟ್ಟಿ ಅಂದ್ಲು. . ಭತ್ತ ಕುಟ್ಟಿದೆ ಅಷ್ಟೇ.. ನೀರ್ಯಾಕೆ ಚೆಲ್ಲಿಹೋಯ್ತು ಗೊತ್ತಿಲ್ಲ ಕಣೇ ಅಂದೆ. ಹೊರಗೆ ಬಂದವಳಿಗೆ ತಳ ಒಡೆದ ಮಡಕೆ, ಹರಿದ ನೀರು ಎಲ್ಲಾ ಕತೆಯನ್ನೂ ಹೇಳಿತ್ತು…
ನೀರು ಯಾಕೆ ಖಾಲಿಆಯ್ತು ಅಂತ ಅರ್ಥವಾಗದೆ ಅಯೋಮಯವಾಗಿ ಆಲೋಚಿಸುತ್ತಾ ನಿಂತವಳಿಗೆ ಅಜ್ಜಿಯ ಕೈಯಲ್ಲಿ ಕೋಲುಕಂಡಾಗಲೇ ಎಚ್ಚರವಾಗಿದ್ದು, ಕಾಲು ಓಟಕಿತ್ತಿದ್ದು. ಮಾವ ಆಗ ಬರದಿದ್ದರೆ ನನ್ನ ಕತೆ ಏನಾಗುತ್ತಿತ್ತೋ. ಅವತ್ತಿಡೀ ಅವಳ ಕಣ್ಣು ತಪ್ಪಿಸಿ ಮಾವನ ಹಿಂದೆಯೇ ತಿರುಗಾಡಿ ಕಜ್ಜಾಯ ಬೀಳುವುದು ತಪ್ಪಿಸಿಕೊಂಡಿದ್ದೆ. ಮಡಿಕೆಯ ನೀರು ಸರಾಗವಾಗಿ ಹರಿದು ಹೋಗಿತ್ತು. ಆದರೆ ಹರಿಯುತ್ತಿದ್ದ ವಾರಾಹಿಗೆ ಅಡ್ಡ ಕಟ್ಟಲು ಅದಾಗಲೇ ಕೆಲಸ ಆರಂಭವಾಗಿತ್ತು. ಒಬ್ಬೊಬ್ಬರೇ ಹೊಸ ಜಾಗ ಅರಸಿ ಬದುಕು ಮುಳುಗಿ ಹೋಗದಹಾಗೆ ಪ್ರಯತ್ನ ಪಡುವಾಗಲೇ ನಾವು ಅಲ್ಲಿಂದ ಹೊರಡಲು ಸಿದ್ಧವಾಗುತ್ತಿದ್ದೆವು.
ಹೊಸ ಊರು ಹೊಸ ಜಾಗ ಮನೆ ಕಟ್ಟಿ ತಂದಿದ್ದ ಒಂದೊಂದೇ ವಸ್ತುಗಳನ್ನು ಸೇರಿಸುವಾಗ ತಳ ಒಡೆದ ಈ ಮಡಕೆಯೂ ಕಾಣಿಸಿ ಆಶ್ಚರ್ಯ. ಇದು ಯಾಕೆ ತಂದ್ಯೇ ಎಂದು ಕೇಳಿದರೆ ಎಲ್ಲಿ ಬೈಯುತ್ತಾಳೋ ಎಂದು ಸುಮ್ಮನಾಗಿದ್ದೆ. ಅದರೊಳಗೆ ಉಮ್ಮಿಕರಿಯ ಬೂದಿ ತುಂಬಿ ಇಟ್ಟಿದ್ದಳು. ಇನ್ನೂ ಸೋಪ್ ಬಳಸದ ಕಾಲ . ಅದರಿಂದಲೇ ಬೂದಿ ತಂದು ಅದಕಷ್ಟು ಅಂಟುವಾಳದ ಪುಡಿ ಬೆರಸಿ ಪಾತ್ರೆ ತೊಳೆಯುತ್ತಿದ್ದಳು. ಎಷ್ಟೋ ವರ್ಷಗಳ ನಂತರ ಇದನ್ನು ಯಾಕೆ ತಂದೆ ಎಂದರೆ ಸುಮ್ಮನೆ ನಕ್ಕಿದ್ದಳು.
ಹರಿಯುತ್ತಿದ್ದ ವಾರಾಹಿ ಮಾತ್ರ ಉಸಿರುಗಟ್ಟಿ ನಿಂತಿರಲಿಲ್ಲ ಬದುಕು ಭಾವ ಎಲ್ಲವೂ ಉಸಿರುಗಟ್ಟಿತ್ತು. ಆ ವಿಷಾದ ಕಾಡಿದಾಗಲೆಲ್ಲ ಮಡಕೆಯಿಂದ ಹರಿದು ಹೋದ ನೀರು  ಅವಳಿಗೇನೂ ಹೊಳವು ಕೊಡುತ್ತಿತ್ತೋ.. ಮೊನ್ನೆ ಮೊನ್ನೆ ಮತ್ತೆ ಅದನ್ನು ನೋಡಿದಾಗ ಕಳಚಿಕೊಳ್ಳುವುದು ಕಷ್ಟ ಆದರೆ ಕಳಚಿಕೊಳ್ಳುವ ಧೈರ್ಯ ಮಾಡುವುದು ಇನ್ನೂ ಕಷ್ಟ ಅನ್ನಿಸಿತು. ಒಡೆದದ್ದು ಬರೀ ಮಡಕೆಯಾ….. ತಿರುಗಿ ನೋಡಿದರೆ ಹರಿದು ಹೋದ ನೀರಿನಷ್ಟೇ ಉತ್ತರಗಳು. ಅಜ್ಜಿಯ ನಗು ಮೌನ ಈಗ ಅರ್ಥವಾಗುತ್ತಿದೆ. ನೋಡಬೇಕಾದ ಅವಳು ಹರಿದುಹೋಗಿದ್ದಾಳೆ.

How do you like this post?

Click on a star to rate it!

Average rating 4.2 / 5. Vote count: 10

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

Shobha Rao

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಒಡಲಕಿಚ್ಚು