ಸತ್ಯವೆಂದಿಗು ಬೆಂಕಿ
ಸುಳ್ಳು ಬಲು ಸುಂದರಿಯು
ಅದಕೆ ಸುಳ್ಳಿಗೆ ಮನವ
ಸೋಲ್ವರೈ ಮಂದಿ !
ಸತ್ಯಾಗ್ನಿ ದಹಿಸಲಾ
ಗುಳಿವರೇನ್ ಸುಳ್ಳಿನೊಡ
ನಿರುವ ಪುರುಲೆಗಳೆಲ್ಲ
ಜಾಣಮೂರ್ಖ //
ಸತ್ಯವು ಬೆಂಕಿಯಿದ್ದ ಹಾಗೆ. ಯಾರೂ ಅದನ್ನು ತಡೆಯಲಾಗುವುದಿಲ್ಲ. ಆದರೆ ಸುಳ್ಳು ಬಲು ಸುಂದರಿ . ಅದಕ್ಕೇ ಮಿಥ್ಯಕ್ಕೆ ಎಲ್ಲರೂ ಸೋಲುತ್ತಾರೆ. ಸುಳ್ಳಿನ ಜೊತೆ ಪ್ರಪಂಚದಲ್ಲಿರುವ ಬಹಳಷ್ಟು ಜನರೇ ಇರಬಹುದು. ಆದರೆ ಸತ್ಯಾಗ್ನಿಯು ದಹಿಸಲು ಪ್ರಾರಂಭಿಸಿದರೆ ಸುಳ್ಳಿನ ಜೊತೆ ಇರುವವರಿಗೆ ಕ್ಷೇಮವಿಲ್ಲ. ತಾನು ಸತ್ಯವಂತನೆಂಬ ಮುಖವಾಡ ಹಾಕಿ ಬದುಕುತ್ತಿರುವವರೆಲ್ಲರೂ ಅದರಲ್ಲಿ ದಹಿಸಿ ಹೋಗಲೇ ಬೇಕು. ಬೂದಿ ಮುಚ್ಚಿದ ಕೆಂಡದಂತಿದೆ ಈ ಸತ್ಯ. ಒಂದು ದಿನ ಭೋರ್ಗರೆಯಲು ಪ್ರಾರಂಭಿಸಿದರೆ ಇದಕ್ಕೆ ಯಾರು ಎದಿರು ನಿಲ್ಲುವವರು !? ಈ ಸತ್ಯವು ಎಲ್ಲರಿಗೂ ಗೊತ್ತಿದ್ದರೂ ಸಹ ಸುಳ್ಳಿನಲ್ಲೇ ಬದುಕುತ್ತಿರುವವರಿಗೆ ಏನೆನ್ನಬೇಕು ? ಈ ಸತ್ಯವರಿತು ಬದುಕಿದರೆ ಎಲ್ಲರಿಗೂ ಕ್ಷೇಮ . ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021