ವ್ಯಯದ ಬೆಂಕಿಯು ಬಿಡದೆ
ಸಂಚಿತಾರ್ಥವ ಸುಡವು
ದಿದಕೆ ಚಿಂತೆಯೆ ಮನವೆ
ಸಂತಪಿಸುವೇಕೆ ?!
ಆಯು ತೀರಿದ ಬಳಿಕ
ವ್ಯಥೆಗೊಂಡೊಡೇನು ಫಲ ?!
ಇರುವಾಗ ಕರೆದು ಕೊಡು
ಜಾಣಮೂರ್ಖ//
ಸ್ನೇಹಿತರೇ , ಸ್ವಲ್ಪ ಸೂಕ್ಷ್ಮವಾಗಿ ಚಿಂತಿಸಿ! ನೀವು ಕೂಡಿಟ್ಟ ಹಣ ಎಷ್ಟೇ ಇರಲಿ ,ಅದು ನಿಮ್ಮದಲ್ಲ. ವ್ಯಯ ಮಾಡಲೇ ಬೇಕು. ಇಲ್ಲದಿದ್ದರೆ ಬಚ್ಚಿಟ್ಟಿದ್ದು ಪರರಿಂಗೆ ಎನ್ನುವರಲ್ಲಾ ! ಹಾಗೆ ಬೇರೆ ಯಾರದೋ ಪಾಲಾಗಿಬಿಡುತ್ತದೆ ಅಷ್ಟೆ. ಅಯ್ಯೋ ಖರ್ಚಾಗುತ್ತಿದೆಯಲ್ಲಾ ! ಎಂದು ದುಃಖಪಟ್ಟರೆ ಅದಕ್ಕೆ ಅರ್ಥವಿದೆಯೇ ? ಆಯಸ್ಸು ತೀರಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನು ಫಲವಯ್ಯಾ ಗೆಳೆಯ ? ರೈಲು ಹೋದಮೇಲೆ ಟಕೀಟು ಪಡೆದಂತೆ. ಅದಕ್ಕೇ ಇರುವಾಗ ನೀನೂ ಬಳಸಿ ಸ್ವಲ್ಪವನ್ನಾದರೂ ಸತ್ಪಾತ್ರರಿಗೆ ನೀಡು. ಅದರಿಂದ ಸಿಗುವ ಆನಂದವೇ ಬೇರೆ. ಅಚ್ಚರಿಯ ಮಾತೊಂದನ್ನು ಹೇಳುತ್ತೇನೆ ಕೇಳಿ ಗೆಳೆಯರೇ -“ಇರುವಾಗ ಕರೆದು ಕೊಡದಿದ್ದರೆ ಮುಂದೆ ಕೊಡುವ ಮನ ಬಂದರೂ ಪಡೆವವರು ಸಿಗರು !” ಭಗವಂತನು ಅವಕಾಶವನ್ನು ಕೊಟ್ಟು ನೋಡುತ್ತಾನೆ. ಆಗ ನಾವು ಹೇಗೆ ವರ್ತಿಸುತ್ತೇವೋ ಅದೇ ನಮ್ಮ ಮೂಲ ಗುಣ. ಉಳಿದುದೆಲ್ಲಾ ಹಾಗೇ ಸುಮ್ಮನೆ ಅಷ್ಟೆ.
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021