ಆರೋಗ್ಯವೆ ಭಾಗ್ಯವೆನ್ನುತ್ತಾರೆ! ನಾವೆಲ್ಲ ಚಿಕ್ಕವರಿದ್ದಾಗ ಅನಾರೋಗ್ಯವೇ ಭಾಗ್ಯವೆನಿಸುತ್ತಿತ್ತು. ಹುಷಾರಿಲ್ಲದಿದ್ದಾಗ ವಿಶೇಷ ಗಮನ ನಮ್ಮೆಡೆಗೆ ಹರಿದು ಬರುತ್ತಿತ್ತು. ತೀರ್ಥಹಳ್ಳಿಯೆಂಬ ಮಲೆನಾಡಿಗೆ ಬಂದ ಮೇಲಷ್ಟೇ ನಾನು ಆರೋಗ್ಯವಾಗಿದ್ದಾಗಲೂ ಕಾಫೀ ಬ್ರೆಡ್ಡು ತಿಂದದ್ದು. ನಾವೆಲ್ಲ ಖಾಯಿಲೆಯಿದ್ದಾಗ ಮಾತ್ರ ಕಾಫೀ ಬ್ರೆಡ್ಡು ಸೇವಿಸಿದ್ದು. ಈಗಲೂ ಕಾಫೀ ಬ್ರೆಡ್ಡು ಎದುರಾದರೆ ‘ಯಾಕೆ ಹುಷಾರಿಲ್ವಾ!?’ ಎಂದು ಕೇಳಬೇಕೆನಿಸುತ್ತದೆ. ಬಾಲ್ಯದಲ್ಲಿ ನಾವು ನೇರವಾಗಿ ಮಣ್ಣಿನೊಂದಿಗೇ ಸಂಪರ್ಕವಿಟ್ಟುಕೊಂಡಿದ್ದೆವು ಆದರೆ ವಕ್ಕರಿಸಿಕೊಂಡು ಯಾವ ಖಾಯಿಲೆಗಳು ನಮ್ಮ ಬಳಿಗೆ ಬಂದ ನೆನಪಿಲ್ಲ. ಏಳನೆಯ ತರಗತಿ ಸಮಯಕ್ಕಿರಬೇಕು ಮೊದಲ ಬಾರಿ ನಮ್ಮವ್ವ ಬುಧವಾರದ ಸಂತೆಯಲ್ಲಿ ಹವಾಯಿ ಚಪ್ಪಲಿ ತಂದುಕೊಟ್ಟಿದ್ದಳು! ತಲೆಯ ಮೇಲಿರಿಸಿದ ತುಂಬಿದ ವೈರ್ ಬ್ಯಾಗಿನಂಚಿನ ಹೊರ ಭಾಗಕ್ಕೆ ಹರಿದ ಸೀರೆ ತುಣುಕಿನಿಂದ ಆ ಚಪ್ಪಲಿಗಳನ್ನು ಕಟ್ಟಿಕೊಂಡು ನಮ್ಮವ್ವ ಲೀಲಾಜಾಲವಾಗಿ ಕೈಬೀಸಿಕೊಂಡು ಬರುತ್ತಿದ್ದರೆ ನನ್ನ ಓರಗೆಯ ಕೆಲವರು ನಮ್ಮವ್ವನನ್ನೇ ಹಿಂಬಾಲಿಸಿಕೊಂಡು ಬಂದು ಅವು ನನ್ನ ಕಾಲಿಗೆ ಬೀಳುವವರೆಗೂ ಕೆಕ್ಕರಿಸಿಕೊಂಡು ನೋಡಿ ಹಿಂದಿರುಗಿದ್ದರು! ತಂದ ಕೆಲವೇ ದಿನಕ್ಕೆ ಹರಿದು ಹೋದರೂ ಅರಿಬೆ, ಪಿನ್ನ… ಕೆಲವೊಮ್ಮೆ ಮಾದ್ರ ದುಂಡ್ಯಪ್ಪನ ಅಮೂಲ್ಯ ಸಹಕಾರದಿಂದ ಅವೆಷ್ಟೋ ವರ್ಷಗಳವರೆಗೆ ನಮ್ಮ ಕಾಲಿಗಪ್ಪಿಕೊಂಡವು. ಅಲ್ಲಿಯವರೆಗೂ ನನಗೆ ಚಪ್ಪಲಿ ಧರಿಸಿದ ನೆನಪಿಲ್ಲ. ಅವಿಲ್ಲವೆಂಬ ಬೇಜಾರೂ ಇದ್ದಿಲ್ಲ. ತಂದು ಕೊಟ್ಟ ಮೇಲೆ ಹಾಕಿಕೊಂಡೆವಷ್ಟೆ! ತುಂಬು ಜತನದಿಂದ!! ಈ ಚಪ್ಪಲಿಯಿಲ್ಲವೆಂಬ ಕಾರಣಕ್ಕೆ, ಮಣ್ಣು-ಕೆಸರಲ್ಲಿ ಆಡಿದೆವೆಂಬ ಕಾರಣಕ್ಕೆ ನಮಗೆ ಖಾಯಿಲೆ ಬಂದದ್ದೂ ಗೊತ್ತಿಲ್ಲ. ಆದರೂ ಬರುತ್ತಿತ್ತು! ವರ್ಷದಲ್ಲಿ ಒಂದೆರಡು ಎಂಥವಾದರೂ ಖಾಯಿಲೆ ಬಂದೇ ಬರುತ್ತಿದ್ದವು. ಅವಕ್ಕೆಲ್ಲ ಮುಖ್ಯ ಔಷಧಿಯೆಂದರೆ ನಮ್ಮವ್ವ ತೋರುತ್ತಿದ್ದ ಪ್ರೀತಿ ಮತ್ತು ಆರೈಕೆ. ನಮ್ಮನ್ನೆಲ್ಲ ಒಂಟಿಯಾಗಿರಿಸಿ ಹಗಲುರಾತ್ರಿಯೆನ್ನದೆ ಕೂಲಿ ಗುತ್ತಿಗೆಯಂಥ ಕೆಲಸದಲ್ಲೇ ಮುಳುಗಿರುತ್ತಿದ್ದ ಅವ್ವ ಖಾಯಿಲೆ ಬಂದಾಗ ಅದೂ ಭಾರೀ ಪ್ರಮಾಣದ್ದಾಗಿದ್ದರೆ ಮಾತ್ರ ನಮ್ಮ ಬಳಿಯೇ ಕೂತು ವಿಶೇಷವಾಗಿ ಪೊರೆಯುತ್ತಿದ್ದಳು. ಖಾಯಿಲೆ ಯಾವುದೇ ಆಗಿರಲಿ ಕೈ ಕಾಲು ದೇಹದ ಸಂಧಿಗೊಂದಿಗೆಲ್ಲ ಅಮೃತಾಂಜನವನ್ನು ಹಚ್ಚಿ… ನೀವಿ, ಕಿವಿಗೆಲ್ಲ ಅಮೃತಾಂಜನ ಮೆತ್ತಿದ ಹತ್ತಿ ಹಳ್ಳೆಯನ್ನು ತುರುಕಿ ಉಸಿರಾಡಲೂ ಕಷ್ಟವಾಗುವಂತೆ ದುಪ್ಡಿ ಹೊದ್ದುಕೊಂಡು ಬಿಟ್ಟರೆ ಎಂಥ ಚಳಿಯಲ್ಲೂ ತಪತಪನೆ ಬೆವರು ಹರಿದು ಎದ್ದಾಗ ಹಾಯ್! ಎನಿಸುತ್ತಿತ್ತು. ಒಂದೆಂಟಾಣಿ ಕಾಫಿ ಪುಡಿ ತಂದು ಚೂರೇ ಚೂರು ಆಡಿನ ಹಾಲು ಹಾಕಿ ಕೊಟ್ಟಳೆಂದರೆ ಒಂದರ್ಧ ಖಾಯಿಲೆ ಢಮಾರ್! ಉಳಿದರ್ಧ ಭಾಗ ವಾಸಿ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಹೆಗಲಿಗೇ ಬೀಳುತ್ತಿತ್ತು. ಮತ್ತೆ ಸಣ್ಣಪುಟ್ಟ ಖಾಯಿಲೆಗಳ ಆರೈಕೆಯೂ ನಮ್ಮ ಸುಪರ್ದಿಯಲ್ಲೇ ಇರುತ್ತಿದ್ದವು. ಆದರೆ ಒಂದು ಖುಷಿಯ ಸಂಗತಿಯೆಂದರೆ ಇಂಗ್ಲೀಷನ್ ಹೋಗಲಿ ಗುಳಿಗೆ ನುಗ್ಗಿದ್ದೇ ನನಗೆ ನೆನಪಿಲ್ಲ. ತೀರ ವಿಪರೀತವೆಂದರೆ ವಿಕ್ಸಾಕ್ಷನ್ ಫೈವಂಡ್ರೆಂಡ್ ಎಂಬೊಂದು ಗುಳಿಗೆಯಿತ್ತು. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಅದೊಂದೆ ಗುಳಿಗೆ! ಅದನ್ನು ನೋಡಿದರೇನೇ ಭಯವಾಗುತ್ತಿತ್ತು. ನನ್ನ ತಂಗಿಯಂತೂ ಸಲೀಸಾಗಿ ನುಂಗುತ್ತಿದ್ದ ಆ ಮಾತ್ರೆಯನ್ನು ನನಗೆ ಕಂಡರೇನೇ ಆಗುತ್ತಿರಲಿಲ್ಲ. ಹೆಚ್ಚೆಂದರೆ ಮುದ್ದೆಯೊಳಗೋ ರೊಟ್ಟಿಯ ಸರೆಯೊಳಗೆ ಅದನ್ನು ಹುದುಗಿಸಿ ನುಂಗುತ್ತಿದ್ದೆ. ಎಷ್ಟೆಂದರೂ ನಾನು ಹುಟ್ಟಿದ್ದು ವಿನೋದ ದೊಡ್ಡವ್ವನ ದನದ ಕೊಟ್ಟಿಗೆಯಲ್ಲಿ! ಅವಳು ನ್ಯಾಮತಿ ಗೌರ್ನಮೆಂಟ್ ಆಸ್ಪತ್ರೆಯಲ್ಲಿ!!
ತೀರ ಚಿಕ್ಕವನಿದ್ದಾಗ ಎಂಥದೋ ಟೈಪಾಯ್ಡೋ ಜಾಂಡಿಸೋ ಆಗಿತ್ತಂತೆ! ನನಗೆ!! ತುಂಬ ಪತ್ತ್ಯೇವು ಮಾಡಬೇಕಾದರೆ ಅದು ನಮ್ಮೂರಲ್ಲಿ ಆಗಲ್ಲವೆಂದ ಅವ್ವ ಗದ್ದೆಸೀಮೆಯ ನಮ್ಮ ದೊಡ್ಡವ್ವನ ಊರು ಭೈರನಹಳ್ಳಿಯಲ್ಲಿ ನನ್ನನ್ನು ಬಿಟ್ಟಿದ್ದಳು. ಆಗಿನ್ನೂ ನನ್ನ ತಲೆಗೂದಲನ್ನು ತೆಗೆಸಿರಲಿಲ್ಲವಂತೆ. ನಮ್ಮ ದೊಡವ್ವನ ಊರಲ್ಲಿ ಸಮೃದ್ಧ ಕಾಕಡ ಬೇರೆ. ಚೆನ್ನಾಗಿ ತಲೆ ಬಾಚಿ ಹೂ ಮುಡಿಸಿ ಬಿಟ್ಟಳೆಂದರೆ ಆ ಪುಟ್ಟ ಊರನ್ನು ಸುತ್ತಲು ಹೋಗುತ್ತಿದ್ದೆ. ಪ್ರೀತಿಯಿಂದ ಕರೆದು ಯಾರೇನೇ ತಿನ್ನಲು ಕೊಡಬಂದರೆ ‘ಇರಿ, ಬಂದೆ’ನೆನುತ ಓಡಿ ಬಂದು ದೊಡ್ಡವ್ವನ ಒಪ್ಪಿಗೆಗೆ ಕಾಯುತ್ತಿದ್ದೆ. ಪತ್ತೇವಲ್ಲವೇ!? ನಮಗಾಗ ಹಿರಿಯರ ಒಂದೊಂದು ಮಾತು ಷರತ್ತು ನುಡಿಗಳು ಮೈಮನದಲ್ಲೆಲ್ಲ ಅಚ್ಚೊತ್ತಿದಂತಿರುತ್ತಿದ್ದವು. ಅದಿಲ್ಲದಿದ್ದರೆ ಬೇಗ ಗುಣಮುಖರಾಗುತ್ತಿದ್ದೆವೆ? ಅದೇ ಊರಿನ ಮೂಡಲು ಸೀಮೆ ಕೆಂಚಕ್ಕ ಕೊಡುತ್ತಿದ್ದ ಕಕ್ಕಟ್ಟೆ ಇಸದ ಔಷಧಿಯನ್ನು ಒಂದೇ ಮಾತಿಗೆ ಗಂಟಲೊಳಗೆ ಇಳಿಸುತ್ತಿದ್ದೆ. ಈಗ್ಯಾರಿಗಾದರೂ ಅದರ ವಾಸನೆ ಬಡಿದರೆ ಸಾಕು ಮೂರ್ಛೆ ಹೋಗುವುದಂತೂ ಶತಸಿದ್ಧ! ಗಜ್ಜುಗವೋ ಅಂಟುವಾಳಕಾಯಿಯದೋ… ಎಂಥದೋ ಇರಬೇಕು.
ಸೋಮಿನಕೊಪ್ಪದ ನಮ್ಮ ಗಿರಿಜಾ ದೊಡ್ಡವ್ವರ ಮನೆಯಲ್ಲಿದ್ದಾಗೊಮ್ಮೆ ನನಗೆ ‘ಅಮ್ಮ’ ಆಗಿತ್ತು. ಅದೊಂದು ಭೀಕರ ಸನ್ನಿವೇಶ. ನನಗೆ ಬರೀ ಕಪ್ಪುಬಿಳುಪು ಮಸಿಕೀವು ಬಿಂದುಗಳು ತೇಲಾಡುತ್ತಿದ್ದಂಥ ಭಯಂಕರ ಕನಸುಗಳೇ ಬೀಳುತ್ತಿದ್ದವು. ಒಂದು ಕೊಠಡಿಯನ್ನು ಅದೂ ದೇವರ ಕೋಣೆಯನ್ನೇ ನನಗಾಗಿ ಸಿದ್ಧಪಡಿಸಲಾಗಿತ್ತು. ಕುರಿಗಂಬಳಿ ಬೇವಿನ ಸೊಪ್ಪಿನೊಂದಿಗೆ ಶಯನ. ಹಾಲು ಅನ್ನವೇ ಊಟ! ಅಮ್ಮನ ಮರದೊರೆಗೆ ಮಣ್ಣಿನ ಮಡಕೆಯಲ್ಲಿ ನೀರು ಬೇವಿನಸೊಪ್ಪುಹಿಡಿದು ಹೊರಟರೆ ದೊಡ್ಡಪ್ಪ ಅಕ್ಕರಲ್ಲಿ ಒಬ್ಬರು ನನ್ನನ್ನು ಹಿಡಿದು ನಡೆಸಿದರೆ ಇನ್ನೊಬ್ಬರು ದಾರಿಗೆ ನೀರು ಹಾಕುತ್ತ ಸಾಗುತ್ತಿದ್ದರು. ಅವರಿಗೂ ಎರಡು ಮಕ್ಕಳಿದ್ದವು. ಆದರೆ ಹೀಗೆ ಖಾಯಿಲೆ ಕಸಾಲೆಯಾದಾಗ ಅದೆಷ್ಟು ಅಕ್ಕರೆ, ವಿಶೇಷ ವ್ಯವಸ್ಥೆಯೊಂದಿಗೆ ನಮ್ಮನ್ನು ತಮ್ಮ ಮಕ್ಕಳಂತೆಯೇ ಕಾಣುತ್ತಿದ್ದರಲ್ಲ! ನಮ್ಮಪ್ಪ ಅವ್ವರಿಗೆ ತಿಳಿಯುವ ಮುಂಚೆಯೇ ಮುಕ್ಕಾಲು ಪಾಲು ಖಾಯಿಲೆ ವಾಸಿಯಾಗಿರುತ್ತಿತ್ತು!
ನನ್ನ ಜೀವನದ ಗುಪ್ತಸಾಮ್ರಾಜ್ಯ! ಸುವರ್ಣಯುಗವೆಂದರೆ ನಮ್ಮವ್ವನ ತವರೂರು ಸೋಮಿನಕೊಪ್ಪದ ಮಂಜು ದೊಡವ್ವರ ಮನೆಯಲ್ಲಿ ಕಳೆದ ಸಂದರ್ಭ! ನಾನಾಗ ಎರಡನೆಯ ತರಗತಿ. ನಮ್ಮ ಕೂಡು ಕುಟುಂಬ ಅದಾಗ ತಾನೆ ಛಿದ್ರವಾಗಿತ್ತು. ಇಂಥ ಸಮಯದಲ್ಲಿ ಮಕ್ಕಳಿಗೆ ಉಣ್ಣಲು ತಿನ್ನಲು ಅರಕೆಯಾಗಬಾರದೆಂದು ನಮ್ಮವ್ವ ನಮ್ಮಿಬ್ಬರನ್ನು ಒಬ್ಬೊಬ್ಬ ದೊಡವ್ವರ ಮನೆಯಲ್ಲಿ ಬಿಟ್ಟಳು. ಮೂರು ನಾಲ್ಕನೆಯ ತರಗತಿಯನ್ನು ನಾನು ಸೋಮಿನಕೊಪ್ಪದಲ್ಲೆ ಮುಗಿಸಿದೆ. ಆ ಸುವರ್ಣ ಸಾಮ್ರಾಜ್ಯದ ಹೆಜ್ಜೆಗುರುತುಗಳನ್ನು ಇನ್ನೊಮ್ಮೆ ಹಂಚಿಕೊಳ್ಳುವೆ. ಅದಕ್ಕೆ ಪುಟ್ಟ ದೃಷ್ಟಿಬೊಟ್ಟಿನಂತೆ ಎರಗಿದ ಖಾಯಿಲೆಯ ಬಗ್ಗೆ ಹೇಳಬೇಕು. ಇಲ್ಲಿಗೆ ಬರುವವರೆಗೂ ಅವ್ವನೇ ನನಗೆ ಸ್ನಾನ ಮಾಡಿಸುತ್ತಿದ್ದಳು. ಇಲ್ಲಿಗೆ ಬಂದ ಮೇಲೆ ನನಗೆ ಐದು ಜನ ತಾಯಂದಿರು! ದೊಡವ್ವ ಹಾಗೂ ನಾಲ್ಕು ಜನ ಅಕ್ಕಂದಿರು. ಒಬ್ಬರಲ್ಲ ಒಬ್ಬರು ಸ್ನಾನ ಮಾಡಿಸುತ್ತಿದ್ದರು. ನಮ್ಮೂರಲ್ಲಿದ್ದಾಗಂತು ಸ್ನಾನವೆಂದರೆ ಎಂಥದು? ವಾರಕ್ಕೆ ಎರಡೇ ದಿನ ಸ್ನಾನ! ಅದೂ ದೇವರಪೂಜೆಯ ಕಾರಣಕ್ಕಾಗಿ! ಶನಿವಾರ ಕಡ್ಡಾಯ! ಸೋಮವಾರ ಐಚ್ಛಿಕ!! ಒಂದಾರು ಜನಕ್ಕೆ ಟೀ ಕಾಯಿಸಬಹುದಾದ ಸಣ್ಣದೊಂದು ಚಟ್ಗೆಯಲ್ಲಿ ನಾಲ್ಕೇ ನಾಲ್ಕು ತೊಗರಿ ಕಡ್ಡಿ ಉರಿಸಿ ನೀರನ್ನು ಬಿಸಿ ಮಾಡಿಕೊಳ್ಳುವುದು. ಬಯಲು ಚಪ್ಪಡಿಯೊಂದರ ಮೇಲೆ ನಮ್ಮನ್ನು ಕೂರಿಸಿ ಮೈಗೆಲ್ಲ ನೀರನ್ನು ಸಣ್ಣಗೆ ಚಿಮುಕಿಸಿ ಶತಶತಮಾನದಿಂದಿದ್ದ ಮೈಯುಜ್ಜುವ ಕಲ್ಲಲ್ಲಿ ಅವ್ವ ಕಾಲು ಕೈ ಮೈ ಸಂಧಿಗಳನ್ನು ಗಸಗಸ ತಿಕ್ಕಿದಳೆಂದರೆ ವಾರಪೂರ್ತಿಯ ಅಡರು ಒತ್ತರಿಸಿಕೊಂಡು ಬರುತ್ತಿತ್ತು! ನಿಲ್ಲಿಸಿ ಎರಡು ಚೊಂಬು ನೀರು ಸುರಿದರೆ ಅಲ್ಲಿಗೆ ನಮ್ಮ ಅಭ್ಯಂಜನ ಅಂತ್ಯವಾಗುತ್ತಿತ್ತು. ಸೋಪು ಅಂತ ಇದ್ದದ್ದು ಒಂದೇ ಒಂದು. ಬಟ್ಟೆ ತೊಳೆಯಲೂ ತಲೆಯಿಂದ ಪಾದಕ್ಕೂ ಅದೊಂದೇ ಸೋಪು! ಅದನ್ನು ಬಳಸಿದಾಗ ಒಂಥರಾ ಗಂಟಲಲ್ಲಿ ಗಾಢ ಗಾಟು ವಾಸನೆ ಮೊಳಗುತ್ತಿತ್ತು! ಶಾಂತಜ್ಜಿ ಅಂಗಡಿಯಿಂದ ಬಾರ್ ಲೆಕ್ಕದಲ್ಲಿ ಕೊಯ್ಸಿಕೊಂಡು ತರುತ್ತಿದ್ದ ಅದರ ಹೆಸರು ‘ಸೂರ್ಯಕಾಂತಿ’!! ಸೋಮಿನಕೊಪ್ಪಕ್ಕೆ ಬಂದಮೇಲೆಯೇ ಲೈಫ್ ಬಾಯ್ ಎಂಬ ಕೆಂಪು ಮಣ್ಣಿನೆಂಟೆಯಂಥ ಸೋಪು ಪರಿಚಯವಾಗಿದ್ದು.
ಪ್ರತಿ ಬಾರಿಯೂ ಒಬ್ಬರಲ್ಲ ಒಬ್ಬ ತಾಯಂಥ ಅಕ್ಕಂದಿರು ಚೆನ್ನಾಗಿ ಸ್ನಾನ ಮಾಡಿಸುತ್ತಿದ್ದರು. ಇದ್ದಕ್ಕಿದ್ದಂತೆ ಭಯಂಕರ ನಾಚಿಕೆ ಶುರುವಾಗಿ ‘ನಾನೊಬ್ಬನೆ ಸ್ನಾನ ಮಾಡುವೆ ಯಾರೂ ಬೇಡ. ಬೆನ್ನನ್ನೂ ನಾನೇ ತಿಕ್ಕಿಕೊಳ್ಳುತ್ತೇನೆಂಬ’ ಹಠ! ಹೀಗೆ ಎರಡು ಮೂರು ವಾರ ನಡೆದಾಗ ಇದರ ಒಳಮರ್ಮ ಏನೋ ಇದೆಯೆಂದು ಗುರುತಿಸಿದವಳು ಗಾಯತ್ರಕ್ಕ. ಹಿಡಿದು ಎಳೆದುಕೊಂಡು ಹೋಗಿ ಬಚ್ಚಲಲ್ಲಿ ಚಡ್ಡಿಯೆಲ್ಲ ಬಿಚ್ಚಿಸಿ ನೋಡುತ್ತಾಳೆ ಕೀವೊಡೆದು ಜಿನುಗುತ್ತಿರುವ ಅಸಹ್ಯ ಕಜ್ಜಿ! ಚಿಕ್ಕ ಬಿಲ್ಲೆಯಗಲದ್ದೊಂದು ಮೆಡಿಮಿಕ್ಸ್ ಸೋಪು ತಂದು ಬಿಸಿಬಿಸಿ ನೀರಲ್ಲಿ ಚೆನ್ನಾಗಿ ತೊಳೆದು ಶುದ್ಧ ಹತ್ತಿ ಬಟ್ಟೆಯಲ್ಲಿ ಒರೆಸಿ ಪ್ರತ್ಯೇಕ ಹಾಸಿಗೆಯಲ್ಲವನ್ನು ವ್ಯವಸ್ಥೆ ಮಾಡಿ ಮಲಗಿಸಿದಳು. ಬಳಿಕ ಇಡೀ ಮನೆಯೇ ನನ್ನ ಆರೈಕೆಗೆ ನಿಂತಿತು. ಗಾಯತ್ರಕ್ಕ ಶಾಲೆಗೆ ಹೋದವಳೇ ಮಾಷ್ಟ್ರಿಗೆ ತಿಳಿಸಿದಳು. ಕಜ್ಜಿಯ ಕಾರಣ ಒಂದು ವಾರ ರಜೆ ಸಿಕ್ಕಿತ್ತು. ಅದೆಲ್ಲಿಂದಲೋ ಔಷಧವೊಂದನ್ನು ತಂದು ಚೆನ್ನಾಗಿ ಸವರಿ ಆರೈಕೆ ಮಾಡಿದಳು. ನನ್ನ ಜೀವಕ್ಕೆ ಅದೆಷ್ಟು ತಂಪಾಯಿತೆಂದರೆ ಸೊಂಪಾಗಿ ಚಿಗುರಿದ ಹೊಂಗೆಯ ಮರವೇ ಆಗಿದ್ದಳು ಗಾಯತ್ರಕ್ಕ. ಮನೆಯವರೆಲ್ಲ ತಾವೇ ಕಲಸಿ ಊಟ ಮಾಡಿಸಿದರು, ಹಠ ಮಾಡಿದಾಗ ಚಮಚ ಕೊಟ್ಟರು.
ಈಗ ನೆನಪಿಸಿಕೊಂಡರೆ ಅಂಥ ಗಾಯತ್ರಕ್ಕ ನಿಜಕ್ಕೂ ಒಬ್ಬ ದಾದಿ(ನರ್ಸ್) ಆಗಬೇಕಿತ್ತೆಂದೆನಿಸುತ್ತದೆ. ಆಕೆಗೂ ನನ್ನ ತಂಗಿಯಂತೆ ವಿದ್ಯೆಯೇ ಹತ್ತಲಿಲ್ಲ. ಆದರೆ ಹತ್ತು ಗಂಡು ಮಕ್ಕಳ ಕೆಲಸವನ್ನು ಒಬ್ಬಳೇ ಮಾಡುವಷ್ಟು ಗಟ್ಟಿಗಿತ್ತಿ. ಮದುವೆಯಾಗಿ ಎರಡು ಬಂಗಾರದಂಥ ಗಂಡು ಮಕ್ಕಳಿಗೆ ಜನ್ಮವಿತ್ತು ಕ್ಯಾನ್ಸರ್ ಎಂಬ ಮಾರಿಗೆ ಈಗ್ಗೆ ಎರಡು ವರ್ಷಗಳ ಹಿಂದೆ ತನ್ನ ಪಯಣವನ್ನು ಮುಗಿಸಿದಳು.
ಸಾವಿರಾರು ರೋಗಿಗಳನ್ನು ತನ್ನ ಮಾತೃವಾತ್ಸಲ್ಯದಿಂದ ಪೊರೆಯುವ ಶಕ್ತಿಯಿದ್ದ ಜೀವ ತಾನೇ ಬಲಿಯಾಯಿತು. ಭಗವಂತ ಮಹಾಸ್ವಾರ್ಥಿ! ತುಂಬು ಹೃದಯದ ಜೀವಗಳನ್ನು ತನಗಾಗಿಯೇ ಕರೆದುಕೊಳ್ಳುತ್ತಾನೆ!!
ನನಗೀಗಲೂ ಒಂದೇ ಒಂದು ಸಣ್ಣಗೆ ಮಲಗುವಂಥ ಖಾಯಿಲೆ ಬಂದರೂ ಸಾಕು ನಮ್ಮವ್ವ ದೊಡ್ಡವ್ವ ಗಾಯತ್ರಕ್ಕರಂಥ ಜೀವಗಳು ನೆನಪಾಗಿ ಕಣ್ಣಾಲಿಗಳು ಒದ್ದೆಯಾಗುತ್ತವೆ. ಅವರೆಲ್ಲರ ಆರೈಕೆ ಹಾರೈಕೆಗಳ ಭಿಕ್ಷೆ ನನ್ನೀ ಜೀವ. ಅನೇಕರದೂ..!!
Latest posts by ಅರಬಗಟ್ಟೆ ಅಣ್ಣಪ್ಪ (see all)
- ವೈದ್ಯರಿಗೆ ನಮನ - July 2, 2020
- ಹಾಲು - June 14, 2020
- ಆಂಗ್ಲಭೂತ (2) - June 7, 2020