ಒಳಿತ ಕೇಳೊಳಿತ ಕಾ
ಣೊಳಿತ ಗೈಯೊಳಿತ ನುಡಿ
ಯೊಳಿತೊಳಿತು ಸೇರೆ ಬಾಳ್
ಕಳಿವುದೋ ಕೆಳೆಯ !
ಬಾಳ ಬಟ್ಟೆಯ ಭಾವ
ತೊಳೆದು ಹಸನಾಗಿಪುದು
ಸುಳಿ ಕಳೆವುದಾಗ ತಿಳಿ
ಜಾಣಮೂರ್ಖ //
ಈ ಮುಕ್ತಕವನ್ನು ಒಳ್ಳೆಯ ನಾಲಿಗೆಯ ತಿರುವಾಗಿ(Tongue Twister) ಬಳಕೆ ಮಾಡಬಹುದು. ಮೊದಲ ನಾಲ್ಕು ಸಾಲುಗಳನ್ನು ನಿಲ್ಲಿಸದೇ ಓದಿರಿ ಗೆಳೆಯರೇ ಅದರ ಸೊಗಸು ನಿಮಗೇ ತಿಳಿಯುತ್ತದೆ. ಇನ್ನು ಇದರ ತಾತ್ಪರ್ಯ ಹೀಗಿದೆ. ಒಳ್ಳೆಯದನ್ನೇ ಕೇಳು , ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣು, ಒಳ್ಳೆಯ ಕೆಲಸಗಳನ್ನೇ ಮಾಡು , ಒಳ್ಳೆಯ ಮಾತುಗಳನ್ನೇ ಆಡು ಹೀಗೆ ಒಳಿತು ಒಳಿತುಗಳೇ ಸೇರಿ ಬಾಳು ಕಳಿತು ಮಾಗುತ್ತದೆಯಯ್ಯಾ ಗೆಳೆಯಾ. ಇದರಿಂದ ಬಾಳ ದಾರಿಯು ಸುಗಮವಾಗುತ್ತದೆ. ಮನದ ಭಾವವು ಒಳಿತಿನ ಸಿಂಚನದಿಂದ ತೊಳೆಯಲ್ಪಟ್ಟು ಹಸನಾಗುತ್ತದೆ. ಬದುಕಿನ ಸುಳಿಗಳಲ್ಲಿ ಸಿಲುಕಿ ನರಳುವುದು ತಪ್ಪುತ್ತದೆಯಲ್ಲದೇ ಜೀವನದಲ್ಲಿ ಶಾಂತಿ ನೆಮ್ಮದಿಗಳು ನೆಲೆಸುತ್ತವೆ. ಬದುಕು ಸುಂದರ ಹಾಗೂ ಅರ್ಥಪೂರ್ಣವಾಗಿರುತ್ತದೆ. ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021