ಬದುಕನೀಸುವ ಭರದೊ
ಳೆದುರಾಗೊ ಗೊಂದಲಂ
ಗಳ ಕಳೆದು ಮತ್ತದರೊ
ಳೇಂ ಕೆಡೆವೆ ಕೆಳೆಯ !?
ಬಾಳ ಬಾಧೆಯ ಮೂಲ
ಒಂದೆ ತಾನಿರುತಿರಲು
ಕೆಡೆದಲ್ಲೆ ಕೆಡೆವೇಕೊ
ಜಾಣಮೂರ್ಖ //
ಮಾಯೆ ಮುಸುಕಿದ ಈ ಬದುಕಿನ ಪರಿಯೇ ಒಂದು ರೀತಿ ಬಹು ವಿಚಿತ್ರ. ಈಗ ನಮ್ಮನ್ನೇ ನೋಡಿ. ಬದುಕನ್ನು ಯಶಸ್ವಿಯಾಗಿ ಈಸಬೇಕೆನ್ನುವ ಭರದಲ್ಲಿ ಗೊಂದಲದ ಗೂಡಾಗುತ್ತೇವೆ. ಸರಿ ಹೇಗೋ ನಿಭಾಯಿಸಿಕೊಂಡರೂ ಮತ್ತೆ ಅದರಲ್ಲೇ ಬೀಳುತ್ತೇವೆ. ಎಲ್ಲರೂ ದೈವ ಭಕ್ತರೇ ಆದರೂ ಅವನ ದಿವ್ಯವಾದ ಅಂತಃಸತ್ವವನ್ನು , ತತ್ತ್ವವನ್ನು ಅರಿಯದಿರುವುದು ಮಾತ್ರ ಒಂದು ದೊಡ್ಡ ವಿಪರ್ಯಾಸ. ಬಾಳ ಬಾಧೆಯ ಮೂಲವು ಮಾತ್ರ ಒಂದೆ. ಏನದು ? ಬೇಕಾದುದನ್ನು ಪಡೆಯಬೇಕೆಂಬುದು. ಅದಕ್ಕಾಗಿ ಏನೆಲ್ಲಾ ಹರಸಾಹಸ !? ಏನೆಲ್ಲಾ ಗೊಂದಲ ! ಬಿದ್ದ ಜಾಗದಲ್ಲೇ ಮತ್ತೆ ಮತ್ತೆ ಬೀಳ್ವ ಪರಿ !? ಒಂದು ಅಚ್ಚರಿಯೆಂದರೆ ಶಾಂತವಾಗಿದ್ದರೆ ಎಲ್ಲವೂ ಸಿಗುತ್ತದೆ. ಆದರೆ ಬಯಸಿದ್ದು ಇಂದೇ , ಈಗಲೇ ಸಿಕ್ಕಿಬಿಡಬೇಕೆನ್ನು ನಮ್ಮ ಹಪಹಪಿಕೆ ನಮ್ಮನ್ನು ಇಂತಹಾ ಗೊಂದಲಗಳಿಗೆ, ತೊಂದರೆಗಳಿಗೆ ಈಡುಮಾಡುತ್ತದೆಯಷ್ಟೆ. ಭಗವಂತನಿಂದ ಸೃಷ್ಠಿಸಲ್ಪಟ್ಟ ಎಂಭತ್ತನಾಲ್ಕು ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮವೇ ಅತ್ಯಂತ ಶ್ರೇಷ್ಠವಾದದ್ದು ಎಂದು ಶ್ರುತಿ ಪುರಾಣಂಗಳು ಸಾರುತ್ತವೆ. ಬಹು ಬುದ್ಧಿವಂತ ಈ ಮಾನವ. ಆದರೂ ಈ ಪರಿಯೇಕೆ ? ಇನ್ನಾದರೂ ಚಿಂತಿಸಬೇಕಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021