ಎದೆಗೆ ಬೀಳದ ಬಿಜ್ಜೆ
ತಲೆಗೆ ಬಿದ್ದೇನು ಫಲ ?
ಹೃದಯಕಿಲ್ಲದ ಮೇಲೆ
ನೀರಸಮದಲ್ತೆ !?
ಭಾವಶೂನ್ಯತೆ ಬೆಳೆದು
ವಿತ್ತವೆತ್ತಿದರಾಯ್ತೆ ?
ಬರಿ ಜಾಣತನವೆ ಬಾಳ್
ಜಾಣಮೂರ್ಖ
ಇದು ಎಲ್ಲರ ಅನುಭವವಿರಬಹುದು! ಇಂದು ಬಹಳ ಮಂದಿ ಬಹು ಜಾಣತನದಿಂದ ಬದುಕುತ್ತಿದ್ದಾರೆ. ಮಾತಿನಲ್ಲಿ ! ಕೃತಿಯಲ್ಲಿ ! ಅಬ್ಬಾ ಅದೆಂತಹಾ ನಾಜೂಕು !? ಅದೆಂತಹಾ ಬುದ್ಧಿವಂತಿಕೆ !? ಹೃದಯ ಶೂನ್ಯತೆ ತಾಂಡವವಾಡುತ್ತಿರುತ್ತದೆ ! ವಿದ್ಯಾಭ್ಯಾಸವೂ ಅಷ್ಟೆ. ತಲೆಯನ್ನು ತಲುಪುತ್ತಿದೆ ಅಷ್ಟೆ. ಹೃದಯವನ್ನು ತಲುಪುತ್ತಿಲ್ಲ. ಎದೆ ತುಂಬಿದ ಭಾವದಲ್ಲಿ ಬದುಕಬೇಕಲ್ಲವೇ ಗೆಳೆಯರೇ ? ಇಲ್ಲದಿದ್ದರೆ ವರ್ಷಗಟ್ಟಲೆ ಓದಿ , ಪದವಿಗಳನ್ನು ಪಡೆದರೇನು ? ಕಚ್ಚಾವಸ್ತು ಸಿದ್ಧವಸ್ತುವಾಯ್ತಷ್ಟೆ! ಆತ್ಮಸಾಕ್ಷಾತ್ಕಾರದ ಗುರಿಯೇನಾಯಿತು ?! ಅದು ಬರೀ ಯಾಂತ್ರಿಕವಾಗಿ ಶಬ್ದಾಡಂಬರವೇ ? ಸಿದ್ಧಾಂತವಷ್ಟೆಯೇ ? ಇಂದಿನ ಪೀಳಿಗೆಯನ್ನು ಒಮ್ಮೆ ಸ್ವಲ್ಪ ಹಾಗೇ ಗಮನಿಸಿ. ಹಣಗಳಿಸಿದರೆ ಸಾಕು. ಮಾರ್ಗ ಯಾವುದಾದರೂ ಇರಲಿ. ಅವನು ಜಾಣನೆಂತಲೂ , ಹೃದಯವಂತನಾದವನು ದಡ್ಡನೆಂತಲೂ ಪರಿಗಣಿಸಲ್ಪಡುತ್ತಿರುವುದು ಮನುಕುಲದ ದೊಡ್ಡ ದೌರ್ಭಾಗ್ಯವೇ ಸರಿ. ಬದುಕು ಬರೀ ಜಾಣತನವಷ್ಟೇ ಅಲ್ಲ . ಇಲ್ಲಿ ಹೃತ್ಪೂರ್ವಕವಾಗಿ ಬದುಕಲು ಬೇರೇನನ್ನೋ ಕಲಿಸಬೇಕಿದೆ ನಮ್ಮ ಮಕ್ಕಳಿಗೆ. ಆದರೆ ಆ ಕಾರ್ಯವಾಗದೆ ಬೇರೆಲ್ಲವೂ ಆಗುತ್ತಿದೆ. ಹೀಗಾದಾಗ ಹೃದಯವಂತರಾಗಿ ಬದುಕೋದು ಯಾವಾಗ ? ಬುದ್ಧಿಕ್ರಾಂತಿಯೇ ಏರ್ಪಟ್ಟರೆ ಭಾವಕ್ರಾಂತಿ ನಡೆಯೋದು ಯಾವಾಗ ? ಹೇಗೆ ? ಬನ್ನಿ ಗೆಳೆಯರೇ ಚಿಂತಿಸೋಣ. ತಲೆಯಿಂದಲ್ಲ , ಹೃದಯದಿಂದ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021