“ಅನ್ನವನ್ನು ಎಸೆಯಬಾರದು. ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿಸಿಕೊಂಡು ತಟ್ಟೆ ಕಾಲಿ ಮಾಡಬೇಕು. ” ಅದೆಷ್ಟು ಬಾರಿ ಕೇಳಿದ್ದೇನೋ ಈ ಮಾತು. ಎಸೆಯಬಾರದು ಹೌದು. ಆದರೆ ಒತ್ತಾಯ ಮಾಡಿ ಬಡಿಸಿದರೆ? ಹೊಟ್ಟೆಗೆ ಬೇಕಾದಷ್ಟಕ್ಕಿಂತ ಹೆಚ್ಚು ತಿಂದಾಗ ಆಗುವ ಕಷ್ಟ ಅನುಭವಿಸಿದವರಿಗೇ ಗೊತ್ತು.
ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಮಕ್ಕಳಿಗೆ ಕೊಡುತ್ತಿದುದು “ಉಪ್ಪು ತುಪ್ಪದ ಅನ್ನ” ಅಥವಾ ಮೊಸರನ್ನ. ತರಕಾರಿ ಹಾಕಿದ ಪದಾರ್ಥಗಳನ್ನು ಒಳ್ಳೆಯದು ಎಂದು ಒಮ್ಮೊಮ್ಮೆ ಹಾಕಿದರೂ ಖಾರ ಇರದಿದ್ದರೂ ಖಾರ ಎಂದು ಮುಖ ವಾರೆ ಮಾಡುತ್ತಿದ್ದೆವು. ಹೋಗಲಿ ಬಿಡಿ ಎಂದು ಪುನಃ ಉಪ್ಪು ತುಪ್ಪದನ್ನ , ಮೊಸರನ್ನ ಕೊಡುತ್ತಿದ್ದರು.
ಒಂದನೇ ಕ್ಲಾಸ್ಸಿಗೆ ಅಜ್ಜನ ಮನೆಯಲ್ಲಿ ಬಿಟ್ಟು ಶಾಲೆಗೆ ಸೇರಿಸಿದ ಕೂಡಲೇ ಈ ಸ್ವತಂತ್ರ ಹೊರಟುಹೋಗಿತ್ತು. ಮಾವ ಎಂದರೆ ಅದೇನೋ ಭಯ. ದೊಣ್ಣೆ ಮಾವ ಎಂದೇ ಕರೆಯುತ್ತಿದ್ದೆವು. ಮನೆಯಲ್ಲಿ ಅವರ ಇಬ್ಬರು ಮಕ್ಕಳು, ನಾನು ಬಿಟ್ಟು ಇನ್ನೂ ಹಲವಾರು ಮಕ್ಕಳಿರುತ್ತಿದ್ದರು. ಎಲ್ಲರಿಗೂ ಒಟ್ಟಿಗೆ “ಮಕ್ಕಳ ಪಂಕ್ತಿ” ಮಾಡಿ, ಒಂದು ಕೋಲು ಹಿಡಿದುಕೊಂಡು “ಯಾರಾದರೂ ಕಾಲಿ ಮಾಡದೆ ಏಳಿ ನೋಡೋಣ ” ಎಂದು ಒಮ್ಮೆ ಗಧರಿಸಿದರೆ ಸಾಕು, ಬಡಿಸುವಾಗ ಬೇಡ ಎನ್ನಲೂ ಹೆದರಿಕೆಯಾಗುತ್ತಿತ್ತು. ಸೊಪ್ಪಿನ ಹುಳಿ , ತರಕಾರಿ ಪಲ್ಯ ಎಲ್ಲಾ ಹೀಕರಿಸಿಕೊಳ್ಳುತ್ತಲೇ ತಿನ್ನುತ್ತಿದ್ದೆವು.
ಮಧ್ಯಾಹ್ನ ಊಟಕ್ಕೆ ನಮಗಾಗಿ ಬಿಸಿ ಬಿಸಿ ಅಡುಗೆ ಮಾಡಿ ಮೂರಂತಸ್ತಿನ ಟಿಫನ್ ಕ್ಯಾರಿಯರ್ ನಲ್ಲಿ ಹಾಕಿ ಮಾವ ಅಥವಾ ದೊಡ್ಡಜ್ಜ ಸ್ಕೂಲಿಗೆ ತೆಗೆದುಕೊಂಡು ಬರುತ್ತಿದ್ದರು. ಕೆಲವೊಮ್ಮೆ ಬೆಳಿಗ್ಗೆಯೇ ತೆಗೆದುಕೊಂಡು ಹೋಗುತ್ತಿದ್ದೆವು. ಒಂದು ಬಾಕ್ಸಿನಲ್ಲಿ ಅನ್ನ, ಇನ್ನೊಂದರಲ್ಲಿ ಹುಳಿ /ಸಾಂಬಾರ್, ಇನ್ನೊಂದರಲ್ಲಿ ಪಲ್ಯ. ತಿನ್ನುವಷ್ಟರಲ್ಲಿ ಸಾಕಾಗುತ್ತಿತ್ತು. ಎಷ್ಟು ಕಷ್ಟ ಪಟ್ಟರೂ ಮೂರು ಅಂತಸ್ತಿನ ಟಿಫನ್ ಕ್ಯಾರಿಯರ್ ಕಾಲಿಯಾಗುತ್ತಿರಲಿಲ್ಲ. ಹಾಗೇ ಮನೆಗೆ ತೆಗೆದುಕೊಂಡು ಹೋದರೆ ಬೈಗುಳ ಗ್ಯಾರಂಟಿ. ಶಾಲೆ ಬಿಟ್ಟು ಮನೆಗೆ ಹೋಗುವಾಗ ಸಿಗುವ ಒಂದು ಗೊಬ್ಬರ ಗುಂಡಿಯಲ್ಲಿ ಅಥವಾ ಗಿಡದ ಪೊದೆಗಳ ಮಧ್ಯೆ ಉಳಿದ ಅನ್ನವನ್ನು ಎಸೆಯುವುದು ಅಭ್ಯಾಸವಾಗಿತ್ತು. ಈ ಎಸೆಯುವ ಭರದಲ್ಲಿ ಒಮ್ಮೆ ಬಾಕ್ಸಿನಲ್ಲಿದ್ದ ಚಮಚವನ್ನೂ ಎಸೆದು, ಮನೆಯಲ್ಲಿ ಹುಡುಕಾಡಿದಾಗ ನಮ್ಮ ಕಳ್ಳತನ ಸಿಕ್ಕುಬಿದ್ದು ಬಡಿಗೆ ಬಿದ್ದಿತ್ತು. ಆದರೆ ಆ ಬಡಿಗೆ ಚಮಚ ಎಸೆಯದೇ ಊಟ ಎಸೆಯುವುದನ್ನು ಕಲಿಸಿತ್ತು ಅಷ್ಟೇ.
ಮುಂದೆ ೫ನೇ ಕ್ಲಾಸಿಗೆ ತೀರ್ಥಹಳ್ಳಿಗೆ ಬಂದು ಅಪ್ಪ ಅಮ್ಮನನ್ನು ಸೇರಿದಾಗ, ಪುನಃ ಮೊದಲಿನಂತೆ ಮೊಸರನ್ನ ಮಾತ್ರ ಉಣ್ಣುವ ಅವಕಾಶ ದೊರೆತಿತ್ತು. ಮನೆಯ ಹತ್ತಿರ ಬೆಳಿಗ್ಗೆ ಸಂಜೆ ಎನ್ನದೆ ಅವಕಾಶ ಸಿಕ್ಕಾಗಲೆಲ್ಲಾ ಆಟವಾಡುತ್ತಿದ್ದೆವು. ನಾವು ಆಟ ಆಡುತ್ತಿದ್ದುದು ನೋಡಿ ಮನೆಯ ಹತ್ತಿರದಲ್ಲಿದ್ದ ಗೋಪಾಲಣ್ಣ ಎಂಬ ಹೆಸರಿನ ಪಿ ಟಿ ಮಾಸ್ಟರ್ ಬೆಳಿಗ್ಗೆ ಜಾಗಿಂಗ್ ಕರೆದುಕೊಂಡು ಹೋಗುತ್ತೇನೆ ಎಂದು ನನ್ನನ್ನೂ, ತಮ್ಮನನ್ನೂ ಬೆಳಿಗ್ಗೆ ೫:೩೦ ಗೆ ಎಬ್ಬಿಸಿ ಶಿವಮೊಗ್ಗ ಬಸ್ ಸ್ಟಾಂಡ್ ನಿಂದ ಆಗುಂಬೆ ಬಸ್ ಸ್ಟಾಂಡ್ ವರೆಗೆ ಓಡಿಸಿಕೊಂಡು ಹೋಗಿ ಅಲ್ಲಿಂದ ಹೈ ಸ್ಕೂಲ್ ಗ್ರೌಂಡ್ ಗೆ ಕರೆದುಕೊಂಡು ಹೋಗಿ ಅವರು ಟ್ರೇನಿಂಗ್ ಕೊಡುತ್ತಿದ್ದ ಸೆಂಟ್ ಮೇರಿಸ್ ಶಾಲೆಯ ಮಕ್ಕಳೊಂದಿಗೆ ಸೇರಿಸಿಕೊಂಡು ೮ ಗಂಟೆಯವರೆಗೂ ಕೊಕೊ, ಓಡುವುದು, ಲಾಂಗ್ ಜಂಪ್, ಹೀಗೆ ಏನೇನೋ ಆಟಗಳನ್ನು ಆಡಿಸಿ ೮:೩೦ ಹೊತ್ತಿಗೆ ಮನೆಯ ದಾರಿ ಹಿಡಿದರೆ, ದ್ವಾರಕಾ ಹೋಟೆಲಿನ ಮಸಾಲೆ ದೋಸೆ ಪರಿಮಳ ಹೊಟ್ಟೆ ಹಸಿವನ್ನು ಇನ್ನೂ ಹೆಚ್ಚು ಮಾಡುತ್ತಿತ್ತು. ಮನೆಯ ಹತ್ತಿರ ಬಂದರೆ ಬಿಸಿ ಬಿಸಿ ದೋಸೆ, ರೊಟ್ಟಿಯ ಪರಿಮಳ. ಮಕ್ಕಳಲ್ಲೇ ಸ್ವರ್ಧೆ ಏರ್ಪಟ್ಟು ಒಬ್ಬೊಬ್ಬರೂ ನಿಮಗಿಂತ ನಾವು ಹೆಚ್ಚು ಎಂದು ಲೆಕ್ಕ ಮಾಡುತ್ತಾ ತಿಂಡಿ ತಿನ್ನುತ್ತಿದ್ದರೆ, ಮಾಡಿ ಹಾಕುತ್ತಿದ್ದ ಅಜ್ಜಿ ಅಥವಾ ಅಮ್ಮ ಲೆಕ್ಕ ಮಾಡಬೇಡಿರೆಂದು ಬೈಯುತ್ತಿದ್ದರು. ಕಾಲೇಜು ಸೇರಿದ ಮೇಲೆ ಮನೆಯಲ್ಲಿ ತಿಂದಿದ್ದು ಸಾಲದೆಂಬಂತೆ ಮಧ್ಯಾಹ್ನಕ್ಕೆ ತೆಗೆದುಕೊಂಡು ಹೋದ ಬಾಕ್ಸಿನಲ್ಲಿದ್ದ ಊಟವನ್ನೂ , ಫ್ರೆಂಡ್ಸ್ ತಂದಿದ್ದ ಪುಲಾವನ್ನೂ ಕೊನೆಯ ಬೆಂಚಿನಲ್ಲಿ ಕುಳಿತು ತಿಂದಿದ್ದೇ ತಿಂದಿದ್ದು.
ಇಂಜಿನಿಯರಿಂಗ್ ಮಾಡುವಾಗ ಅಪ್ಪನ ಅಕ್ಕ, ಅತ್ತೆಯ ಪ್ರೀತಿ. ಬೆಳಿಗ್ಗೆ ೫ ಕ್ಕೆ ಕಾಫಿ. ೬:೩೦ ಗೆ ರಾಗಿ ಅಂಬಲಿ. ೭:೩೦ ಗೆ ಕಾಲೇಜಿಗೆ ಹೋಗುವ ಮುಂಚೆ ೫ ದೋಸೆ, ಅಥವಾ ೫ ಚಪಾತಿ, ಅಥವಾ ೫ ಇಡ್ಲಿ. ಇನ್ನು ಒಂದು ಲೋಟ ಹಾಲು. ಕಾಲೇಜಿಗೆ ಹೋಗಿ ಲಾಸ್ಟ್ ಬೆಂಚಿನಲ್ಲಿ ಕುಳಿತು ನಿದ್ರೆ. ಮಧ್ಯಾಹ್ನ ಊಟಕ್ಕೆ ಮನೆಗೆ ಬಂದರೆ ಹೊಟ್ಟೆ ತುಂಬಾ ಊಟ, ಜೊತೆಯಲ್ಲಿ ಮಾವಿನ ಕಾಲವಾದರೆ ಒಂದಿಡೀ ಮಾವಿನ ಹಣ್ಣು. ತಿಂದು ಪುನಃ ಕಾಲೇಜಿಗೆ ಹೊರಟರೆ ಮಾವಿನ ಹಣ್ಣಿನ ಹುಳಿಯ ಅಮಲು. ಬಸ್ಸಿನಲ್ಲಿಯೇ ಒಂದು ನಿದ್ರೆ ಆಗಿರುತ್ತಿತ್ತು. ಕಾಲೇಜಿಗೆ ಹೋದಮೇಲೂ ನಿದ್ರೆಯೇ.
ಒಟ್ಟಿನಲ್ಲಿ ಎಂದೂ ಹೊಟ್ಟೆ ಹಸಿವಾದಾಗ ಊಟವಿಲ್ಲದೆ ಪರಿತಪಿಸಿದ್ದಿಲ್ಲ. ಹೊಟ್ಟೆಗೆ ಹೆಚ್ಚಾಗಿ ಒದ್ದಾಡಿದ್ದೇ ಹೆಚ್ಚು. ಹಸಿವೆಯ ಸಂಕಟ ಒಂದೆಡೆಯಾದರೆ, ಹೊಟ್ಟೆಗೆ ಜಾಸ್ತಿಯಾದಾಗ ಆಗುವ ಸಂಕಟ ಇನ್ನೊಂದು ರೀತಿಯದ್ದು. ಅದರ ಅನುಭವದಿಂದಲೇ ಏನೋ ಊಟ ಹೆಚ್ಚಾಯಿತೆನಿಸಿದಾಗ ಎಸೆಯಲು ಹೋದರೆ ತಪ್ಪು ಮಾಡುತ್ತಿದ್ದೇನೆ ಎನಿಸಿದ್ದು ಕಡಿಮೆ. ಕಾಲೇಜು ಮುಗಿದು ಕೆಲಸಕ್ಕೆ ಸೇರಿ ನಮ್ಮ ಅನ್ನ ನಾವು ಬೇಯಿಸಿಕೊಳ್ಳಲು ಶುರು ಮಾಡುವವರೆಗೂ ಊಟ ಎಸೆದು ಪಶ್ಚಾತಾಪ ಪಟ್ಟಿದ್ದಿಲ್ಲ.
ಕೆಲಸಕ್ಕೆ ಸೇರಿದ ಮೇಲೆ ರೂಮು ಮಾಡಿಕೊಂಡು ಇದ್ದಾಗ ಸಂಜೆ ಕೆಲಸ ಮುಗಿಸಿ ಬಂದು ಏನೋ ಬೇಯಿಸಿಕೊಂಡು ತಿನ್ನುವಾಗ ಹಸಿವೆಯ ಅರಿವು ಆಗಿದ್ದಿದೆ. ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿಸಿಕೊಂಡು ಅಥವಾ ಬೇಯಿಸಿಕೊಂಡು ತಿಂದು ಬದುಕಲು ಆಗ ಅಭ್ಯಾಸವಾಯಿತು. ಆದರೂ ಕಷ್ಟದ , ಹಸಿವಿನ ಅರಿವು ಹೆಚ್ಚು ಇರದ ಕಾರಣ, ತರಕಾರಿ ತರಲು ಹೋದರೆ ಫ್ರೆಶ್ ತರಕಾರಿ ಇರುವುದು ನೋಡಿದಾಗ ಬೇಕೆಂದು ಬೇಕಾಗಿದ್ದಕ್ಕಿಂತ ಹೆಚ್ಚು ತರುವುದು. ಹಾಳಾದಾಗ ಎಸೆಯುವ ಅಭ್ಯಾಸ ಇತ್ತೀಚಿನವರೆಗೂ ಇತ್ತು.
ಮಾರ್ಚ್ ಜರ್ಮನಿಯಲ್ಲಿ ಗಿಡಗಳನ್ನು ಬೆಳೆಯಲು ಬೀಜ ಬಿತ್ತುವ ಸಮಯ. ಮಣ್ಣನ್ನೂ ದುಡ್ಡು ಕೊಟ್ಟು ಲೀಟರಿನ ದರದಲ್ಲಿ ಕೊಂಡುಕೊಳ್ಳಬೇಕು. ಬೀಜಗಳನ್ನು ಕೊಂಡ ಮಣ್ಣಿನಲ್ಲಿ ಹಾಕಿ ಒಂದಷ್ಟು ಮನೆಯ ಒಳಗೆ ಹೀಟರ್ ಮೇಲೆ. ಇನ್ನೊಂದಷ್ಟು ಹಿತ್ತಲಿನಲ್ಲಿ. ಮಾರ್ಚ್ ಕೊನೆ ಬಂದರೂ ಹೊರಗೆ ೧೦-೧೨ ಡಿಗ್ರಿ ಟೆಂಪರೇಚರ್. ಹಾಕಿದ ಒಂದು ಬೀಜವೂ ಮೊಳಕೆ ಒಡೆಯುತ್ತಿಲ್ಲ. ಮನೆಯ ಒಳಗಿದ್ದ ಪಾಟುಗಳಲ್ಲಿ ಬೀಜಗಳು ಮೊಳಕೆಯೊಡೆದರೂ ತಿಂಗಳಾದರೂ ಒಂದಿಂಚೂ ಬೆಳೆಯುತ್ತಿಲ್ಲ. ಟೊಮೇಟೊ, ಕ್ಯಾಪ್ಸಿಕಂ ಕನಸಿರಲಿ ಗಿಡಗಳೇ ಕನಸಿನಂತೆ ಕಾಣತೊಡಗಿದವು. ಆತ್ಮಾವಲೋಕನ ಶುರುವಾಗಿತ್ತು. ಎಸೆಯಲು ಒಂದು ಕ್ಷಣ. ಬೆಳೆಯಲು ಸಮಯವೊಂದೇ ಅಲ್ಲ, ಪ್ರಯತ್ನ ಮತ್ತು ತಾಳ್ಮೆ ಅದೆಷ್ಟು ಬೇಕು?
ಜೀವನದಲ್ಲಿ ಮೊದಲ ಬಾರಿಗೆ ಕೊರತೆ ಎಂದರೆ ಏನು ಎಂದು ಕೋರೋನ ತೋರಿಸಿಕೊಟ್ಟಿತು. ಕೋರೋನ ಹರಡಲು ಶುರುವಾದ ಕೂಡಲೇ ಸೂಪರ್ ಮಾರ್ಕೆಟ್ ಶೆಲ್ಫ್ ಗಳೆಲ್ಲಾ ಕಾಲಿ. ತರಕಾರಿಗಳಿಲ್ಲ. ಹಿಟ್ಟು, ಅಕ್ಕಿ, ಪಾಸ್ತ ಮುಂತಾದ ತಿನ್ನುವ ಪದಾರ್ಥಗಳೆಲ್ಲಾ ಕಾಲಿ. ಮನೆಯಲ್ಲಿ ಯಾವಾಗಲೂ ೫-೧೦ ಕೆಜಿ ಅಕ್ಕಿಯ ಮೂಟೆ, ತೊಗರಿ ಬೇಳೆ, ಅಕ್ಕಿ ಹಿಟ್ಟು ಮುಂತಾದವು ಇದ್ದರೂ, ತಿನ್ನಲು ಸ್ವಲ್ಪವೂ ಕಡಿಮೆಯಾಗದಿದ್ದರೂ, ಜೀವನದಲ್ಲಿ ಮೊದಲ ಬಾರಿಗೆ ಕಾಲಿ ಶೆಲ್ಫ್ ನೋಡಿದಾಗ “ಹೀಗೂ ಆಗಬಹುದು” ಎನ್ನುವುದರ ಅರಿವಾಗಿತ್ತು. ಕಾಲಿಯಾದ ಸೂಪರ್ ಮಾರ್ಕೆಟ್ ಶೆಲ್ಫ್ ನೋಡುತ್ತಾ, ಬೇರೆಯವರಿಗೆ ಇರದಿದ್ದರೆ ಬೇಡ, ನಮಗಿದ್ದರೆ ಸಾಕು ಎನ್ನುವ ಪ್ರವೃತ್ತಿ ನೋಡುತ್ತಾ, ನಾವು ಹೇಗಿರಬೇಕು ಎಂಬ ನಮ್ಮ ಆತ್ಮಾವಲೋಕನ ಶುರುವಾಗಿತ್ತು.
ಮಾರ್ಚ್ ಕೊನೆಯಲ್ಲಿ ವಾರಕ್ಕೊಮ್ಮೆ ಮಾತ್ರ ಶಾಪಿಂಗ್ ಎಂದು ನಿರ್ಧರಿಸಿದೆವು. ವಾರಕ್ಕೆ ಎಷ್ಟು ಬೇಕೋ ಅಷ್ಟು. ಹೆಚ್ಚು ಅಲ್ಲ. ಒಂದೂ ವೇಸ್ಟ್ ಮಾಡುವುದಿಲ್ಲ. ಒಬ್ಬರೇ ಶಾಪಿಂಗ್ ಹೋಗುವುದು. ಅದೂ ಬೇಕು, ಇದೂ ಬೇಕು ಎಂದು ಚಂಚಲ ಮನಸ್ಸು ಮಾಡದೆ, ನೋಡಿದ್ದೆಲ್ಲ ಬೇಕೆನ್ನದೆ, ಮನೆಯಲ್ಲೇ ಕುಳಿತು ಏನೇನು ಬೇಕು ಪಟ್ಟಿ ಮಾಡಿಕೊಂಡು ಹೋಗಿ, ಅದಷ್ಟನ್ನೇ ತರುವುದು.
ನೋಡುತ್ತಾ ನೋಡುತ್ತಾ ಟೊಮೇಟೊ ಗಿಡ ಹೂವು ಬಿಟ್ಟು ಕಾಯಿಯಾಗಿ ಒಂದೆರಡು ಹಣ್ಣಾಗಿದೆ.ಹಸಿಮೆಣಸಿನ ಕಾಯಿ ಇನ್ನೂ ಹೂ ಬಿಟ್ಟಿಲ್ಲ. ಸೌತೆಕಾಯಿ ಗಿಡದಿಂದ ಎರಡು ಸೌತೆ ಕಾಯಿ ತೆಗೆದಾಗಿದೆ. ಮೆಂತೆ ಸೊಪ್ಪು ಬೆಳೆಯಲು ಸುಮಾರು ಹತ್ತರಿಂದ ಹನ್ನೆರಡು ದಿನ ತೆಗೆದುಕೊಂಡರೆ ಕೊತ್ತಂಬರಿ ಮೊಳಕೆಯೊಡೆಯಲೇ ೧೦-೧೨ ದಿನಗಳು ಬೇಕು ಎನ್ನುವುದರ ಅರಿವಾಗಿದೆ.
ಹಾಕಿದ ಎಂಟೂ ಚೀನಿಕಾಯಿ ಬೀಜಗಳು ಗಿಡವಾಗಿ ಹೂಬಿಟ್ಟಿದ್ದಾವೆ. ಆಲೂಗೆಡ್ಡೆ ಗಿಡಗಳು ದೊಡ್ಡದಾಗಿ ಹಲವಾರು ಆಲೂಗೆಡ್ಡೆ ಮಣ್ಣಿನ ಅಡಿ ಕುಳಿತಿವೆ. ಇನ್ನು ಹತ್ತು ಹನ್ನೆರಡು ದಿನಗಳಲ್ಲಿ ಹೊರತೆಗೆಯುವ ಯೋಚನೆಯಲ್ಲಿದ್ದೇವೆ. ಜುಲೈ ಆಗಸ್ಟ್ ಸೆಪ್ಟೆಂಬರ್, ಇನ್ನು ಮೂರೇ ತಿಂಗಳು. ನಂತರ ಪುನಃ ಎಲ್ಲಾ ಗಿಡಗಳು ಇಲ್ಲಿಯ ಚಳಿಗೆ ಸಾಯುತ್ತವೆ. ಪುನಃ ಹಸಿರು ಕಾಣಲು ಮಾರ್ಚ್ ವರೆಗೆ ಕಾಯಬೇಕು. ಅಂಗಡಿಯಲ್ಲಿ ಸಿಗುವ ತರಕಾರಿಗಳಿಗೆ ಕಾಯಬೇಕು. ಆದರೆ ಬೆಳೆಯುವುದು ಎಷ್ಟು ಕಷ್ಟವೆಂದು, ಬೆಳೆಯಲು ಸಮಯ ಎಷ್ಟು ಬೇಕೆಂಬುದು ಇನ್ನೂ ಹೆಚ್ಚು ತೀವ್ರವಾಗಿ, ಮನಸ್ಸಿನ ಆಳದಲ್ಲಿ ಅರಿವಾಗಿದೆ.
ವಾರಕ್ಕೊಮ್ಮೆ ಶಾಪಿಂಗ್ ಎಂಬ ಪದ್ಧತಿ ಶುರುಮಾಡಿದ ಮೇಲೆ, ವಾರದಲ್ಲಿ ೩ ದಿನ ಅಂಗಡಿಗಳಿಗೆ ಹೋಗಿ, ಬೇಕಿದ್ದು, ಬೇಡದ್ದು ತರುವುದು ನಿಂತು ಹೋಗಿ, ಲೆಕ್ಕ ಮಾಡಿ ವಾರಕ್ಕೆ ಬೇಕಾದಷ್ಟು ಸಾಮಾನು ತರಕಾರಿಗಳು ಮನೆಗೆ ಬರಲು ಶುರುವಾಯಿತು. ಕೆಲವೊಮ್ಮೆ ಯಾವುದಾದರೂ ಒಂದು ವಸ್ತು ಎಣಿಸಿದ್ದಕ್ಕಿಂತ ಹೆಚ್ಚು ಖರ್ಚಾಗಿ ವಾರದ ಮೊದಲೇ ಕಾಲಿಯಾಗುವುದು ಸಹಜ. ಹಾಲು, ಮೊಸರು ಕಾಲಿಯಾದರೂ, “ಒಂದು ದಿನ ಹಾಲು, ಮೊಸರು ಇಲ್ಲದೆ ಇರೋಣ. ನಿರ್ಧಾರ ಮುರಿಯುವುದು ಬೇಡ” ಎಂದು ಮ್ಯಾನೇಜ್ ಮಾಡಲು ಶುರು ಮಾಡಿದಾಗ ಚಪಲತೆ ಸ್ವಲ್ಪ ಸ್ವಲ್ಪವೇ ಕಡಿಮೆಯಾಗತೊಡಗಿತು. ಬರೀ ಊಟ ಆಹಾರದ ವಿಷಯದಲ್ಲಿ ಅಲ್ಲ. ಉಳಿದೆಲ್ಲಾ ವಸ್ತುಗಳ ವಿಷಯದಲ್ಲಿಯೂ. ಏನಾದರೊಂದು ಬೇಕೆನಿಸಿದಾಗ ಮನಸ್ಸು, “ನಿಜವಾಗಿಯೂ ಅಗತ್ಯವಿದೆಯೇ?” ಯೋಚಿಸಲು ಶುರು ಮಾಡತೊಡಗಿದೆ. ಖರ್ಚು ಕಡಿಮೆಯಾಗತೊಡಗಿದೆ. ” ಬೇಕು” ಗಳಿಗಿಂತ “ಬೇಡ” ಲಿಸ್ಟ್ ದೊಡ್ಡದಾಗತೊಡಗಿದೆ. ನಾನು ಅಂಗಡಿಗೆ ಹೋಗದೆ ಮೂರುವರೆ ತಿಂಗಳಾಗಿದೆ. ಕಾಲಿಯಾದ ಅಗತ್ಯ ವಸ್ತುಗಳ ಲಿಸ್ಟ್ ಕೊಡುವುದು ಮಾತ್ರ ನನ್ನ ಕೆಲಸ. ಸೂಪರ್ ಮಾರ್ಕೆಟ್ ಶೆಲ್ಫ್ ಪುನಃ ತುಂಬಿ ತಿಂಗಳಾದವು. ಆದರೆ ಮನಸ್ಸು “ಬೇಕು”ಗಳಿಂದ ಕಾಲಿಯಾಗಿದೆ. ಜೀವನ ಸರಳ ಎನ್ನಿಸುತ್ತಿದೆ.
ಥಾಂಕ್ ಯು ಕೊರೊನ.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020