ನಿಧಾನಕ್ಕೆ ಗುಡಿಸಬೇಕು. ಜೋರಾಗಿ ಗುಡಿಸಿದರೆ ಧೂಳು ಮೇಲಕ್ಕೆ ಹಾರಿ ಮತ್ತಲ್ಲೇ ಬಂದು ಕೂರುತ್ತದೆ. ಬೇಗ ಅನ್ನೋದು ಕೆಲಸ ಶುರುಮಾಡುವ ಸಮಯಕ್ಕೆ ಹೊರತು ಮುಗಿಸುವುದಕ್ಕಲ್ಲ ನೋಡು. ಮೂಲೆ ಮೂಲೆಯ ಕಸ ಶುಭ್ರವಾಗಿ, ಅಂಟಿದ ಧೂಳು ಕೊಳೆಯಲ್ಲ ಹೊರಟು ಹೋಗಿ ಗುಡಿಸಿದರೆ ಒರೆಸಿದ ಹಾಗಿರಬೇಕು ಮಗುವೇ ಅಂತಿದ್ದಳು ಅಜ್ಜಿ.. ನಾನು ಕೇಳಿಸಿದರೂ ಕೇಳಿಸದವಳಂತೆ ಅದೊಂದು ಕೆಲಸ ಮುಗಿದರೆ ಸಾಕಂತೆ ಹಾಗಿದ್ರೆ ಒರೆಸೋದು ಬೇಡಾ ತಾನೇ ಎಂದು ಅವಳನ್ನು ಅಣಕಿಸುತ್ತಾ ಆಟಕ್ಕೋ ಮತ್ಯಾವುದಕ್ಕೋ ಹೋಗುವ ಯೋಚನೆಯಲ್ಲೇ ಇರುತ್ತಿದ್ದರಿಂದ ತಿರುಗಿ ನೋಡಲು ಹೋಗದೆ ಓಡುತಿದ್ದೆ.
ಒರೆಸಲು ಹೊರಟರೆ ಗಡಿಬಿಡಿಯಲ್ಲಿ ನೀರಲ್ಲಿ ಅದ್ದಿ ಸರಬರ ಬಟ್ಟೆ ಎಳೆಯುತ್ತಿದ್ದರೆ ಬಂದು, ನೋಡು ಒಂದು ಕೆಲಸ ಮಾಡಿದ ಮೇಲೆ ಇನ್ನೊಬ್ಬರು ಬಂದು ಮತ್ತೆ ಅದನ್ನು ಮಾಡೋ ಹಾಗೆ ಮಾಡಬಾರದು, ಬಟ್ಟೆಯನ್ನು ತೀರಾ ಗಟ್ಟಿಯಾಗಿಯೂ ಹಿಂಡಬಾರದು, ಜಾಸ್ತಿ ನೀರೂ ಇರಬಾರದು ಅದು ಒರೆಸುತ್ತಾ ಒರೆಸುತ್ತಾ ನಿನಗೆ ದಕ್ಕುವ ಹದವೆ ಹೊರತು ನಾನು ಹೇಳಿ ಬರುವುದಲ್ಲ ಎಂದರೆ ಅರ್ಥವಾಗದೆ ಕಣ್ಣು ಬಿಟ್ಟು ಮತ್ತೆ ಮೊದಲಿನಂತೆ ಒರೆಸುವ ಶಾಸ್ತ್ರ ಮುಗಿಸಿದರೆ ಅವತ್ತಿನ ಕೆಲಸ ಮುಗಿದ ಭಾವ. ನಿರಾಳತೆ.
ಕೆಲವೊಮ್ಮೆ ಮೈ ಮೇಲೆ ಏನೋ ಬಂದಂತೆ ಕ್ಲೀನ್ ಮಾಡುವ ಹುಚ್ಚು ಹಿಡಿದು ಬಿಡುತಿತ್ತು. ಆಗ ಗಂಟೆ ಗಟ್ಟಲೆ ಒತ್ತಿ ಒತ್ತಿ ಒರೆಸುವುದು ನೋಡುವಾಗ ಅಡುಗೆ ಮನೆಯ ಮೆಟ್ಟಿಲ ಮೇಲೆ ಕುಳಿತು ಅಷ್ಟು ಗಟ್ಟಿ ಒರೆಸದಿದ್ದರೂ ಕೊಳೆ ಹೋಗುತ್ತೆ ಕಣೆ, ಯಾವುದಕ್ಕೆ ಎಷ್ಟು ಒತ್ತುಕೊಡಬೇಕು ನೋಡ್ಕೋ ಸುಮ್ನೆ ಶಕ್ತಿ ಇದೆ ಅಂತ ವ್ಯರ್ಥ ಮಾಡ್ಕೊಂಡ್ರೆ ಉಪಯೋಗ ಏನೂ ಇರೋಲ್ಲ ಕೈ ನೋವು ಬರುತ್ತೆ ಅಷ್ಟೇ ಅಂದರೆ ಬೆವರು ಒರೆಸಿಕೊಳ್ಳುತ್ತಾ ಅವಳ ಕಡೆ ಕೆಂಗಣ್ಣು ಬೀರುತಿದ್ದೆ ಕೈ ಕೊಡವಿಕೊಳ್ಳುತ್ತಾ..
ಆಗಾಗ ಬಟ್ಟೆ ಜಾಲಿಸಿ ಹದವಾಗಿ ಹಿಂಡಿಕೊಂಡು, ಅನಾವಶ್ಯಕ ಒತ್ತಡ ಹಾಕದೆ, ಎಲ್ಲಿ ಉಜ್ಜಬೇಕು ಅಲ್ಲಿ ಉಜ್ಜುತ್ತಾ, ಎಲ್ಲಿ ಹಗುರವಾಗಿ ಎಳೆದರೆ ಸಾಕು ಅಲ್ಲಿ ಎಳೆಯುತ್ತಾ, ಅಂಟಿಕೊಂಡ ಧೂಳು, ಕಸವನ್ನು ತೆಗೆದು ಹೊರಗೆ ಎಸೆಯುತ್ತಾ ಆಮೇಲೆ ಜಾಲಿಸಿದರೆ ನೆಲವೂ ಶುಭ್ರ, ನೀರೂ ಹಗುರ, ಒರೆಸೋದೂ ಸುಲಭ ನೋಡು ಎಲ್ಲವಕ್ಕೂ ಒಂದೇ ತರಹ ಟ್ರೀಟ್ ಮಾಡೋದು ಸರಿಯೂ ಅಲ್ಲ ಸುಲಭವೂ ಅಲ್ಲ ಕೆಲವು ಸಲ ಒಂದೇ ತರಹ ಅನ್ನೋದು ಭ್ರಮೆ ಅಲ್ಲದೆ ಮತ್ತೇನಲ್ಲ ಅನ್ನುತ್ತಿದ್ದರೆ ಇವಳಿಗೆ ಅರವತ್ತರ ಮೊದಲೇ ಅರಳು ಮರಳು ಎಂದು ಸಿಟ್ಟು ಬರುತಿತ್ತು. ಒರೆಸುವುದು ಎಂದರೆ ರಗಳೆ ಅನ್ನುವ ಹಾಗಾಗಿ ಹೋಗಿತ್ತು. ಯಾರಾದರೂ ಇದನ್ನು ಕಂಡು ಹಿಡಿದರೋ ಅವರನ್ನು ಹುಡುಕಿ ಮೊದಲು ಶಾಸ್ತಿ ಮಾಡಬೇಕು ಎನ್ನುವ ಕೋಪವೂ, ಈಗ ಹುಡುಕಿದರೆ ಉಪಯೋಗವೂ ಇಲ್ಲ ಎನ್ನುವ ವೈರಾಗ್ಯವೂ ಎಲ್ಲ ಸೇರಿ ಇಳಿಯುವ ಬೆವರು ಮತ್ತಷ್ಟು ರೇಜಿಗೆ ಹುಟ್ಟಿಸಿ ಆ ಸಿಟ್ಟನ್ನೆಲ್ಲಾ ಒರೆಸುವ ಬಟ್ಟೆ ಕುಕ್ಕುವುದರ ಮೂಲಕ ಸಮಾಧಾನ ಮಾಡಿಕೊಳ್ಳಲು ಯತ್ನಿಸುತಿದ್ದೆ.
ಮೊನ್ನೆಯಷ್ಟೇ ಊರಲ್ಲಿ ಒಂದು ಅಹಿತಕರ ಘಟನೆ ನಡೆದು ಅದರ ಪರಿಣಾಮ, ಪ್ರಭಾವಗಳು ಎಲ್ಲೆಲ್ಲೋ ಹೇಗೇಗೋ ನಡೆಯುವಾಗ ನೀವ್ಯಾಕೆ ಅವರ ಹತ್ರ ಮಾತಾಡಿಲ್ಲ ಮಾತಾಡಬಹುದಲ್ಲ ಎಂದು ಪರಿಚಿತರೊಬ್ಬರು ಸುಜಿತ್ ಬಳಿ ಕೇಳುತ್ತಿದ್ದರು. ನೆಲ ಹಸಿ ಇರುವಾಗ ಹೆಜ್ಜೆ ಇಡಬಾರದು ಒಣಗಿದ ಮೇಲೆ ನಮ್ಮ ಹೆಜ್ಜೆ ಗುರುತು ಮಾತ್ರ ಉಳಿದುಬಿಡುತ್ತದೆ ಎಂದ. ಬಾಯಿ ತೆರೆಯಬೇಕು ಅನ್ನುವಷ್ಟರಲ್ಲಿ ಅಕ್ಕಾ ಈ ಮಕ್ಕಳಿಗೆ ಐದು ನಿಮಿಷ ಹೊರಗೆ ಆಡೋಕೆ ಹೇಳಿ ಒರೆಸಿದಲ್ಲೆಲ್ಲಾ ಹೆಜ್ಜೆಯೇ ಆಮೇಲೆ ನೀವು ಯಾಕೆ ಒರೆಸಿಲ್ಲ ಅಂತಿರಿ ಬನ್ನಿ ಇಲ್ಲಿ ಎನ್ನುವ ದನಿ ಕೇಳಿಸಿತು…
ರಜೆ ಶುರುವಾಗಿ ಒಂದು ವಾರವೂ ಸರಿಯಾಗಿ ಕಳೆದಿಲ್ಲ. ಬೆಳಿಗ್ಗೆ ಎಂಟು ಕೆಲವೊಮ್ಮೆ ಏಳು ಗಂಟೆಗೆ ಯುಧ್ಹ ಘೋಷಣೆ ಆಗಿ ಬಿಡುತ್ತದೆ. ಅಪ್ಪಿ ತಪ್ಪಿಯೂ ಅಲ್ಲಿ ಓಡಾಡುವ ಹಾಗಿಲ್ಲ. ಅಷ್ಟರೊಳಗೆ ಒಮ್ಮೆ ಒರೆಸಿಬಿಡುವ ಎಂದು ಹೊರಟು ಬಕೆಟ್ ಗಿಷ್ಟು ಲೈಜಾಲ್ ಸುರಿದು ಮೃದುವಾದ ಬಟ್ಟೆ ಹಿಡಿದು ಅಜ್ಜಿಯನ್ನು ನೆನಸಿಕೊಳ್ಳುತ್ತಾ, ದಕ್ಕಿದ ಹದವನ್ನು ನೋಡಿಕೊಳ್ಳುತ್ತಾ ಒರೆಸಿ ತೃಪ್ತಿಯಿಂದ ಫಳಫಳ ಹೊಳೆಯುವ ನೆಲದಲ್ಲ್ಲಿ ಪ್ರತಿಬಿಂಬ ನೋಡಿ ಹಿಗ್ಗುವ ಎಂದು ತಿರುಗಿದರೆ ಇಡೀ ಮನೆಯ ತುಂಬಾ ಟೆರೆಸ್ ನ ಧೂಳಿನಲ್ಲಿ ಆಡಿ ಕಾಲು ಒರೆಸಿಕೊಳ್ಳದೆ ಹಾಲಿನ ತುಂಬಾ ಓಡಾಡಿದ ಪುಟ್ಟ ಪುಟ್ಟ ಹೆಜ್ಜೆಗಳು….
ಯಾರ್ರೋ ಅದು ಎಂದರೆ ನಾನಲ್ಲ ಎನ್ನುವ ಉಡಾಫೆಯ ನಾಲ್ಕೈದು ದನಿಗಳು ಕೇಳಿದವು. ಯಾಕೋ ಗ್ರಹಚಾರ ಸರಿಯಿಲ್ಲ ಎಂದು ಮತ್ತೆ ಒರೆಸಿ ಆಚೆ ಹೋಗಿ ಬರುವುದರೊಳಗೆ ಟಿವಿ ಸ್ಟಾಂಡ್ ಮೇಲೆ ಸಾಲಾಗಿ ಕುಳಿತು ಚಿಪ್ಸ್ ತಿನ್ನುತ್ತಿದ್ದವು. ಬದುಕಿದೆಯಾ ಬಡ ಜೀವವೇ ಎಂದು ಉಸಿರುಬಿಡುತ್ತಾ ಬಂದರೆ ಕೆಳಗೆಲ್ಲಾ ಅನಾಥವಾಗಿ ಬಿದ್ದಿದ್ದ ಪುಡಿ… ಮತ್ತೆ ಒರೆಸಿ ಪ್ಲೀಸ್ ಕಣ್ರೋ ಒಂದು ಸ್ವಲ್ಪ ಹೊತ್ತು ಎಂದರೆ ಅದೆನ್ನನಿಸಿತೋ ಕೈಯಲ್ಲಿ ಹಿಡಿದ ಅರ್ಧ ತಿಂದ ಚಿಪ್ಸ್ ಪೀಸ್ ಒಂದನ್ನು ತಂದು ಬಾಯಿಗಿಟ್ಟ ಚೋಟು ಒರೆಸಬೇಡ ಬಿಡು ಆಂಟಿ ಅಂತು. ಅಯ್ಯೋ ಇದಕ್ಕಾದರೂ ನನ್ನ ಕಷ್ಟ ಅರ್ಥವಾಯಿತಲ್ಲ ಇವನ ಮೂಲಕ ಹೇಗಾದರೂಒಂದು ಒಪ್ಪಂದಕ್ಕೆ ಬರಬೇಕು ಎಂದು ಯೋಚಿಸಿ ಬಾಯಿ ತೆರೆಯುವ ಮುನ್ನವೇ ಬೇಕಿದ್ರೆ ಸುಮ್ನೆ ರಾತ್ರಿ ಒರೆಸು ನಮಗೆ ಆಡೋಕೆ ತೊಂದರೆ ಕೊಡಬೇಡಾ ಎಂದು ಕಡ್ಡಿ ಮುರಿದಂತೆ ಹೇಳಿ ಹೋಯ್ತು…
ಮಾತಿಗೆ ಮುನ್ನವೇ ಮುರಿದು ಬಿದ್ದ ಸಂಧಾನದ ಬಗ್ಗೆ ಯೋಚಿಸುತ್ತಲೇ ಬಾಯಲ್ಲಿಟ್ಟ ಚಿಪ್ಸ್ ಅನ್ನೇ ಕಟಕಟನೆ ಅಗಿದು ಪುಡಿಮಾಡುತ್ತಾ ಬಟ್ಟೆ ಒಣಗಿಸಲು ಹೋದರೆ ಅಜ್ಜಿ ಕಿಸಕ್ಕನೆ ನಕ್ಕ ಅನುಭವ…
ಹೌದು ಒರೆಸುವುದು ಧ್ಯಾನವೇ ಮಾರಾಯ್ತಿ ಅಂತ ಕೆನ್ನೆ ಬಡಿದುಕೊಂಡು ಕ್ಷಮೆ ಕೇಳುವ ಮನಸ್ಸು ಬಂದಾಗ ಅದನ್ನು ಕೇಳುವ ಜೀವದ ಸಮಯ ಮುಗಿದೇ ಹೋಗಿದೆ.. … ತಿರುಗಿದರೆ ಗಲಾಟೆ ಜೋರಾಗಿದೆ…
- ಬದುಕು ಸರಳ…. ನಾವೇ ಅದನ್ನು ಕ್ಲಿಷ್ಟ ಮಾಡ್ಕೊತಿವಿ ಅಷ್ಟೇ - August 10, 2020
- ಮಾತೃತ್ವಕ್ಕೆ ಜೀವ ಭೇಧವಿಲ್ಲಾ …. - July 30, 2020
- ಉಳಿಸಿಕೊಳ್ಳುವುದು ಎಷ್ಟು ಕಷ್ಟ…. - July 21, 2020