ದೋಷಮೆಂತದು ಮೂಗ
ನುಡಿಯೊಳಗೆ ಬೇಡದಿರೆ!?
ಕುರುಡನೆರಗದೆ ಇರಲು
ದೋಷಮೆಲ್ಲಿಯದು ?
ಬಡವ ತಾ ಕೊಡದಿರಲು
ದೋಷಮೆಂತಾಗುವುದು
ಇದ್ದು ಕೊಡದಿರೆ ದೋಷ
ಜಾಣಮೂರ್ಖ //
ಭಗವಂತನಿಗೋ , ಸಮಾಜಕ್ಕೋ ಅಥವಾ ನಮ್ಮವರಿಗೋ ಒಟ್ಟಿನಲ್ಲಿ ಸೇವಾ ಮನೋಭಾವದಿಂದ ಕೊಡುವ ಸಾಮರ್ಥ್ಯವಿರುವಷ್ಟನ್ನು ನಾವು ಕೊಡಬಹುದು. ಶಕ್ತಿ ಮೀರಿ ಕೊಡಲೆಂತು ಸಾಧ್ಯ !? ಇದ್ದವರು ಕೊಡುತ್ತಾರೆ. ಇಲ್ಲದವರಿಂದ ಇದು ಹೇಗೆ ಸಾಧ್ಯವಾದೀತು ? ಇಲ್ಲದವರೂ ಕೊಡುತ್ತಾರೆ ನಿರಪೇಕ್ಷಿತ ಭಾವದಲ್ಲಿ. ಅದು ಶ್ರೇಷ್ಠವಾದ ದಾನ. ಆದರೆ ಮೂಗನಾದವನಿಂದ ಮಾತಿನಿಂದ ಸ್ತುತಿಸಿ ಪಾಡಲು ಸಾಧ್ಯವೇ ? ಅದನ್ನು ನಿರೀಕ್ಷಿಸಲಾದೀತೆ? ಮನಸ್ಸಿನಿಂದ ಪ್ರಾರ್ಥಿಸಿದರಷ್ಟೇ ಸಾಕು. ಗುರುವೋ, ದೈವವೋ ಎದುರಿಗೆ ಬಂದು ನಿಂತರೂ ಕುರುಡನಾದವನು ಕಾಣಲು ಸಾಧ್ಯವೇ ? ಕಂಡು ನಮಸ್ಕರಿಸಲು ಸಾಧ್ಯವೇ? ಅದರಲ್ಲಿ ದೋಷವೆಣಿಸಲಾದೀತೆ ? ನಿರ್ಗತಿಕನು ದೊಡ್ಡ ಮಟ್ಟದ ದಾನ ನೀಡದಿರಲು ದೋಷವೆಂತಾಗುತ್ತದೆ ? ಬೇಡರ ಕಣ್ಣಪ್ಪ ನೀಡಿದ ಮೊಲದ ಮಾಂಸದಿಂದ ಶಿವ ತೃಪ್ತನಾದಂತೆ, ಬಡವಳೊಬ್ಬಳು ನೀಡಿದ ನೆಲ್ಲೀಕಾಯಿಯಿಂದ ಶಂಕರಾಚಾರ್ಯರು ತೃಪ್ತರಾಗಿ ಅನುಗ್ರಹಿಸಿದಂತೆ ಇರುವುದರಲ್ಲಿ ಕೊಡುವ ಮನಸ್ಸಿನಿಂದ ಕೊಟ್ಟಾಗ ಅದು ಭಗವಂತನ ಮೆಚ್ಚುಗೆಗೆ,ಪ್ರೀತಿಗೆ ಪಾತ್ರವಾಗುತ್ತದೆ. ಇದರಲ್ಲಿ ಸಂದೇಹವಿಲ್ಲ. ಆದರೆ ಇದ್ದೂ ಕೊಡದಿದ್ದರೆ ಅದು ದೋಷವಲ್ಲದೇ ಮತ್ತೇನು ? ಅಲ್ಲವೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021