ಇದೇನೋ .. ಸ್ವಪ್ನ ಸ್ವಗತ
ನೀ ಸಿಗದೇ..
ಬಾಳೊಂದು ಬಾಳೇ ಕೃಷ್ಣಾ ..
ಹೀಗೆಂದು ಅದೆಷ್ಟು ಬಾರಿ ಯೋಚಿಸಿ ಮನಸ್ಸು ಕೆಡೆಸಿಕೊಂಡಿದ್ದೇನೆಯೋ.. ಮನಸು ಹಾಳುಗೆಡವಿಕೊಂಡಿದ್ದೊಂದೇ ಬಂತು.. ಈ ಬಾಳು ಬಾಳೇ .. ನಿನ್ನ ನೆನಪಾಗದ ಬದುಕೂ ಒಂದು ಬದುಕೇ ..? ಎಲ್ಲಿಯ ವ್ಯಾಮೋಹವೂ.. ಎಲ್ಲಿಯ ಹಂಬಲವೋ ..? ಯಾತಕ್ಕಾದರೂ ಈ ಬದುಕು ..? ಜೀವಿಸಿ ಕೊನೆಗೊಂದು ದಿನ ಸುಮ್ಮನೆ ಸಾಯುವುದಕ್ಕೆ..? ಏನೇನೋ ಲಹರಿಗಳು.. ನಿನ್ನ ನೆನಪಿನೊಂದಿಗೆ ಸುರುಳಿ ಸುತ್ತುವಂಥಹವು..!
ಸುಮ್ಮನಿರುವ ಬದುಕು ಒಮ್ಮೊಮ್ಮೆ ನಿನ್ನನ ನೆನಪಿಸಿಕೊಂಡು ಹೀಗೇ ಕೊರಗಲಾರಂಭಿಸುವುದು.. ಮೌನದೊಂದಿಗೆ ಮಾತಾಡುವಾಗ ನಿನ್ನ ನೆನಪು ನನ್ನೊಳಗನ್ನು ಇಬ್ಬಾಗ ಮಾಡುವ ನಿರ್ದಯ, ಚೂರಾದ ಹೃದಯದ ನೆನಪಿನೊಂದಿಗೆ ಒಳ ತೂರಿಬರುವ ಬೆಳಕಿನ ಕಿರಣದಷ್ಟೇ ತೀಕ್ಷ್ಣ ತಲ್ಲಣ .. ಇಡೀ ಜೀವವನ್ನು ನಿನ್ನ ನೆನಪಿನೊಳಗೆ ಅಡ್ಡಿ ತೆಗೆಯುವುದು..
ಬಾಳೊಂದು ಬಾಳೆ..? ಯಾವುದನ್ನೂ ಇಂದು ಬಾಳು ಎಂದು ಕರೆಯಲಿ..? ನಿನ್ನೊಂದಿಗೆ ಕಳೆದ ಕ್ಷಣಗಳು ಮಾತ್ರವೇ..? ಇಂದಿನ ಬದುಕೇ..? ನಿನ್ನ ಹೆಸರೇನು..? ನೀ ಸಿಗದೇ ಹೋದದ್ದಕ್ಕೆ ನಾನು ಈ ಬದುಕನ್ನು ಬಾಳುತ್ತಿರುವೆನೇ..?
ನೀ ಸಿಗದೇ..?
ಯಾಕೆ ಸಿಗದೇ ಹೋದದ್ದು ನೀನು..? ನಿನ್ನ ಬಳಿಗೆ ನನ್ನನನ್ನು ಕರೆದ ಮೋಹನ ಮುರಳಿಯ ಗಾನ ನಿನ್ನ ಕರೆದೊಯ್ದಿದ್ದಾದರೂ ಎಲ್ಲಿಗೆ..? ಈ ಎದೆಯಲ್ಲೇ ಹರವಾದ ತೀರವಿತ್ತಲ್ಲೋ.. ಸುಳಿದಾಡುವ ತಂಗಾಳಿ ಇತ್ತಲೋ.. ಯಾರಿಗೆ ನುಡಿಸಿದ್ದು ಮತ್ತೆ ಕೊಳಲನ್ನು ನೀನು..? ಕೆಂಪು ತಾರೆಗಳ ನೋಡಿಕೊಂಡು ತಾನೇ ದಿನವೂ ನೀನು ನುಡಿಸುತ್ತಿದ್ದುದು..? ನನ್ನೆದೆಯಲ್ಲಿಯೇ ತಂಪಿನ ಸರೋವರವಿತ್ತಲ್ಲೋ.. ನನ್ನೆದೆಯ ತೀರದಲ್ಲೆಯೇ ಕುಳಿತು ಇನ್ಯಾರಿಗೋ ಕಾದೆಯಾ ….?
ರಾಗಗಳೊಂದಿಗೆ ಶುರುವಿಟ್ಟುಕೊಳ್ಳುವ ನಿನ್ನ ನೆನಪು ರಾಗಗಳೊಂದಿಗೆ ಕಾಡಲಾರಂಭಿಸುತ್ತದೆ. ಈ ರಾಗಗಳೊಂದಿಗೆ ಅಲ್ಲವಾ ನಿನ್ನ ನಾನು ಮೊದಲು ಸ್ನಾಧಿಸಿದ್ದು..? ಈ ನಿನ್ನೊಂದಿಗೆ ನಾನು ಮೊದಲು ಮಾತನಾಡಿದ್ದು..? ಯಾಕೆ ರಾಗಗಳೇ ನನ್ನಿಂದ ಅವನ ದೂರ ಮಾಡಿದಿರಿ..? ಈ ವಿಷಾದದ ಆಲಾಪನೆಯ ಭವಿಷ್ಯತ್ತಿಗಾಗಿಯೇ..?
ಕನಸುಗಳಲ್ಲಿ ಕೃಷ್ಣ.. ಮನಸಲ್ಲಿ ಕೃಷ್ಣ.. ನೆನೆಸಿಕೊಂದಲ್ಲೆಲ್ಲಾ ಕೃಷ್ಣನೇ.. ಒಂದೊಮ್ಮೆ ಕೃಷ್ಣನ ಕೊಳಲಿನೊಂದಿಗೆ.. ಇನ್ನೊಮ್ಮೆ ಅವನ ಮುಂಗುರೊಳಾಡುವ ನವಿಲು ಗರಿಯೊಂದಿಗೆ.. ಮತ್ತೊಮ್ಮೆ ಸುಶರೀರದ ದಟ್ಟ ಮೇಘ ವರ್ಣದೊಂದಿಗೆ.. ಕಳೆದು ಹೋಗುವ ಕನಸು.. ರಾಧೆಯಾಗಿ…
ರುಕ್ಮಿಣಿ ಎಂದೂ ಆಗಲಾರದೆ…
ಎಲ್ಲಿಂದ ಎಲ್ಲಿಗೆ ಕೊಂಡೊಯ್ಯುತ್ತವೆ ನೆನಪುಗಳು..? ಎಷ್ಟು ಮಾತುಗಳು.. ಎಷ್ಟು ಉತ್ಸಾಹ, ಚೈತನ್ಯ ತುಂಬಿಸುವ ಮೇಲ್ನುಡಿಗಳು.. ನಸುಗೋಪ.. ಆರಾಧನೆ.. ಬೇಡಿಕೆ.. ಎಷ್ಟು ಚಿಕ್ಕವಳು ಈ ರಾಧೇ.. ಕೃಷ್ಣನ ಕೃಷ್ಣತ್ವವನ್ನೇ ದೊಡ್ಡವಳನ್ನಾಗಿ ನೋಡೋ ಮನಸು.. ಪ್ರಭುದ್ಧಳನ್ನಾಗಿಸಿ ಆಲಾಪಿಸೋ ಬಯಕೆ.. ಎಷ್ಟು ಮಾತುಗಳು.. ಧಾಟಿ – ದಾರಿ ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದರ ಅರಿವಿದ್ದರೂ ಮನಸ್ಸನ್ನು ಮೀರಿ ಮೊದಲಾಗುವ ಮಾತುಗಳು.. ಮನದ ಮೂಲೆಯಲ್ಲೆಲ್ಲೋ ಹೆಪ್ಪುಗಟ್ಟಿ ಕುಳಿತ ಸುಪ್ತ ಸ್ವಪ್ನಗಳು, ಕೃಷ್ಣನದೊಂದು ದನಿಗೆ, ಅವನದೊಂದು ಕೊಳಲ ನಾದಕ್ಕೆ ಎಚ್ಚರ.. ಎದೆಯ ಮರೆಯ ಜಲಪಾತಗಳು ಭೋರ್ಗರೆದು.. ಭಾವನೆಗಳು ಧುಮ್ಮಿಕ್ಕಿ.. ಒಲವಿನ ಬೆಳ್ನೊರೆಯಾಗಿ ಹರಿದು ನರಗಳಲ್ಲಿ ಹರಿದು.. ಪ್ರೀತಿಯ ಅನಂತ ಜಲಾಶಯ. ಸಾಗರ.. ಅನಂತ..? ಏನಿದರ ಅರ್ಥ..? ಅನಂತ ಒಲವಿಗೆ ಸಾಕ್ಷಿ ನಮ್ಮೊಲವೇ..?
ಚಳಿಗೆ ಕುಸುಮಗಳ ಕದವಿಕ್ಕಿ ಕುಳಿತ ಹೂಗಳಂತೆ ಲೋಕನೀತಿಯ ಚಳಿಗೆ ಮುದುಡಿರುವ ಬಯಕೆಗಳು, ಪ್ರೌಢ ಎಂದು ಅರ್ಥೈಸಿಕೊಂಡು ಸುಮ್ಮ್ನನಾಗುವಂಥ, ಉನ್ನತ ಸಾಲೋಚನೆಗಳು, ಒಣದಾರ ಹಿಂದೊಂದು ಮೆರವಣಿಗೆ ಬಂದು.. ಮಾತಾಗುವ ಬಯಕೆ ಬೃಹದಾಕಾರವಾಗಿ ನಿಂತು.. ಆ ಘಳಿಗೆ ಬಂದಾಗ ಒಂದಕ್ಷರವೂ ಬಾರದೇ ಮೌನದಲ್ಲಿಯೇ ಎಲ್ಲಾ ಇಂಗಿತಗಳನ್ನೂ ಅರ್ಥೈಸಿಕೊಳ್ಳುವ … ಅದಕ್ಕೇ ನೀನು ಕೃಷ್ಣನಾದದ್ದು..
ನೀನೇನೂ ಹೇಳದೆಯೂ ನನಗೆಲ್ಲವೂ ಅರ್ಥವಾಗಿದೆ.. ಈ ನಿನ್ನ ಮೊದಲ ಮಾತುಗಳನ್ನೇ ನಮ್ಮ ಪ್ರೇಮದ ಮುನ್ನುಡಿಯೆಂದು ಭಾವಿಸುವ ವೇಳೆಗಾಗಲೇ ನಾನು ಮತ್ತೊಬ್ಬನ ಪ್ರೇಮದ ಸೆರೆಯಾಗುವವಳಿದ್ದೆ.. ಅದರ ದುಗುಡವನ್ನು ನಿವೇದಿಸುವ, ನುದಿಗಳಲ್ಲಿದ್ದ ತಿಳಿದೇ ಹೇಳಿದ್ದೇನೋ ನೀನು ಆ ಮಾತು.. ಅನುಮಾನವೇ…
ಬೆಳದಿಂಗಳ ರಾತ್ರಿಯಲ್ಲೊಮ್ಮೆ ನೀ ಸದ್ದಿಲ್ಲದೇ ಕೈ ಹಿಡಿದದ್ದು ನೆನಪಾಗುತ್ತದೆ.. ಕತ್ತಲೆಯ ಸಂಜೆಯಲ್ಲೂ ಏಕಾಂತ ಬಯಸದೇ ಶ್ರಿಮದ್ಗಾಂಭೀರ್ಯದಿ ನಿನ್ನ ನುಡಿಗಳಿಂದ ಹೃದಯದ ಪಲ್ಲವಗಳಿಗೆ ನೀರೆರೆದಿದ್ದು.. ನಿನ್ನ ಬೆಚ್ಚನೆಯ ಬೆರೆಳುಗಳಿಂದ ನನ್ನ ಹಸ್ತಗಳಿಗೆ ಆತ್ಮವಿಶ್ವಾಸವನ್ನು ಪರಿಚಯಿಸಿದ್ದು.. ಎಚ್ಚರಿಸಿದ್ದು..
ನಾವು ಒಟ್ಟಾಗಿ ಕುಳಿತು ನಮ್ಮದೇ ಎನ್ನುವ ಕನಸುಗಳನ್ನು ಕಟ್ಟಿಲ್ಲ.. ರಮ್ಯಾ ವರ್ಣಗಳ ರೋಮಾಂಚಕಾರಿ ಮಾತುಗಳಾದಿಲ್ಲ.. ಆಡಲಿಲ್ಲ ಒಮ್ಮೆಯೂ ಒಂದೂ ಪಿಸುಮಾತು.. ಸುಮ್ಮನೆ ನೋಡಿ ನಗಲಿಲ್ಲ… ಯೋಚನೆಗಳೆಲ್ಲವನ್ನೂ ಒಂದೇ ರೀತಿ ಸಾಕಾರಗೊಳಿಸುವ ರೀತಿಯೇ ನಮ್ಮನ್ನು ಹತ್ತಿರ ತಂದಿತೇ..? ಎಲ್ಲದರಲ್ಲೂ ಉದ್ವೇಗಕಾರಿ ಸಾಫಲ್ಯದ ಅಪೇಕ್ಷೆ ಹತ್ತಿರ ತಂದಿತೇ..? ನಮ್ಮ ಅಭಿಪ್ರಾಯಗಳು. .. ಭಾವಗಳನ್ನು , ಭಾವನೆಗಳನ್ನು ಗೌರವಿಸಿಕೊಳ್ಳುವ ರೀತಿ..? ಹತ್ತಿರವಾಗಿಸಿದವೇ..? ಎಲ್ಲರೊಂದಿಗೆ ಸಂತಸವನ್ನ ಹಂಚಿಕೊಳ್ಳುವ ಹೃದಯ.. ? ಯಾವುದು ನಮ್ಮನ್ನು ಬೆಸೆದಿದ್ದು..? ಯಾವುದು ನಮ್ಮ ನಡುವಿನ ಅನಂತ ಬಾಂಧವ್ಯಕ್ಕೆ ಅಡಿಪಾಯವಾಗಿದ್ದು..?
ರಾಗಗಳೊಂದಿಗೆ ನೆನಪಾಗುತ್ತೀಯ
ಕೃಷ್ಣಾ.
ಉದ್ವೇಗಗಳೊಂದಿಗೆ ನೆನಪಾಗುತ್ತೀಯ..
ತಾಣದೊಂದಿಗೆ ಮನದೊಳಗೆ ಮರುಕಳಿಸುತ್ತೀಯಾ..
ತಳಮಳದೊಂದಿಗೆ ಕಣ್ಣೆದುರು ನಿಲ್ಲುತ್ತೀಯ..
ನನ್ನೆಲ್ಲಾ ಭಾವನೆಗಳಿಗೆ ಕನ್ನಡಿಯಂತಿದ್ದ. . ನನ್ನೆಲ್ಲಾ ಇಂಗಿತಗಳನ್ನೂ ಹೇಳುವ ಮೊದಲೇ ಅರಿಯುತ್ತಿದ್ದ.. ನನ್ನೆಲ್ಲಾ ಮಿಳಿತ ತುಡಿತಗಳನ್ನು ಸಂತವಿಟ್ಟು ನೀರೆರೆಯುತ್ತಿದ್ದ ಕೃಷ್ಣಾ…
ನೀ ಸಿಗದೇ ..
ಬಾಳೊಂದು ಬಾಳೇ..
ಈ ಎದೆಯ ಕೋಲಾಹಲಗಳನ್ನು ಬರಿಯ ಬಂಧಿಸಿಡಬಹುದಾಗಿದ್ದರೆ .. ಧುಮ್ಮಿಕ್ಕೊ ದುಮ್ಮಾನಗಳನ್ನು ನಿನ್ನೆಡೆಗೆ ಬಸಿಯುವ ಕೆಲಸ ಮಾಡುತ್ತಿರಲಿಲ್ಲ.. ನಿನ್ನ ಘನ ವ್ಯಕ್ತಿತ್ವದಿಂದ ಮೂಲವಾದ ನಮ್ಮ ಪುಟ್ಟ ಪ್ರೇಮ ಝರಿ ಇಂದು ನಮ್ಮಿಬ್ಬರೆಡೆಯಲ್ಲೂ ಧುಮ್ಮಿಕ್ಕಿ ಭೋರ್ಗರೆದುದರಲ್ಲಿ ನನ್ನ ಪಾಲೂ ಇಲ್ಲವೆಂದಿಲ್ಲ..
ಈಗಲೂ.
ನನ್ನಿಂಗಿತಗಳಿಗೆ ನೀರು ಸಿಗದಾಗ..
ನನ್ನ ಆಕಾಂಕ್ಷೆಗಳಿಗೆ ಬೊಗಸೆ ಸಿಗದಾದಾಗ.. ಮತ್ತೆ ಮತ್ತೆ ಕಾಡುವುದು.. \
ನಿನ್ನಾ…… ನೆನಪು….
ಜೀವಕ್ಕೊಂದು ಸಾಯುಜ್ಯ.. ಪ್ರೇಮ ಸಾಯುಜ್ಯ… ಆತ್ಮ ಸಮರ್ಪಣೆ… ನಿನ್ನ ಪ್ರೇಮದ ಪರಿಗೆ.. ಆರಾಧನೆಯ ಉತ್ತುಂಗಕ್ಕೆ.. ಬಾಳ ತುದಿಯ ಕ್ಷಣಗಳಿಗೆ.. ನಾ ಮುಗಿಯುವ ಮೊದಲು.. ನಿನ್ನೆಡೆಗೊಂದು ಒಲವು… ಹಿಡಿ ಒಲವು.. ನೀ ಬೇಡುತ್ತಿದ್ದರೂ ನಾ ಕೊಡಲಾರದೆ ಹೋದ ವೊಲವು…
ಬದುಕಿನ ಎಚ್ಚರದ ಪ್ರತಿ ಗಳಿಗೆಯಲ್ಲೂ .. ನಿನ್ನ ವಿಶುದ್ಧ ಪ್ರೇಮದ ನೆನಪಿನಂಗಳದಿ.. ಬೆಳ್ಳನೆ ಬೆಳದಿಂಗಳಾಗಿ.. ನಿನ್ನ ಮೌನದಾರಾಧನೆಯ ಭಾವಗಳ ಮೆಲುಕಲ್ಲಿ .. ನನ್ನೆಡೆಗೆ ನಾನೇ ತಂಪನ್ನೆರೆಯುತ್ತಾ…. ನಿನ್ನದೆಂದು ಎಣಿಸಿ ….
ಕಲ್ಪನೆಗಳಿಗೆ ಕೊನೆಯೆಲ್ಲಿ..?
ಅದೇ ತಂಪು ತಂಗಾಳಿಗೆ ತೆರೆದುಕೊಂಡರೆ ಮತ್ತೆ ಮತ್ತೆ ನೆನಪುಗಳು ಕರಗಿ ಹೃದಯ ಭೋರೆಂದು ಅಳುತ್ತದೆ.. ಎಲ್ಲಾ ಹಂಗುಗಳನ್ನೂ … ಪೂರ್ತಿ ಜಗವನ್ನೇ ತೊರೆದು.. ಮತ್ತೆ ನಿನ್ನ ಮುಸ್ಸಂಜೆಗಳಿಗೆ ಹಿಂದಿರುಗುವ ಮನಸ್ಸಾಗುತ್ತದೆ.. ಧೈರ್ಯವಾಗುವುದಿಲ್ಲ.. ಅಗಲಿದ ನೆನಪು… ಎಡವಿದ ಹೆಜ್ಜೆ.. ಕತ್ತಲೆಯೊಳಗಿನ ಕೆಸರು ಹೆಜ್ಜೆ.. ನಿನ್ನ ಕೊಳಲ ದನಿಯ ಅಲೆಗಳೊಳಗೆ ತೇಲಿ ಮುಳುಗಿ ದೂರದ ತಂಪು ತೀರದ ಏಕಾಂತದೆಡೆಗೆ ಪಯಣಿಸಲು .. ಯಾರಿಗಿರುವುದಿಲ್ಲ ಹಂಬಲಗಳು..?
ಇರುವುದೆಲ್ಲವ ಬಿಟ್ಟು..
ಇರದುದರೆಡೆಗೆ ..
ಸ್ವಪ್ನ ಶಶಿಧರ ಭಟ್
- ಇದೇನೋ.. ಸ್ವಪ್ನ ಸ್ವಗತ .. - June 23, 2020