ಅಂತಿಹರು ಇಂತಿಹರು
ಲೋಗರೆನ್ನುತ ಮನದಿ
ಎಂತಿರುವೆ ನೀನೆನುವು
ದನು ಮರೆತೆಯೇಕೆ ?
ಅವರಂತೆ ಅವರಿರಲಿ
ನಿನ್ನ ನೀ ಬದುಕ ಬಿಡು
ಬದುಕಿ ತೋರಿಂತು ನೀ
ಜಾಣಮೂರ್ಖ//
ಇದೆಷ್ಟು ಸೂಕ್ಷ್ಮ ಮತ್ತು ಸಹಜ ಎಂದರೆ ನಾವೆಲ್ಲರೂ ಈ ತಪ್ಪನ್ನು ಮಾಡಿದ್ದೇವೆ. ಈಗಲೂ ಮಾಡುತ್ತಲೂ ಇದ್ದೇವೆ. ಅದೇನೆಂದರೆ ಬೇರೆಯವರ ಬಗ್ಗೆ ಅವರು ಹಾಗೆ ಇವರು ಹೀಗೆ ಎಂದು ಯೋಚಿಸಿ , ಹೋಲಿಸಿಕೊಂಡೇ ನಡೆಯುವ ನಾವು ನಾನು ಏನೆಂಬುದನ್ನೇ ಮರೆತುಬಿಟ್ಟಿರುತ್ತೇವೆ. ಜಗತ್ತು ಹೇಗಿದೆಯೋ ಹಾಗಿರಲಿ ಬಿಡು ಗೆಳೆಯ ! ಒಂದಿಷ್ಟು ನಿನ್ನನ್ನು ನೀನು ನೀನಾಗಿ ಬದುಕ ಬಿಡು ! ಇಂತಿಷ್ಟು ಬದುಕಿಬಿಡಯ್ಯ ಸಾಕು. ಎಷ್ಟೋ ನೆಮ್ಮದಿಯ ಬದುಕು ನಿನ್ನದಾಗುತ್ತದೆ. ನೀನೂ ಬದುಕಿ ಇತರರನ್ನು ಬದುಕಬಿಡು ಎಂಬ ಮಾತನ್ನು ಕೇಳಿದ್ದೆವು. ಸ್ವಲ್ಪ ಚಿಂತಿಸಿ ನಾನು ನನ್ನನ್ನೇ ಸರಿಯಾಗಿ ಬದುಕಬಿಡುತ್ತಿಲ್ಲ ! ಎಂಬ ಸತ್ಯ ಕಾಣುತ್ತದೆ. ಈ ಮುಕ್ತಕ ಓದಿದ ಮೇಲೆ ಕಣ್ಮುಚ್ಚಿ ನಮ್ಮ ಬಗ್ಗೆ, ನಾವು ನಡೆದು ಬಂದ ದಾರಿಯ ಬಗ್ಗೆ ಸ್ವಲ್ಪ ಚಿಂತಿಸಿ ನೋಡಿ ! ಕೆಲ ಕಾಲವಾದರೂ ನಮ್ಮಂತೆ ನಾವಿದ್ದರೆ ಬದುಕೆಷ್ಟು ಸುಂದರವಾಗಿರುತ್ತದೆ ಎಂದು!!!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021