ಊರಿನ ಹೆದ್ದಾರಿ. ಶಾಲೆ ಇರುವುದು ಒಂದು ಕಿಲೋಮೀಟರು ದೂರವಿರುವ ಪಕ್ಕದ ಕೂಳೂರಿನಲ್ಲಿ. ತಲೆ ಕೂದಲು ಕೆದರಿಕೊಂಡು ಕೈಯಲ್ಲಿರುವ ಹಗ್ಗ ಬೀಸುತ್ತಾ ಬಾಯಲ್ಲಿ ಏನೋ ಒದರುತ್ತಾ ಬರ ಬರನೆ ನೆಡೆಯುತ್ತಾ, ಕೆಲವೊಮ್ಮೆ ಓಡುತ್ತಾ ತುಂಗಮ್ಮ ಬರುತ್ತಿದ್ದರೆ, ಮಕ್ಕಳೆಲ್ಲಾ ಚಲ್ಲಾಪಿಲ್ಲಿಯಾಗಿ ದಾರಿಯ ಪಕ್ಕದ ಮರ ಮಟ್ಟುಗಳ ಸಂದಿ ಓಡಿ ಹೋಗಿ ಅಡಗುವ ಪ್ರಯತ್ನ ಮಾಡುತ್ತಿದ್ದರು. ಆಕೆಯೋ ಮುಂದೆ ಬಲಕ್ಕೆ ತಿರುಗುತ್ತಾಳೋ, ಎಡಕ್ಕೆ ತಿರುಗುತ್ತಾಳೋ ಎಂದು ತಿಳಿಯದಂತೆ ರಸ್ತೆಯ ಆಚೀಚೆ ಸುಳಿಯುತ್ತ, ಹತ್ತಿರ ಸಿಕ್ಕ ಮಕ್ಕಳಿಗೆ ಹಗ್ಗ ಬೀಸಿ ಹೊಡೆಯುತ್ತಾ ಮುಂದೆ ಬರುತ್ತಿದ್ದಳು. ಅಷ್ಟರಲ್ಲಿ ಯಾರೋ ಕೂಗಿದರು, “ತುಂಗಮ್ಮನ ಕೈಯಲ್ಲಿ ಕತ್ತಿಯಿದೆ. ಓಡಿ ” ತುಂಗಮ್ಮ ಸುತ್ತಮುತ್ತಲಿರುವ ದೊಡ್ಡವರಷ್ಟೇ ದೊಡ್ಡ ಕಾಯ ಹೊಂದಿದ್ದರೂ, ಮಕ್ಕಳು ಚಿಕ್ಕವರಿದ್ದರಿಂದಲೋ ಏನೋ ಆ ದಿನ ಯಾಕೋ ಎಲ್ಲರಿಗಿಂತ ದೊಡ್ಡದಾಗಿ ರಾಕ್ಷಸಿಯಂತೆ ಕಾಣುತ್ತಿದ್ದಳು.
ಒಂದನೇ ಕ್ಲಾಸು. ಇದು ಮೊದಲ ಅನುಭವ. ಎಲ್ಲರಿಗಿಂತ ಮುಂದೆ ಇದ್ದುದರಿಂದಲೋ ಏನೋ ಅಂಜನಾ, ಕೇಶವ, ರಘು ಆಗಲೇ ಕೂಡ್ಲುವಳ್ಳಿ ಸಂತೆ ಮಾರ್ಕೆಟ್ ಹತ್ತಿರ ತಲುಪಿಯಾಗಿತ್ತು. ಅಷ್ಟರಲ್ಲಿಯೇ ಹಿಂದಿನಿಂದ ಕೂಗುತ್ತಾ ಬಂದ ತುಂಗಮ್ಮ ಬೀಸಿದ ಹಗ್ಗ ರಘುವಿಗೆ ತಾಗಿತ್ತು. ಅಯ್ಯೋ ಎಂದು ಕೂಗುತ್ತಾ ಆತ ಓಡಿದ ಕೂಡಲೇ, ಅಲ್ಲೇ ರಸ್ತೆಯ ಪಕ್ಕದಲ್ಲಿದ್ದ ಅಂಗಡಿಯವರ್ಯಾರೋ ಓಡಿ ಬಂದು ಅಂಜನಾಳನ್ನು ಎತ್ತಿಕೊಂಡು ಅಂಗಡಿಯ ಕಡೆಗೆ ಓಡಿದ್ದರು. ಕೇಶವನೂ ಹಿಂದೆಯೇ ಓಡಿದ್ದ. ಉದ್ದದ ನಾಲ್ಕಾರು ಅಂಗಡಿಗಳಿದ್ದ ಮಳಿಗೆ. ಮಧ್ಯದಲ್ಲೊಂದು ಮನೆ. ಅಂಗಡಿಗಳಿಗಿದ್ದಂತೆಯೇ ಆ ಮನೆಯ ಬಾಗಿಲೂ ಕೈಯಲ್ಲಿ ಎತ್ತಿ ಪಕ್ಕಕ್ಕಿಡುವಂತಹ ಮರದ ಹಲಗೆಗಳಿಂದ ಮಾಡಿದ್ದು. ಆ ಮನೆಯ ಒಳಗೆ ನಿಂತು ಹೊರಗೆ ಇಣುಕುತ್ತಿದ್ದ ದೊಡ್ಡ ಕೆಂಪು ಬೊಟ್ಟನ್ನಿಟ್ಟ ಮಧ್ಯ ವಯಸ್ಕ ಮಹಿಳೆ ಆತ್ಮೀಯತೆಯ ನಗು ಬೀರಿ, “ಒಳಗೆ ಬನ್ನಿ” ಎಂದು ಮಕ್ಕಳಿಬ್ಬರನ್ನೂ ಕರೆದರು. ಇನ್ನೊಂದು ಅಂಗಡಿಯ ಪಕ್ಕದಲ್ಲಿ ನಿಂತಿದ್ದ ಜನಗಳಿಗೂ ಹಗ್ಗ ಬೀಸಿ ಹೊಡೆಯುತ್ತಿದ್ದ ತುಂಗಮ್ಮನನ್ನು ಕಂಡು ಮಕ್ಕಳಿಬ್ಬರೂ ಆ ಮಹಿಳೆಯ ಮನೆಯೊಳಗೇ ಸೇರಿದ್ದರು.
ಮನೆಯ ಒಳಗೆ ಹೋದರೆ ಅಂಗಡಿಗಳಂತೆ ಮುಂದಿಂದ ಹಿಂದಿನವರೆಗೂ ಇದ್ದ ಒಂದೇ ರೂಮು. ಆ ರೂಮಿನ ಮಧ್ಯದಲ್ಲಿ ಬಟ್ಟೆ ಒಣಗಿಸಲು ಹಾಕುವ ಮರದ ಸ್ಟಾಂಡ್. ಅದಕ್ಕೆ ತೂಗಿಬಿಟ್ಟಿದ್ದ ಸೀರೆಗಳು ಮನೆಯ ಒಳಭಾಗವನ್ನು ಹೊರಗಿನಿಂದ ಬೇರ್ಪಡಿಸಿ ಎರಡು ರೂಮಿದೆಯೋ ಎಂಬಂತೆ ಕಾಣುತ್ತಿತ್ತು. ಮುಂದಿನ ಆವರಣದಲ್ಲಿ ಒಂದು ಪಕ್ಕದಲ್ಲಿ ಒಂದು ಬೆಂಚ್. ಅದರ ಮೇಲೆ ಕುಳಿತುಕೊಳ್ಳಲು ಹೇಳಿ, “ಈಕೆ ನಿನ್ನ ತಂಗಿಯಾ?” ಎಂದು ಕೇಶವನನ್ನು ಕೇಳುತ್ತಿದ್ದರೆ, ಸ್ಟ್ಯಾಂಡಿಗೆ ಹೊದೆಸಿದ ಸೀರೆಗಳ ಹಿಂದಿನಿಂದ ನಾಲ್ಕು ಕಣ್ಣುಗಳು ಇಣುಕುತ್ತಿದ್ದವು. ಅಷ್ಟರಲ್ಲಿ ಆ ಮಹಿಳೆ, “ಲಲಿತ…ಸುಮಿತ್ರಾ… ಈಚೆ ಬನ್ನಿ ” ಎಂದು ಕರೆದರು. ಅಂಜನಾಳಷ್ಟೇ ದೊಡ್ಡವರಾದ ಇಬ್ಬರು ಹುಡುಗಿಯರು. ಒಬ್ಬಳು ಸ್ವಲ್ಪ ಬಿಳುಪು. ಇನ್ನೊಬ್ಬಳು ಸ್ವಲ್ಪ ಮಬ್ಬು. ಇಬ್ಬರೂ ಲಕ್ಷಣವಾಗಿದ್ದರು. ಅಮ್ಮ ಕರೆದಾಗ ಬಂದು ಅಮ್ಮನ ಪಕ್ಕ ನಿಂತು, “ಇವರು ಒಂದನೇ ಕ್ಲಾಸು, ಪುಷ್ಪ ಟೀಚರ್ ಮಗಳು ಇವರು ಒಂದೇ ಕ್ಲಾಸ್ ” ಎಂದು ಅಮ್ಮನಿಗೆ ಹೇಳಿದರು. ನೀವು ಎಂದು ಅಂಜನಾ ಕೇಳಿದಾಗ “ನಾವಿಬ್ಬರೂ ಎರಡನೇ ಕ್ಲಾಸು” ಚಿಕ್ಕವಳು ಲಲಿತ ಹೇಳಿದಳು. ಸುಮಿತ್ರಾ ಸ್ನೇಹದಿಂದ ಮುಗುಳ್ನಗುತ್ತಿದ್ದಳು. ಅಲ್ಲಿಯೇ ಬೆಸೆದಿತ್ತು ಸ್ನೇಹದ ಸಂಕೋಲೆ. ಅಷ್ಟರಲ್ಲಿ ಆ ಮಹಿಳೆ ಚಿಕ್ಕ ಚಿಕ್ಕ ಅಲ್ಯೂಮಿನಿಯಂ ಲೋಟಗಳಲ್ಲಿ ಉಗುರುಬೆಚ್ಚಗಿನ ಹಾಲು ತಂದು ಬೇಡ ಎನ್ನಲು ಅವಕಾಶವಿಲ್ಲದಂತೆ ಪ್ರೀತಿಯಿಂದ ಕುಡಿಯಿರಿ ಎಂದಿದ್ದರು.
ತುಂಗಮ್ಮನ ಗಲಾಟೆ ಕಡಿಮೆಯಾಗುವಷ್ಟರಲ್ಲಿ ರಘು ಶ್ರೀಮತಿಯೊಂದಿಗೆ ಕಾಣಿಸಿಕೊಂಡಿದ್ದ. ಬನ್ನಿ ಹೋಗೋಣ ಎಂದು ಕರೆದಾಗ ಅಂಜನಾ ಕೇಶವ ಇಬ್ಬರೂ “ಬರುತ್ತೇವೆ” ಎಂದು ಹೇಳಿ ಮನೆಯ ಕಡೆಗೆ ಹೊರಟರು. ಕುಡ್ಲುವಳ್ಳಿ ಪೇಟೆಯಿಂದ ಮನೆಗೆ ಎರಡು ಫರ್ಲಾಂಗ್. ಮುಖ್ಯರಸ್ತೆ ಬಿಟ್ಟು ಗಣಪತಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಒಳಹೋದರೆ ಒಂದು ಬಾವಿ. ಅಲ್ಲಿಂದ ಬಲಕ್ಕೆ ತಿರುಗಿದರೆ ನಾಗರ ಬನ. ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಮನೆ ಸಿಕ್ಕಂತೆ. ಶ್ರೀಮತಿ ರಘುವಿನ ಅಕ್ಕ. ೩ನೇ ಕ್ಲಾಸಿನಲ್ಲಿದ್ದಳು. ರಘು ಕೇಶವ, ಅಂಜನಾಳ ಜೊತೆ ಒಂದನೇ ಕ್ಲಾಸ್. ಇಬ್ಬರ ಮನೆಗಳೂ ಅಕ್ಕ ಪಕ್ಕದಲ್ಲಿದ್ದರಿಂದ ಶಾಲೆಗೆ ಹೋಗಿ ಬರುವಾಗ ದೊಡ್ಡ ಕ್ಲಾಸ್ಸಿನ ಶ್ರೀಮತಿಯ ಜೊತೆಗೆ ಹೋಗಿ ಬರುವುದೆಂದು ನಿರ್ಧಾರವಾಗಿತ್ತು. ಆಕೆಗೋ, ಆಕೆಯ ಸ್ನೇಹಿತೆಯರ ಜೊತೆ ಮಾತನಾಡುತ್ತಾ ನಿಧಾನವಾಗಿ ಬರುವುದು ಇಷ್ಟ. ಇವರು ಮೂರ್ವರಿಗೆ ಮನೆ ಯಾವಾಗ ಸೇರುತ್ತೇವೋ, ಎಷ್ಟು ಹೊತ್ತಿಗೆ ಕಣದಲ್ಲಿ ಉಳಿದ ಮಕ್ಕಳೊಂದಿಗೆ ಆಟಕ್ಕೆ ಹೋಗುತ್ತೇವೋ ಎಂಬ ಕಾತರ. ಹಾಗಾಗಿ ಶಾಲೆ ಬಿಟ್ಟ ಕೂಡಲೇ ಶ್ರೀಮತಿಗೂ ಕಾಯದೆ ಮನೆಕಡೆಗೆ ಓಡಿ ಬರುತ್ತಿದ್ದರು.
ಮನೆಯ ಗೇಟ್ ಹತ್ತಿರ ಬಂದ ಕೂಡಲೇ ಅಂಜನಾಳಿಗೆ ಯುನಿಫಾರ್ಮ್ ನೆನಪಾಗಿತ್ತು. ಬಿಳಿ ಬಣ್ಣದ ಶರ್ಟ್, ಹುಡುಗಿಯರಿಗೆ ನೀಲಿ ಬಣ್ಣದ ಸ್ಕರ್ಟ್ . ಹುಡುಗರಿಗೆ ಅದೇ ಬಣ್ಣದ ಚಡ್ಡಿ. ನೀಲಿ ಬಣ್ಣ ಕೊಳೆಯಾಗಿದ್ದು ಕಾಣಿಸುತ್ತಿರಲಿಲ್ಲ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಶರ್ಟ್ ನಲ್ಲಿ ಎಲ್ಲಾದರೂ ಕಲೆಯಾಗುತ್ತಿತ್ತು. ಪ್ರತಿದಿನವೂ ಬೈಸಿಕೊಳ್ಳಬೇಕಿತ್ತು. ಆದರೆ ಇವತ್ತು ತುಂಗಮ್ಮನ ಕಥೆ ಇದ್ದುದರಿಂದ ಮನೆಯಲ್ಲಿನ ದೊಡ್ಡವರ ಗಮನ ಶರ್ಟ್ ಮೇಲೆ ಹೋಗಲೇ ಇಲ್ಲ. ಬೇಗ ಬೇಗ ಯುನಿಫಾರ್ಮ್ ಬದಲಾಯಿಸಿ, ಮನೆಯಲ್ಲಿ ಹಾಕುವ ಬಟ್ಟೆ ಹಾಕಿಕೊಂಡು ಅಡುಗೆಮನೆಗೆ ಓಡಿದರು. ಹೆಚ್ಚು ಹಾಲು ಹಾಕಿ, ಸ್ವಲ್ಪವೇ ಕಾಫಿ ಡಿಕಾಕ್ಷನ್ ಹಾಕಿದ ಬಿಸಿ ಬಿಸಿ ಕಾಫಿ. ಜೊತೆಗೆ ಕೋಡುಬಳೆ, ಹಲಸಿನ ಕಾಯಿ ಚಿಪ್ಸ್. ಇಲ್ಲೇ ಕುಳಿತುಕೊಂಡು ತಿನ್ನಬೇಕು. ಅಜ್ಜಿ ಆರ್ಡರ್ ಮಾಡಿದ್ದರು. ಮಕ್ಕಳಿಗೋ ಕಣದಲ್ಲಿ ಕಾಯುತ್ತಿದ್ದ ಮಕ್ಕಳೊಂದಿಗೆ ಸೇರುವ ತವಕ. ಕೇಶವ ತನ್ನ ಕೈಲಿದ್ದ ಚಿಪ್ಸ್ ಎಲ್ಲಾ ಚಡ್ಡಿಯ ಜೇಬಿನಲ್ಲಿ ತುಂಬಿಕೊಂಡು ಕೋಡುಬಳೆ ತಿನ್ನುತ್ತಾ ಅಂಜನಾಳ ಮುಖ ನೋಡಿದರೆ, ಗೊತ್ತು…” ಬೇಗ ತಿನ್ನು. ಇನ್ನೆಷ್ಟು ಹೊತ್ತು” ಎನ್ನುವ ಭಾವ. ಈಕೆ ತನ್ನ ಕೈಲಿದ್ದ ಚಿಪ್ಸ್ ಬಾಯಲ್ಲಿ ತುಂಬಿಕೊಂಡು ಇನ್ನೇನು ಎದ್ದು ಓಡಬೇಕು, ಕೇಶವನ ಜೇಬಿನಲ್ಲಿ ತುಂಬಿದ್ದ ಚಿಪ್ಸ್ ಎರಡು ಕೆಳಗೆ ಬಿದ್ದಿತ್ತು. ನೋಡಿದ ಆತನ ತಾಯಿ, “ಅಜ್ಜಿ ಹೇಳಿದ್ದು ಕೇಳಿಸ್ಲಿಲ್ವಾ? ಬೇರೆ ಮಕ್ಕಳಿಗೆ ತೋರಿಸಿಕೊಂಡು ತಿನ್ನಬಾರದು. ಇಲ್ಲೇ ತಿಂದುಕೊಂಡು ಹೋಗಿ” ಜೋರಾಗಿ ಹೇಳಿದರು.
ಅಂಗಳಕ್ಕೆ ಹೋಗುವಷ್ಟರಲ್ಲಿ ರಮೇಶ, ನಂದೀಶ, ವಿನಾಯಕ, ವಸಂತ, ಚಿನ್ಮಯ, ರಘು ಎಲ್ಲರೂ ಕಣದಲ್ಲಿ ಸೇರಿಯಾಗಿತ್ತು. ವಸಂತ, ರಘು, ಕೇಶವ, ಅಂಜನಾ ಒಂದು ತಂಡವಾದರೆ, ಉಳಿದವರದ್ದು ಇನ್ನೊಂದು. ಅಂಜನಾ ಯಾವಾಗಲೂ ಕೇಶವನ ತಂಡದಲ್ಲಿ. ಅಕಸ್ಮಾತ್ ಸೋತರೆ, “ನಿನ್ನ ತಂಗಿ ದೆಸೆಯಿಂದ ಸೋತೆವು” ಎಂದು ಪ್ರತಿತಂಡದವರು ಹೇಳಬಾರದಲ್ಲ. ಅದಕ್ಕಾಗಿ. ಏಳು ಚಪ್ಪಟೆ ಕಲ್ಲುಗಳ ಲಗೋರಿ. ಕಣದ ಮಧ್ಯದಲ್ಲಿ. ಅದರಿಂದ ಸುಮಾರು ಎರಡು ಮೀಟರ್ ದೂರದಲ್ಲೊಂದು ಗೆರೆ. ಆ ಗೆರೆಯ ಆಚೆ ನಿಂತು ಚೆಂಡನ್ನು ಎಸೆದು ಜೋಡಿಸಿಟ್ಟಿದ್ದ ಲಗೋರಿ ಕಲ್ಲುಗಳನ್ನು ಬೀಳಿಸಬೇಕು. ಎದುರಿನ ತಂಡದದವರು ಆ ಚೆಂಡನ್ನು ತೆಗೆದುಕೊಂಡು ಲಗೋರಿ ಬೀಳಿಸಿದ ತಂಡದವರಿಗೆ ದೂರದಿಂದಲೇ ಚೆಂಡೆಸೆದು ಹೊಡೆಯುವ ಪ್ರಯತ್ನ ಮಾಡಬೇಕು. ಚೆಂಡು ತಾಗಿಸಿಕೊಳ್ಳದೆ, ಆ ತಂಡದವರು ಪುನಃ ಲಗೋರಿಯನ್ನು ಮೊದಲಿನಂತೆ ಕಟ್ಟಬೇಕು. ಅಂಜನಾ ಪೆಟ್ಟು ತಿನ್ನುವ ಹೆದರಿಕೆಯಿಂದ ದೂರ ನಿಂತು ನೋಡುವುದೇ ಹೆಚ್ಚು. ಅಂದು ಧೈರ್ಯ ಮಾಡಿ ಲಗೋರಿ ಕಟ್ಟಲು ಓಡಿದರೆ, ನಂದೀಶ ಎಸೆದ ಚೆಂಡು ಆಕೆಯ ಮೂಗಿಗೆ ಬಿದ್ದಿತ್ತು. ಕಣ್ಣು ಕತ್ತಲೆ ಬಂದಂತಾಗಿ ಅಲ್ಲೇ ಕುಸಿದು ಕುಳಿತ ಆಕೆಗೆ ನೋವಿನಿಂದ ಕಣ್ಣು ತೆಗೆಯಲು ಕಷ್ಟ ಪಡುತ್ತಿದ್ದಳು. ಆಕೆ ಕಾಣದ ದಂಡೆಯಲ್ಲಿದ್ದ ಕಣ್ಣಿನ ಮೆಟ್ಟಲಿನ ಮೇಲೆ ಕುಳಿತು ವಿರಮಿಸುವುದೆಂದು ನಿರ್ಧರಿಸಿದರು. ಒಂದು ತಂಡದಲ್ಲಿ ಮೂವರು. ಇನ್ನೊಂದರಲ್ಲಿ ನಾಲ್ವರು. ರಘು ಶ್ರೀಮತಿಯನ್ನು ಕರೆಯಲು ಓಡಿದ.
ಶ್ರೀಮತಿಗೂ ಜೊತೆಯಲ್ಲಿ ಆಟವಾಡುವ ಆಸೆ. “ಆ ಗಂಡು ಮಕ್ಕಳ ಜೊತೆ ಗಂಡುಬೀರಿಯಂತೆ ಕುಣಿಯುವುದೇಕೆ? ಇಲ್ಲಿ ಬಂದು ಕೆಲಸ ಮಾಡು” ಎಂದು ಆಕೆಯ ತಾಯಿ ಶಾರದ ಬೈಯ್ಯುತ್ತಿದ್ದರೂ ಕೇಳಿಸಿಕೊಳ್ಳದಂತೆ ಕೈ ತೊಳೆದುಕೊಂಡು ಲಗೋರಿ ಆಡಲು ಜೊತೆಯಾಗಿದ್ದಳು. ಲಗೋರಿಯನ್ನು ಹೊಡೆದು ಬೀಳಿಸುವುದರಲ್ಲಿಯೂ ನಿಸ್ಸೀಮೆ. ಲಗೋರಿ ಜೋಡಿಸುವುದರಲ್ಲಿಯೂ. ಸ್ವಲ್ಪ ಹೊತ್ತಿನಲ್ಲಿ ಕಾಣಿಸಿದ್ದ ಆಕೆಯ ಅಪ್ಪ. ಕೆಲಸ ಮಾಡೋದು ಬಿಟ್ಟು ಎಂಥ ಆಟ ನಿನ್ನದು ಎಂದು ಸಿಟ್ಟಿನಲ್ಲಿ ಬಂದು ಆಕೆಯ ಕೈ ಹಿಡಿದು ಎಳೆದುಕೊಂಡು ಮನೆಕಡೆಗೆ ಧಾವಿಸಿದ್ದ. ಮನೆಯೊಳಗೇ ಹೋದಮೇಲೆ ಕೇಳಿದ್ದು ಆಕೆಯ ಬೊಬ್ಬೆ…”ಅಪ್ಪಯ್ಯಾ ಬೇಡ…ಹೊಡಿಬೇಡಿ”. ಕಣದಲ್ಲಿ ನಿಂತವರಿಗೆ ನೀರಸ. ನಮ್ಮ ದೆಸೆಯಿಂದ ಆಕೆಗೆ ಪೆಟ್ಟು ಬಿತ್ತಲ್ಲ ಅಂತ. ರಘುವನ್ನು ಯಾವಾಗ ಎಳೆದುಕೊಂಡು ಹೋಗುವರೋ ಎಂದು ಆಟ ಮುಂದುವರೆಸಲೂ ಹೆದರಿಕೆ. ತಂಡಗಳು ಪುನಃ ೪-೩ ಆಗಿದ್ದವು. ಸ್ವಲ್ಪ ಹೊತ್ತು ಕಣದ ತುದಿಯಲ್ಲಿದ್ದ ಹುಣಸೆ ಮರದ ಕೆಳಗೆ ನಿಂತು, ಮುಂದೇನು ಮಾಡುವುದೆಂದು ಮಾತನಾಡತೊಡಗಿದರು. ಅಷ್ಟರಲ್ಲಿ ವಿನಾಯಕ ಮರದ ಮೇಲೆ ಕಾಣುತ್ತಿದ್ದ ಹುಣಿಸೆ ಕಾಯಿಗೆ ಗುರಿಯಿಟ್ಟು ಕಲ್ಲು ಎಸೆದಿದ್ದ. ಎಸೆದಿದ್ದ ಕಲ್ಲು ಪಕ್ಕದ ಕಣಕ್ಕೆ ಹೋಗಿ ಬಿದ್ದಿತ್ತು. ಅಷ್ಟರಲ್ಲಿ ರಮೇಶ ಇನ್ನೊಂದು ಕಲ್ಲೆತ್ತಿಕೊಂಡಿದ್ದ. ಮಾತನಾಡದೆಯೇ ಇನ್ನೊಂದು ಆಟ ಶುರುವಾಗಿತ್ತು. ಹುಣಿಸೆ ಕಾಯಿ ಕೀಳುವ ಆಟ. ಕೇಶವ ಕೊಟ್ಟಿಗೆಯ ಪಕ್ಕದಲ್ಲಿ ಇಟ್ಟಿದ್ದ ದಬ್ಬೆಯನ್ನು ತೆಗೆದುಕೊಂಡು ಬಂದಾಗಿತ್ತು. ಅದರ ತುದಿಗೆ ಇನ್ನೊಂದು ಚಿಕ್ಕ ಕೋಲು ಕಟ್ಟಿ, ದೋಟಿ ಮಾಡಿಕೊಂಡು ನಾಲ್ಕು ಕಾಯಿ ಕಿತ್ತಿದ್ದರು ಅಷ್ಟೇ. ರಘುವಿನ ಚಿಕ್ಕಪ್ಪ ಹಾಜರು.” ಅದು ನಮ್ಮ ಮರ. ಆ ಮರ ನಮ್ಮ ಕಣದಲ್ಲಿ ಇರುವುದು. ನಿಮಗೆ ಬೇಕಾದ ಹಾಗೆ ಹುಣಸೆ ಕಾಯಿ ಕುಯ್ದು ಹಾಳು ಮಾಡಬೇಡಿ ಕೇಶವಯ್ಯ… “. ಕಣ ಯಾರದ್ದು, ಮರ ಯಾರದ್ದು ಎಂಬ ದೊಡ್ಡವರ ಜಗಳದ ಸಿಟ್ಟೋ ಏನೋ, ಒಟ್ಟಿನಲ್ಲಿ ರಘುವಿಗೆ ಬಿದ್ದಿತ್ತು ಬಡಿಗೆ.
ಇನ್ನು ಅಲ್ಲಿರುವ ಮನಸ್ಸಾಗದೆ ಹೊಸ ಕಣಕ್ಕೆ ಹೋಗೊಣ ಎಂದು ಎಲ್ಲರೂ ಹೊಸ ಕಣಕ್ಕೆ ಓಡಿದರು. ಜೋಡಿಸಿ ಇಟ್ಟಿದ್ದ ಹುಲ್ಲು ಕುತ್ರೆ ಹತ್ತುವುದರಲ್ಲಿನ ಮಜಾ, ಹಿಮಾಲಯ ಹತ್ತಿದರೂ ದೊರೆಯದು. ಎಷ್ಟು ಪ್ರಯತ್ನ ಪಟ್ಟರೂ ಮೇಲೇರುವಷ್ಟರಲ್ಲಿ ಜಾರುತ್ತಿತ್ತು. ಅಂಜನಾಳಿಗೂ ಮೂಗಿನ ನೋವು ಕಡಿಮೆಯಾಗಿ, ಆಕೆಯೂ ಹುಲ್ಲು ಕುತ್ರೆ ಹತ್ತುವ ಸ್ಪರ್ಧೆಗೆ ಜೊತೆಯಾಗಿದ್ದಳು. ನಂದೀಶ ಇನ್ನೇನು ಕುತ್ರೆಯ ಮೇಲೆ ಹತ್ತಿದ ಎನ್ನುವಷ್ಟರಲ್ಲಿ ವಿನಾಯಕ ಆತನ ಕಾಲನ್ನು ಹಿಡಿದು ಎಳೆದಿದ್ದ. ಬಡಕಲು ಮೈಯಿ ವಸಂತ ಇನ್ನೊಂದು ಕಡೆಯಿಂದ ಮೇಲೆ ಹತ್ತಿ ಎರಡೂ ಕೈಗಳನ್ನು ಎತ್ತಿ ಹಿಮಾಲಯ ಏರಿದಷ್ಟೇ ಹೆಮ್ಮೆಯಿಂದ ತನ್ನ ಗೆಲುವನ್ನು ಸಾರುತ್ತಿದ್ದ. ಅಷ್ಟರಲ್ಲಿ ಅಜ್ಜ ಕೂಗಿದ್ದರು. ಕತ್ತಲಾಯ್ತು. ಇನ್ನೆಷ್ಟು ಕುಣಿಯುವುದು. ಕೈ ಕಾಲು ತೊಳೆದುಕೊಂಡು ಬನ್ನಿ. ಬಾಯಿಪಾಠ ಹೇಳಿಕೊಡುತ್ತೇನೆ.
ಕತ್ತಲಾಗಿದ್ದೂ ನಿಜವೇ. ಆದರೆ ಪಕ್ಕದಲ್ಲಿದ್ದ ಮೇ ಫ್ಲವರ್ ಮರಗಳ ಹೂವಿನ ದಳಗಳಲ್ಲಿ ಕೋಳಿ ಜಗಳ ಆಡುವುದು ಬೇಡವೇ? ಬಿದ್ದಿದ್ದ ದಳಗಳನ್ನು ಆರಿಸಿಕೊಂಡು ಅದರ ಒಂದು ತುದಿಯಲ್ಲಿ ಕೋಳಿ ಮೂತಿಯಂತೆ ಕೊಕ್ಕನ್ನು ಮಾಡಿ, ಇನ್ನೊಬ್ಬರ ಕೈಲಿದ್ದ ಕೊಕ್ಕನ್ನು ಮುರಿಯುವ ಪ್ರಯತ್ನ ಮಾಡುವುದು. ಅಷ್ಟರಲ್ಲಿ ಅಜ್ಜ ಪುನಃ ಮನೆಯ ಬಾಗಿಲಲ್ಲಿ ನಿಂತು ಕೂಗಿದ್ದರು. “ಬರ್ತಿರೋ ಇಲ್ಲವೋ? ಅಥವಾ ಕೋಲು ಬೇಕಾ “. ಬಚ್ಚಲು ಮನೆಗೆ ಮಾರ್ಚ್. ಹಂಡೆಯಲ್ಲಿ ಬಿಸಿ ಬಿಸಿ ಕುದಿಯುವ ನೀರು. ಪಕ್ಕದಲ್ಲಿದ್ದ ಬಾನಿಯಲ್ಲಿ ತಣ್ಣೀರು. ತಾಮ್ರದ ತಂಬಿಗೆಯಲ್ಲಿ ಕಾಲು ಚೊಂಬು ಬಿಸಿನೀರಿಗೆ ಮುಕ್ಕಾಲು ಚೊಂಬು ತಣ್ಣೀರು ಸೇರಿಸಿದರೂ ಬಿಸಿಯೆನಿಸುವಷ್ಟು ಬಿಸಿ. ಬಿಸಿನೀರು ಕಾಲಿಗೆ ಬಿದ್ದ ಕೂಡಲೇ, ತುರಿಕೆ ಗಿಡ ಮುಟ್ಟಿದ ಹಾಗೆ ಕಾಲೆಲ್ಲಾ ತುರಿಕೆ. ಬಿಸಿನೀರು ಕಾಲ ಮೇಲೆ ಬೀಳುವಷ್ಟು ಸಮಯ ಹಾಯೆನಿಸುವುದು. ಚೊಂಬಿನಲ್ಲಿ ನೀರು ಕಾಲಿಯಾದ ಕೂಡಲೇ, ಪುನಃ ತುರಿಕೆ. ಬಿಸಿನೀರಿಗೆ ತಣ್ಣೀರು ಸೇರಿಸುವುದು, ಕಾಲಿಗೆ ಸುರಿದುಕೊಳ್ಳುವುದು. ಇದೇ ಒಂದು ಆಟ. ಅಷ್ಟರಲ್ಲಿ ದೊಡ್ಡಮ್ಮ ಕೂಗಿದ್ದರು. “ಹಂಡೆ ಕಾಲಿ ಮಾಡಬೇಡಿ. ಸಾಕು ಕಾಲು ತೊಳೆದದ್ದು. ಒಳಗೆ ಬನ್ನಿ”
ಅಲ್ಲಿ ಶುರುವಾಗಿತ್ತು ದಿನದ ಅತೀ ನೀರಸ ಕೆಲಸ. ಬಾಯಿಪಾಠ. ಗಜಾನನಂ ಭೂತ …. ಶ್ಲೋಕ ಹೇಳಿ , ವಾರಗಳ ಹೆಸರು, ಕನ್ನಡ ಇಂಗ್ಲಿಷ್ ಎರಡರಲ್ಲೂ, ತಿಂಗಳುಗಳ ಹೆಸರು, ಚೈತ್ರ ವೈಶಾಖ … ಮಾಸಗಳ ಹೆಸರು, ಅವುಗಳ ಋತುಮಾನಗಳು… ಚೈತ್ರ ವೈಶಾಖಕ್ಕೆ ವಸಂತ ಋತು…. ಮೇಷ ವೃಷಭ ರಾಶಿಗಳ ಹೆಸರು… ಜೊತೆಗೆ ಮೇಷ ಆಡು, ವೃಷಭ ಎತ್ತು… , ಅಷ್ಟ ದೇವತೆಗಳು… ಇಂದ್ರ, ಅಗ್ನಿ, ವರುಣ,…. ಇಂದ್ರನಿಗೆ ಅಮರಾವತಿ ಪಟ್ಟಣ, ಅಗ್ನಿಗೆ ತೇಜೋವತಿ ಪಟ್ಟಣ… ಪಟ್ಟಣ ಎನ್ನುವುದನ್ನು ಪೊಟ್ಟಣ ಎನ್ನುತ್ತಾ ನಗುವುದು… ಮತ್ತೊಮ್ಮೆ ಅಜ್ಜನ ಬೈಗುಳ. ಕೊನೆಯಲ್ಲಿ ಮಗ್ಗಿ. ಅಷ್ಟರಲ್ಲಿ ಕೇಶವನ ತಾಯಿ ಹೆಸರು ಬೇಳೆಯನ್ನು ಕಾಯಿಸಿ, ದೊಡ್ಡವರಿಗೆ ಶುಂಠಿ ಕಷಾಯ ಮಾಡಿ, “ಕಷಾಯ ರೆಡಿ. ಬನ್ನಿ” ಎಂದು ಕರೆದರು. ಸಧ್ಯ ಅಜ್ಜನಿಂದ ತಪ್ಪಿಸಿಕೊಂಡೆವು ಎಂದು ಇಬ್ಬರೂ ಅಡುಗೆ ಮನೆಗೆ ಓಡಿದರು.
ಮುಂದುವರೆಯುವುದು…
Latest posts by ಅಶ್ವಿನಿ ಕೋಟೇಶ್ವರ (see all)
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020