ಆಯುಹು ಸತ್ವ ಬಲಾರೋಗ್ಯ ಸುಖಪ್ರೀತಿ ವಿವರ್ಧನಾಃ. ರಾಸ್ಯಾಹ ಸ್ನಿಗ್ಧಹ ಸ್ಥಿರಾ ಹೃಧ್ಯಾ ಆಹಾರಾಹ ಸಾತ್ವಿಕಪ್ರಿಯಾಹ...
ಆಯಸ್ಸನ್ನು ವೃದ್ಧಿಸುವ, ಚೈತನ್ಯ, ಶಕ್ತಿ, ಆರೋಗ್ಯ ಮತ್ತು ಸಂತೋಷವನ್ನು ಉತ್ತೇಜಿಸುವ ಆಹಾರ, ರಸವತ್ತಾದ,
ರಸಭರಿತವಾದ, ಪೋಷಿಸುವ ಮತ್ತು ಹೃದಯಕ್ಕೆ ಆಹ್ಲಾದಕರವಾಗಿರುವ ಆಹಾರ ಸಾತ್ವಿಕರಿಗೆ ಪ್ರಿಯವಾಗಿರುತ್ತದೆ.
-----------------------------------------------------------------------------------
ಹೊಸ ಆಫೀಸಿಗೆ ಶಿಫ್ಟ್ ಆದ ಮೇಲೆ ಹತ್ತಿರದಲ್ಲೆಲ್ಲೂ ಕ್ಯಾಂಟೀನ್ ಇರಲಿಲ್ಲ. ಕೆಲವರು ಮನೆಯಿಂದ ಊಟ ಕಟ್ಟಿಕೊಂಡು ಬಂದರೆ, ಇನ್ನು ಕೆಲವರು ಅಲ್ಲೇ ಪಕ್ಕದಲ್ಲಿದ್ದ ಸೂಪರ್ ಮಾರ್ಕೆಟಿನಿಂದ ಹಣ್ಣು, ರೆಡಿ ಟು ಈಟ್ ಏನಾದರೂ ಕೊಂಡುಕೊಂಡು ಬಂದು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿಕೊಂಡು ತಿನ್ನುತ್ತಿದ್ದರು. ಆಫೀಸಿನ ಒಂದನೇ ಫ್ಲೋರಿನಲ್ಲಿ ಐದು ರೂಮುಗಳು. ಮೂರು ನಮಗೆ ಸೇರಿದ್ದು ಇನ್ನೊಂದು “ಇಂಗೋ”ನ ಟೀಮ್. ನಾನು ಹೇಗೋ ಮಧ್ಯಾಹ್ನ ೧ ಗಂಟೆಗೆ ಮನೆಗೆ ವಾಪಸ್ ಬಂದು ಊಟ ಮಾಡುವುದು. ಒಂದು ದಿನ ಹೊರಡುವುದು ಸ್ವಲ್ಪ ಲೇಟ್ ಆಯಿತು. ಕಾಫಿ ಕುಡಿದ ಲೋಟ ಇಡಲು ಪ್ಯಾಂಟ್ರಿ ಗೆ ಹೋದರೆ ಪಕ್ಕದ ರೂಮಿನಲ್ಲಿ ಕುಳಿತುಕೊಳ್ಳುವ ಇಂಗೋ ಟೀಮಿನ ನಾಲ್ವರು ಹಣ್ಣು ತೊಳೆಯುವುದು, ತರಕಾರಿ ಹೆಚ್ಚುವುದರಲ್ಲಿ ತಲ್ಲೀನರಾಗಿದ್ದಾರೆ. ಪಕ್ಕದಲ್ಲಿ ಜೋಡಿಸಿ ಇಟ್ಟಿದ್ದ ನಾಲ್ಕು ಪ್ಲೇಟುಗಳಲ್ಲೂ ಸೊಪ್ಪು, ಅಲಂಕರಿಸಿದ ಬಣ್ಣ ಬಣ್ಣದ ಹಣ್ಣು ತರಕಾರಿಗಳು. ತಕ್ಷಣ ನನ್ನ ರೂಮಿಗೆ ಹೋಗಿ ಸೆಲ್ ಫೋನ್ ತೆಗೆದುಕೊಂಡು ಬಂದು ಒಂದು ನಾಲ್ಕು ಫೋಟೋ ತೆಗೆದುಕೊಂಡೆ.
ಸ್ವಲ್ಪ ದಿನಗಳ ನಂತರ ನಮ್ಮನ್ನು ಪಕ್ಕದಲ್ಲಿದ್ದ ದೊಡ್ಡ ಬಿಲ್ಡಿಂಗಿಗೆ ವರ್ಗಾಯಿಸಿದರು. ದೊಡ್ಡ ಹಾಲಿನಲ್ಲಿ ಚಿಕ್ಕ ಚಿಕ್ಕ ಕ್ಯಾಬಿನ್ನುಗಳು. ಸುಮಾರು ೨೮ ಜನ ಕೂರುವ ಸ್ಥಳ. ಟ್ಯುನೀಷಿಯಾದ ಅಮೀನ್ ಹುಟ್ಟಿದ ಕೂಡಲೇ ಮೈಕ್ ಸೆಟ್ ನುಂಗಿದವನು, ಬೆಳಿಗ್ಗೆ ಎಷ್ಟೇ ಹೊತ್ತಿಗೆ ಆಫೀಸ್ ಒಳಗೆ ಕಾಲಿರಿಸಿದರೂ “ಮೋಯಾ”ಎಂದು “ಬುಂಶ್” ಅಂದರೆ ಜೆರ್ಮನಿಯ ಹಳೆಯ ರಾಜಧಾನಿ “ಬಾನ್” ನ ಡೈಲೆಕ್ಟ್ ನಲ್ಲಿ “ಮಾರ್ಗೇನ್” ಅಂದರೆ, “ಗುಡ್ ಮಾರ್ನಿಂಗ್” ಎಂದು ಒಬ್ಬೊಬ್ಬರಿಗೆ ಒಂದೊಂದು ಧ್ವನಿಯಲ್ಲಿ ಕೂಗಿ ಹೇಳುವುದು. ಮದ್ಯಾಹ್ನ ೧೨ ಆಗಲಿಕ್ಕಿಲ್ಲ, ಎಲ್ಲರ ಕ್ಯಾಬಿನ್ ಹತ್ತಿರ ಹೋಗಿ, “ಸಲಾಡ್?” “ಸಲಾಡ್?” ಎಂದು ಕೇಳುವುದು. ಸಲಾಡ್ ಗ್ರೂಪ್ ಇಂಗೋ ಟೀಮಿನ ನಾಲ್ಕು ಜನರನ್ನು ಮೀರಿ ೧೧ಕ್ಕೆ ಏರಿತು.
ನಾನು ಮನೆಯಲ್ಲಿ ಸಲಾಡ್ ಮಾಡಲು ಹೊರಟರೆ, ಅಂಗಡಿಗೆ ಹೋದಾಗ ಹಸಿರು ಸೊಪ್ಪು ಹುಡುಕಿದರೆ, ಒಂದೂ ಚೆನ್ನಾಗಿ ಕಾಣಿಸುವುದಿಲ್ಲ. ಇವರೆಲ್ಲಾ ಸೇರಿ ಮಾಡುವ ಸಲಾಡ್ ದೂರದಿಂದ ನೋಡಿದರೇ ತಿನ್ನಲು ಆಸೆಯಾಗುತ್ತಿತ್ತು. ಅಷ್ಟು ಫ್ರೆಶ್ ಕಾಣಿಸುವ ಸೊಪ್ಪನ್ನು ಹೇಗೆ ಆರಿಸುತ್ತಾರೆ ಎಂದು ಅವರೊಂದಿಗೆ ಶಾಪಿಂಗ್ ಹೊರಟೆ. ಸೂಪರ್ ಮಾರ್ಕೆಟ್ಟಿನಲ್ಲಿ ವಾರದಲ್ಲಿ ೨ ದಿನ ಫ್ರೆಶ್ ತರಕಾರಿ ಹಣ್ಣನ್ನು ತುಂಬಿಡುತ್ತಾರೆ. ಸೋಮವಾರ, ಗುರುವಾರ. ಆ ದಿನಗಳಂದು ಇಡಲು ಯೋಗ್ಯವಾದ ಕ್ಯಾಪ್ಸಿಕಂ, ಟೊಮೇಟೊ ಮುಂತಾದ ತರಕಾರಿಗಳನ್ನು ಬೇಕಾದಷ್ಟು ಕೊಂಡುಕೊಂಡು ಆಫೀಸಿನ ಫ್ರಿಡ್ಜಿನಲ್ಲಿ ಇಡುತ್ತಾರೆ. ಸೊಪ್ಪು ಪ್ರತಿ ದಿನ ಫ್ರೆಶ್ ಆಗಿ ಸೂಪರ್ ಮಾರ್ಕೆಟ್ಟಿನಿಂದ ತರುತ್ತಾರೆ ಎಂದು ಗೊತ್ತಾಯಿತು. ಸಲಾಡ್ ಮಾಡಲು ಬರೀ ನಮಗೆ ತಿಳಿದ ಟೊಮೇಟೊ, ಸೌತೆಕಾಯಿ ತರಕಾರಿಗಳಲ್ಲ. ಜೊತೆಯಲ್ಲಿ ಹುಳಿ ಸೇರಲು ಆರೆಂಜ್, ಪೀಚ್, ಮಾವಿನ ಹಣ್ಣು ಮುಂತಾದ ಹಣ್ಣುಗಳು, ವಾಲ್ ನಟ್, ಫಿಗ್, ಖರ್ಜೂರ ಮುಂತಾದ ಡ್ರೈ ಫ್ರೂಟ್ಸ್ ಸಹ ಕೊಂಡುಕೊಂಡರು. ಒಂದೆರಡು ಜಾತಿಯ ಹಸಿ ಸೊಪ್ಪುಗಳು. ಒಂದು ನಮ್ಮ ಮೆಂತೆ ಸೊಪ್ಪನ್ನು ಹೋಲುತ್ತಿದ್ದರೆ, ಇನ್ನೊಂದು ರುಕೋಲ ಎನ್ನುವ ನಾರು ಹೆಚ್ಚಿರುವ ಸೊಪ್ಪು. ಜೊತೆಯಲ್ಲಿ ಫ್ರೆಶ್ ಆಗಿ ದೊರೆಯುವ ಬ್ರೆಡ್. ೩-೪ ಡಬ್ಬಿ ಮಜ್ಜಿಗೆ. ಒಂದೆರಡು ಬಾಕ್ಸ್ ಫೆಟ ಚೀಸ್.
ಎಲ್ಲವನ್ನೂ ಆಫೀಸಿಗೆ ತಂದು, ಕೈ ತೊಳೆದುಕೊಂಡು ಇಬ್ಬರು ತರಕಾರಿ ಹಣ್ಣುಗಳನ್ನು ಹೆಚ್ಚಲು ಶುರುಮಾಡಿದರೆ, ಇನ್ನೊಬ್ಬರು ಸೊಪ್ಪು ತೊಳೆದು ಪ್ಲೇಟುಗಳನ್ನು ಜೋಡಿಸಿ ಸೊಪ್ಪಿನ ಮೇಲೆ ಹೆಚ್ಚಿದ ಹಣ್ಣು ತರಕಾರಿಗಳನ್ನು ಜೋಡಿಸಿ ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಮಾವಿನ ಹಣ್ಣು ಹೆಚ್ಚಲು ನಾನು ಮುಂದಾದೆ. ಅಂದಿನಿಂದ ಮಾವಿನ ಹಣ್ಣು ಹೆಚ್ಚುವ ಕೆಲಸ ನನಗೆ ಸೇರಿತು. ಮೊದಲಿಗೆ ಹಸಿರು ಸೊಪ್ಪು ಹರಡಿ, ಅದರ ಮೇಲೆ ಕೆಂಪು ಬಣ್ಣದ, ಹಳದಿ ಬಣ್ಣದ ಕ್ಯಾಪ್ಸಿಕಂ, ನಂತರ ಕೆಂಪು ಬಣ್ಣದ ಟೊಮೇಟೊ, ಮೇಲೆ ಬಿಳಿ ಬಿಳಿ ಫಟಾ ಚೀಸ್. ನಂತರ ಕೇಸರಿ ಬಣ್ಣದ ಮ್ಯಾಂಗೋ, ಕೆಲವೊಮ್ಮೆ ಸೇಬು ಹಣ್ಣು, ಮೇಲೆ ಸ್ವಲ್ಪ ಈರುಳ್ಳಿ. ಅದರ ಮೇಲೆ ಒಣ ಹಣ್ಣುಗಳು. ತರಕಾರಿ ಹಣ್ಣು ಹೆಚ್ಚಿ ೧೪ ಸಲಾಡ್ ತಯಾರಿಸಲು ತೆಗೆದುಕೊಳ್ಳುವ ಸಮಯ ೨೦ ನಿಮಿಷಗಳು ಮಾತ್ರ.
ಎಲ್ಲಾ ಆದಮೇಲೆ ಗ್ಲಾಸಿನ ಉದ್ದುದ್ದ ಲೋಟಗಳಲ್ಲಿ ಫುಲ್ ಮಜ್ಜಿಗೆ ಸುರಿದು, ಎರಡು ಟೇಬಲ್ ಜೋಡಿಸಿ ಪ್ಲೇಟುಗಳನ್ನು ಇಟ್ಟು ಉಳಿದವರನ್ನು “ಸಲಾಡ್ ಈಸ್ ರೆಡಿ” ಎಂದು ಅಮೀನನ ನುಂಗಿದ ಮೈಕಿನಲ್ಲಿ ಕೂಗಿ ಹೇಳಿದರೆ ಎಲ್ಲರೂ ಬಂದು ಒಟ್ಟಿಗೆ ಕುಳಿತು, ಸಾಲಾಡಿನ ಮೇಲೆ ಸ್ವಲ್ಪ ಆಲಿವ್ ಎಣ್ಣೆ ಹಾಗೂ ಹಣ್ಣುಗಳನ್ನು ಬೆರೆಸಿದ ಒಂದೆರಡು ಜಾತಿಯ ವಿನೆಗರ್ ಸುರಿದುಕೊಂಡು ಮಾತನಾಡುತ್ತಾ ತಿನ್ನಲು ಶುರುಮಾಡಿದರೆ, ಕೊನೆ ಕೊನೆಗೆ ಹೊಟ್ಟೆ ತುಂಬಿ ಗಂಟಲಿನವರೆಗೂ ಸಲಾಡ್ ತುರುಕಿಕೊಳ್ಳುವುದು. ಮ್ಯಾಂಗೋ ವಿನೆಗರ್, ಫಿಗ್ ಮತ್ತು ಖರ್ಜೂರದ ವಿನೆಗರ್ ಎಲ್ಲರ ಅಚ್ಚುಮೆಚ್ಚು. ಒಂದು ತಟ್ಟೆ ಊಟ ಮಾಡಿದರೂ ಅಷ್ಟು ಹೊಟ್ಟೆ ತುಂಬಿದ ಅನುಭವ ಆಗಲಿಕ್ಕಿಲ್ಲ. ಅಷ್ಟು ಫುಲ್ ಎನ್ನಿಸುತ್ತದೆ. ಕೊನೆಯಲ್ಲಿ ಗಂಟಲಿಗೆ ಸುರಿದುಕೊಳ್ಳುವ ಮಜ್ಜಿಗೆ ಸಾಲಾಡಿನ ಅರ್ಧ ಅಗಿದ ಸೊಪ್ಪುಗಳ ಮಧ್ಯೆ ಇಳಿದಿಳಿದು ಜಠರ ಸೇರಬೇಕು. ನನಗಂತೂ ಬ್ರೆಡ್ ತುರುಕಲು ಇನ್ನು ಗಂಟಲಿನಲ್ಲೂ ಜಾಗ ಉಳಿದಿರುವುದಿಲ್ಲ. ಅದೂ ಅಮೀನ್ ತರಕಾರಿ ಹೆಚ್ಚುವ ಟೀಮ್ ಸೇರಿದರಂತೂ ಕೇಳುವುದೇ ಬೇಡ. ಪ್ಲೇಟಿನ ಮೇಲೆ ಹಿಮಾಲಯವನ್ನೇ ಕಟ್ಟಿರುತ್ತಾನೆ.
ಅಷ್ಟು ತಿಂದರೂ ಹೊಟ್ಟೆ ತುಂಬಾ ಅನ್ನ ತಿಂದಾಗ ಕಾಣುವ ಜಡತೆ ಕಾಣದು. ಹೊಟ್ಟೆ ಮಾತ್ರ ಫುಲ್. ಮನಸ್ಸು ಚೈತನ್ಯದಿಂದ ಕೂಡಿರುತ್ತದೆ. ಇದನ್ನೇ ಸಾತ್ವಿಕ ಎನ್ನುವುದೇನೋ?ಸಂಜೆಯಾದರೂ ಹಸಿವಿನ ಸುಳಿವಿರುವುದಿಲ್ಲ. ಪ್ರತಿದಿನ ಬಳಸುವ ಸಾಮಗ್ರಿಗಳು ಒಂದೇ ಆದರೂ ಹೆಚ್ಚುವ ಟೀಮ್ ಹೊಂದಿಕೊಂಡು ದಿನಕ್ಕೊಂದು ಬಣ್ಣದಿಂದ ರಾರಾಜಿಸುವ ಸಲಾಡ್ ಪ್ರತಿನಿತ್ಯ ತಿಂದರೂ ಬೇಜಾರು ಎನಿಸುವುದಿಲ್ಲ.
ದಿನಗಳೆದಂತೆ ದೊಡ್ಡದಾಗುತ್ತಾ ಹೋದ ಸಲಾಡ್ ಟೀಮಿನಲ್ಲಿ ಈಗ ೧೪ ಮಂದಿ. ಇಬ್ಬರು ಹೆಚ್ಚಲು ಸಾಕಾಗದೆ ಪ್ರತಿದಿನ ಮೂವರು ವಾಲಂಟಿಯರ್ ಆಗಿ ತರಕಾರಿ ಹಣ್ಣು ಕೊಳ್ಳಲು ಹೋಗುತ್ತಾರೆ. ಹೆಚ್ಚಿ ರೆಡಿ ಮಾಡುತ್ತಾರೆ. ಉಳಿದವರು ಅವರವರ ಕೆಲಸವನ್ನು ಮಾಡುತ್ತಿರುತ್ತೇವೆ. “ಸಲಾಡ್ ಎಸ್ ರೆಡಿ” ಎಂಬ ಕೂಗನ್ನು ಕಾಯುತ್ತಿರುತ್ತೇವೆ. ವಾಲಂಟಿಯರ್ ಗ್ರೂಪಿನಲ್ಲಿ ಮ್ಯಾನೇಜರ್ ಗಳೂ ಸೇರುತ್ತಾರೆ. ಅವರು ಸಲಾಡ್ ರೆಡಿ ಮಾಡಿ ಬಂದು ಕರೆಯುವಾಗ ಸ್ವಲ್ಪ ಹೆಚ್ಚು ಸಂತೋಷವಾಗುತ್ತದೆ. ಮ್ಯಾಂಗೋ ಲಸ್ಸಿಯಂತೂ ಊಟದ ಜೊತೆಗೆ ಸವಿಯುವ ಪಾಯಸದಂತೆ. ತೆಗೆದುಕೊಂಡು ಹೋದ ದಿನ ಸಲಾಡ್ ಟೈಮ್ ಬರುವುದನ್ನು ಬಾಯಲ್ಲಿ ನೀರೂರಿಕೊಂಡು ಕಾಯುತ್ತಾರೆ. ಟೀಮಿನಲ್ಲಿರುವ ರಷ್ಯಾ, ಜರ್ಮನಿ, ಟರ್ಕಿ, ಜಾರ್ಜಿಯಾ, ಟ್ಯುನೀಸಿಯಾ, ಈಕ್ವಾಡಾರ್ ಮುಂತಾದ ದೇಶಗಳಿಂದ ಬಂದ ಜನರ ಜೊತೆ ಕುಳಿತು ಅವರವರ ಆಹಾರ ಪದ್ದತಿಗಳ ಬಗ್ಗೆ ಮಾತನಾಡುತ್ತಾ, ಆಗಾಗ ಅವರು ತರುವ ಅವರ ದೇಶದ ವಿಶೇಷವಾದ ಯಾವುದೊ ಅಡುಗೆಯನ್ನು ಸವಿಯುತ್ತಾ ಒಟ್ಟಿಗೆ ಊಟ ಮಾಡುವಾಗ ನಮ್ಮ ಮಧ್ಯೆ ಇರುವ ವ್ಯತ್ಯಾಸಗಳಿಗಿಂತ ಸಾಮ್ಯತೆ ಹೆಚ್ಚು ತೋರಲು ಶುರುವಾಗುತ್ತದೆ.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020