Write to us : Contact.kshana@gmail.com

“ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ “-ಒಂದು ಕಾಡುಕೋಳಿಯ ಕಥೆ

5
(1)

ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗಳಲ್ಲಿಯೂ ಹುಟ್ಟು ಗುಣ/ಸಹಜ ಪ್ರವೃತ್ತಿ ( Instinctive behaviour/ natural instinct) ಎನ್ನುವುದು ಹುಟ್ಟಿನಿಂದಲೇ ಇರುತ್ತದೆ. “ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ “ಎಂಬ ಹಿಂದಿನವರ ಗಾದೆ ಮಾತಿದೆ. ಅದು ವನ್ಯಜೀವಿಗಳ ವಿಷಯದಲ್ಲಂತೂ ಆಂತರಿಕವಾಗಿ ಹುದುಗಿರುವ ಈ ಹುಟ್ಟು ಗುಣ ಬಹಳ ಪ್ರಭಲವಾಗಿರುತ್ತದೆ.ಅದನ್ನು ಅರಿತಷ್ಟೂ,ಬಗೆದಷ್ಟೂ, ಕಲಿತಷ್ಟೂ ಇನ್ನೂ ಕುತೂಹಲಕಾರಿಯಾದ ಸಂಗತಿಗಳನ್ನು ಹೊರಹಾಕುತ್ತದೆ.2009 ರಲ್ಲಿ ಇಂತಹದೇ ಒಂದು ನೈಜ ಘಟನೆ ವನ್ಯಜೀವಿಗಳ ಹುಟ್ಟುಗುಣ ( instinctive behaviour)ದ ಬಗ್ಗೆ ನನಗೆ ಅನುಭವವೊಂದನ್ನು ನೀಡಿದ್ದು ಅದನ್ನು ನಿಮ್ಮ ಮುಂದೆ ಹಂಚಿಕೊಳ್ಳುತಿದ್ದೇನೆ.
2009 ರ ನವೆಂಬರ್ ಮಾಹೆ, ಅಂದು ಕೊಪ್ಪದ ನನ್ನ ಮಾವನವರ ಮನೆಯ ಹಿಂಬಾಗದ ತೋಟದಲ್ಲಿ ಕಳೆ ಹೆಚ್ಚು ಬೆಳೆದಿತ್ತು. ಕಳೆ ಸವರುತಿದ್ದವರಿಗೆ ಪೊದೆಯಂತೆ ಬೆಳೆದಿದ್ದ ಗಿಡಗಂಟಿಗಳ ನಡುವೆಯಿಂದ ಕಾಡುಕೋಳಿಯೊಂದು ಪುರ್ರನೆ ಹಾರಿಹೋಗಿದ್ದು ಕಂಡಿತಾದರೂ, ಅಲ್ಲಿ ಗೂಡು ಕಟ್ಟಿದೆಯೆಂದು ಯೋಚಿಸಿರಲಿಲ್ಲ.ಕಳೆ ಸವರಿ ಸ್ವಚ್ಛ ಗೊಳಿಸಿದಾಗಲೇ ತಿಳಿದದ್ದು ಅಲ್ಲಿ ಕಾಡು ಕೋಳಿ ಗೂಡು ಕಟ್ಟಿ ಸಂಸಾರ ನಡೆಸುವ ತಯಾರಿ ಮಾಡಿತ್ತೆಂದು.ಗೂಡಿನಲ್ಲಿ ಆಗಲೇ 4 ಮೊಟ್ಟೆಗಳನ್ನು ಇಟ್ಟಾಗಿತ್ತು. ಮನುಷ್ಯನ ಹಸ್ತಕ್ಷೇಪ, ಅತೀಕ್ರಮಣವಾದ ನಂತರ ಸಾಮಾನ್ಯವಾಗಿ ಕಾಡುಪಕ್ಷಿಗಳು ಗೂಡಿಗೆ ಹಿಂತಿರುಗುವುದಿಲ್ಲ.ಇಲ್ಲಿಯೂ ಕೂಡ ಹಾಗೆಯೇ ಆಯಿತು.ಅತ್ತೆಯವರು ಅಲ್ಲಿ ಕೃತಕ ಪೊದೆಯೊಂದನ್ನು ನಿರ್ಮಿಸಿ , ಅಲ್ಲಿ ನಾಯಿಬೆಕ್ಕುಗಳು ಸುಳಿಯದಂತೆ ಎಚ್ಚರ ವಹಿಸಿದರು. ಆದರೂ ದೂರ ಹೋದ ಕಾಡುಕೋಳಿ ಮರಳಿ ಬರಲಿಲ್ಲ. ಕೊನೆಗೆ ಕಾಗೆ ,ಮುಂಗಸಿಗಳು ಸುಳಿಯತೊಡಗಿದವು. ದಾರಿತೋಚದ ಅತ್ತೆ ನನಗೆ ಫೋನಾಯಿಸಿ ಏನು ಮಾಡುವುದೆಂದು ಕೇಳಿದಾಗ, ಅದು ಏನಾದರೂ ಆಗಲಿ ಬಿಟ್ಟುಬಿಡಿ. ಇಲ್ಲಾ ಅರಣ್ಯ ಇಲಾಖೆಗೆ ವಿಷಯ ತಿಳಿಸಿಬಿಡಿ ಎಂದಿದ್ದೆ. ಅದರೆ ಅತ್ತೆ ನಮಗಾರಿಗೂ ತಿಳಿಸದೆ ಬೇರೆಯ ನಿರ್ದಾರವನ್ನೇ ಮಾಡಿದ್ದರು.ಮನೆಯಲ್ಲಿ ಸಾಕಿದ ಕೋಳಿಯೊಂದು ಕಾವಿಗೆ ಕೂತಿತ್ತು. ಆ ನಾಲ್ಕು ಮೊಟ್ಟೆಗಳನ್ನು ಊರು ಕೋಳಿಯ ಮೊಟ್ಟೆಯ ಜೊತೆಗೆ ಸೇರಿಸಿ ಕಾವಿಗೆ ಇಟ್ಟುಬಿಟ್ಟರು. ಮೊಟ್ಟೆಯೊಡೆದು ಮರಿಹೊರಬಂದ ನಂತರವೇ ನಮಗೆ ಈ ವಿಷಯ ತಿಳಿದದ್ದು.ಆ ಕಾಡುಕೋಳಿಯ ಮರಿಗಳು ಎಂಟು ಊರುಕೋಳಿಯ ಮರಿಗಳೊಡನೆ ತಾಯಿಯ ಆರೈಕೆಯಲ್ಲಿ ಹೊಂದಿಕೊಂಡಿದ್ದವು.ಆದರೆ ಹುಟ್ಟಿದ ದಿನದಿಂದಲೇ ಅದೇಕೋ ಮನುಷ್ಯರನ್ನು ನೋಡಿದರೆ ದೂರ, ಅದೇನೋ ಭಯ.ಪ್ರತಿದಿನ ಮೇವು ಹಾಕುತಿದ್ದ ನನ್ನ ಅತ್ತೆಯವರಿಗೂ ಸಹ ಮುಟ್ಟಲು ಸಿಗುತ್ತಿರಲಿಲ್ಲ.ಸಂಜೆ ತಾಯಿಕೋಳಿಯನ್ನು ಗೂಡಿಗೆ ಹಾಕುವಾಗ ಈ 4 ಮರಿಗಳನ್ನು ಗೂಡಿಗೆ ಕಳಿಸುವುದಕ್ಕೆ ಹರಸಾಹಸ ಪಡಬೇಕಿತ್ತು. ಮಾವನವರು ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದಾಗ ಅವು ಮನೆಗಳಲ್ಲಿ ಇರುವುದಿಲ್ಲ. ಖಂಡಿತ ಕಾಡಿನ ಹಾದಿ ಹಿಡಿದು ಹೋಗುತ್ತವೆ. ಸದ್ಯಕ್ಕೆ ಇರಲಿ. ಒಂದು ವೇಳೆ ಉಳಿದಲ್ಲಿ ನಾವೇ ಹತ್ತಿರದ ಕಾಡಿಗೆ ಬಿಡುತ್ತೇವೆ ಎಂದರಂತೆ.
ಇದೆಲ್ಲದರ ಮಧ್ಯೆ ನಮಗೆ ಕಾಡುತಿದ್ದ ಪ್ರಶ್ನೆ ಅವು ಹೀಗೇಕೆ????? ಅವು ಹುಟ್ಟಿನಿಂದಲೇ ಊರು ಕೋಳಿಯ ಜೊತೆಗೆ ಹುಟ್ಟಿವೆ,ಮೊಟ್ಟೆಯೊಡೆದು ಕಣ್ಣುಬಿಟ್ಟಾಗಿನಿಂದ ಮನುಷ್ಯರನ್ನು ,ನಾಡಿನ ಜೀವನವನ್ನು ಕಂಡಿವಿ.ಆದರೂ ಅವುಗಳಿಗೆ ನಮ್ಮನ್ನು ಕಂಡರೆ ಭಯವೇಕೆ ಎಂಬ ಪ್ರಶ್ನೆ ಕಾಡಿತ್ತು. ಹೀಗೆ ಮುಂದುವರೆದು ಸುಮಾರು ಒಂದು ತಿಂಗಳು ಕಳೆದಿರಬಹುದು. ಅದೊಂದು ದಿನ ಮನೆಯ ಹಿಂಬಾಗದ ತೋಟದಲ್ಲಿ ಮೇಯುತಿದ್ದ ಕಾಡುಕೋಳಿಯ ಹಿಂಡಿನಲ್ಲಿ ಹುಂಜವೊಂದು ಕೂಗಿದ್ದೇ ತಡ ಆ 4 ಮರಿಗಳು ಪುರ್ರನೆ ಏಕ ಕಾಲದಲ್ಲಿ ನಮ್ಮನ್ನಗಲಿ ಹಾರಿಬಿಟ್ಟವು, ಕಾಡು ಸೇರಿ,ಅವುಗಳ ವಂಶಸ್ಥರನ್ನು ಸೇರಿಯೇ ಬಿಟ್ಟವು. ಅತ್ತೆಯವರು ಕೈಯಲ್ಲಿ ಮೇವು ಹಿಡಿದು ಅವು ಹೋದ ಹಾದಿಯಲ್ಲಿ ತಾಯಿಕೋಳಿಯನ್ನು ಓಡಾಡಿಸಿ, ಅದರ ಜೊತೆಗೆ ಮರಿಗಳು ಹಿಂದಿರುಗಬಹುದೆಂದು ಏನೆಲ್ಲಾ ಪ್ರಯತ್ನ ಪಟ್ಟರೂ ಎಲ್ಲವೂ ವಿಫಲವಾಯಿತು. ☹. ಮರುದಿನ ಮತ್ತೆ ಅಕ್ಕಿಯ ನುಚ್ಚು ಎಸೆದು ಮರಿಗಳನ್ನು ಕೂಗಿ ಕರೆದಾಗ ಒಂದು ಮರಿ ಎಂಟತ್ತು ಹೆಜ್ಜೆ ಇಟ್ಟು ಮುಂದೆ ಬಂದಿತಾದರೂ ಉಳಿದ ಮೂರು ಮರಿಗಳು ಅದನ್ನು ಎಚ್ಚರಿಸಿಬಿಟ್ಟವು. ಇದರಿಂದ ಮುಂದೆ ಬಂದ ಮರಿಯೂ ಹಿಂತಿರುಗಿ ಹೋಗಿದ್ದು ಮತ್ತೆ ಬರಲಿಲ್ಲ.ಹಾಗಾದರೆ ಅವತ್ತಿನ ಕಾಡುಕೋಳಿ ಯ ಆ ಒಂದು ಕೂಗಿನಲ್ಲಿ ಅದೆಂತಹ ಆಕರ್ಷಣೆ ಇತ್ತು!!!!!!!.ಹುಟ್ಟಿದ ಮೊದಲ ದಿನದಿಂದ ಹಿಡಿದು ಸಾಕಿಸಲುಸಿದ ತಾಯಿಕೋಳಿಯನ್ನು, ಮೇವುಹಾಕಿ ಅಕ್ಕರೆ ತೋರಿದ ಮನುಷ್ಯರನ್ನು, ಒಡಹುಟ್ಟಿದ ಮರಿಗಳನ್ನು….ತೊರೆದು ಕಾಡು ಸೇರಿದ್ದಾದರೂ ಏಕೆ? ಇದರ ವೈಜ್ಞಾನಿಕ ವಿಶ್ಲೇಷಣೆ ಮಾಡಿದಾಗ ನನಗೆ ಉತ್ತರವೊಂದು ದೊರಕಿತ್ತು.ಅದೇ ಅವುಗಳಲ್ಲಿ ಆಂತರಿಕವಾಗಿ ಅಡಗಿದ್ದ, ತನ್ನ ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದ ಹುಟ್ಟುಗುಣ/ ಸಹಜಪ್ರವೃತ್ತಿ . ಶತಶತಮಾನಗಳಿಂದ ಅದರ ಎಲ್ಲಾ ಪೂರ್ವಜರು ಅರಣ್ಯದಲ್ಲಿಯೇ ಹುಟ್ಟಿಬೆಳೆದ ಪರಿಣಾಮ ಪೃಕೃತಿ ಸಹಜ ಬದುಕು ಅವುಗಳ ವಂಶವಾಹಿನಿಗಳಲ್ಲಿ ಹುದುಗಿ, ಅನುವಂಶೀಯವಾಗಿ ಮುಂದಿನ ಪೀಳಿಗೆಗೆ ಮುಂದುವರೆಯುತ್ತಿದೆ. ಆದರೆ ಅದು ಸುಪ್ತಾವಸ್ಥೆಯಲ್ಲಿ/ ನಿದ್ರಿತ ಸ್ಥಿತಿ (dormant form) ಯಲ್ಲಿತ್ತು. ಅಂದು ಕಾಡಂಚಿನಲ್ಲಿ ಕಾಡುಕೋಳಿಯ ಆ ಒಂದು ಕೂಗು ಮರಿಗಳ ಕಿವಿಗೆ ಬಿದ್ದದ್ದು ವಂಶವಾಹಿನಿಗಳಲ್ಲಿ ನಿದ್ರಾವಸ್ಥೆಯಲ್ಲಿದ್ದ ಅವುಗಳ ಹುಟ್ಟುಗುಣವು ಜಾಗೃತಗೊಳ್ಳುವಂತೆ ಮಾಡಿತು. ಕೂಡಲೆ ಮೆದುಳಿಗೆ”ತಮ್ಮ ನೆಲೆ ಇರುವುದು ಕಾಡಿನಲ್ಲಿಯೇ ಹೊರತು ನಾಡಿನಲ್ಲಿ ಅಲ್ಲ” ಎಂಬ ಸಂದೇಶವೊಂದು ರವಾನೆಗೊಂಡಿತು. ಆ ಕ್ಷಣದಲ್ಲಿ ಅವು ನಮ್ಮನ್ನು ಅಗಲಿ , ತಮ್ಮ ವಂಶಸ್ಥರನ್ನು ಸೇರಿಬಿಟ್ಟವು. (ನಂತರ ಆ ನಾಲ್ಕೂ ಮರಿಗಳು ನಮ್ಮ ಮನೆಯ ಹಿಂಬದಿಯ ಗದ್ದೆಗಳಲ್ಲಿ ಮೇಯುತ್ತಾ ದೊಡ್ಡದಾಗಿ , ಈಗ ಅವುಗಳ ಸಂತಾನ ದೂಡ್ಡ ಗುಂಪಾಗಿ ಬೆಳೆದದ್ದು ನಮಗೆಲ್ಲ ಖುಷಿನೀಡಿದೆ. )
ಹುಟ್ಟುಗುಣದ ಇನ್ನೂ ಕೆಲವು ಉದಾಹರಣೆಗಳನ್ನು ಕೊಡುವುದಾದರೆ ,
*ಹಕ್ಕಿಗಳಿಗೆ ಗೂಡುಕಟ್ಟುವ ಕಲೆಯನ್ನು ಕಲಿಸಿ ಕೊಟ್ಟವರಾರು?,
*ಕಡಲಾಮೆಗಳು ಸಮುದ್ರ ತಟದ ಮರಳಿನಲ್ಲಿ ಮೊಟ್ಟೆ ಇಟ್ಟು ಹೂರಬಂದ ಮರಿಗಳಿಗೆ ಪುನಹ ಸಮುದ್ರದ ನೀರಿನೆಡೆ ಸಾಗಲು ಹೇಳಿ ಕೊಟ್ಟವರಾರು?
* ಮುಳ್ಳುಹಂದಿಯ ಗುದ್ದಿನಲ್ಲಿ ಶತ್ರುಗಳಿಂದ ತಪ್ಪಿಸಿಕೊಳ್ಳಲು 3-4 ದ್ವಾರಗಳನ್ನು ರಚಿಸುವ ಕಲೆಯನ್ನು ತಿಳಿಸಿ ಕೊಟ್ಟವರಾರು?
* ಜೇನುಹುಳಗಳಿಗೆ ಆಹಾರ ಕಂಡಾಗ ಬೇರೆಯ ಹುಳುಗಳಿಗೆ ವಿಶಿಷ್ಟ ನೃತ್ಯದ ಮೂಲಕ ತೋರಿಸುವ ನೃತ್ಯಕಲೆಯನ್ನು ಕಲಿಸಿದವರಾರು???
* ಜೇಡರ ಹುಳುವಿಗೆ ಬಲೆಕಟ್ಟಲು ಹೇಳಿಕೊಟ್ಟವರಾರು.?
ಅವೆಲ್ಲವೂ ಅನುವಂಶೀಯವಾಗಿ ಅವುಗಳ ವಂಶವಾಹಿನಿಯ ಮುಖಾಂತರ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುತ್ತಿರುವ ಹುಟ್ಟುಗುಣಗಳು.ಎಷ್ಟು ಅಧ್ಭುತ ಅಲ್ಲವೇ ಪ್ರಾಣಿ ಜಗತ್ತು!!!!!

ಎಲ್ಲರಿಗೂ ಶುಭವಾಗಲಿ, ನಮಸ್ಕಾರಗಳು ⚘
-ಡಾ.ಯುವರಾಜ್ ಹೆಗಡೆ
ಪಶುವೈದ್ಯರು, ತೀರ್ಥಹಳ್ಳಿ

 

How do you like this post?

Click on a star to rate it!

Average rating 5 / 5. Vote count: 1

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಡಾ. ಯುವರಾಜ ಹೆಗಡೆ

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಮಿತ್ತುಭಯ ಕಳೆವ ಗುರು