
ಒಂದು ಹನಿ ಮೈ ಸವರಿ ಕೆಳಗೆ ಬೀಳುತ್ತಿದ್ದ ಹಾಗೆ ನವಿಲಿನ ತಪೋಭಂಗವಾಗಿತ್ತು. ಒಮ್ಮೆ ಮೈ ಕದಲಿಸಿ ದೇಹವನ್ನು ಸಡಿಲ ಬಿಟ್ಟಿತು. ಮಳೆ ಜೋರಾಗುವ ಮುನ್ಸೂಚನೆ ಕಾಣ ತೊಡಗಿತು. ಇನ್ನೇನು ಅದು ಹಾರಿಹೋಗಬಹುದು, ಇಷ್ಟು ಹೊತ್ತು ತುಂಬಿಕೊಂಡಿದ್ದ ಗದ್ದೆ ಇನ್ನೇನು ಖಾಲಿಯಾಗಬಹುದು ಅಂದುಕೊಂಡರೆ ಉಹೂ ಎಲ್ಲವೂ ಅಲ್ಲೇ ಕಾಯತೊಡಗಿದವು. ಬೇಸಿಗೆಯ ಝಳಕ್ಕೆ ಸಿಕ್ಕ ಪ್ರಾಣಿ ಪಕ್ಷಿಗಳಿಗೂ ನೆನೆಯಲು ಸಂಭ್ರಮವಾ, ಅವೂ ನಮ್ಮ ಹಾಗೆ ಕುಣಿದು ಕುಪ್ಪಳಿಸುತ್ತವಾ ಎಂಬ ಆಲೋಚನೆಯಲ್ಲಿ ಅತ್ತ ದೃಷ್ಟಿ ನೆಟ್ಟರೆ ಮಳೆಯ ರಭಸ ಜೋರಾಗಿ ನೆಲ ಮುಗಿಲುಗಳ ನಡುವೆ ತೆಳ್ಳೆನ್ಯ ಪರದೆಯೊಂದು ತೂಗು ಬಿಟ್ಟ ಹಾಗೆ ಭಾಸವಾಗತೊಡಗಿತು. ಒಂದೇ ಸಮನೆ ಹನಿ ಹನಿಯಾಗಿ, ಧಾರೆಯಾಗಿ, ಸುರಿಯುವ ಮಳೆ ತನ್ನ ಮಾತುಗಳನ್ನು ತುಸು ಬಿಡುವಿಲ್ಲದೆ ತೋಡಿಕೊಳ್ಳುತ್ತಿತ್ತು. ಅಷ್ಟೇ ನೆಮ್ಮದಿಯಿಂದ ಇಳೆ ಕೇಳಿಸಿಕೊಳ್ಳುತ್ತಾ ಸ್ಪಂದಿಸುತ್ತಿತ್ತು. ಪ್ರೀತಿಯೆಂದರೆ ಹೀಗೆನಾ….
ಅಲ್ಲಿಯವರೆಗೆ ಬಿಸಿ ಉಗುಳುತ್ತಿದ್ದ ಗಾಳಿಯೂ ತಂಪಾಗಿ, ರಾಚುವ ಈಸಲಿನ ತಣ್ಣನೆಯ ಸ್ಪರ್ಶಕ್ಕೆ ಮೈ ಹಿತವಾಗಿ ಕಂಪಿಸಿ, ತುಸು ಹೊತ್ತಿನಲ್ಲಿ ಜನ್ಮಿಸಿದ ಚಳಿ ಇಂಚಿಂಚಾಗಿ ಆವರಿಸತೊಡಗಿ ಬೆಂಕಿಯುಗುಳುವ, ಶೀತಕ್ಕೆ ತಿರುಗುವ ಪ್ರಕ್ರಿಯೆ ಅದೆಷ್ಟು ಸುಲಭ ಹಾಗೂ ಬೇಗ ಅನ್ನಿಸಿ ತಟ್ಟನೆ ಹಾಡೊಂದು ನೆನಪಾಯಿತು. ಬಿಸಿಲಲ್ಲಿ ಬಿಸಿಲಾಗಿ, ನೆರಳಲ್ಲಿ ತಂಪಾಗಿ ಹೊಸದೊಂದು ಸಾಲು ಸೇರಿಸುವ ಹುಕಿ ಬಂದು ಮಳೆಯಲಿ ತೇವವಾಗಿ ಒಂದಾಗಿ ಇರಬಹುದೇನೋ ಅನ್ನಿಸಿ ಇದೆಷ್ಟು ಸುಲಭ ಹಾಗೂ ಮತ್ತದೆಷ್ಟು ಕಷ್ಟ ಅನ್ನಿಸಿ ನೋಡಿದರೆ ಕಾಫಿ ಖಾಲಿಯಾಗಿತ್ತು. ನವಿಲು ನೆನೆಯುತ್ತಲೇ ಇತ್ತು.
ಸುರಿಯುವ ಮಳೆ, ನೋಡುವ ನಾನು, ಇದ್ಯಾವುದರ ಪರಿವಿಯಿಲ್ಲದೆ ನೆನೆಯುತ್ತಿದ್ದ ಆ ಸಂಕುಲ ಎಲ್ಲವೂ ಒಂದಾಗಿ ಕಳೆದುಹೋಗುವ ಹೊತ್ತಿಗೆ ಮಳೆ ನಿಂತಿತ್ತು. ಎದುರಿನ ಕಾಡು ಆಗಷ್ಟೇ ತೊಳೆದು ನೀರಿಳಿಯಲು ಹರಡಿಟ್ಟ ಪಾತ್ರೆಗಳ ಹಾಗೆ ಶುಭ್ರವಾಗಿ ಫಳಫಳಿಸುತ್ತಿತ್ತು. ಗುಡ್ಡದ ಕಡೆಯಿಂದ ಸಣ್ಣಗೆ ಇಳಿಬಿಸಿಲು ಹರಿದುಬರತೊಡಗಿ ಅಲ್ಲಿಯವರೆಗೂ ಸುಮ್ಮನೆ ಕುಳಿತಿದ್ದ ನವಿಲು ಒಮ್ಮೆಗೆ ಕೆಳಗೆ ಧುಮುಕಿ ತನ್ನೆಲ್ಲಾ ಗರಿಬಿಚ್ಚಿ ಒಮ್ಮೆ ಕೊಡವಿ ವೈಯಾರದಿಂದ ಬಿಸಿಲಿಗೆ ಹೊರ ಹಣಕಲು ಬರುವ ಕೀಟ ಸಮೂಹವನ್ನು ಅರಸಿ ಹೊರಟಿತು.
ಅಲ್ಲಿಯವರೆಗೆ ನೆನೆದು ಕುಪ್ಪಳಿಸುತ್ತಿದ್ದ ಬೆಳ್ಳಕ್ಕಿಯ ಹಿಂಡು ಯಾರೋ ಕರೆದರೂ ಎಂಬಂತೆ ಒಮ್ಮೆಗೆ ಹಾರಿ ಹೋದವು. ಒಮ್ಮೆಗೆ ಇಡೀ ವಾತಾವರಣ ಸ್ತಬ್ದ ವಾದ ಹಾಗೆ ಅನ್ನಿಸಿ ಎದ್ದು ಹೊರಡುವಾಗ ಬೇಸಿಗೆಯ ಮಳೆ ನಂಬಬಾರದು ಎನ್ನುವ ಅಜ್ಜಿಯ ಮಾತು ಯಾಕೋ ಪಕ್ಕನೆ ನೆನಪಾಯಿತು.
- ಬದುಕು ಸರಳ…. ನಾವೇ ಅದನ್ನು ಕ್ಲಿಷ್ಟ ಮಾಡ್ಕೊತಿವಿ ಅಷ್ಟೇ - August 10, 2020
- ಮಾತೃತ್ವಕ್ಕೆ ಜೀವ ಭೇಧವಿಲ್ಲಾ …. - July 30, 2020
- ಉಳಿಸಿಕೊಳ್ಳುವುದು ಎಷ್ಟು ಕಷ್ಟ…. - July 21, 2020