ಮನೆಯ ಎದುರಿಗೆ ಕಣ್ಣಿಗೆ ಕಾಣುವಷ್ಟು ದೂರವೂ ಹರಡಿರುವ ಹಸಿರು ಬಣ್ಣದ ರತ್ನಗಂಬಳಿಯನ್ನು ಸೀಳಿಕೊಂಡು, ಆ ಹಚ್ಚ ಹಸಿರು ಬಣ್ಣದ ಗದ್ದೆಯ ತುದಿಯಲ್ಲಿದ್ದ ನದಿಯವರೆಗೂ ಇದ್ದ ಒಂದೇ ರಸ್ತೆ. ಮಳೆಗಾಲದಲ್ಲಿ ಕೆಸರಿನಿಂದ ತುಂಬಿದ್ದರೆ, ಉಳಿದ ಕಾಲಗಳಲ್ಲಿ ಕಾಲಿಟ್ಟ ಕೂಡಲೇ ಮೇಲೆದ್ದು ಹಾರುವ ಕೇಸರಿ ಬೂದು ಬಣ್ಣದ ಧೂಳಿನ ರಸ್ತೆ. ದನಕರುಗಳು ಮೇವು ಮುಗಿಸಿ ಮನೆಯೆಡೆಗೆ ಧಾವಿಸುತ್ತಿದ್ದಾರೆ ಮುಳುಗುತ್ತಿರುವ ಸೂರ್ಯನ ಪ್ರಕಾಶದಲ್ಲಿ ಇನ್ನೂ ಕೇಸರಿಯಾಗಿ ಕಾಣುವ, ದನಗಳಿಗಿಂತಲೂ ಎತ್ತರಕ್ಕೆ ಹಾರುವ ಆ ಮಣ್ಣಿನ ಬಣ್ಣ ಇನ್ನೂ ಕಣ್ಣಿಂದ ಮರೆಯಾಗಿಲ್ಲ. ಗದ್ದೆ ತೋಟಗಳಿಗೆ ಆಧಾರವಾಗಿದ್ದ ಆ ಚಿಕ್ಕ ಹೊಳೆಯೇ ಮುಂದೊಮ್ಮೆ ಎಲ್ಲವನ್ನೂ ಮುಳುಗಿಸಿ ಎತ್ತರವಾಗಿ ಅಗಲವಾಗಿ ನೆಲೆ ನಿಲ್ಲುತ್ತದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಮುಳುಗಡೆಯಾಗುತ್ತದೆಯಂತೆ ಎನ್ನುವುದರ ಅರ್ಥವೂ ಗೊತ್ತಾಗದ ವಯಸ್ಸು. ಪ್ರತಿವರ್ಷವೂ ಈ ವರ್ಷ ಮಳೆಗಾಲದಲ್ಲಿ ನೀರು ನಿಲ್ಲುತ್ತದೆಯಂತೆ. ನೆರೆ ಬರುತ್ತದೆಯಂತೆ ಎಂದು ಕೇಳುತ್ತ ಕೇಳುತ್ತಾ ೧೦ ವರ್ಷಗಳು ಕಳೆದಿದ್ದವು. ಮನೆಯಿದ್ದಿದ್ದು ಕಣಿವೆಯಲ್ಲಿ ಎನ್ನಬಹುದೇನೋ. ಮನೆಯ ಹಿಂದೆ ಕಲ್ಲುಮೆಟ್ಟಲು ಗುಡ್ಡ. ಮನೆಯ ಮುಂದೆ ಗದ್ದೆಯ ತುದಿಯಲ್ಲಿದ್ದ ಹೋಳೆ ದಾಟಿ ಮುಂಬರುವ ಗದ್ದೆ, ಅದರ ಎದುರಿಗಿದ್ದ ಹೊಸತೋಟವನ್ನು ದಾಟಿದರೆ ಇನ್ನೊಂದು ಗುಡ್ಡ. ಹೆಸರು ನೆನಪಾಗುವುದಿಲ್ಲ. ಮನೆಯ ಎಡಬದಿಯಲ್ಲಿ ಮೇಷ್ಟು ಮನೆ ಗುಡ್ಡ. ಬಲಬದಿಯಲ್ಲಿ ಈಶ್ವರ ದೇವಸ್ಥಾನದ ಗುಡ್ಡ. ಆ ಗುಡ್ಡಗಳು ಅಂತಹಾ ದೊಡ್ಡದಲ್ಲದಿದ್ದರೂ ಹತ್ತುವವರಿಗೆ ಉಬ್ಬುಸ ತರಿಸಲು ಸಾಲುವಷ್ಟು ದೊಡ್ಡದಿದ್ದವು. ಮನೆ ಮತ್ತು ಗದ್ದೆ ಮಾತ್ರ ಕಣಿವೆಯಲ್ಲಿದ್ದುದು.
ಮನೆಯ ಅಂಗಳ ಗದ್ದೆಗಿಂತ ಸ್ವಲ್ಪ ಮೇಲಕ್ಕೆ ಕಟ್ಟಿದ್ದ ಕಲ್ಲು ಮೇಲ್ಗಟ್ಟಿನ ಮೇಲಿತ್ತು. ಮನೆಯ ಪಕ್ಕಕ್ಕೆ ತಾಗಿದಂತೆಯೇ ಇದ್ದ ದೊಡ್ಡಜ್ಜನ ಮನೆ. ದೊಡ್ಡಜ್ಜನ ಮನೆಯ ಅಂಗಳದ ಮುಂದೆ ನಾಲ್ಕು ತೆಂಗಿನ ಮರಗಳು. ದೊಡ್ಡಜ್ಜನ ಮನೆಯ ಪಕ್ಕದಲ್ಲಿಯೇ ಇದ್ದ ಗಣಪತಿ ದೇವಸ್ಥಾನ. ಅದನ್ನು ದಾಟಿ ಹಿಂದೆ ಹೋದರೆ ಒಂದು ಗುಮ್ಮಿ. ನೀರು ಎಲ್ಲಿಂದ ಬರುತ್ತಿತ್ತೋ ಗೊತ್ತಿಲ್ಲ. ಯಾವಾಗಲೂ ತುಂಬಿ ತುಳುಕುತ್ತಿತ್ತು. ಅದನ್ನು ದಾಟಿ ಪಕ್ಕಕ್ಕೂ, ಹಿಂದೆಯೋ ಹೋದರೆ ಅಡಿಕೆ ತೋಟ. ಹೆಸರಿಗೆ ಅಡಿಕೆ ತೋಟ. ಗೊರಟೆ, ಜಾಜಿ, ಪಾರಿಜಾತ, ಮಲ್ಲಿಗೆ ಮುಂತಾದ ನೂರೆಂಟು ಹೂವಿನ ಗಿಡಗಳು, ಚಕ್ಕೋತ, ಪನ್ನೇರಳೆ, ಮಾವು, ಪೇರಳೆ, ಹಲಸು ಮುಂತಾದ ಹಣ್ಣಿನ ಗಿಡಗಳು, ಮೆಣಸು, ವೀಳ್ಯದೆಲೆ ಮುಂತಾದ ಗಿಡಬಳ್ಳಿಗಳು. ದೊಡ್ಡಜ್ಜನ ಮನೆಯ ಪಕ್ಕದಲ್ಲಿದ್ದ ಹಳೆಮನೆಗೆ ಅಂಟಿದಂತೆ ಬಿಳೆಮರಳು ಹಣ್ಣಿನ ಗಿಡ. ಅದರ ಪಕ್ಕದಲ್ಲಿದ್ದ ಈಶ್ವರ ಗುಡ್ಡಕ್ಕೆ ಹೋಗುವ ದಾರಿಯಲ್ಲೂ ದೊಡ್ಡ ದೊಡ್ಡ ಹಲಸಿನ ಮರಗಳು. ಜೊತೆಗೆ ಮೂಸುಂಬಿ ಹಣ್ಣಿನ ಮರಗಳು. ಮದುವೆಗಳು ಮನೆಯಲ್ಲಿ ನೆಡೆದಾಗ ಫಲತಾಂಬೂಲಕ್ಕೆ ಮನೆಯಲ್ಲೇ ಬೆಳೆದ ಮೂಸಂಬಿ ಹಣ್ಣುಗಳು.
ಕಲ್ಲುಮೆಟ್ಟಲು ಗುಡ್ಡದಲ್ಲಿ ಇದ್ದ ಕಾಡಿನಲ್ಲಿ ನಾಗಬ್ರಹ್ಮ ಎಂಬ ದೇವರ ಕಲ್ಲು. ದನ ಎಮ್ಮೆಗಳು ಮೇಯಲು ಹೋಗಿ ಕಳೆದುಹೋದರೆ ಒಂದು ವಾರವಾದರೂ ಬರದಿದ್ದರೆ ಆ ಬ್ರಹ್ಮನಿಗೆ ಹರಕೆ. ಒಂದು ತಂಬಿಗೆ ನೀರು, ಹೂವು,ವರ್ಷಕ್ಕೊಮ್ಮೆ ಮೊಸರನ್ನದ ನೈವೇಧ್ಯ. ಗದ್ದೆಯ ತುದಿಯಲ್ಲಿದ್ದ ದೇವರ ಕಲ್ಲಿಗೆ ವಡೆ, ಕಡುಬಿನ ಎಡೆ. ಪ್ರತಿವರ್ಷ ನೆರೆ ಬಂದಾಗ ತೇಲಿಕೊಂಡು ಹೋಗುವ ಆ ದೇವರ ಕಲ್ಲಿನ ಜಾಗಕ್ಕೆ ಇನ್ನೊಂದು ಕಲ್ಲು ಇಟ್ಟು ದೇವರನ್ನಾಗಿ ಮಾಡುವುದು.
ದೇವಸ್ಥಾನದ ಹಿಂದೆ ಇದ್ದ ಕೊಟ್ಟಿಗೆ, ಕೊಟ್ಟಿಗೆ ತುಂಬಾ ದನಗಳು. ಒಂದೊಂದಕ್ಕೂ ಒಂದೊಂದು ಹೆಸರು. ಪೂರ್ಣಿಮಾ, ನನ್ನ ಪ್ರೀತಿಯ ಕಪ್ಪು ಬಣ್ಣದ ಬಿಳಿ ದಾಸಿನ ಚಿಕ್ಕ ಜಾತಿಯ ದನ. ಅಮ್ಮ ಚಿಕ್ಕಮ್ಮರಿಗೂ ಒದೆಯುತ್ತಿತ್ತಂತೆ . ಹಾಯುತ್ತಿತ್ತಂತೆ. ನಾನು ಹತ್ತಿರ ಹೋದರೆ ಏನೂ ಮಾಡುತ್ತಿರಲಿಲ್ಲ. ಕೆಂಪು ಬಣ್ಣದ ಇನ್ನೊಂದು ದನ, ಅದರ ಹೆಸರು ನೆನಪಿಲ್ಲ. ಮಂಜ, ಸುಬ್ರಮಣ್ಯ ಎಂಬ ಜೋಡೆತ್ತುಗಳು. ಮಂಜನ ಕೊಡು ಕೋರೆಯಾಗಿ ಮಧ್ಯದಲ್ಲಿ ಕೂಡಿದಂತಿದ್ದರೆ, ಸುಬ್ರಮಣ್ಯನ ಕೋಡುಗಳು ಚೂಪಾಗಿ ದೂರ ದೂರ. ಮಂಜ ಸಾಧುವಾಗಿ ಕಂಡರೆ, ಸುಬ್ರಮಣ್ಯನನ್ನು ನೋಡಿದರೆ ಇನ್ನೇನು ಹಾಯಲು ರೆಡಿಯಾದಂತೆ. ಇನ್ನಷ್ಟು ದನಗಳು, ಎಮ್ಮೆಗಳು, ಗುಡ್ಡಗಳು.
ಬೆಳಿಗ್ಗೆ ಎದ್ದರೆ ಅವಕ್ಕೆ ಮೇವು ಕೊಡುವುದೇ ಒಂದೆರಡು ಗಂಟೆಗಳ ಕೆಲಸ. ಎರಡು ಹಂಡೆ ನೀರು, ಐದು ಕೆಜಿ ಅಕ್ಕಿ, ಮನೆಯಲ್ಲೇ ಬೆಳೆದ ಸೌತೆಕಾಯಿ ಇನ್ನಿತರ ತರಕಾರಿಗಳನ್ನು ಹಾಕಿ ಬೇಯಿಸಿ ಗಂಜಿ ಮಾಡಿದರೆ ಅದು ಬಿಸಿಯಾಗಿರುವಾಗಲೇ ಆ ದನಗಳಿಗೆ ಔತಣ. ಗದ್ದೆಯ ಅಂಚಿನಲ್ಲಿರುವ ದೂರ್ವೆ ಗಣಪತಿಗೆ ಪ್ರಿಯ. ಜೊತೆಯಲ್ಲೇ ಬೆಳೆದಿರುತ್ತಿದ್ದ ತುಂಬೆ ಹೂವು ಈಶ್ವರನಿಗೆ. ಬೆಳಿಗ್ಗೆ ಎದ್ದು ಒಂದು ಬಟ್ಟಲಾದರೂ ತುಂಬೆ ಹೂವು ಕುಯ್ಯದೆ, ೧೦೮ ದೂರ್ವೆ ಕುಯ್ಯದೆ ಕಾಪಿಯಿಲ್ಲ. ಕಾಫಿಯಲ್ಲ. ಕಾಪಿ. ಯಾಕೆಂದರೆ ಅದು ಕಾಪಿಯ ಬಣ್ಣದ ಹಾಲು ಬೆರೆಸಿದ ಬೆಲ್ಲದ ನೀರು. ಒಹ್, ಅದಕ್ಕೂ ಮುಂಚೆ ಉಗುರು ಬೆಚ್ಚಗಿನ ಗೋಮೂತ್ರ. ಗೋಮೂತ್ರ ಕುಡಿಯದೆ ಕಾಪಿಯಿಲ್ಲ. ತಿಂಡಿಯಿಲ್ಲ.
ಟೊಮೇಟೊ, ಕ್ಯಾರಟ್, ನೆಲಗಡಲೆ, ಬೀಟ್ರೂಟ್, ಗದ್ದೆ ಸೌತೆ, ಚೀನಿಕಾಯಿ, ಹೀರೆಕಾಯಿ, ಗುಂಬಳ, ಬೆಂಡೆಕಾಯಿ ಎಲ್ಲವೂ ಮನೆಯಲ್ಲೇ ಬೆಳೆಯುವುದು. ಗದ್ದೆ ಕೂಲಿಯಿಲಿನ ನಂತರ ಧಾನ್ಯಗಳ ಕಾಲ. ಉದ್ದು, ಹುರುಳಿ, ಹೆಸರು, ಎಳ್ಳು ಮುಂತಾದವು. ಧಾನ್ಯಗಳನ್ನು ಬೆಳೆದು ಮಳೆ ಶುರುವಾಗುವುದರಲ್ಲಿ ಬತ್ತದ ಸಸಿ ರೆಡಿಯಾಗಿರುತ್ತಿತ್ತು. ಶಿವರಾತ್ರಿ ದಿನ ೨೦-೩೦ ಏರಿ ತೋಡಿ, ಸೌತೆ ಬೀಜ ಹಾಕಿದರೆ ಏಪ್ರಿಲ್ ಕೊನೆಯಲ್ಲಿ ಸೌತೆ ಕುಯ್ಲಿಗೆ ರೆಡಿ. ಪೇಟೆಯಿಂದ ತರುತ್ತಿದ್ದುದು ಅತೀ ಕಡಿಮೆ. ಪ್ಯಾಸ್ಟಿಕ್ ಎಂಬುದು ಲಕ್ಸುರಿ. ಪ್ಲಾಸ್ಟಿಕ್ ಕವರ್ ಹೋಗಲಿ, ಡಬ್ಬಿಗಳೂ ಇರುತ್ತಿರಲಿಲ್ಲ.
ಒಂದು ವರ್ಷ ೧೦-೧೫ ಎರಿಗಳಲ್ಲಿ ಬೀಟ್ರೂಟ್ ಹಾಕಿದ್ದು ೫ ಕ್ವಿಂಟಾಲ್ ಬೆಳೆ ಬಂದಿತ್ತಂತೆ. ಮಳೆಗಾಲ, ಕೊಳೆತುಹೋದರೆ ಎಂದು ತೀರ್ಥಹಳ್ಳಿಗೆ ಗಾಡಿಯಲ್ಲಿ ತುಂಬಿಕೊಂಡು ಹೋಗಿ ಅಂಗಡಿಗಳಲ್ಲಿ ಕೇಳಿದರೆ, ಕೆಜಿ ಗೆ ೫ ಪೈಸೆ ಕೊಡುತ್ತೇವೆ ಎಂದರಂತೆ. ಕೊಡಲು ಮನಸ್ಸಾಗದೆ ಮನೆಗೆ ತೆಗೆದುಕೊಂಡು ಹೋಗಿ ಪ್ರತಿದಿನ ಜನವಾರಿಗೆ ಮಾಡುವ ಗಂಜಿಗೆ ಕೊಚ್ಚಿ ಹಾಕಿ ಕಾಲಿ ಮಾಡಿದ್ದರಂತೆ.
ಗದ್ದೆ ತೋಟಗಳಲ್ಲಿ ಕೆಲಸ ಮಾಡಲು ೨೦-೨೫ ಜನ ಕೆಲಸಗಾರರು. ಅವರವರಿಗೆ ಅವರವರ ಗೊರಬಲು. ಜೊತೆಗೆ ನನಗೂ ಒಂದು ಚಿಕ್ಕ ಗೊರಬಲು. ಅದನ್ನು ಹಾಕಿಕೊಂಡು ಕಾಲಡಿಯಲ್ಲಿ ಏಡಿ ಬರುತ್ತದೆಯೇನೋ ಎಂದು ಹೆದರುತ್ತಲೇ, ಬತ್ತದ ಸಸಿಯನ್ನು ಕೆಸರಿನಲ್ಲಿ ಊರಿ ನೆಡುವುದರಲ್ಲಿ ಅದೆಂತಹ ಖುಷಿ. ನೆಟ್ಟಿಯಿದ್ದಾಗ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಂಭ್ರಮ. ನೆಟ್ಟಿಯ ಕೆಲಸಕ್ಕೆ ಬಂದವರಿಗೆ ಮಧಾಹ್ನದ ಊಟದ ತಯಾರಿ. ಸಾಮಾನ್ಯವಾಗಿ ಉಂಡೆ ಕಡುಬು. ಕೆಲವೊಮ್ಮೆ ಅಕ್ಕಿ ರೊಟ್ಟಿ, ದೋಸೆ. ಬಿಸಿ ಬಿಸಿಯಾಗಿ ತಯಾರು ಮಾಡಿ ಗದ್ದೆಗೇ ಸರಬರಾಜು. ಗದ್ದೆಯ ಅಂಚಿನಲ್ಲಿ ಕುಳಿತು ಕೆಲಸಗಾರರೊಂದಿಗೆ ಮಾತನಾಡುತ್ತಾ ತಿಂದ ಆ ತಿಂಡಿಯ ರುಚಿಗೆ ಸಮನಾದದ್ದು ಜೀವನದಲ್ಲಿ ಮತ್ತೆಲ್ಲೂ ತಿಂದಿಲ್ಲ.
ಮುಳುಗಡೆಯಾಗುತ್ತದೆ ಎನ್ನುವ ವದಂತಿ ನಿಜವಾಗಲೂ ಬಹಳ ಸಮಯವೇನೂ ತೆಗೆದುಕೊಳ್ಳಲಿಲ್ಲ.
ಕೊಡೆಯಾಮವಾಸ್ಯೆಯ ರಾತ್ರಿ ನೆರೆ ನಿಂತಿದ್ದು ಪ್ರತಿವರ್ಷದಂತೆ ಕಡಿಮೆ ಆಗಲೇ ಇಲ್ಲ. ಎಲ್ಲರೂ ಈಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕ್ಯಾಂಪ್ ಮಾಡಿದರು. ನನ್ನನ್ನು ಅಜ್ಜನ ಮನೆಯಲ್ಲಿ ಓದಲು ಬಿಟ್ಟು ಆಗಿತ್ತು. ಆ ವರ್ಷದ ನಂತರ ಪುನಃ ನಾನು ಊರಿಗೆ ಹೋದಾಗ ಇದ್ದಿದ್ದು ಗದ್ದೆಯ ಮಧ್ಯೆ ಇದ್ದ ಕಲ್ಲಿನ ಕಟ್ಟಡದ ಮೇಲಿದ್ದ ಅಂಗಳ. ಗಣಪತಿ ದೇವಸ್ಥಾನ. ಸುತ್ತ ಮುತ್ತಲಿನ ಗುಡ್ಡಗಳೆಲ್ಲಾ ಕಾಲಿ ಕಾಲಿ. ಆ ಇಡೀ ಪ್ರಪಂಚದಲ್ಲಿ ಒಂದು ಮರವೂ ಉಳಿದಿರಲಿಲ್ಲ. ಮನೆಯೂ ಇರಲಿಲ್ಲ. ಸ್ಮಶಾನ. ಮನುಷ್ಯರದಲ್ಲ. ಪ್ರಕೃತಿಯದ್ದು.
ಇನ್ನೂ ಪ್ರಕೃತಿ ಎಂದರೇನು ಎಂದು ತಿಳಿಯದ ವಯಸ್ಸು. ಕಳೆದುಕೊಂಡುದೇನು ಎಂದು ಅರಿವಾಗದ ವಯಸ್ಸು. ಆದರೂ ಅಂದು ಅಂಗಳದಲ್ಲಿ ನಿಂತು ಸುತ್ತಲೂ ನೋಡಿದಾಗ ಆದ ಸಂಕಟ ಜೀವನದಲ್ಲಿ ಪುನಃ ಇಲ್ಲಿಯವರೆಗೆ ಆಗಿಲ್ಲ. ಅಪ್ಪನನ್ನು ಕಳೆದುಕೊಂಡಾಗಲೂ ಅವತ್ತಾದಷ್ಟು ಸಂಕಟ ಆಗಿಲ್ಲ. ಈಶ್ವರ ದೇವಸ್ಥಾನದ ಗುಡ್ಡದ ಪಕ್ಕದಲ್ಲಿದ್ದ ಒಂದು ದೊಡ್ಡ ಮರ. ಆ ಮರದ ಮೇಲೆ ಅಂತಹ ಪ್ರೀತಿಯೇನೂ ಇರಲಿಲ್ಲ. ಆದರೂ ಅದು ಅಜ್ಜ ದೊಡ್ಡಮ್ಮರಂತೆ ಜೀವನದ ಅವಿಭಾಜ್ಯ ಅಂಗವಾಗಿತ್ತು. ಅದು ಕಾಣದಿದ್ದಾಗ ಅಜ್ಜ ದೊಡ್ಡಮ್ಮರನ್ನು ಕಳೆದುಕೊಂಡಂತದ್ದೇ ಸಂಕಟ. ೧೦ ವರ್ಷ ವಯಸ್ಸಿನ ನನಗೇ ಅಷ್ಟು ನೋವಾಗಿದ್ದಾಗ, ಸಂಕಟ ಎಂದರೆ ಏನು ಎಂದೇ ಗೊತ್ತಿಲ್ಲದ ವಯಸ್ಸಿನಲ್ಲಿ ಸಂಕಟವಾಗಿದ್ದಾಗ, ಅಜ್ಜ ದೊಡ್ಡಮ್ಮರಿಗೆ, ಅಪ್ಪ ಚಿಕ್ಕಪ್ಪಂದಿರಿಗೆ ಹೇಗಾಗಿರಬಹುದು? ಚಿಮುಣಿ ಎಣ್ಣೆ ದೀಪ ಮತ್ತು ಪ್ರಕೃತಿ ಬೇಕೇ? ಬಲ್ಬ್ ಲೈಟ್ ಬೇಕೇ? ಕೇಳಿದರೆ ಅಂದೂ ಇಂದೂ ಉತ್ತರ ಒಂದೇ. ಆ ಮಾರಣಹೋಮಕ್ಕಿಂತ ಚಿಮುಣಿ ಎಣ್ಣೆಯೇ ಪರವಾಗಿರಲಿಲ್ಲ. ಎಂದು.
ತೀರ್ಥಹಳ್ಳಿಗೆ ಬಂದು, ಶಿವಮೊಗ್ಗ, ಬೆಂಗಳೂರು ದಾಟಿ, ವರ್ಷದಲ್ಲಿ ಆರು ತಿಂಗಳು ಮೋಡ ಮುಸುಕಿರುವ, ಉಳಿದಾರು ತಿಂಗಳಿನಲ್ಲಿ ಸೂರ್ಯ ಕಣ್ಣಾ ಮುಚ್ಚಾಲೆಯಾಡುವ ದೇಶಕ್ಕೆ ಬಂದಾಯಿತು. ಮನೆಯಲ್ಲಿ ಬಾಲ್ಕನಿಯಲ್ಲಿ ಪಾಟಿನಲ್ಲಿ, ಮಣ್ಣಿಗೆ ದುಡ್ಡು ಕೊಟ್ಟು ಗಿಡಗಳನ್ನು ಹಾಕಿ ಸಂತೋಷ ಪಡುವುದು ಆಯಿತು. ಬಾಲ್ಕನಿ ಇದ್ದಾಗ ಚಿಕ್ಕ ಗಾರ್ಡನ್ ಇದ್ದರೆ ಸಾಕಾಗುವಷ್ಟು ಬೀಜಗಳನ್ನು ಸಂಗ್ರಹಿಸಿದರೆ, ಪುಟ್ಟ ಗಾರ್ಡನ್ ಇರುವ ಮನೆಗೆ ಬಂದ ಮೇಲೆ, ಒಂದೆರಡು ಎಕರೆ ಗದ್ದೆಗೆ ಆಗುವಷ್ಟು ಬೀಜ ಸಂಗ್ರಹ. ಪಾಟ್ ಖಾಲಿಯಿದೆಯೆಂದು ಮಣ್ಣು ಕೊಳ್ಳುವುದು, ಮಣ್ಣು ಉಳಿದಿದೆಯೆಂದು ಪಾಟ್ ಕೊಳ್ಳುವುದು.
ಊರಿನಲ್ಲಿ ಎಲ್ಲೇ ಉದುರಿದರೂ ಕೆಲವೇ ದಿನಗಳಲ್ಲಿ ದೊಡ್ಡದಾಗುವ ಗಿಡಗಳು ಇಲ್ಲಿ ಶತಪ್ರಯತ್ನ ಪಟ್ಟರೂ ಎರಡು ಮೂರು ತಿಂಗಳಾಗದೆ ಮೊಳಕೆ ಒಡೆಯುವ ಸೂಚನೆಯನ್ನೂ ಕೊಡುವುದಿಲ್ಲ. ಆದರೂ ಪ್ರಯತ್ನ ಬಿಡಲಾರೆ. ಪ್ರತಿ ವರ್ಷದಂತೆ ಈ ವರ್ಷವೂ ಹಿತ್ತಲಿನಲ್ಲಿ ಟೆರೇಸ್ ತುಂಬಾ ಪಾಟ್ ಇಟ್ಟು , ಕೊಂಡ ಮಣ್ಣು ಎಷ್ಟು, ದರವೆಷ್ಟು ಕೇಳಬೇಡಿ. ಬೇರೆ ಏನಕ್ಕಾದರೂ ದುಡ್ಡಿಲ್ಲ ಎಂದು ಮಕ್ಕಳೆದುರು ಹೇಳಿದರೆ, “ಹೌದು ನೀನು ಎಲ್ಲವನ್ನೂ ಮಣ್ಣಿಗೆ ಹಾಕುತ್ತೀಯಲ್ಲ ” ಎಂದು ತಮಾಷೆ ಮಾಡುವಷ್ಟು ಮಣ್ಣು ಕೊಂಡು, ಸಹಜೀವನ ಮಾಡಿ ಎಂದು ಒಂದೇ ಪಾಟಿನಲ್ಲಿ ೨-೩ ತರದ ಬೀಜಗಳನ್ನು ನೆಟ್ಟು, ಇದ್ದುದರಲ್ಲೇ ಜಾಗ ಮಾಡಿ, ದೊಡ್ಡ ಬೆಳೆಯುವ ಜಾತಿಯ ಗಿಡಗಳಿಗೆ ಸ್ವಲ್ಪ ಜಾಸ್ತಿ ಜಾಗ ಕೊಟ್ಟು, ಚಿಕ್ಕವಕ್ಕೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಹೇಳಿ… ಎರಡು ತಿಂಗಳ ನಂತರ ಹಿತ್ತಲು ಹಸಿರಾಗಿ ಕಾಣುತ್ತಿದೆ. ದನಕರುಗಳಿಲ್ಲ. ಆದರೆ ದಿನವಿಡೀ ಚೀವ್ ಚೀವ್ ಎನ್ನುವ ಬೇರೆ ಬೇರೆ ಜಾತಿಯ ಪಕ್ಷಿಗಳಿದ್ದಾವೆ. ಕೀಟಗಳಿದ್ದಾವೆ. ಈ ಸಂತೋಷ ಕೂಡ ಸೀಮಿತ. ಅಕ್ಟೋಬರ್ ಹೊತ್ತಿಗೆ ಪ್ರತಿ ಗಿಡವೂ ಸಾಯಬೇಕು. ಪ್ರತಿ ಮರದ ಎಲೆಗಳೂ ಉದುರಬೇಕು. ಮರುವರ್ಷ ಪುನಃ ಇದೆ ಸರ್ಕಸ್. ಪುನಃ ಮಣ್ಣು ಕೊಳ್ಳುವುದು. ಬೀಜ ಬಿತ್ತುವುದು. ಮೊಳಕೆ ಬರುವುದನ್ನು ಕಾಯುವುದು. ಗಾಳಿಯಲ್ಲಿ ಜಾಜಿ ಮಲ್ಲಿಗೆಯ ಘಮವಿಲ್ಲ. ಮಲೆನಾಡಿನ ಸಿಹಿಯಿಲ್ಲ. ಆದರೂ ಹಸಿರು ಮರ ಗಿಡಗಳು ಪರಿಚಯದ ನಗೆ ಬೀರುತ್ತವೆ. ಕೊಂಬೆ ಎಲೆಗಳನ್ನು ಅಲ್ಲಾಡಿಸಿ ಕರೆಯುತ್ತವೆ. ತಬ್ಬಿಕೊಂಡಾಗ ಅದೇ ಭಾವನೆ… ಅದೇ ಆತ್ಮೀಯತೆ … ಅಲ್ಲಿದ್ದಿದ್ದೂ ನಾನೇ… ಇಲ್ಲಿರುವುದೂ ನಾನೇ ಎನ್ನುತ್ತವೆ. ಕಡಗೋಡಿನ ನೆನಪುಗಳಲ್ಲಿ ಕಣ್ಣು ಒದ್ದೆಯಾಗುತ್ತದೆ.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020