ಜನನದಾಚೆಗೆ ಅರಿಯೆ
ಮರಣದಾಚೆಗೆ ಅರಿಯೆ
ಜನನ ಮರಣದ ನಡುವೆ
ಅರಿತರೂ ಅರಿಯೆ !
ಅರಿವಿನಾ ಮರೆವೇಕೆ ?
ಸರಿದುದೇತಕೆ ದೂರ ?
ಏನಿದರ ಗೌಪ್ಯ ಕಾಣ್
ಜಾಣಮೂರ್ಖ//
ಇದೆಂತಹಾ ವಿಚಿತ್ರವಾದ ಬದುಕೆಂದರೆ ಜನನಕ್ಕೆ ಮುನ್ನ ನಾವೇನಾಗಿದ್ದೆವು ಎಂದು ಯಾರಿಗೂ ತಿಳಿಯದು. ಮರಣದ ನಂತರ ಏನಾಗುತ್ತೇವೆ ಎಂದು ಅದೂ ಸಹ ಯಾರಿಗೂ ತಿಳಿಯದು. ಈ ಜನನ ಮರಣದ ನಡುವಿನ ಈ ನಾಟಕವಿದೆಯಲ್ಲಾ ! ಇದು ಬಹಳ ವಿಚಿತ್ರ ಘಟ್ಟ ! ಇಲ್ಲಿ ತಿಳಿದಿದ್ದರೂ ತಿಳಿಯದವರಂತೆ ವರ್ತಿಸುತ್ತೇವೆ. ಏಕಿಂತಹಾ ಅರಿವಿನ ಮರೆವು ? ಅರಿವು ಸರಿಯಿತೇತಕೆ ದೂರ ? ತಾನು ಮಾಡುತ್ತಿರುವುದು ತಪ್ಪೆಂದು ತಿಳಿದಿದ್ದರೂ ಅದೇ ತಪ್ಪನ್ನು ಮಾಡುವ ಅಜ್ಞಾನವಾದರೂ ಏಕೆ ? ಏಕಿಂತಹಾ ಅಜ್ಞಾನ ? ಇದು ಬಹಳ ಗೌಪ್ಯ. ಕಾರಣವೇನೆಂದು ಎಷ್ಟು ಯೋಚಿಸಿದರೂ ಯಾರಿಗೂ ತಿಳಿಯದಿದು. ಇದರ ಗೌಪ್ಯತೆಯನ್ನರಿತವನು ಜೀವನ್ಮುಕ್ತನೇ ಸರಿ. ಸಾಧಕರಿಂದ ಮಾತ್ರ ಈ ಕಾರ್ಯಸಾಧನೆ ಸಾಧ್ಯ. ಏನಂತೀರಿ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021