ಕೊನೆಗೆ, ಅದರ ಅದೃಷ್ಟವೇ ಇಷ್ಟು. ನಮಗೆ ಆಗಿದ್ದು ಮಾಡಿಯಾಗಿದೆ. ಇನ್ನು ದೈವನಿಮಿತ್ತ ಎಂದುಕೊಂಡು ಮನೆಯೊಳಗೇ ಹೋಗ ಹೊರಟರೆ, ತಾನೇ ಬಂದು ಆ ಹಕ್ಕಿ ಗೂಡಿನ ಮೇಲೆ ಕೂರುವುದೇ?
ನಮ್ಮ ಸಂತೋಷ ಹೇಳತೀರದು. ಪುನಃ ಒಂದಷ್ಟು ಹಣ್ಣು ತಿನ್ನಿಸಿ, ಇನ್ನೇನು ಮಾಡುವುದು ? ಮನೆಯೊಳಗೇ ಕರೆದೊಯ್ಯುವುದೇ? ಹೊರ ಬಿಡುವುದೇ? ಗೊತ್ತಾಗಲಿಲ್ಲ. ಅದನ್ನು ಕೈ ಮೇಲೆ ಫ್ರೀ ಆಗಿ ಕೂರಿಸಿಕೊಂಡು “ನಿನ್ನಿಷ್ಟದಂತೆ ಮಾಡು. ಇರುವುದಾದರೆ ಇರು. ಹೋಗುವುದಾದರೆ ಹೋಗು” ಎಂದು ಹೇಳಿದಾಗ ಅದು ಮುಖ ನೋಡುವುದು. ಮರ ನೋಡುವುದು. ಮುಖ ನೋಡುವುದು ಮರ ನೋಡುವುದು… ಸ್ವಲ್ಪ ಹೊತ್ತಿನ ನಂತರ ಹಾರಿ ಪುನಃ ಮರದ ಮೇಲೆ ಹೋಯಿತು.
ನಾವು ಮನೆಯೊಳಗೇ ಹೋಗಿ ಸಂತೃಪ್ತಿಯಿಂದಿದ್ದೆವು.
ರಾತ್ರಿ ೧೦ ರ ಸುಮಾರಿಗೆ ಅದೆಂತಹ ಗಾಳಿ, ಮಳೆ. ಕಿಟಕಿಯಿಂದ ನೋಡಿದರೆ ಗಿಡಮರಗಳೆಲ್ಲಾ ಇನ್ನೇನು ಮಲಗಿಯೇ ಬಿಡುತ್ತವೆ ಎಂಬಷ್ಟು ವಾಲಿ ತೇಲುತ್ತಿವೆ. ನಮಗೆ ನಮ್ಮ ಹಕ್ಕಿಯ ಚಿಂತೆ. ಅದಕ್ಕೆ ಗಟ್ಟಿಯಾಗಿ ಕುಳಿತುಕೊಳ್ಳಲು ಬರುತ್ತದೆಯೇ? ಇಷ್ಟು ದಿನ ಬೆಚ್ಚಗೆ ಮನೆಯ ಒಳಗೆ ಇತ್ತು. ಹೊರಗೆ ಮರದ ಮೇಲೆ ಹೆದರಿಕೆ ಆಗಿರಬಹುದೇ? ಗಾಳಿಗೆ ಕೆಳಗೆ ಬಿದ್ದಿರಬಹುದೇ? ಮನದಲ್ಲಿ ನೂರೆಂಟು ಯೋಚನೆಗಳು. ದೇವರೇ ಕಾಪಾಡು ಎಂದು ಅದರ ರಕ್ಷಣೆಯನ್ನು ದೇವರಿಗೆ ಅರ್ಪಿಸಿ ನಿದ್ದೆ ಮಾಡಲು ಪ್ರಯತ್ನಿಸಿದರೆ ಅದರದ್ದೇ ಚಿಂತೆ.
ಬೆಳಿಗ್ಗೆ ಎದ್ದು ಹೊರಬಂದು ಎಲ್ಲಾದರೂ ಕಾಣಬಹುದೇ ಎಂದು ಹುಡುಕಿದರೆ, ಮನೆಯ ಹಿತ್ತಲಿನಲ್ಲಿ ಇದ್ದ ದೊಡ್ಡ ಪೊದೆಯೊಂದರ ಪಕ್ಕದಿಂದ ಮಿಯಾ ಕೂಗುವುದು ಕೇಳುತ್ತಿತ್ತು. ಹತ್ತಿರ ಹೋಗಿ ಕರೆದಾಗ ಹೊರಬಂದಿತು. ಅದರ ಕೊಕ್ಕಿನಲ್ಲಿ ಸಿಂಬಳದ ಹುಳ ಅಂಟಿಕೊಂಡಿತ್ತು. ಕೊಕ್ಕು ಬಿಡಿಸದಂತೆ ಆಗಿತ್ತು. ನಮ್ಮ ಕೈಮೇಲೆ ಬಂದ ಮಿಯಾಳನ್ನು ಮನೆಯೊಳಗೇ ಕರೆತಂದು ಪೇಪರಿನಲ್ಲಿ ಕೊಕ್ಕನ್ನು ಕ್ಲೀನ್ ಮಾಡಿದರೆ, ಬೈಗುಳವೋ ಬೈಗುಳ. ರಾತ್ರಿ ಎಲ್ಲಾ ಏನಾಯಿತು ಎಂದು ವರದಿ ಮಾಡುತ್ತಿತ್ತೋ ಏನೋ.
ಪುನಃ ಹೊರಗೆ ಕರೆದುಕೊಂಡು ಹೋಗಿ ಬಿಟ್ಟೆವು. ಆ ದಿನದಿಂದ ಪ್ರತಿ ೧೦-೧೫ ನಿಮಿಷಕ್ಕೊಮ್ಮೆ ಹಾರಿ ಬಂದು ಹಿತ್ತಲಿನಲ್ಲಿ ಇತ್ತ ಚೇರಿನ ಮೇಲೆ ಕುಳಿತು ಹಣ್ಣು ಕೇಳುವುದು.
ತಿಂದುಕೊಂಡು ಪುನಃ ಮರದ ಮೇಲೆ ಹಾರಿ ಹೋಗುವುದು. ಬೆಳಿಗ್ಗೆ ಎದ್ದ ಕೂಡಲೇ ಹೊರಗೆ ಹೋಗಿ “ಬಾ” ಎಂದು ಕರೆದಾಗ ಬಂದು ಹಕ್ಕಿ ಗೂಡಿನ ಮೇಲೋ, ಅಥವಾ ತಲೆಯ ಮೇಲೋ ಕುಳಿತು ಹಣ್ಣು ತಿಂದು ಹಾರಿ ಹೋಗುವುದು. ಇದೆ ದಿನಚರಿ ಅಭ್ಯಾಸವಾಯಿತು. ರಾತ್ರಿ ೯ ಗಂಟೆಯ ಸುಮಾರಿಗೆ ಕೊನೆಯ ಊಟ.
ಮರ ಕಡಿಯುವವರು ಮನೆಯ ಹಿಂದಿರುವ ಮರಗಳನ್ನು ತುಂಡರಿಸುತ್ತಿದ್ದಾಗ, ಅದು ಪುನಃ ಮನೆಯೊಳಗೇ ಬಂದು ಡೈನಿಂಗ್ ಟೇಬಲ್ ಅಡಿಯಲ್ಲಿ ಅಡಗಿ ಕುಳಿತುಕೊಂಡಿದ್ದು ನೋಡಿ, ಇನ್ನೂ ಅದಕ್ಕೆ ಮನೆಯೊಳಗೇ ರಕ್ಷಣೆಯ ಭಾವನೆ ಇದೆ ಎಂಬುದು ಗೊತ್ತಾಗಿತ್ತು.
೩೦ ನೇ ದಿನ ಮಗಳ ಸ್ಕೂಲಿನಲ್ಲಿ ಏನೋ ಪ್ರೋಗ್ರಾಮ್ ಇದ್ದುದರಿಂದ ಮದ್ಯಾಹ್ನ ಇಡೀ ನಾವು ಹೊರಗೆ ಹೋಗಿದ್ದೆವು. ಅಂದು ರಾತ್ರಿ ಎಂದಿನಂತೆ ೯ ಗಂಟೆಗೆ ಅದು ಬರಲೇ ಇಲ್ಲ. ಮರುದಿನ ಬೆಳಿಗ್ಗೆ ಮನೆಯವರು ಮಾತ್ರ ಎದ್ದಿದ್ದರು. ಅದು ಎಂದಿನಂತೆ ಬಂದು, ಕೈಯಿಂದ ಹಣ್ಣು ತಿನ್ನುವಾಗ ದಿನದಂತೆ ಮಾತನಾಡಲಿಲ್ಲವಂತೆ. ಸುಮ್ಮನೆ ಕುಳಿತು ಸ್ವಲ್ಪ ಹೊತ್ತು ಆಚೀಚೆ ನೋಡುತ್ತಿತ್ತಂತೆ. ದಿನಕ್ಕಿಂತ ಹೆಚ್ಚು ಹೊತ್ತು ಕುಳಿತಿದ್ದು ಪುನಃ ಪುನಃ ಮನೆಯ ಒಳಗೆ ನೋಡುತ್ತಿತ್ತಂತೆ. ಆಮೇಲೆ ಹಾರಿ ಹೋಗಿದ್ದು ಪುನಃ ಮನೆಯ ಹತ್ತಿರ ಸುಳಿಯಲಿಲ್ಲ. ಬೆಳಿಗ್ಗೆ ಎದ್ದು ಹಣ್ಣು ಹಿಡಿದುಕೊಂಡು ಬಾ ಅಂದರೆ ಬರಲಿಲ್ಲ. ಅದು ಹೊರಗಿನ ಪ್ರಪಂಚದಲ್ಲಿ ಲೀನವಾಗಿತ್ತು. ಅದರ ಕೂಗಿನ ಶಬ್ಧ ಗೊತ್ತಿದ್ದ ನಮಗೆ ಅದು ಕೂಗುವುದು ಆಗಾಗ ಕೇಳಿಸುತ್ತಿತ್ತು. ಆದರೆ ಪುನಃ ನಮ್ಮ ಹತ್ತಿರ ಬರಲಿಲ್ಲ.
೩೦ ದಿನಗಳ ಒಡನಾಟ ನಮಗೆ ಅಪೂರ್ವವಾದ ಅನುಭವ ನೀಡಿತ್ತು. ಅದು ನಮ್ಮಲ್ಲಿ ಒಂದು ಎಂಬ ಭಾವನೆ. ಮನೆಯಲ್ಲಿ ಮಕ್ಕಳಿದ್ದಾಗ ಹೇಗೋ ಹಾಗೆ ಅದು ಎಷ್ಟು ಗಲೀಜು ಮಾಡಿದರೂ ಅದು ನಮ್ಮದು ಎಂಬ ಭಾವನೆ. ಅದು ಹೊರಜಗತ್ತಿನಲ್ಲಿ ಹೇಗೆ ಹೊಂದಿಕೊಂಡೀತು ಎಂಬ ಕಾಳಜಿ. ಅದರ ನಂಬಿಕೆ ಪ್ರೀತಿ ನಮ್ಮಲ್ಲಿ ಒಂದು ರೀತಿಯ ವಿನೀತ ಭಾವನೆಯನ್ನು ತರುತ್ತಿತ್ತು. ಅದರ ಜೀವನಕ್ಕೆ ಸಹಾಯ ಮಾಡಲು ದೇವರು ನಮ್ಮನ್ನು ಆರಿಸಿದ್ದ ಎನ್ನಿಸುತ್ತಿತ್ತು.
ಈ ಘಟನೆ ನೆಡೆದು ಸುಮಾರು ಒಂದು ವರ್ಷವಾಗಿದ್ದಿರಬಹುದು. ಒಂದು ದಿನ ಕಾರಿನಲ್ಲಿ ಬರುತ್ತಿರುವಾಗ, ಅದೇ ಜಾತಿಯ, ಅದೇ ಬಣ್ಣದ ಹಕ್ಕಿಯೊಂದು ಅದ್ಯಾವ ಕ್ಷಣವೋ ರಸ್ತೆಗೆ ತೀರಾ ಹತ್ತಿರದಲ್ಲಿ ಹಾರಿ ನಮ್ಮ ಕಾರಿಗೆ ತಾಗಿ ಬಿದ್ದಿತ್ತು. ಕಾರು ನಿಲ್ಲಿಸಿ, ಅದರ ಬಳಿ ಹೋದರೆ, ಪ್ರಾಣ ಪಕ್ಷಿ ಆಗಲೇ ಹಾರಿ ಹೋಗಿತ್ತು. ಒಂದೆಡೆ ಸಂಕಟ. ಇನ್ನೊಂದೆಡೆ, ಜೀವ ರಕ್ಷಿಸಿ ಪೋಷಿಸಲು ಅವಕಾಶ ಕೊಡುವವನೂ ಅವನೇ, ಕೊನೆಯುಸಿರೆಳೆಯುವಂತೆ ಮಾಡುವ ಸ್ಥಿತಿ ತರುವವನೂ ಅವನೇ. ಅವನ ಆತ ಬಲ್ಲವರ್ಯಾರು ಎಂಬ ವೈರಾಗ್ಯ. ೩೦ ದಿನಗಳು ಪೋಷಿಸಲು ಅದೆಷ್ಟು ಕಷ್ಟಪಟ್ಟಿದ್ದೆವು. ಅದೆಷ್ಟು ಕೆಲಸ ಮಾಡಿದ್ದೆವು. ಆದರೆ ಅಂದು ಒಂದೇ ಒಂದು ಕೆಟ್ಟ ಕ್ಷಣ. ಒಂದು ಸೆಕೆಂಡ್ ಆಚೀಚೆಯಾಗಿದ್ದರೂ ನಮ್ಮ ಕಾರಿನಡಿ ಆ ಇನ್ನೊಂದು ಪಕ್ಷಿ ಬರುತ್ತಿರಲಿಲ್ಲ. ಒಂದು ವರ್ಷದ ಹಿಂದೆ ೩೦ ದಿನಗಳು ನಿಸ್ವಾರ್ಥದಿಂದ ಮಾಡಿದ್ದ ಕಾರ್ಯ ಅಂದು ನೆಡೆದ ಕೆಟ್ಟ ಘಟನೆಯಲ್ಲೂ ಮನಸ್ಥಿತಿಯನ್ನು ಗಟ್ಟಿಯಾಗಿ ಇರುವಂತೆ ಮಾಡಿತ್ತು. ಜೊತೆಗೆ ಜೀವ ರಕ್ಷಿಸಲು ೩೦ ದಿನ ತೆಗೆಯಲು ಒಂದು ಕ್ಷಣ ಎಂಬ ಪಾಠವನ್ನೂ ಕಲಿಸಿತ್ತು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020