ಹಿತವಾದೊಡೇಂ ಬೇವು
ಕಹಿಯು ತಾನೆಲ್ಲರಿಗೆ
ಚಾಗಿಯಾದರು ಒಡೆಯ
ಖಳನವೊಲು ತಾನೆ!
ಒಳಿತಗೈದರು ತಪ್ಪ
ನರಸುವೀ ಜಗದೊಳಗೆ
ಒಪ್ಪದಿಂದಲೆ ಬಾಳೊ
ಜಾಣಮೂರ್ಖ//
ಬೇವು ಅದೆಷ್ಟೋ ರೋಗಗಳಿಗೆ ಸಿದ್ಧೌಷಧವಾದರೂ ಅದನ್ನು ಯಾರೂ ತಿನ್ನರು, ಇಷ್ಟಪಡರು. ಹಾಗೆಯೇ ಮನೆಯ ಅಥವಾ ಒಂದು ಸಂಸ್ಥೆಯ ಒಡೆಯನ ಸ್ಥಿತಿ. ತಾನೆಷ್ಟೇ ತ್ಯಾಗಿಯಾದರೂ ನೋಡುಗರ ದೃಷ್ಟಿಯಲ್ಲಿ ಅವನೋರ್ವ ಖಳನಾಯಕನಂತೆಯೇ ಬಿಂಬಿತನಾಗುತ್ತಾನೆ. ಅವನು ಒಳಿತನ್ನೇ ಗೈದರೂ ಜನರು ತಪ್ಪನ್ನೇ ಹುಡುಕುತ್ತಾರೆ. ಗೈದ ಒಳಿತು ಗೌಣವಾಗಿಬಿಡುತ್ತದೆ. ಏಕೆಂದರೆ ಒಬ್ಬನ ತಪ್ಪು ಹುಡುಕುವುದೇ ಉದ್ದೇಶವಾದಾಗ ಶ್ರೀರಾಮನಲ್ಲೂ ತಪ್ಪು ಹುಡುಕಬಹುದಲ್ಲವೇ ? ಒಳ್ಳೆಯದನ್ನು ಹುಡುಕುತ್ತಾ ಹೋದಂತೆ ಮನಸ್ಸು ಪ್ರಸನ್ನವಾಗುತ್ತದೆ. ತಾನೂ ಸಂತಸದಿಂದಿದ್ದು ಜಗತ್ತನ್ನೂ ಸಂತಸದಿಂದಿಡುತ್ತದೆ. ಆದರೆ ತಪ್ಪನ್ನೇ ಹುಡುಕುವ ಜಾಯಮಾನವು ತಾನೂ ತಪ್ಪನ್ನು ಮಾಡಿ ಅದನ್ನು ಮುಚ್ಚಿಹಾಕಲು ಇತರರ ತಪ್ಪುಗಳನ್ನು ಎತ್ತೆಣಿಸಲು ಹಾತೊರೆಯುತ್ತದೆ. ತಸ್ಕರಸ್ಯಾನೃತಂ ಬಲಂ ಎಂಬ ಮಾತು ಅದೆಷ್ಟು ಸತ್ಯ ಅಲ್ಲವೇ ? ಜಗತ್ತು ಹೇಗೇ ಇರಲಿ. ಓ, ಗೆಳೆಯಾ ನಿನ್ನ ಹಾದಿ ಸರಿಯಿರಲಿ. ದೇವರು ಒಳಿತಿನ ಹಾದಿಯಲ್ಲಿರುವವರನ್ನು ಎಂದಿಗೂ ಕೈಬಿಡನು. ಇದೇ ಸತ್ಯವು. ಇದು ಯಾರನ್ನೋ ಉದ್ದೇಶಿಸಿ ಹೇಳುತ್ತಿರುವುದಲ್ಲ ಸ್ನೇಹಿತರೇ ! ತಪ್ಪಾಗಿ ಭಾವಿಸಬೇಡಿ. ಸತ್ಯವು ಎಂದಿದ್ದರೂ ಕಹಿಯೇ !!! ಏನಂತೀರಿ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021