ಹುಟ್ಟಿದಾ ಚಣದಿಂದ
ಚಟ್ಟವೇರುವ ತನಕ
ಮುಗಿಯವಯ್ಯೋ ಕೊರತೆ
ಬಂಧನದ ಬದುಕು !
ಬರಿಸ ಬರಿಸಂಗಳೆ
ದ್ದೋಡಿ ಮುಪ್ಪಡರಲೇಂ ?
ಅನುಭವವದೇನಾಯ್ತೊ
ಜಾಣಮೂರ್ಖ//
ಮೊನ್ನೆ ಊರಿಗೆ ಹೋಗುವಾಗ ಒಂದು ದೃಶ್ಯ ಕಣ್ಣಿಗೆ ಬಿತ್ತು. ಶತವೃದ್ಧನಿರಬಹುದು. ಆದರೂ ಗಟ್ಟಿ ಮಟ್ಟಾಗಿದ್ದ ಅಜ್ಜನನ್ನು ಮನೆಯ ಮುಂದೆ ಕೂರಿಸಿದ್ದಾರೆ. ಕೈಲೊಂದು ಕೋಲಿದೆ. ಸ್ವಲ್ಪ ಧಾನ್ಯವನ್ನು ಒಣಗಲು ಹರಡಿದ್ದಾರೆ. ಅಜ್ಜ ಬಿಸಿಲಲ್ಲೇ ಕುಳಿತಿದ್ದಾರೆ. ನಾನು ತಡೆಯದೆ ಅಜ್ಜಾ ! ನೆರಳಿಗಾದರೂ ನಡೆಯಿರಿ. ಏಕಿಷ್ಟು ಬಿಸಿಲಿನಲ್ಲಿ ಕೂತಿದ್ದೀರಿ ಎಂದೆ.ಅದಕ್ಕೆ ಅವರು – ಹಕ್ಕಿಗಳು ಮುತ್ತಿಕೊಳ್ತಾವೆ. ಮತ್ತೆ ಯಾರಾದರೂ ತಗೊಂಡು ಹೋದರೆ ಏನ್ಮಾಡೋದು ಹೇಳ್ರಿ ? ಎಂದರು. ಅಯ್ಯೋ ಎಂತಹುದಿದು ಮಾಯೆ ಎನಿಸಿತು. ಆಗಲೇ ಮೂಡಿದ್ದು ಈ ಮುಕ್ತಕ. ಹುಟ್ಟಿನಿಂದ ಚಟ್ಟವೇರುವ ತನಕವೂ ಈ ಕೊರತೆಯೆಂಬುದು ಮುಗಿಯುವುದೇ ಇಲ್ಲ. ಬಂಧನದ ಬದುಕು ! ವರ್ಷ ವರ್ಷಂಗಳೇ ಕಳೆದರೂ, ಹಣ್ಣು ಹಣ್ಣು ಮುದುಕರಾದರೂ ವ್ಯಾಮೋಹವು ಮಾತ್ರ ದೂರಾಗುವುದಿಲ್ಲ. ಅಯ್ಯೋ ಭಗವಂತನು ಈ ಸುಂದರವಾದ ಪ್ರಪಂಚಕ್ಕೆ ಸುಂದರವಾದ ಅನುಭವಗಳನ್ನು ಪಡೆದು ಬಾ ಎಂದು ಕಳಿಸಿದ್ದಾನೆ. ಪ್ರಕೃತಿ ಮಾತೆ ಯಾವ ಕೊರತೆಯನ್ನೂ ಮಾಡಿಲ್ಲ ನಮಗೆ. ಸವಿಯುತ್ತಾ ಬದುಕುವವನಿಗೆ ಇಲ್ಲಿನ ಸಾರ ಮುಗಿವುದೇ ಇಲ್ಲ. ಆದರೆ ನಾವು ಮಾತ್ರ ತಾಪತ್ರಯಗಳಲ್ಲೇ ಬದುಕನ್ನು ಕಳೆಯುತ್ತೇವೆ. ನಾವೇ ಕೊರತೆಗಳ ಸೃಷ್ಟಿಕರ್ತರು. ಏನಂತೀರಿ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021