ಚಣದ ತಣಿವಷ್ಟೆ ಬಿಡು
ದಣಿದು ಗಳಿಸಿದ ಫಲದಿ
ತೃಷೆಯಳಿವುದೇಂ ? ಮನವ
ಸಂತೈಸುವೇನು ?!
ಕಣಕಣದೊಳಿದೆ ತಣಿವು
ಕಣ್ಣಿಕಳೆ ಕಣ್ತೆರೆಯೊ
ಕಾಣ್ವುದಲ್ಲಿಯೆ ಸೊಗವು
ಜಾಣಮೂರ್ಖ//
ನಾವೇನೇ ಹಗಲಿರುಳು ದುಡಿದು ಗಳಿಸಿದರೂ ಅದು ಚಣಕಾಲದ ತೃಪ್ತಿ ನೀಡಬಲ್ಲುದಷ್ಟೆ. ಮನಸ್ಸಿನ ತಣಿವು , ಮೋಹ ದಾಹಗಳು ಅಳಿವುವೇನು ? ಚಿರತೃಪ್ತನಾಗಿಹೆಯೇನು ನೀನು? ಒಂದು ಕ್ಷಣ ನಿನ್ನ ಮನಸ್ಸಿಗೆ ಪ್ರಶ್ನೆ ಹಾಕಿಕೊಳ್ಳಯ್ಯ ಗೆಳೆಯ ! ಒಂದು ಕ್ಷಣ ಮನಸ್ಸಿಗೆ ಹಾಕಿಕೊಂಡಿರುವ ಕಣ್ಣಿ ಬಿಚ್ಚಿ ಹೊರಗೆ ಬಾರಯ್ಯ. ಒಳಗಣ್ಣ ತೆರೆಯಯ್ಯಾ ! ಪ್ರಕೃತಿಯ ಕಣಕಣದಲ್ಲೂ ಸುಖವಿದೆ, ಸಂತೋಷವಿದೆ. ನೋಡುವ ಕಣ್ಣು , ಮನಸ್ಸು ಹಾಗೂ ವ್ಯವಧಾನ ಬೇಕಷ್ಟೆ. ಏನಂತೀರಿ!? ಅಂದಹಾಗೆ ಕಣ್ಣಿ ಎಂದರೆ ಗಂಟು ಎಂದರ್ಥ. ಸಾಮಾನ್ಯವಾಗಿ ಕಣ್ಣಿಇಕ್ಕು ಕಣ್ಣಿಹಾಕು ಎಂಬ ಪದವನ್ನು ನಾವು ನಮ್ಮ ಗ್ರಾಮ್ಯಗನ್ನಡದಲ್ಲಿ ಕಾಣುತ್ತೇವೆ. ಹಸುವಿನ ಬಳಿಗೆ ಕರುವನ್ನು ಬಿಡುವಾಗ ಕಣ್ಣಿ ಬಿಚ್ಚು ಅನ್ನೋ ಪದಪ್ರಯೋಗವೂ ಇದೆ. ಇತ್ತೀಚೆಗೆ ಇಂತಹಾ ಪದ ಪ್ರಯೋಗಗಳು ಕಣ್ಮರೆಯಾಗುತ್ತಿವೆ. ಮನದ ಕಣ್ಣಿಗಳಲ್ಲಿಯೇ ಬಂಧಿಗಳಾಗಿರುವ ನಮಗೆ ಗೊತ್ತಿನ ಕಣ್ಣಿಯ ಬಗ್ಗೆ ಗೊತ್ತಾಗುವುದಾದರೂ ಹೇಗೆ ಅಲ್ಲವೇ ಗೆಳೆಯರೇ ?
( ಗೊತ್ತಿನ ಕಣ್ಣಿ ಎಂದರೆ ಕೊಟ್ಟಿಗೆಯಲ್ಲಿ ದನಗಳಿಗೆ ಹಾಕುವ ಗಂಟು)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021