ಸುಖವನರಸುವ ಸಖನೆ
ಸಾಗದಿರು ಬೆಂಬಿಡಿದು
ದುಃಖವದರಂತ್ಯ ಕಾಣ್
ದಾಂಗುಡಿಯದೇಕೆ ?
ಎಡವದಿರು ಅಡಿಗಡಿಗೆ
ಬಿಡು ಓಟವೆಂತ ಬಗೆ
ಅದೆ ಅಂತರಂಗ ಸುಖ
ಜಾಣಮೂರ್ಖ //
ನಮ್ಮದು ಬಹಳ ವಿಚಿತ್ರವೂ, ಕುತೂಹಲಕಾರಿಯೂ ಆದ ಪ್ರವೃತ್ತಿ. ವ್ಯಕ್ತಿಯೋರ್ವನ ಬೋಧನೆಗಳನ್ನು ಗೌರವಿಸುವ ನಾವು ಅದನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೆಬಿದ್ದುಬಿಡುತ್ತೇವೆ. ಆಸೆಯೇ ದುಃಖದ ಮೂಲ ಎಂಬ ಬುದ್ಧನ ತತ್ತ್ವವನ್ನು ಗೌರವಿಸುವ ನಾವು ಆಸೆಯನ್ನು ಬಿಟ್ಟಿದ್ದೇವೆಯೇ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳೋಣ ! ಸುಖವನ್ನರಸುತ್ತ ಮತ್ತದೇ ಓಟ ! ಮತ್ತೆ ದುಃಖ ! ಮತ್ತೆ ಓಟ ! ಸುಖದ ಹುಡುಕಾಟದ ಅಂತ್ಯ ದುಃಖವೇ ಆಗಿರುತ್ತದೆ. ಇದರಲ್ಲಿ ಸಂದೇಹವೇ ಇಲ್ಲ. ಆದರೂ ಅತ್ತ ದಾಂಗುಡಿಯಿಡುತ್ತೇವೆ. ಇದೆಂತಹಾ ಬಗೆ !? ಅಚ್ಚರಿಯೆನಿಸುವುದಿಲ್ಲವೇ ? ಸಿಗದ ಸುಖಕ್ಕಾಗಿ ಅಡಿಗಡಿಗೆ ಎಡವುತ್ತಲೇ ಇದ್ದೇವೆ. ಒಂದುಕ್ಷಣ ಈ ಓಟವನ್ನು ನಿಲ್ಲಿಸು. ಶಾಂತನಾಗು. ಮನದ ಹೊಯ್ದಾಟಕ್ಕೆ ಒಂದು ಪೂರ್ಣವಿರಾಮವಿಟ್ಟು ನೋಡು. ಅದೇ ಅಂತರಂಗ ಸುಖ. ಬೇಕು ಬೇಕೆಂಬ ಬಗೆಯಿಂದ ಇದು ಸಿಗದು. ಸಾಕೆಂಬ ನಿರ್ಲಿಪ್ತ ಭಾವದಲ್ಲಿ ಇದರ ಜಾಡು ಸಿಗುತ್ತದೆ. ಇಂತಹಾ ಭಾವದಿಂದ ಈ ಸತ್ಯ ಕಂಡ ಸಾದು ಸಂತರುಗಳ ಸಮಾಧಾನಕ್ಕೆ ಕಾರಣವೂ ಇದೇ ಆಗಿದೆ. ಒಂದೇ ಬಾರಿ ನಾವು ಈ ಹಂತ ತಲುಪುವುದು ಈ ಲೌಕಿಕ ಜೀವನದಲ್ಲಿ ಕಷ್ಟ. ಅದಕ್ಕೇ ಬೇರೆ ಬೇರೆ ಮಜಲುಗಳಲ್ಲಿ ಸ್ತರಗಳಲ್ಲಿ ಬಿಡುಗಡೆ ಪಡೆದುಕೊಳ್ಳಬೇಕಾದುದು ಅವಶ್ಯಕ , ಅನಿವಾರ್ಯ ಕೂಡ. ಏನಂತೀರಿ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021