Write to us : Contact.kshana@gmail.com

ಬಿರಿದಷ್ಟೂ ಹೊಸ ಚಿಗುರು.

4
(4)

ಶಿವರಾತ್ರಿಗೆ ಶಿವ ಶಿವಾ ಅಂತ ಚಳಿ ಹೋಗೋದು.. ಅಲ್ಲಿಯವರೆಗೆ ಚಳಿ ಕಾಟ ತಪ್ಪಿದ್ದಲ್ಲ ಎದ್ದೇಳಿ  ಎಂದು ಮುದುರಿ ಕುಳಿತಿದ್ದ ನಮ್ಮನ್ನು ನೋಡಿ ಹೇಳಿದ್ದಳು ಅಜ್ಜಿ. ಮುದುರಿ ಕುಳಿತಿದ್ದು ಬರೀ ಚಳಿಗೆ ಮಾತ್ರವಲ್ಲ ಮೈ ಒಡೆದು ಉರಿಯುವುದಕ್ಕೆ ಎಂದು ಹೇಳಲು ಬಾಯಿತೆರೆದವಳ ಕಣ್ಣು ಕೈ ಕಾಲುಗಳ ಮೇಲೆ ಬಿದ್ದು ಮೌನವಾಗಿತ್ತು. ನಮ್ಮ ಮೈ ನಮಗೆ ನೋಡಿಕೊಳ್ಳಲು ರೇಜಿಗೆ ಅನ್ನಿಸುವ ಹಾಗಿತ್ತು. ತಿರುಗಿ ನೋಡಿದರೆ ಅವಳ ಕಾಲಿನ ಹಿಮ್ಮಡಿ ಗದ್ದೆ ಕೊಯ್ಲಿನ ಬಳಿಕ ಬಿರುಕು ಬಿಡುವ ಗದ್ದೆಯ ಹಾಗೆ ಕಾಣಿಸಿ ನಾವೇ ಪರವಾಗಿಲ್ಲ ಪಾಪ ಅನ್ನಿಸಿತು.

ಪುಷ್ಯ ಮಾಸದ ಚಳಿಯೇ ಹಾಗೆ ಪತರಗುಟ್ಟಿಸಿ ಬಿಡುತ್ತದೆ. ಇದೇ ಕಾಲದಲ್ಲಿ ಬರುವ ಅಡಿಕೆ ಕೊಯ್ಲು ಅದಕ್ಕಿಷ್ಟು ಆಜ್ಯ ಸುರಿದುಬಿಡುತ್ತದೆ. ಆ ಚಳಿಗೆ ಮುದುರುವ ದೇಹದ ಚರ್ಮವನ್ನು ಅಡಿಕೆಯ ಚೊಗರು ಇನ್ನಷ್ಟು ಮುದುರುವ ಹಾಗೆ ಮಾಡಿ ಒಣಗಿಸಿ ಬಿಡುತ್ತದೆ. ಮೈಗೂ ಔಷಧಿ ಹೊಡೆದ ಕೊನೆಯ ಬಣ್ಣಕ್ಕೂ ಕಿಂಚಿತ್ತೂ ವ್ಯತ್ಯಾಸವಿಲ್ಲದ ಏಕ ಭಾವ. ಸುಲಿಯುವಾಗಿನ ಚೊಗರು ಆ ಬಿರುಕುಗಳಲ್ಲಿ ಇಂಗಿ ಕಪ್ಪಾಗಿ, ಬಿರುಕು ಇನ್ನಷ್ಟು ಅಗಲವಾಗಿ ಮೈಯೆನ್ನುವುದು ಹಾವಿನ ಪೊರೆಯಂತೆ ಕಾಣಿಸುತ್ತಾ ಚಳಿಗೆ ಹಲ್ಲು ಕಟಕಟಿಸುವ ಹಾಗೆ ಚರ್ಮ ಚುರು ಚುರು ಎನ್ನುತ್ತಿರುತ್ತದೆ. ಹಚ್ಚಿದ ಎಳ್ಳೆಣ್ಣೆ ಬೇಸಿಗೆಯ ಅಕಾಲಿಕ ಮಳೆ ಸುರಿದಂತೆ ಹಚ್ಚಿದ ಕುರುಹೂ ಇಲ್ಲದೆ ಆರಿ ಹೋಗುತ್ತದೆ.  ಮೈ ಮುರಿಯುವ ಕೆಲಸ ಉರಿ ಎರಡೂ ಚಳಿಯಷ್ಟೇ ಸಮೃದ್ಧವಾಗಿ ಆವರಿಸಿಕೊಳ್ಳುವ ಕಾಲವಿದು.

ಚಪ್ಪರದ ಮೇಲೆ ಕುಳಿತು ಬೆಂದ ಅಡಕೆಯ ಹಬೆ ತೆಗೆದುಕೊಳ್ಳುತ್ತಾ, ಚೊಗರಿನ ಸ್ವಾದ ಆಸ್ವಾದಿಸುತ್ತಾ ಎಳೆ ಬಿಸಿಲಿಗೆ ಮೈಯೊಡ್ಡಿ ಕುಳಿತು ಹಿತಾನುಭವ ಅನುಭವಿಸುವಾಗ ಬಿಸಿಲಿನ ಕಾವಿಗೆ ಮತ್ತಷ್ಟು ಉರಿಯುವ ಚರ್ಮವನ್ನು ತಿಕ್ಕಿಕೊಳ್ಳುತ್ತಾ ಬೈದುಕೊಳ್ಳುತ್ತಾ ಇರುವಾಗ ಮರದ ತೊಗಟೆ ಒಡೆಯುವ ಕಾಲ ಇದು  ಮೈ ಚರ್ಮ ಯಾವ ಲೆಕ್ಕ ಹೇಳು ಎನ್ನುತ್ತಿದ್ದರು ಅಡಿಕೆ ಹರಡುತ್ತಿದ್ದ ಅಜ್ಜ.

ದಿಟ್ಟಿಸಿ ನೋಡಿದರೆ ಇಡೀ ಮರದ ತೊಗಟೆಯೂ ನಮ್ಮ ಚರ್ಮದ ಹಾಗೆಯೇ ಬಿರುಕು ಬಿಟ್ಟಿರುವುದು ಕಾಣಿಸುತ್ತಿತ್ತು. ಬಹಳಷ್ಟು ಮರಗಳು ಎಲೆಯೆಲ್ಲಾ ಉದುರಿಸಿಕೊಂಡು ಬೋಳಾಗಿ ಒಂಟಿತನ ಅನುಭವಿಸುತ್ತಿರುವ ಹಾಗೆ ಕಾಣಿಸುತ್ತಿತ್ತು. ತುಸು ದೂರದಲ್ಲಿ ಎತ್ತರಕ್ಕೆ ನಿಂತ ಅಶ್ವತ್ಥ ಮರವಂತೂ ಒಂದೇ ಒಂದೂ ಎಲೆಯೂ ಇಲ್ಲದೇ ತಲೆಯೆತ್ತಿ ನಿಂತ ಗೊಮ್ಮಟನ ನೆನಪಾಗುವ ಹಾಗೆ ಮಾಡುತ್ತಿತ್ತು. ಕೆಳಗೆ ಉದುರಿದ ನಸು ಹಳದಿ ಬಣ್ಣದ ಎಲೆಗಳು ತೊರೆದು ಹೋದ ಅವಶೇಷದ ಹಾಗೆ ಕಾಣಿಸಿ ಒಂದು ಕ್ಷಣ ಅರ್ಥವಾಗದ ವಯಸ್ಸಿನಲ್ಲೂ ಕಿಬ್ಬೊಟ್ಟೆಯಲ್ಲಿ ಸುಳಿಯುವ ಸಂಕಟ.

ಛೆ ಎಂದು ಲೊಚಗುಟ್ಟುವ ಹೊತ್ತಿಗೆ ಅಡಿಕೆಯನ್ನು ಹರಡುತ್ತಲೇ ಬೇಜಾರು ಯಾಕೆ ಎಲ್ಲ ಕಳೆದುಕೊಂಡಿದೆ ಅಂತ ನಾವು ಅಂದ್ಕೊತಿವಿ.. ಹೊಸತಿಗಾಗಿ ಕಾಯುತ್ತಿದೆ ಅದು. ಬೋಳಾದರೂ, ತೊಗಟೆ ಬಿರಿದರೂ, ಕಾಂಡ ಸುಕ್ಕುಗಟ್ಟಿದ ಚರ್ಮದ ಹಾಗಾದರೂ ಒಳಗಿನ ಹಸಿತನ ಹಾಗೆ ಉಳಿಸಿಕೊಂಡಿರುತ್ತದೆ. ಯಾವ ಚಳಿ ಗಾಳಿಯೂ ಅದನ್ನು ಒಣಗಿಸಲು ಸಾಧ್ಯವಾಗದ ಹಾಗೆ ಕಾಪಾಡಿಕೊಳ್ಳುತ್ತೆ ಇನ್ನೊಂದೆರೆಡು ತಿಂಗಳಲ್ಲಿ ಮೈತುಂಬಾ ಚಿಗುರು ಅರಳಿಸಿಕೊಂಡು ನಳನಳಿಸುತ್ತೆ. ಬದುಕೂ ಹಾಗೆ ಕಾಯಬೇಕು ಭರವಸೆಯನ್ನು ಕಾಪಿಟ್ಟುಕೊಂಡು ಎಂದು ಹೇಳುತ್ತಾ ಹೇಳುತ್ತಾ ಅವರು ಮೌನಕ್ಕೆ ಜಾರುತ್ತಿದ್ದರೆ ಅದು ಅರ್ಥವಾಗದ ನಾವು ನಮ್ಮ ಚರ್ಮ ಬಿರುಸೋ ಇಲ್ಲಾ ಅದರ ತೊಗಟೆಯೋ ಎಂದು ನೋಡಲು ಓಡುತ್ತಿದ್ದೆವು.

ಮುಟ್ಟಿದರೆ ಒರಟುತನ ಅರಿವಾಗುತ್ತಿತ್ತು. ಬೆಳಗ್ಗೆ ಎದ್ದು ಹೂ ಕೊಯ್ಯಲು ಹೋಗುವಾಗ ಮುದುರಿ ಮುರುಟಿ ಹೋಗಿರುತ್ತಿದ್ದ ಎಲೆಗಳು, ಕಡಿಮೆಯಾದ ಹೂಗಳು ಚಳಿಯ ತೀವ್ರತೆಯನ್ನು ಅಂದಾಜಿಸುವ ಹಾಗೆ ಮಾಡುತ್ತಿದ್ದವು. ಒಳಗೆ ಎರಡೋ ಮೂರೋ ಕಂಬಳಿ ಹೊದ್ದು ಮಲಗುತ್ತಿದ್ದ ನಾವೇ ಈ ಪರಿ ಬೈದರೆ ಇನ್ನು ಇವುಗಳು ಹೇಗೆ ಬೈಯಬೇಕು ಎನ್ನುವ ಕಲ್ಪನೆಯೊಂದು ಸುಳಿದು ನಗು ವಿಷಾದ ಎರಡೂ ಆವರಿಸಿಕೊಳ್ಳುತ್ತಿತ್ತು. ಹೀಗೆ ಕಳಚಿಕೊಂಡು ಧೈರ್ಯವಾಗಿ ನಿಲ್ಲಲು ನಮಗೆ ಸಾಧ್ಯವೇ ಅನ್ನಿಸುತಿತ್ತು. ಮರುಕ್ಷಣ ಮೈಯ ಉರಿ ಅದನ್ನೆಲ್ಲಾ ಮರೆಸಿ ಮನೆಗೆ ಓಡುವ ಹಾಗೆ ಮಾಡುತ್ತಿತ್ತು. ಈ ಮರೆವು ಅದೆಂಥಾ ವರ ಎಂದು ಈಗ ಅರಿವಾಗುತ್ತದೆ.

ಆಕಾಶ ಭೂಮಿ ಒಂದಾಗಿಸುವ ಹಾಗೆ ಸುರಿಯುವ ಇಬ್ಬನಿ, ಸ್ವಲ್ಪವೂ ಕಾಣಿಸದ ಹಾಗೆ ಆವರಿಸುವ ಕಾವಳ, ಆ ಪರದೆ ಸರಿಸಿ ಬರಲು ತಿಣುಕಾಡುವ ಸೂರ್ಯ ರಶ್ಮಿ, ಅಂಗಳದ ತುಂಬಾ ಚಿಗುರಿರುವ ಗರಿಕೆಯ ಕುಡಿಯಲ್ಲಿ, ಮರದ ಎಲೆಗಳ ತುದಿಯಲ್ಲಿ ಶೇಖರವಾಗಿ ಬಿಂದುವಾಗಿ ನಿಂತ ಮುತ್ತಹನಿ, ರಂಗೋಲಿ ಹಾಕಿದಂತೆ ಅಲ್ಲಲ್ಲಿ ನೇಯ್ದ  ಜೇಡರ ಬಲೆಗಳು, ಇಲ್ಲೆಲ್ಲೋ ಸಮೀಪದಲ್ಲೇ ಕೂಗುವ ಹಾಗೆ ಅನ್ನಿಸಿದರೂ ಕಾಣದ ನವಿಲುಗಳು, ಏಕಾಂಗಿಯಾಗಿ ನಿಂತಂತೆ ಕಾಣಿಸುವ ಅಲ್ಲೊಂದು ಇಲ್ಲೊಂದು ತೆಂಗಿನ ಮರಗಳು. ಇಡೀ ವಾತಾವರಣಕ್ಕೆ ಥಂಡಿ ಹಿಡಿದು, ಮಂಕಾಗಿ ಏನೂ ಬೇಡಾ ಅನ್ನಿಸೋ ಹಾಗಿರುವ, ಬೆಚ್ಚನೆಯ ಸ್ಪರ್ಶಕ್ಕಾಗಿ ಹಾತೊರೆಯುವ ಭಾವ. ತುಸು ಬೆಳಕು ಹರಿದು, ರಶ್ಮಿ ಇಳಿದು ಬೆಚ್ಚಗಾಗುವ ಹೊತ್ತಿಗೆ ಆಗತಾನೆ ತಲೆಗೆ ಮಿಂದು ಬಂದ ಹಾಗೆ ಕಾಣುವ ಸೋನೆಯಲ್ಲಿ ತೊಯ್ದ ಧಾನ್ಯದ ಗೊಂಚಲು. ಕಿವಿಗೆ ಕೇಳಿಸುವ ದೇವಸ್ಥಾನದ ಗಂಟೆ.

ಅಷ್ಟು ಚಳಿಯಲ್ಲೂ ಹೊದ್ದು ಮಲಗಬೇಕು ಎನ್ನಿಸುವ ವಾತಾವರಣದಲ್ಲೂ ಎಂತಾ ಚಟುವಟಿಕೆ ಅನ್ನಿಸುತಿತ್ತು. ಹಾಳಾದ್ದು ಈ ಅಡಿಕೆ ಕೊಯ್ಲು ಈ ಚಳಿಯಲ್ಲಿಯೇ ಬರಬೇಕಾ ಎಂದು ಕೋಪ ಬರುತ್ತಿತ್ತು. ನೋಡಿದರೆ ನಮ್ಮನ್ನು ಬಿಟ್ಟು ಇನ್ಯಾರ ಮುಖದಲ್ಲೂ ಆ ಭಾವ ಕಾಣಿಸುತ್ತಿರಲಿಲ್ಲ. ಆಶಾಭಾವ ಪ್ರತಿಫಲಿಸುತ್ತಿರುತ್ತಿತ್ತು. ಮುದುರಿದ, ಬಿರುಕು ಬಿಟ್ಟ ಮರದ ತೊಗಟೆಯಲ್ಲೂ ಯಾರಿಗೋ ಕಾಯುವ ಸಂಭ್ರಮ. ಹಾಗೆ ಮೈ ಮುರುಟಿಸಿ, ನೋವ ಅನುಭವಿಸಿ, ಕುಗ್ಗಿಸಿ, ಉಸಿರುಬಿಗಿಹಿಡಿದು ಕಾದು ಬೆಂಡಾಗಿ ಹಿಗ್ಗಿದಾಗಲೇ ಆ ಕೊಂಬೆಯಲ್ಲಿ ಹೊಸ ಚಿಗುರು ಮೂಡುವುದು. ಪ್ರಸವವೇದನೆ ಬರೀ ಪ್ರಾಣಿಗಳಿಗೆ ಮಾತ್ರವಲ್ಲ ಮರಗಳಿಗೂ ಅನ್ನೋಳು ಅಜ್ಜಿ. ಹೊಸ ಚಿಗುರಿಗಾಗಿ ಪಡುವುದು ವೇದನೆ ಅನ್ನಿಸೋಲ್ಲ ಅದೊಂದು ಸೃಷ್ಟಿಸುವ ಪ್ರಕ್ರಿಯೆ ಅಂದುಕೊಂಡಾಗ ಪ್ರತಿಯೊಂದನ್ನೂ ಅನುಭವಿಸುವ ಶಕ್ತಿ ಬರುತ್ತೆ ಅನ್ನುತ್ತಿದ್ದರೆ ಶಾಲೆಯ ಮೆಟ್ಟಿಲೂ ಹತ್ತದ ಅವಳ ಬಗ್ಗೆ ಈ ಪ್ರಕೃತಿಯಷ್ಟೇ ಬೆರಗು ಮೂಡುತಿತ್ತು.

ಇಂದಿನಷ್ಟು ಆಧುನಿಕರಾಗದ, ವೈಜ್ಞಾನಿಕವಾಗಿ ಪ್ರಗತಿಹೊಂದದ, ಇಷ್ಟೊಂದು ಆವಿಷ್ಕಾರಗಳಿಲ್ಲದ ಅವರ ಲೆಕ್ಕಾಚಾರ ಮಾತ್ರ ಎಂದೂ ತಪ್ಪುತ್ತಿರಲಿಲ್ಲ. ಋತು, ಕಾಲಮಾನಕ್ಕನುಗುಣವಾಗಿ ಬದುಕುತ್ತಿದ್ದ, ಕರಾರುವಕ್ಕಾಗಿ ಹೀಗೆ ಎಂದು ಹೇಳುತ್ತಿದ್ದ ಅವರ ಬುದ್ಧಿವಂತಿಕೆ, ತಪ್ಪದ ಲೆಕ್ಕಾಚಾರ ಅಚ್ಚರಿ ಹುಟ್ಟಿಸುತ್ತದೆ. ಪ್ರಕೃತಿಯನ್ನು ಗಮನಿಸಿ ಅದರ ಜೊತೆ ಬೆರೆತು ಮಾಡುವ ಲೆಕ್ಕಾಚಾರಗಳೇ ಹೀಗೇನೋ. ಪ್ರಕೃತಿಗೆ ಮನುಷ್ಯರ ಹಾಗೆ ನಂಬಿಸಿ ಮೋಸ ಮಾಡುವ, ಬಳಸಿಕೊಳ್ಳುವ ಅನಿವಾರ್ಯತೆ ಇಲ್ಲದಿರುವುದರಿಂದ ಕಾಲಕ್ಕೆ ತಕ್ಕ ಹಾಗೆ ಅದು ಬೆಳೆಯುತ್ತಾ, ಬೆಳೆಸುತ್ತಾ ಹೋಗುತ್ತದೆ. ಬದುಕು ಹೀಗೆ ಅಲ್ಲವಾ ಒಮ್ಮೊಮ್ಮೆ ಒಂದು ಎಲೆಯೂ ಉಳಿಯದಂತೆ ಉದುರಿ ಹೋಗಿ ಏಕಾಂಗಿಯಾಗಿ ನಿಂತ ಅಶ್ವತ್ಥ ಮರದ ಹಾಗೆ ಮುದುರಿ, ಮುರುಟಿ, ತೊಗಟೆಯೊಡೆದು ಹತ್ತಿರಹೊಗುವುದು ಬೇಡಾ ಅನ್ನಿಸುವ ಹಾಗೆ. ಅದೊಂದು ಸಂಕ್ರಮಣ ಕಾಲವನ್ನು ಏಕಾಂಗಿಯಾಗಿ ಎದುರಿಸಿ ಕಾದು  ಚಿಗುರು ಒಡೆದು ಎಲೆಯರಳಿಸಿ ಮೈತುಂಬಿ ಕೊಳ್ಳುತ್ತದೆ.

ಮೈ ಉರಿಯೋಕೆ ಶುರುವಾಯ್ತು ಕೋಲ್ಡ್ ಕ್ರೀಂ ತಂದಿಡು ಅಮ್ಮಾ ಅಂತ ಮುಖ ಸಿಂಡರಿಸಿಕೊಂಡು ಕೈ ಕಾಲು ನೋಡುತ್ತಿದ್ದ ಮಗಳಿಗೆ ಈಗ ಎಷ್ಟು ಒಡೆಯುತ್ತೋ ಅಷ್ಟು ಹೊಸ ಚರ್ಮ ಬರುತ್ತೆ ಕಣೆ ಅಂದರೆ ಕೋಪದಲ್ಲಿ ಗುರುಗುಟ್ಟಿದಳು.. ನಾನು ವರಾಹಿಯಲ್ಲಿ ಮುಳುಗಿ ಹೋದ ಆ ಅಶ್ವತ್ಥ ಮರವನ್ನೇ ನೆನಪಿಸಿಕೊಂಡೆ. ಯಾಕೋ ಉರಿಯೂ ಹಿತ ಅನ್ನಿಸತೊಡಗಿತು….

How do you like this post?

Click on a star to rate it!

Average rating 4 / 5. Vote count: 4

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

Shobha Rao

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ನನಸಗೈವಾಸೆ ಬಿಡು