ಇದಾಗಲೆ ಸುಮಾರು ನಾಲ್ಕು ತಿಂಗಳುಗಳೆ ಕಳೆದಿದೆ ಕೋವಿಡ್ ಮಹಾಮಾರಿಯ ಅಬ್ಬರ ಪ್ರಾರಂಭವಾಗಿ. ವುಹಾನ್‍ನಿಂದ ಆರಂಭವಾದ ಈ ಪಿಡುಗು ಜಗತ್ತಿನ ಎಲ್ಲಾ ಕಡೆ ಕ್ಷಿಪ್ರವಾಗಿ ಹಬ್ಬಿಬಿಟ್ಟಿದೆ. ಅಷ್ಟೇ ವೇಗವಾಗಿ ಎಲ್ಲಾ ದೇಶಗಳು ಲಾಕ್‍ಡೌನ್ ಅನ್ನುವ ಬ್ರಹ್ಮಾಸ್ತ್ರವನ್ನು ಪ್ರಯೋಗಿಸತೊಡಗಿದ್ದವು. ದೇಶ,ದೇಶಗಳು ಏನು ಬಂತು? ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಬೇಕೆಂದರೆ ವೀಸ ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ!
ವುಹಾನ್, ಇಟೆಲಿ, ಸ್ಪೈನ್, ಭಾರತ, ಅಮೇರಿಕ ದೇಶಗಳಲ್ಲಿನ ಲಾಕ್‍ಡೌನ್ ಕತೆಗಳನ್ನು ಓದುತ್ತಿದ್ದಂತೆ ನನಗೆ ನನ್ನ ಮೊದಲ ಲಾಕ್‍ಡೌನ್ ನೆನಪು ಆಗತೊಡಗಿತ್ತು. ಕೋವಿಡ್ ಏನು ನನ್ನ ಮೊದಲ ಲಾಕ್‍ಡೌನ್ ಅನುಭವ ಅಲ್ಲ!
ಸುಮಾರು ಮುವತೈದು ವರ್ಷಗಳ ಹಿಂದಿನ ವಿಷಯ ಇರಬಹುದು. ನನಗಾವಾಗ ಸುಮಾರು ಏಳು-ಎಂಟು ವರ್ಷ ಇದ್ದಿರಬಹುದು. ಹಣೆ ಓಲಿಯ ಛತ್ರಿಯ ಕಾಲ ಮುಗಿದು ಬಟನ್ ಕೊಡೆಯ ಚರಿತ್ರೆ ಪ್ರಾರಂಭವಾದ ಕಾಲ!
ಜೂನ್ ಸಮಯ. ಮುಂಗಾರು ಮಳೆಯ ಪ್ರಾರಂಭದ ಸಮಯ. ಅದೇನು ಈವಾಗಿನ ಸಮಯದಂತಲ್ಲ. ಜೂನ್‍ನಲ್ಲಿ ಮುಂಗಾರಿನ ಆರ್ಭಟೆ ಪ್ರಾರಂಭವಾಯಿತೆಂದರೆ, ಶಾಲೆ ಮಕ್ಕಳಿಗೆ ಒಂದೆರಡು ರಜೆ ಖಂಡಿತವಾಗಿ ಸಿಗುವ ಕಾಲ. ಜೂನ್ ಪ್ರಥಮ ವಾರದಲ್ಲೆ ಗೆದ್ದೆ ನಟ್ಟಿ ಮುಗಿಸಿಬಿಡುವ ಸಮಯ. ಜರ್ರೆಂದು ಬೀಳುವ ಮಳೆಗೆ ಕೆಲವು ದಿನ ಒಂದು ಹತ್ತು ನಿಮಿಷ ಸಹ ಪುರುಸೊತ್ತು ಇರುತ್ತಿರಲಿಲ್ಲ.
ಆ ವರ್ಷ ಅದೇನೊ ಬೇಸಿಗೆಯಲ್ಲಿ ಶುರುವಾದ ಜ್ವರ ಮಳೆಗಾಲ ಪ್ರಾರಂಭವಾದರೂ ಬಿಟ್ಟಿರಲಿಲ್ಲ. ಅವಲಕ್ಕಿ ಐಸ್ ಕ್ಯಾಂಡಿ ತಿಂದದ್ದಕ್ಕೊ ಇಲ್ಲ ಬಾವಿ ನೀರನ್ನು ಸೀದ ಕುಡಿದದ್ದಕ್ಕೊ. ಯಾವುದೋ ಒಂದು ಕಾರಣದಿಂದ ವಕ್ರಹಿಸಿದ ಜ್ವರ, ವಿಕ್ರಮಾದಿತ್ಯನನ್ನು ಹಿಡಿದುಕೊಂಡ ಬೇತಾಳದಂತೆ ನನ್ನ ಬೆನ್ನುಹಿಡಿದಿತ್ತು. ಅಮ್ಮನ ಮಜ್ಜಿಗೆ ಹುಲ್ಲಿನ ಕಶಾಯವಾಗಲಿ, ಡಾಕ್ಟರ್ ಮದ್ದಾಗಲಿ ಯಾವುದಕ್ಕೂ ಜ್ವರವನ್ನು ಪೂರ್ತಿ ಒಡಿಸಲು ಸಾಧ್ಯವಾಗಿರಲಿಲ್ಲ. ನಾಲ್ಕು ದಿನ ಜ್ವರ ಬಿಟ್ಟಿತು ಎಂದು ಐವತ್ತಾನೆ ಗದ್ದೆಗೆ ಹೋಗಿ ನಾಲ್ಕು ಸಾರಿ ಬ್ಯಾಟ್ ಬೀಸಿದರೆ, ಮತ್ತೆ ಜ್ವರ ಬಂದು ಬಿಡುತ್ತಿತ್ತು.
ಬೇಸಿಗೆ ಮುಗಿಯುವ ಸಮಯದಲ್ಲಿನ ಕೆಲಸಗಳಿಗೆನು ಕೊರತೆಯೆ? ಒಣ ಹುಲ್ಲನ್ನು ಚಾವಣಿಯಲ್ಲಿ ಸೇರಿಸಿಡಬೇಕು. ಹೊರಗಡೆ ದನದ ಕಾಲಡಿಗೆ ಹಾಕಲಿಕ್ಕೆ ಕೂಳೆ ಕುತ್ರೆ ಆಗಬೇಕು. ಮನೆಯ ಕಿಟಕಿಗಳಿಗೆಲ್ಲ ತೆಂಗಿನ ಮಡಲನ್ನು ಕಟ್ಟಬೇಕು. ನನ್ನ ಜ್ವರದ ಮಧ್ಯೆ ಈ ಎಲ್ಲ ಕೆಲಸವೂ ಆಗಿತ್ತು.
ಬೇಸಿಗೆಯಲ್ಲಿ ಕ್ರಿಕೆಟ್ ಬ್ಯಾಟ್‍ಗೆ, ಕುಟ್ಟೆ, ದೊಣ್ಣೆಗೆ ಪುರುಸೊತ್ತು ಇರುತ್ತಿರಲಿಲ್ಲ. ಅದೇ ರೀತಿ ಮಳೆಗಾಲ ಬಂತೆಂದರೆ ನಮ್ಮದು ಗೋಲಿ ಆಟ. ನನ್ನ ಅಣ್ಣಂದಿರು ಮತ್ತು ಅವರ ಸ್ನೇಹಿತರ ಜೊತೆ ಸೇರಿ ಚಿರಿ ಚಿರಿ ಮಳೆ ಇದ್ದರೂ ದಿನ ಸಂಜೆ ಗೋಲಿ ಆಟವನ್ನು ಬಿಡುತ್ತಿರಲಿಲ್ಲ. ಅದರಲ್ಲೂ ವಿಭಿನ್ನತೆ. ಕ್ರಿಕೆಟ್ಟಿನಲ್ಲಿ ಈವಾಗ ಇರುವ ಪರಿ ಪರಿಯ ಆಟದಂತೆ ನಮ್ಮಲ್ಲೂ ಬೇರೆ ಬೇರೆ ರೀತಿಯ ಆಟಗಳು ಇದ್ದವು. ಬೆಂಡೆ ಗಿಡಗಳಿಗೆ ಮಾಡಿದ ಹೊಂಡದ ಜೊತೆ ನಮ್ಮ ಗೋಲಿ ಗುಳಿಗಲಿರುತ್ತಿದ್ದವು.
ಮಳೆಗಾಲ ಪ್ರಾಂಭವಾಗಿ ಒಂದೆರಡು ಗೋಲಿ ಸೀರಿಸ್ ಆಗಿತ್ತೊ ಏನೊ. ನನಗೆ ಜ್ವರ ಸ್ವಲ್ಪ ಹೆಚ್ಚೇ ಆಗಿ ಬಿಟ್ಟಿತ್ತು. ಒಂದು ರೀತಿಯ ಚೀರಲು ಸ್ವರ ಮೂಗಿನಿಂದ ಬರುತ್ತಿತ್ತು. ಜ್ವರ ಹೆಚ್ಚಾಗಿದ್ದು ಎಲ್ಲ ಹೊರಗಡೆ ಹೋಗಿ ಗೋಲಿ ಆಡಿದ್ದುದರಿಂದಲೆ ಎಂದು ಅಮ್ಮನಿಗೆ ಅನುಮನ ಬಂದಿತ್ತು. ಮಾರನೆ ದಿನದಿಂದಲೆ ಅಮ್ಮನಿಂದ ನನಗೆ ಲಾಕ್‍ಡೌನ್ ಹೇರಿಕೆ ಆಗಿತ್ತು ! ಅದೇ ನನ್ನ ಪ್ರಥಮ ಲಾಕ್‍ಡೌನ್!
***
ಆ ಲಾಕ್‍ಡೌನ್ ನೆನಪು ಮಾಡಿಕೊಂಡರೆ ಈವಾಗಲೂ ಸ್ವಲ್ಪ ಹೆದರಿಕೆ, ಬೇಸರ ಆಗುವುದೆ. ಶಾಲೆಗೆ ಹಲವಾರು ದಿನಗಳ ರಜೆ ಆಗಿತ್ತು. ಅದಕ್ಕಿಂತ ಹೆಚ್ಚಿಗೆ, ಸ್ವಲ್ಪ ಮಳೆ ಬಿಟ್ಟರೆ ನಾವು ಪ್ರಾರಂಭಿಸುವ ಗೋಲಿ ಸೀರಿಸ್‍ಗೆ ತಡೆ ಬಂದಿತ್ತು. ಅದರಲ್ಲೂ ಆ ಲಾಕ್‍ಡೌನ್ ನನಗೆ ಮಾತ್ರ ಅನ್ವಯ ಆಗಿತ್ತು! .
ಅಣ್ಣ ಮತ್ತು ಸ್ನೇಹಿತರು ಮಳೆ ಬಿಟ್ಟಿತು ಎಂದರೆ ಗೋಲಿಗಳನ್ನು ತೆಗೆದುಕೊಂಡು ಪಡು ಅಂಗಳಕ್ಕೆ ಹಾರಿ ಬಿಡುತ್ತಿದ್ದರು. ಬಿಳಿ ಬಣ್ಣದ ದೊಡ್ಡ ಗೋಲಿಗಳು, ಬಣ್ಣ ಬಣ್ಣದ ಸಣ್ಣ ಗೋಲಿಗಳು. ಪಡು ಅಂಗಳದಲ್ಲಿನ ಹಲವು ಗುಳಿಗಳು. ಅಣ್ಣ ಮತ್ತು ಸ್ನೇಹಿತರ ಗಲಾಟೆ. ಇವೆಲ್ಲ ನನ್ನ ಲಾಕ್‍ಡೌನ್ ಸಮಯವನ್ನು ಇನ್ನೂ ಹಿಂಸೆ ಮಾಡಿತ್ತು.
ಮಳೆಗಾಲಕ್ಕೆ ಕಿಟಿಕಿಗಳಿಗೆ ಕಟ್ಟಿದ ತೆಂಗಿನ ಮಡಲ ದಟ್ಟಿ. ಹಜಾರದಲ್ಲಿ ಸೇರಿಸಿಟ್ಟಿದ್ದ ಹುಲ್ಲು. ಇವುಗಳು ಲಾಕ್‍ಡೌನ್‍ನ್ನು ಇನ್ನೂ ಕಷ್ಟ ಮಾಡಿದ್ದವು. ಆದರೆ ಕೆಲವು ಸಾರಿ ಮನೆಯೊಳಗೆ ಬರುತ್ತಿದ್ದ ಹಾವು, ಇಲಿಗೆ ಮಾತ್ರ ಕೆಲಸ ಸ್ವಲ್ಪ ಸುಲಭವಾಗಿತ್ತು!
ಅಣ್ಣ ಮತ್ತು ಸ್ನೇಹಿತರು ಆಡುತ್ತಿದ್ದ ಗೋಲಿಯಾಟ ನನಗೆ ಈವಾಗಿನ ಒಲಿಂಪಿಕ್ಸ್‍ಗಿಂತ ಹೆಚ್ಚಾಗಿತ್ತು! ಅವರು ಹೊರಗಡೆ ಆಟ ಆಡುತ್ತಿದ್ದರೆ, ನಾನು ಕಿಟಿಕಿಗೆ ಕಟ್ಟಿದ್ದ ತೆಂಗಿನ ಮಡಲ ಮಧ್ಯೆ ಹಲವಾರು ರಂಧ್ರಗಳನ್ನು ಮಾಡಿದ್ದೆ. ಅವುಗಳೆ ನನಗೆ ಮ್ಯಾಚ್‍ನ್ನು ಲೈವ್ ನೋಡುವ ಪರಿಯಾಗಿತ್ತು! ಆಡುವ ಅವಕಾಶವಿರದಿದ್ದರೂ ಆಟದಲ್ಲಿ ತೊಡಗಿಕೊಳ್ಳುವ ಒಂದೇ ಮಾರ್ಗವಾಗಿತ್ತು!
ಆ ಮಳೆಗಾಲದಲ್ಲಿ ಮಾತ್ರ ನಮ್ಮ ಗೋಲಿ ಸೀರಿಸ್‍ಗೆ ಒಬ್ಬ ಪ್ರೇಕ್ಷನಿರುವಂತೆ ಲಾಕ್‍ಡೌನ್ ಮಾಡಿತ್ತು.
***
ಆ ಲಾಕ್‍ಡೌನ್‍ಗೂ ಈವಾಗಿನ ಲಾಕ್‍ಡೌನ್‍ಗೂ ಅಜಗಜಾಂತರವಿದ್ದರೂ ಹಳೆ ನೆನಪುಗಳು ಅಪಾರ್ಟ್‍ಮೆಂಟ್ ಒಳಗಿನ ಜಾಗದಲ್ಲಿ ವಾಕಿಂಗ್‍ಗೆ ಹೋಗುವಾಗ ಒತ್ತರಿಸಿ ಬರುತ್ತಿತ್ತು!
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021