ನಮ್ಮ ಜೀವನದ ಅವಿಭಾಜ್ಯ ಅಂಗ ಪಿಯುಸಿ. ನಾವು ಊರಿನಿಂದ ಸ್ವಾತಂತ್ರ್ಯ ಪಡೆದು ಮತ್ತೆ ಮತ್ತೆ ಹಲವು ಸ್ವಾತಂತ್ರ್ಯ ಪಡೆಯಲು ಹೋರಾಟ ಶುರುವಿಟ್ಟ ಕ್ಷಣಗಳು. ಎಸ್ ಎಸ್ ಎಲ್ ಸಿಯಲ್ಲಿ ಉಳಿದವರಿಗಿಂತ ಸ್ವಲ್ಪ ಹೆಚ್ಚು ಅಂಕ ಬಂದಿದ್ದೇ ತಡ ಕೂಲಿಕಾರರ ಮಗನಾದ ನನ್ನ ಕಾಲುಗಳು ಭೂಮಿಯ ಮೇಲಿರಲಿಲ್ಲ. ಎಲ್ಲರೂ ಹೊತ್ತು ಮೆರೆಯುವವರೆ ಎಲ್ಲಿ ಬಿಸಾಡಿ ಬಿಡುವರೋ ಎಂಬ ಭಯದಲ್ಲೇ ಬದುಕುವ ಸನ್ನಿವೇಶ. ಪಿಯುಸಿಗೆ ಹೋಗುವ ಬದಲು ಐಟಿಐ ಮಾಡ್ಕೊಂಡ್ರೆ ಫಾಸ್ಟ್ ಫುಡ್ ಥರಾ ಬೇಗ ಒಂದು ನೌಕರಿ ಸಿಕ್ಕೇ ಬಿಡುತ್ತೆ, ಕೊನೆಪಕ್ಷ ಅದೂ ಇದೂ ರಿಪೇರಿ ಮಾಡಿ, ಇಲ್ಲ ಕರೆಂಟಿನ ಕಂಬ ಹತ್ತಿಯಾದರೂ ಹಣ ಸಂಪಾದಿಸಬಹುದೆಂಬ ಹಲವರ ಒತ್ತಾಸೆಗೆ ಮಣಿದು ನನಗೆ ಬಂದಿರೋ ಒಳ್ಳೊಳ್ಳೆ ಅಂಕಕ್ಕೆ ತಕ್ಕದಾದ ಕಾಲೇಜುಗಳಿಗೆ ಅರ್ಜಿ ಸಲ್ಲಿಸಿದೆ. ಅರ್ಜಿ ಹಾಕದೇ ಇರುವ ಕಾಲೇಜುಗಳಿಂದೆಲ್ಲ ಆಫರ್ ಬಂದ್ರೂ ಯಾಕೋ ಮನಸು ಆ ಕಡೆ ಹೋಗಲಿಲ್ಲ. ಕಂಬ ಹತ್ತುವಾಗಲೇ ಪ್ಯಾಂಟ್ ಹರಿದರೆ ಏನು ಕತೆ! ಎಂಬ ಸಿಲ್ಲಿ ಪ್ರಶ್ನೆಗಳನ್ನೇ ದೊಡ್ಡದು ಮಾಡ್ಕೊಂಡು ನಿರಾಕರಿಸಿ ಬಿಡುವಂಥ ಮನಸ್ಸು ಆಗಿನದು. ಮತ್ತಷ್ಟು ಜನ ಅದೆಂಥದೋ ಡಿಪ್ಲೋಮ ಮಾಡು. ನಿನಗೆ ಬಂದಿರೋ ಅಂಕಕ್ಕೆ ಹೇಳಿ ಮಾಡಿಸಿದ್ದು ಕಂಡಿತ ನೀನದರಲ್ಲಿ ಯಶಸ್ವಿಯಾಗ್ತೀಯಾ ಅಂದ್ರು. ಅದನ್ನು ಮಾಡಿಕೊಂಡ್ರೆ ಏನು ಕೆಲಸ ಸಿಗುತ್ತೆ ಅನ್ನೋದೇ ಕನ್ಫೂಜ಼ನ್ ನನಗೆ. ಅದರಲ್ಲಿ ನೂರಾರು ವಿಷಯಗಳಿರುತ್ತವೆ ಅನ್ನೊದು ಬಹಳಷ್ಟು ಕೌತುಕವೆನಿಸಿತಾದರೂ ಅವೆಲ್ಲವೂ ಇಂಗ್ಲೀಷಿನಲ್ಲಿ ಮಾತ್ರ ಇರ್ತಾವೆ ಎಂಬ ಒಂದೇ ವಿಷಯಕ್ಕೆ ನನ್ನ ಹೃದಯ ಢಮಾರ್. ಆರು ವಿಷಯಗಳ ಜೊತೆ ಇರೋ ಒಂದು ಇಂಗ್ಲೀಷು ಪಾಸು ಮಾಡೋಕೆ ಹೊಡೆದಾಡಿದ್ದೇ ಸಾಕಷ್ಟಿತ್ತು. ಇನ್ನು ಇದರ ಕತೆ ಯಾರಿಗೆ ಬೇಕು. ಇನ್ನು ಬಹುಜನರ ಪ್ರತಿಷ್ಟೆಯ ಕೊಂಬೇ ಆಗಿದ್ದ ವಿಜ್ಞಾನವನ್ನು ಹಲವರು ಸೂಚಿಸಿದರಾದರೂ ಅದೂ ಕೂಡ ಇಂಗ್ಲೀಷುಮಯವೆನ್ನುವುದಕ್ಕಿಂತ ಅದರ ಪ್ರಾಕ್ಟಿಕಲ್ ನೋಟ್ಸ್ ಮತ್ತು ಆಗುವ ಫೀಸನ್ನು ಕೇಳಿ ಅಂತಿಮವಾಗಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ‘ಶಿಕ್ಷಣ’ ವಿಭಾಗಕ್ಕೆ ಹೊನ್ನಾಳಿ ಮಠದ ಕಾಲೇಜಿಗೆ ಸೇರಲಾಯಿತು. ಇದನ್ನು ಓದಿದವರು, ಅದರಲ್ಲೂ ಮಠದ ಕಾಲೇಜಲ್ಲಿ ಓದಿದವರೆಲ್ಲರೂ ಶಿಕ್ಷಕವೃತ್ತಿಗೆ ಆಯ್ಕೆಯಾಗಿರುವುದು ಆಶಾಕಿರಣವಾಗಿತ್ತು. ಇರೋ ಒಂದು ಇಂಗ್ಲೀಷನ್ನು ಹೇಗೋ ಗೀಜಿ ಬಿಟ್ಟರೆ ಉಳಿದದ್ದೆಲ್ಲ ಅಂದರೆ ಕನ್ನಡ, ಶಿಕ್ಷಣ, ಸಮಾಜಶಾಸ್ತ್ರ, ಇತಿಹಾಸ ಕನ್ನಡದಲ್ಲೇ ಬರೆಯೋದು ತಾನೆ. ಜೈ ಅಲಕ್ ನಿರಂಜನ್! ನಮಗೂ ಇದೇ ಬೇಕಿತ್ತು. ಬೇಕಾದವರೊಬ್ಬರನ್ನು ಹಿಡಿದು ಒಳ್ಳೆ ಹುಡುಗ ಅಂತೆಲ್ಲ ಸರ್ಟಿಫಿಕೇಟ್ ಪಡೆದು ಮುನ್ನೂರೋ ಆರುನೂರೋ ಡೊನೆಷನ್ ಕೊಟ್ಟು ಮಹಾಯಾತ್ರೆ ಶುರು.
ನಮ್ಮೂರು ಅರಬಗಟ್ಟೆಯಿಂದ ಹೊನ್ನಾಳಿ ಹಿರೇಕಲ್ಮಠ ಏನಿಲ್ಲವೆಂದರು ಏಳೆಂಟು ಕಿಮೀ. ಸುಂಕಟ್ಟೆ ಗಡಿಯಿಂದ ಹೊಲಗಳ ಗುಂಟ ಅಡ್ಡ ಹೋದರೆ ಮೂರು ಕಿಮೀ ಉಳಿತಿತ್ತು. ಬಸ್ಸಿಗಾದರೆ ಬಸ್ಸಿಗೆ ನಡೆದಾದರೆ ನಡೆದು. ಬಸ್ಸಲ್ಲಿ ರಿಯಾಯ್ತಿ ಪಡೆಯೋಕೆ ದಿನಾ ಹೊಡೆದಾಟ. ಟಾಪಲ್ಲಿ ಕೂತು ಹೋಗೋದೇ ಒಂದು ಮೋಜಿನ ಗೋಜಿನ ಕೆಲಸ. ಪೇಟೆಯ ಪೋಲಿಸರು ನಮ್ಮನ್ನೆಲ್ಲ ಬೆದರಿಸಿ ಇಳಿಸಿಯೂ ಬಿಡುತ್ತಿದ್ದರು. ಇನ್ನುಳಿದಂತೆ ಅದೊಂದು ಮೋಜಿನ ಪಯಣವೆ. ಕಾಲ್ನಡಿಗೆಯೇ ಎಷ್ಟೋ ಬಾರಿ ಅಪ್ಯಾಯಮಾನವಾಗುತ್ತಿತ್ತು. ಹೊಲದ ಬೆಳೆಗಳ ಸಾಲು, ಅವುಗಳದೆ ಸ್ವಾಲೆ, ಬತ್ತಿದ ಹಳ್ಳದ ಗುಂಟ ಅಲ್ಲಲಿ ನೀರು, ಗದ್ದೆಗಳ ಬದುವಿಗೆ ಹೊಂದಿಕೆಯೇ ಆಗದೆ ಹಳದಿ ಹೂವಿನ ಜಾಲಿಮರಗಳು, ಮಠದ ಆವರಣ … ಹೀಗೆ ಸಾಗುತ್ತಿತ್ತು ಒಂಟಿ ಪಯಣ. ಕೆಲವರು ಜೊತೆಯಾದರೂ ನನ್ನದೆಂಥದೋ ಏಕಾಂತ ಓಟ.
ಬಸ್ಸಿಗೆ ಓಡಾಡುವಾಗ ಈಗಿನ ಹೊನ್ನಾಳಿ ಬಸ್ ನಿಲ್ದಾಣದ ಎದುರಿನ ಹಳೇ ಎಲ್ ಐ ಸಿ ಆಫೀಸಿದ್ದ ಬಿಲ್ಡಿಂಗ್ ಮೆಟ್ಟಿಲುಗಳು ನನಗೆ ಬಸ್ ಕಾಯುವಿಕೆಯ ಕಾಯಂ ಜಾಗ. ನಾನಿದ್ದರಲ್ಲಿ ಯಾವ ಹುಡುಗಿಯರೂ ಬರುತ್ತಿರಲಿಲ್ಲ. ನನಗೂ ಮುಂಚೆ ಹುಡುಗಿಯರೇನಾದರೂ ಇದ್ದರೆ ನಾನು ಬಂದ ಕೂಡಲೇ ಎದ್ದು ನಡೆದು ಜಾಗ ಕೊಡುತ್ತಿದ್ದರು. ನನಗೂ ಈ ಹುಡುಗಿಯರಿಗೂ ವಿಚಿತ್ರ ಮಡಿವಂತಿಕೆಯಿದ್ದ ಕಾಲ. ಮೊದಲ ಪಿಯುಸಿಯಲ್ಲಿ ಅದೂ ಇದೂ ಬೋರ್ಡ್ ಮೇಲೆ ಸುಭಾಷಿತ ಬರೆದು ಬರೆದೂ ‘ಸುಭಾಷಿತ ಅಣ್ಣಪ್ಪನೆಂದೇ’ ನಮ್ಮ ಮೆಚ್ಚಿನ ಕೊಟ್ರಯ್ಯ ಸರ್’ನಿಂದ ಬಿರುದಾಂಕಿತನಾದೆ. ಇದೊಂದು ಘನಂದಾರಿ ಕೆಲಸ ಬಿಟ್ಟರೆ ಓದಿದ್ದು ಅಷ್ಟಕ್ಕಷ್ಟೆ. ರಜೆ ಬಂದಾಗಲೆಲ್ಲ ಕೂಲಿ ಕೆಲಸ ಕಾಯಂ ಇದ್ದ ದಿನಗಳವು. ಹೆಚ್ಚೇನು ಓದಲಾಗಲಿಲ್ಲ. ಕಾಲೇಜಿನ ಆರಂಭದ ದಿನಗಳೇ ಭಯ ಭೀಕರವೆನಿಸಿ ಬಿಟ್ಟವು. ಅಲ್ಲೊಂದು ಭಯಂಕರ ರಾಜಕೀಯ. ಲೆಕ್ಚರ್ ಒಬ್ಬೊರ ರಂಪಾಟಕ್ಕೆ ಹಿರಿಯ ವಿದ್ಯಾರ್ಥಿಗಳೆಲ್ಲ ರೊಚ್ಚಿಗೆದ್ದು ಭೀಕರ ಹೊಡೆದಾಟ. ಮೈದಾನದಲ್ಲಿ ನಿಂತು ನೋಡು ನೋಡುತ್ತಿದ್ದಂತೆ ತಾರಕಕ್ಕೇರಿದ ಜಗಳ. ಸಧ್ಯ ಪೋಲಿಸರು ಬಹುಬೇಗ ಮಧ್ಯಪ್ರವೇಶಿಸಿದ್ದರಿಂದ ಯುದ್ಧವಿರಾಮ ಘೋಷಿಸಲ್ಪಟಿತು. ಕೆರಳಿದ್ದ ವಿದ್ಯಾರ್ಥಿಗಳು ಲೆಕ್ಚರರ ಬೈಕಿಗೇ ಬೆಂಕಿ ಹಚ್ಚಿಬಿಟ್ಟರು. ಅದೇ ತಾನೇ ಕಾಲೇಜಿನ ಮುಂದೆ ಹೊಸದಾದ ಕಟ್ಟಡ ವಾಹನ ಹೊಂದಿ ಶುರುವಾಗಿದ್ದ ಅಗ್ನಿಶಾಮಕದಳದವರು ಆ ಬೆಂಕಿಯ ಕಿಡಿಯನ್ನು ಆರಿಸಿದ ಪರಿ ನೋಡಿ ಬೆಕ್ಕಸ ಬೆರಗಾಗಿ ಬಿಟ್ಟೆವು. ಅದಕ್ಕೆ ಬೇಕಿದ್ದ ಒಂದು ಬಕೆಟ್ ನೀರು ಹಾಗೂ ಎರಡು ಹಿಡಿ ಮರಳಿಗಿಂತ ಅತೀ ದೀರ್ಘ ಸಮಯ ಪಡೆದ ಅವರ ಶಿಸ್ತು , ಸಿದ್ಧತೆಗಳು ಇಂದಿಗೂ ಅಚ್ಚಳಿಯದೇ ಉಳಿದಿವೆ. ನಮ್ಮ ಪ್ರಥಮ ಪಿಯುಸಿಗೆ ಅಷ್ಟೇನು ಮಹತ್ವವಿಲ್ಲವೆಂದು ನಾವು ಭಾವಿಸಿದ್ದೇ ಅತ್ಯಂತ ಕಳಪೆ ಅಂಕ ಪಡೆಯಲು ಕಾರಣವಾಗಿತ್ತು. ಹೆಚ್ಚುಕಮ್ಮಿಯಾಗಿದ್ದರೆ ಫೇಲೇ ಆಗುವ ಹಂತಕ್ಕಿದ್ದವು ಅಂಕಗಳು. ಈ ಫೈರಿಂಜಿನ್ನಿವರ ಶಿಸ್ತು ಸಿದ್ಧತೆಗಳಿದ್ದಿದ್ದರೆ ಅದೆಷ್ಟು ವಿಜಯೋತ್ಸವ ಆಚರಿಸಬಹುದಿತ್ತೋ…!?
ಆದರೆ ದ್ವಿತೀಯ ಪಿಯುಸಿಗೆ ಸ್ವಲ್ಪ ಗಂಭೀರವಾದೆವು. ಸಿಕ್ಕಸಿಕ್ಕ ಜಾಗಗಳಲ್ಲೆಲ್ಲ ಓದಿದೆವು. ಓದಲಿಕ್ಕೆ ಸಮಯ, ಬಿಡುವು ಅಂತ ಈಗಿನ ಮಕ್ಕಳಂತೇನೂ ನಮಗಿರಲಿಲ್ಲ. ಮನೆಗೆಲಸ, ಕೂಲಿಕೆಲಸಗಳ ಮಧ್ಯೆ ಬಿಡುವಾದಾಗ, ಇನ್ನೇನು ನಾಳೆಯೇ ಪರೀಕ್ಷೆ ಶುರುವೆಂದಾಗ ಸಮಯವಾಗುತ್ತಿತ್ತಷ್ಟೆ. ಪಲಿತಾಂಶವೇನೋ ಬಂದಿತು. ಉಳಿದೆಲ್ಲ ವಿಷಯಗಳು ಎಂಬತ್ತರ ಆಸುಪಾಸಿನಲ್ಲಿದ್ದರೆ ಇಂಗ್ಲೀಷೊಂದು ನಲವತ್ತರ ಗಡಿಯಲ್ಲಿತ್ತು. ಅದೊಂದು ಸಾಹಸವೂ ಆಗಿತ್ತು. ಇಂಗ್ಲೀಷ್ ಪಾಸಾಗಿದೆಯೆಂದರೆ ಉಳಿದೆಲ್ಲವೂ ಪಾಸಾಗಿರಲೇ ಬೇಕೆಂಬ ಕಾಲವದು. ಶಿಕ್ಷಕವೃತ್ತಿಯ ಮೊದಲ ಮೆಟ್ಟಿಲು ಡಿ.ಇಡಿ ತರಬೇತಿಗೆ ಅರ್ಜಿ ಹಾಕಿದೆ. ಕೆಲವೇ ಬಿಂದು ಅಂಕಗಳ ಅಂತರದಲ್ಲಿ ಕೈತಪ್ಪಿತು. ಇನ್ನು ಬೇರೆ ಕೆಲಸಕ್ಕೆ ಪ್ರಯತ್ನಿಸಬೇಕು. ಇಲ್ಲವೆ ಈಗಿರುವ ಅಂಕ ಇನ್ನಷ್ಟು ಹೆಚ್ಚಿಸಿಕೊಂಡು ಮತ್ತೆ ಡಿ.ಇಡಿ ಪ್ರವೇಶಕ್ಕೆ ಅರ್ಜಿ ಹಾಕಬೇಕು! ಎಲ್ಲ ವಿಷಯಗಳ ಅಂಕ ಎಂಬತ್ತರ ಗಡಿಯಲ್ಲಿವೆ, ಮತ್ತಿವನ್ನು ರಿಜೆಕ್ಟ್ ಮಾಡಿ ಅಷ್ಟೇ ಗಳಿಸುವುದು ಸವಾಲಿನ ಕೆಲಸ. ತುಂಬಾ ಕಡಿಮೆ ಅಂಕಗಳಾದರೆ ಮಾಡಬಹುದಿತ್ತು. ಇನ್ನುಳಿದದ್ದು ಇಂಗ್ಲೀಷು!! ಅದು ಪಾಸಾಗಿದ್ದೇ ಹೆಚ್ಚು. ಇನ್ನು ರಿಜೆಕ್ಟ್ ಮಾಡುವುದೆಂದರೆ ಪ್ರಳಯಕಾಲದ ಮುನ್ಸೂಚನೆಯೇ ಹೌದು!
ಬೇರೆ ಯಾವ ಹುದ್ದೆಗೂ ಆಸಕ್ತನಾಗದೆ ಮಹಾಧೈರ್ಯ ಮಾಡಿ ಯಾರಿಗೂ ಹೇಳದೆ ಕೇಳದೆ ಇಂಗ್ಲೀಷನ್ನು ರಿಜೆಕ್ಟ್ ಮಾಡಿ ಮತ್ತೆ ಪರೀಕ್ಷೆ ಬರೆಯಲು ಕಾಲೇಜಿನ ಆಫೀಸಿಗೆ ಹೋದೆ. ಗುಮಾಸ್ತರೇ ಧಂಗಾಗಿ ಬಿಟ್ಟರು! ಅಲ್ಲೇ ಇದ್ದ ಗ್ರಂಥಪಾಲಕರನ್ನೂ ಕರೆದು ಉಪದೇಶ ಕೊಡಿಸಿದರು. ಇಂಗ್ಲೀಷಲ್ಲಿ ಮೂವತ್ತೈದು ಬಂದು ಪಾಸಾದರೆ ಸಾಕು ಅಂತಾರೆ, ನೀನು ನೋಡಿದರೆ ಅದನ್ನೇ ರಿಜೆಕ್ಟ್ ಮಾಡ್ತಿದಿಯಲ್ಲ. ಪಾಸ್ ಅಂಕಕ್ಕಿಂತ ಹೆಚ್ಚೇ ಬಂದಿದ್ದಾವೆ. ಫೇಲ್ ಗೀಲ್ ಆದೀಯಾ ಸುಮ್ನೆ ಹೋಗೆಂದರು. ನಾನು ಬಿಡಲಿಲ್ಲ, ಪಟ್ಟು ಹಿಡಿದು ಕಟ್ಟೇ ಬಂದೆ. ಪರೀಕ್ಷೆಗೆ ಪಕ್ಕಾ ಹೇಗೆ ಸಿದ್ಧನಾಗಬೇಕೋ ಹಾಗೆಯೇ ಸಿದ್ಧನಾದೆ. ಹೊನ್ನಾಳಿಯಲ್ಲೊಬ್ಬರು ಟುಟೋರಿಯಲ್ ಮಾಷ್ಟ್ರು ಇದ್ದರು. ಅವರು ಇಂಗ್ಲೀಷು ಪಾಸು ಮಾಡಿಸಿಯೇ ಮಾಡಿಸುವ ಕಂಟ್ರ್ಯಾಕ್ಟರ್ ಆಗಿದ್ದರು. ಅವರಿಗೆ ಫೀಸು ಕೊಟ್ಟು ಹೋಗುವಷ್ಟು ನಾನಾಗ ಶಕ್ತನಿರಲಿಲ್ಲ. ನನಗಂದು ಮನೆಯೆಂಬುದೇ ಇರಲಿಲ್ಲ. ತಿನ್ನಲಿರಲಿಲ್ಲ. ಉಡಲಿರಲಿಲ್ಲ…. ಎಲ್ಲರ ಜೀವನದಂತೆಯೇ ನನ್ನದೊಂದಿಷ್ಟು ಭಯಂಕರ ಮರುಭೂಮಿಯಂಥ ಬದುಕು ಆಗ. ಅವರ ನೋಟ್ಸನ್ನು ಮಾತ್ರ ಒಬ್ಬರಿಂದ ಪಡೆದು ಓದಿದೆ…ಓದಿದೆ… ದ ಡೆಫೂಡಿಲ್ಸ್… ಕಿಂಗ ಲಿಯರ್ ಇವತ್ತಿಗೂ ಗುಂಯ್’ಗುಡುತ್ತಿವೆ. ಪರೀಕ್ಷೆಗೆ ಎಷ್ಟು ಪಾಠಗಳು ಬೇಕೋ ಅಷ್ಟನ್ನೇ ಆಯ್ದು ಒಂದು ಪದ್ಯಕ್ಕೆ ಒಂದೇ ಒಂದು ಸಾರಾಂಶ, ಪಾಠಕ್ಕಾದರೆ ಎರಡು, ನಾಟಕಕ್ಕಾದರೆ ಮೂರೇ ಪ್ರಶ್ನೋತ್ತರವಿರುವ ನೋಟ್ಸ್ ಅದು. ಪರೀಕ್ಷೆಯಲ್ಲಿ ಎಂಥಾ ಘನಂದಾರಿ ಪ್ರಶ್ನೆಯನ್ನೇ ಕೇಳಿದರೂ ನಾವು ಬರೆಯಬೇಕಾದ್ದು ಅದೊಂದೇ ಉತ್ತರ. ನಮ್ಮ ಕೆಲಸ ಆ ಪ್ರಶ್ನೆ ಯಾವ ಪಾಠದ್ದೆಂದು ಗೊತ್ತಾದರೆ ಸಾಕಿತ್ತು. ಇನ್ನು ಪ್ಯಾಸೇಜ್ ಅಂಥ ಕೊಡ್ತಾನೆ ಪ್ರಶ್ನೆಯಲ್ಲಿರುವ ಪದ ಪ್ಯಾಸೇಜಲ್ಲಿ ಎಲ್ಲಿಂದೆ ಅಂತ ಹುಡುಕಿ ಅದೇ ವಾಕ್ಯ ಬರೆದರೆ ಆಯಿತು. ಇನ್ನು ಅಷ್ಟಿಷ್ಟು ವ್ಯಾಕರಣ ಗೊತ್ತಿದ್ದೇ ಇತ್ತು. ಬಿರುಬೇಸಿಗೆ ಬೇರೆ. ಓದಿ ಓದಿ ತಲೆ ಅಗ್ನಿಕುಂಡವಾಗಿತ್ತು.
ಎಲ್ಲೋ ಹತ್ತಿಕಡ್ಡಿ ಕಡಿಯೋದು, ಗೊಬ್ಬರ ತುಂಬೋ ಕೂಲಿಕೆಲಸಕ್ಕೆ ಹೋದವನಿಗೆ ಕೂಲಿಕೆಲಸದ ಹಣ ಸರಿಯಾದ ಸಮಯಕ್ಕೆ ಸಿಗದೆ ಯಾವುದೋ ಲಾರಿ ಹಿಡಿದೋ ಹಿಂದಿನ ದಿನವೆ ಹೊನ್ನಾಳಿ ಮಠ ತಲುಪಿದೆ. ಯುಗಾದಿ ಬೇರೆ ಮಠಕ್ಕೆ ಜನವೋ ಜನ ಬಂದು ಹೋಗುತ್ತಿದ್ದರು. ನನಗೆ ಯಾವ ಚಂದ್ರದರ್ಶನವೂ ಬೇಕಿರಲಿಲ್ಲ. ಮಠದಲ್ಲೇ ಇದ್ದ ಗೆಳೆಯನೊಬ್ಬ ಸಿಗುತ್ತಾನೆಂಬ ಆಶಾವಾದದಲ್ಲಿ ಬಂದದ್ದು ನಿರಾಸೆಯಾಯಿತು. ಮಠದಲ್ಲಿ ಮಲಗಲೇನು ಬರ… ಸಾಲು ವಸತಿಗಳ ಕಲ್ಲುಬೆಂಚೇ ಸಾಕಾಗಿತ್ತು. ಬೇಸಗೆಯ ಬಿಸಿಗೆ ಚೆಂದಗೆ ಕಾದಿದ್ದವು. ಈ ನಿರ್ಗತಿಕನ ಸಹವಾಸ ಸೊಳ್ಳೆಗಳಿಗೆ ಸಧ್ಯ ಬೇಡವಾಗಿತ್ತು. ರಾತ್ರಿಗೊಂದು ಬೆಳಗ್ಗೆಗೊಂದು ತಿಂಡಿಯ ದರ್ಶನವಾಗಿದ್ದರೆ ಸಾಕಿತ್ತು. ರಾತ್ರಿಗೆ ಖಾಲಿಯಾದ ಐದು ರೂಪಾಯಿ, ಬೆಳಗ್ಗೆಗೆ ಉಳಿದದ್ದು ಎರಡೇ. ಮುಂಜಾನೇ ನಲ್ಲಿಯೊಂದರಲ್ಲಿ ಮೊಗ ತೊಳೆದು ಗೂಡಂಗಡಿಯಲ್ಲೆರಡು ಮೆಣಸಿನಕಾಯಿ ಬೋಂಡಾ ತಿಂದು ಪರೀಕ್ಷೆಗೆ ಬಾಹುಬಲಿಯಂತೆ ಹಾಜರ್!
ನನ್ನೆರಡು ಮೆಚ್ಚಿನ ಲೆಕ್ಚರರಿಗೆ ಅಚ್ಚರಿ! ಪರೀಕ್ಷಾ ಕೊಠಡಿಯಲ್ಲೇ ಮತ್ತೊಂದಿಷ್ಟು ಉಪದೇಶ! ಛಲದಿಂದಲೇ ಎದುರಿಸಿ ಬರೆದೆ… ಆದರೆ ಫಲಿತಾಂಶದ ದಿನ ಆಘಾತವೇ ಎದುರಾಯಿತು! ಮೊದಲಿನ ಅಂಕಗಳೇ (ಫಸ್ಟ್ ಕ್ಲಾಸ್) ಪ್ರಥಮ ಶ್ರೇಣಿಯಲ್ಲಿದ್ದವು, ಆ ಪಟ್ಟಿಯಲ್ಲಿ ನನ್ನ ಹೆಸರೇ ಇರಲಿಲ್ಲ. ಮನಸ್ಸಿಲ್ಲದೆ ದ್ವಿತೀಯ ಶ್ರೇಣಿ ಇಣುಕಿದೆ ಅಲ್ಲೂ ನನ್ನ ಹೆಸರಿರಲಿಲ್ಲ, ಇನ್ನೇನು ಡುಮುಕಿ ಹೊಡೆದೇ ಬಿಟ್ಟೆ ಎನಿಸಿತು… ತೃತೀಯ ಶ್ರೇಣಿ ನೋಡಲು ಮನಸ್ಸಿರಲಿಲ್ಲವಾದರೂ ಅನಾಸಕ್ತಿಯಿಂದ ನೋಡಿದೆ ಜೀವವೇ ಧರೆಗಿಳಿದಂತಾಯಿತು.. ಇನ್ನೇನಿದೆ!? ಭಂಡ ಬಿದ್ದ ಜೀವ ನೇರ ಫೇಲಾದವರ ಪಟ್ಟಿ ಕಡೆ ಹೋಯಿತು.. ಅಲ್ಲೂ ನನ್ನ ಹೆಸರಿಲ್ಲ. ಏನೋ ಚೂರು ಸಮಾಧಾನವಾಯಿತು. ಏನೋ ಮಿಸ್ಟೇಕ್ ಆಗಿದೆ ಅಂತ ಕಚೇರಿಯಲ್ಲಿ ವಿಚಾರಿಸಿದೆ… ‘ಬರೀ ಪಾಸಾದವರ ಪಟ್ಟಿ ನೋಡಿದೇನಪ, ರಿಜ಼ಲ್ಟ್ ರಿಜೆಕ್ಟ್ ಮಾಡಿ ಬರೆದವರದ್ದು ಅಂಕ ಎಷ್ಟೇ ಇರಲಿ ಪಾಸ್ ಅಷ್ಟೆ,, ಕ್ಲಾಸ್(ಶ್ರೇಣಿ) ಕೊಡಲ್ಲ’ ಅಂದ್ರು! ಅಂತೂ ಪಿಯುಸಿಯ 78% ಇದ್ದ ಅಂಕಗಳನ್ನು 80%ಕ್ಕೆ ಏರಿಸಿಕೊಳ್ಳುವ ಮೂಲಕ ಯಶಸ್ಸಾದೆ… ನಾನು ಸ್ಥಳ ತೋರಿಸದೇ ಇದ್ದರು ಮಲ್ಲಾಡಿಹಳ್ಳಿಯ ಎಸ್ ಎಸ್ ಬಿ ಎಸ್ ಟಿ ಟಿ ಐ ಗೆ ಡಿ.ಇಡಿ ಪ್ರವೇಶ ಪಡೆದೆ.
ಕೊರೋನಾ ದೆಸೆಯಿಂದ ಕೇವಲ ಇಂಗ್ಲೀಷ್ ಪರೀಕ್ಷೆ ಮಾತ್ರ ಉಳಿಸಿಕೊಂಡಿರುವ ಪಿಯುಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತ …
Latest posts by ಅರಬಗಟ್ಟೆ ಅಣ್ಣಪ್ಪ (see all)
- ವೈದ್ಯರಿಗೆ ನಮನ - July 2, 2020
- ಹಾಲು - June 14, 2020
- ಆಂಗ್ಲಭೂತ (2) - June 7, 2020