ದೀಪೇಂಥಾಲ್ ಕೊಳದ ಹತ್ತಿರ ಹೋಗದೆ ಸುಮಾರು ದಿನಗಳಾಗಿದ್ದವು. ಕೊಳದ ಸುತ್ತಲೂ ಇರುವ ಮರಗಳನ್ನು ಕಡಿದು ಹಾಕಿರುವುದನ್ನು ನೋಡಲಾಗದೇ, ಸಂಕಟವಾಗುತ್ತದೆಯೆಂದು ಅಲ್ಲಿಗೆ ಹೋಗುವುದನ್ನು ಬಿಟ್ಟಿದ್ದೆವು. ಜರ್ಮನ್ ಫೋಟೋಗ್ರಾಫರ್ ಟೋನಿ ಪುನಃ ಪುನಃ ಕೊಳದ ಹತ್ತಿರ ಕ್ಯಾಮೆರಾ ತೆಗೆದುಕೊಂಡು ಹೋಗು. ಈಗ ಪಕ್ಷಿಗಳು ಮರಿ ಹಾಕುವ ಸಮಯ. ಬಾತುಕೋಳಿಗಳು ಪುಟ್ಟ ಪುಟ್ಟ ಮರಿಗಳ ಜೊತೆಯಲ್ಲಿ ಕಾಣಸಿಗುತ್ತವೆ. ಸಮಯ ವ್ಯರ್ಥ ಮಾಡಬೇಡ ಎಂದು ಪುನಃ ಪುನಃ ಹೇಳಿದಾಗ, ಒಂದು ಬೆಳಿಗ್ಗೆ ಕೊಳದ ಬಳಿ ಹೋಗುವ ನಿರ್ಧಾರ ಮಾಡಿದೆವು. ಅದು ದಿನನಿತ್ಯದ ದಿನಚರಿ ಆಗುತ್ತದೆಂದು ಅಂದು ಅಂದುಕೊಂಡಿರಲಿಲ್ಲ.
ಹಲವಾರು ಬಾತುಕೋಳಿಗಳು ೮-೯ ಪುಟ್ಟ ಪುಟ್ಟ ಕೋಳಿ ಮರಿಗಳಂತಹ ಮರಿಗಳೊಂದಿಗೆ ಕೊಳದ ದಡದಲ್ಲಿರುವ ಹುಲ್ಲಿನ ಮಧ್ಯೆ ವಾಸ್ತವ್ಯ ಹೂಡಿರುವುದನ್ನು ನೋಡಲು ಬಣ್ಣದ ಬಟ್ಟೆ ಧರಿಸದೇ, ಶಬ್ಧ ಮಾಡದೇ ನಿಧಾನವಾಗಿ ಹೋಗಿ ಕಾದು ಕುಳಿತುಕೊಳ್ಳಬೇಕು. ಕ್ಷಣ ಕ್ಷಣಕ್ಕೂ ಕಣ್ಣೆದುರಿಗೆ ಕಥೆಗಳು ಕಾಣಸಿಗುತ್ತವೆ, ಎಂದು ಟೋನಿ ಹೇಳಿದ್ದು ಸತ್ಯವಾಗಿತ್ತು.
ನೀಲ್ ಗಾನ್ಸ್ , ಈಜಿಪ್ಷಿಯನ್ ಬಾತುಕೋಳಿಗಳು ಮೂಲತಃ ನೀಲ್ ಕಣಿವೆಯಲ್ಲಿ ಕಂಡುಬರುತ್ತವೆ. ಏಪ್ರಿಲ್- ಮೇ ತಿಂಗಳುಗಳಲ್ಲಿ ವಲಸೆಬಂದು ಯೂರೋಪಿನಲ್ಲಿ ನೆಲೆಸುತ್ತವೆ. ಅವುಗಳ ಆಹಾರ ಸಾಮಾನ್ಯವಾಗಿ ಕಾಲುಗಳು, ಎಲೆಗಳು, ಹುಲ್ಲು ಹಾಗೂ ಗಿಡದ ದಂಟುಗಳು. ಕೆಲವೊಮ್ಮೆ ಹುಳ ಹುಪ್ಪಟೆ ಮತ್ತು ಸಣ್ಣ ಪ್ರಾಣಿಗಳನ್ನೂ ತಿನ್ನುತ್ತವೆ. ತಂದೆ ತಾಯಿಗಳೆರಡೂ ಸರದಿಯಲ್ಲಿ ಮೊಟ್ಟೆಗೆ ಕಾವು ಕೊಟ್ಟು ಮರಿಯಾದ ಮೇಲೆ ಪೋಷಿಸುತ್ತವೆ.
ಪ್ರತಿವರ್ಷದಂತೆ ಈ ವರ್ಷವೂ ಈ ಜಾತಿಯ ಹಲವಾರು ಬಾತುಕೋಳಿಗಳು ಹತ್ತಿರದ ಕೊಳಗಳ ಹತ್ತಿರ ವಾಸ್ತವ್ಯ ಹೂಡಿದವು. ಶುರುವಾಗಿದ್ದು ಹೆಣ್ಣಿಗಾಗಿ ಹೋರಾಟದಿಂದ.
ಗೆದ್ದ ಗಂಡಿನೊಂದಿಗೆ ಸಂಸಾರ ಶುರು ಮಾಡಿತ್ತು ಎಂದು ಗೊತ್ತಾಗಿದ್ದು ಅವು ಜೊತೆ ಜೊತೆಯಾಗಿ ಓಡಾಡಲು ಶುರುಮಾಡಿದಾಗ.
ಕೇವಲ ಒಂದೆರಡು ವಾರಗಳಲ್ಲಿ ಹ್ಯಾಪಿ ಫೀಟ್ ಪೆಂಗ್ವಿನ್ ಹೋಲುವಂತಹ ಪುಟ್ಟ ಮರಿ ಅವುಗಳ ಜೊತೆಯಲ್ಲಿ ಕಾಣಿಸಿತ್ತು. ಅಪ್ಪ ರಕ್ಷಣೆಯ ಜವಾಬ್ಧಾರಿ ಹೊತ್ತರೆ, ಅಮ್ಮ ಅದರ ಸುತ್ತ ಮುತ್ತಲೇ ಓಡಾಡುತ್ತಾ, ಅಪಾಯದ ಸೂಚನೆಗಳನ್ನು ಕೊಟ್ಟು ಅದನ್ನು ಬೇರೆ ಬೇರೆ ಕಡೆಗೆ ಕರೆದೊಯ್ಯುತ್ತಿತ್ತು. ಅವುಗಳ ದೃಷ್ಟಿ ಅದೆಷ್ಟು ಸೂಕ್ಷ್ಮವಾಗಿರುತ್ತದೆ ಎಂದರೆ, ಗಿಡಮರಗಳ ಹಿಂದೆ ನಿಂತು ಫೋಟೋ ತೆಗೆಯುವ ಪ್ರಯತ್ನ ಮಾಡಿದರೂ, ಕನಿಷ್ಠ ೭-೮ ಮೀಟರ್ ದೂರ ಮರಿಯನ್ನು ಕೊಂಡೊಯ್ಯುತ್ತವೆ.
ಒಂದು ದಿನ ಹೀಗೆ ನಿಂತು ನೋಡುತ್ತಿರುವಾಗ, ಮರಿ ಒಂದೆಡೆ ನಿಲ್ಲದೆ ಮನ ಬಂದ ಕಡೆ ಓಡುವುದನ್ನು ನೋಡಿ, ಅದರ ಹಿಂದೆ ಸುತ್ತಿ ಸುತ್ತಿ ಸುಸ್ತಾಗಿ, ತಾಯಿ ಹಕ್ಕಿ ತಾಳ್ಮೆ ಕಳೆದುಕೊಳ್ಳುತ್ತಿದ್ದುದು ಅರಿವಿಗೆ ಬರುತ್ತಿತ್ತು. “ನನ್ನ ಕೈಲಿ ಆಗಲ್ಲ. ಸ್ವಲ್ಪ ಹೊತ್ತು ನೀನು ನೋಡಿಕೋ” ಎಂದು ತಾಯಿ ಹಕ್ಕಿ, ತಂದೆ ಹಕ್ಕಿಗೆ ಹೇಳುವಂತೆ ದೂರದಲ್ಲಿ ನಿಂತ ನಾನು ಕಾಂಮೆಂಟ್ರಿ ಕೊಟ್ಟು ಮುಗಿದಿರಲಿಲ್ಲ, ಇನ್ನು ಸ್ವಲ್ಪ ಹೊತ್ತು ನೀನು ನೋಡಿಕೋ ಎಂದು ಹೇಳಿದಂತೆ ತಾಯಿ ಹಕ್ಕಿ ತಂದೆ ಹಕ್ಕಿಯ ತಲೆ ಮೇಲಿಂದ ಹಾರಿ ಕೊಳದ ಇನ್ನೊಂದು ಭಾಗಕ್ಕೆ ಹಾರಿ ಹೋಗಿ ಕುಳಿತುಕೊಂಡಿತು. ತಂದೆ ಹಕ್ಕಿ ಮರಿ ಹಕ್ಕಿಯನ್ನು ನೋಡಿಕೊಳ್ಳುವ ಕೆಲಸ ಮುಂದುವರೆಸಿತು.
ಬೆಳಿಗ್ಗೆ ಆರು ಏಳು ಗಂಟೆಯ ಹೊತ್ತಿಗೆ ಇನ್ನೂ ಕೊಳದ ದಡದಲ್ಲಿ ವಿಶ್ರಮಿಸುವ ಅವು, ಮನುಷ್ಯರ ಹೆಜ್ಜೆ ಶಬ್ಧ ಕೇಳಿದರೆ ಸಾಕು, ಕೊಳದ ಮಧ್ಯೆ ಹೋಗಿಬಿಡುತ್ತವೆ. ಉಳಿದ ಬಾತುಕೋಳಿಗಳಂತೆ ಹಾಕುವ ಜೋಳ, ಇನ್ನಿತರೇ ಕಾಳುಗಳ ಆಸೆಗಾಗಿ ನಂಬಿ ಹತ್ತಿರ ಸುಳಿಯುವುದಿಲ್ಲ.
ಅಂದು ಯಾಕೋ ಅಪ್ಪ ಹಕ್ಕಿ ಸಿಟ್ಟಿನಲ್ಲಿದ್ದಂತೆ ಕಾಣುತ್ತಿತ್ತು. ದೂರದಲ್ಲಿದ್ದ ಬೇರೆ ಜಾತಿಯ ಬಾತುಕೋಳಿ ಮತ್ತು ಮರಿಗಳ ಗುಂಪಿಗೆ ನಮ್ಮ ಕಣ್ಣೆದುರಿಗೇ ದಾಳಿಯಿಟ್ಟಿತು. ತಡೆಯಲಾಗದೆ ಆ ಚಿಕ್ಕ ಬಾತುಕೋಳಿಗಳ ತಾಯಿ ಮರಿಗಳನ್ನು ರಕ್ಷಿಸಲು ತಾನು ದೂರ ಹಾರಿ ಹೋಗಿ ಈ ಈಜಿಪ್ಷಿಯನ್ ಬಾತುಕೋಳಿ ತನ್ನ ಹಿಂದೆ ಓಡಿಬರುವಂತೆ ಮಾಡಿ ಗಮನ ತಪ್ಪಿಸುವ ಪ್ರಯತ್ನ ಮಾಡುತ್ತಿತ್ತು. ಹೆದರಿ ದೂರ ಓಡುತ್ತಿದ್ದ , ಅಮ್ಮ ದೂರ ಹಾರಿ ಹೋದಾಗ ಎಲ್ಲಿಗೆ ಹೋಗುವುದು ಗೊತ್ತಾಗದೇ ಚಡಪಡಿಸುತ್ತಿದ್ದ ಮರಿಗಳನ್ನು ನೋಡಿ ಸಂಕಟವಾಗಿ, ನಾವೂ ಕೂಡ ನೀರಿಗೆ ಕಲ್ಲೆಸೆದು ಈಜಿಪ್ಷಿಯನ್ ಬಾತುಕೋಳಿಯ ಗಮನ ಸೆಳೆಯುವ ಪ್ರಯತ್ನ ಮಾಡಿದೆವು.
ಪುಟ್ಟ ಮರಿಗಳು ಹುಲ್ಲು ಜೊಂಪಿನ ಮಧ್ಯೆ ಹೋದ ಮೇಲೆ, ಕೊಳಕ್ಕೆ ಸುತ್ತುಬರುವಾಗ, ಈಜಿಪ್ಷಿಯನ್ ತಾಯಿ ಹಕ್ಕಿ ಅದೇ ಜಾತಿಯ ಇನ್ನೊಂದು ಬಾತುಕೋಳಿಯನ್ನು ಅಟ್ಟಿಸಿಕೊಂಡು ಹೋಗುವುದು ಕಾಣಿಸಿತು. ಸ್ವಲ್ಪ ಹೊತ್ತಿನಲ್ಲಿ ಪುನಃ ಮರಿಯ ಹತ್ತಿರ ಬಂದಿಳಿದಿದ್ದು ನೋಡಿದಾಗ ಅರಿವಾಯಿತು, ಅದು ತಂದೆ ಹಕ್ಕಿಯನ್ನೇ ದೂರ ಓಡಿಸಿತ್ತು ಎಂದು. ಉಳಿದ ಹಕ್ಕಿಗಳನ್ನು, ಬಾತುಕೋಳಿಗಳನ್ನು ಹೆದರಿಸಿ ಓಡಿಸುವ ತಂದೆ ಹಕ್ಕಿ, ಹೆಂಡತಿಗೆ ಹೆದರಿ ಕೊಳದ ಇನ್ನೊಂದು ಮೂಲೆ ಸೇರಿತ್ತು. ತಾಯಿ ಮತ್ತು ಮರಿ ಜೊತೆಯಲ್ಲಿ ಈಜಾಡಲು ಶುರುಮಾಡಿದವು.
ಕೊಳದ ಇನ್ನೊಂದು ಮೂಲೆ ಸೇರಿದ ತಂದೆ ಹಕ್ಕಿ ತನ್ನ ಸಿಟ್ಟನ್ನು ಅಲ್ಲಿದ್ದ ಕೆಲವು ಬಾತುಕೋಳಿಗಳನ್ನು ಅಟ್ಟಿಸಿಕೊಂಡು ಹೋಗಿ ಅವುಗಳ ಮೇಲೆ ತೋರಿಸುವ ಪ್ರಯತ್ನ ಮಾಡುತ್ತಿತ್ತು.ಅವು ಕೈಗೆ ಸಿಗದಿದ್ದಾಗ, ನೀರಿನಲ್ಲಿ ಏನೋ ದೊಗೆಯುವ, ಹುಡುಕುವ ಪ್ರಯತ್ನ ಮಾಡುತ್ತಿತ್ತು.
ನಿನ್ನೆ ಸಂಜೆ ಕೊಳದ ಬಳಿ ಹೋದಾಗ, ತಂದೆ ಹಕ್ಕಿ ತಾಯಿ ಹಕ್ಕಿ ಎರಡೂ ಕಣ್ಣಿಗೆ ಬೀಳಲಿಲ್ಲ. ಮರಿ ಹಕ್ಕಿ ಆಚಿಂದೀಚೆಗೆ ಓಡಾಡುತ್ತಾ, ಕಣ್ಣಿಗೆ ಕಾಣಿಸಿದ ಬಾತುಗಳನ್ನು ಅಮ್ಮ ಎಂದುಕೊಂಡು ಅವುಗಳ ಹಿಂದೆ ಹೋಗುವುದನ್ನು ನೋಡಿದಾಗ ಸಂಕಟವಾಗಿತ್ತು. ಉಳಿದ ಬಾತುಕೋಳಿಗಳಂತೆ ಹತ್ತಿರ ಬಂದಿದ್ದರೆ ರಕ್ಷಣೆಯ ಯೋಚನೆ ಮಾಡಬಹುದಿತ್ತು. ಆದರೆ, ಅದು ಕೊಳದ ಮಧ್ಯೆ ಓಡಾಡುತ್ತಾ ಮನುಷ್ಯರಿಂದ ದೂರವಿರುವ ಪ್ರಯತ್ನ ಮಾಡುತ್ತಿತ್ತು. ಪುಟ್ಟ ಮಗಳು, ನನಗೆ ನೀರಿಗೆ ಹಾರಿ ಅದನ್ನು ಕರೆತರುವ ಮನಸ್ಸಾಗುತ್ತಿದೆ, ಬಿಟ್ಟು ಮನೆಗೆ ಹೋಗುವ ಮನಸ್ಸಿಲ್ಲ ಎಂದು ಬಾಯಿಬಿಟ್ಟು ಹೇಳಿದರೆ, ನಮ್ಮ ಮನಸ್ಸಿನಲ್ಲೂ ಅದೇ ಓಡುತ್ತಿತ್ತು ಎಂದು ಆಕೆಗೆ ಹೇಳಲಿಲ್ಲ. ಸುಮಾರು ಸಮಯ ಅಪ್ಪ ಅಮ್ಮ ಒಂದಾದರೂ ಬರುತ್ತದೋ ಎಂದು ಕಾಯುತ್ತಾ, ಏನಲ್ಲದಿದ್ದರೂ, ಬೇರೆ ಪಕ್ಷಿಗಳು ತೊಂದರೆ ಮಾಡಿದರೆ ಕಲ್ಲು ಹೊಡೆದಾದರೂ ರಕ್ಷಿಸುವ ಎಂದು ಕಾದು ನಿಂತು, ಕೊನೆಗೆ ಮನೆಗೆ ಬಂದೆವು.
ಅಷ್ಟು ಪ್ರೀತಿ ಮಾಡುವ, ಪ್ರತಿ ಕ್ಷಣ ಸುತ್ತ ಮುತ್ತ ಓಡಾಡುತ್ತಾ ರಕ್ಷಣೆ ಮಾಡುವ ಅಪ್ಪ ಅಮ್ಮ ಬಿಟ್ಟು ಹೋಗಿದ್ದಾದರೂ ಏತಕ್ಕೆ ಎಂದು ಯೋಚಿಸುತ್ತಾ, ಪ್ರಕೃತಿಯ ನಿರ್ಧಾರ ಎಂದುಕೊಂಡು, ನಮ್ಮ ಕೈಲಿ ಏನೂ ಇಲ್ಲವೆಂದು ಅರಿತು ಮನೆಗೆ ಬಂದೆವು. ಇವತ್ತು ಬೆಳಿಗ್ಗೆ ಹೋಗಿ ನೋಡಿದರೆ, ಪುನಃ ಮೂರೂ ಎಂದಿನಂತೆ ಒಟ್ಟಿಗೆ ಇವೆ. ಮರಿ ಹಕ್ಕಿ ಅಪ್ಪ ಅಮ್ಮನನ್ನು ಬಿಟ್ಟು ಹೆಚ್ಚು ಹೆಚ್ಚು ದೂರ ಒಂದೇ ತಿರುಗುತ್ತದೆ. ಅಪ್ಪ ಅಮ್ಮ ಕೊಳದ ತೀರದಲ್ಲಿ ಕುಳಿತು ಆಚೀಚೆ ನೋಡುತ್ತಿವೆ.
ಮನುಷ್ಯರು ಕಂಡಾಗ ಶಬ್ದ ಮಾಡಿ ಮರಿಯನ್ನು ದೂರ ಹೋಗುವಂತೆ ಸೂಚಿಸುತ್ತಿವೆ. ಪುನಃ ಒಂದು ನಾಲ್ಕು ಫೋಟೋ ತೆಗೆದುಕೊಂಡು ಮನೆಗೆ ಬಂದೆವು.
ಕೊಳದ ಹತ್ತಿರ ಹೋಗುವುದೇ ಬೇಡ ಎಂದುಕೊಂಡವರು ದಿನಾ ಬೆಳಿಗ್ಗೆ ಸಂಜೆ ಎರಡೂ ಹೊತ್ತು ಹೋಗಲು ಶುರುಮಾಡಿದ್ದೇವೆ. ಸುಮ್ಮನೆ ಕುಳಿತು ನೋಡುತ್ತಿರುತ್ತೇವೆ. ಪ್ರತಿದಿನ, ಪ್ರತಿಕ್ಷಣ ಕಣ್ಣ ಮುಂದೆ ಹೊಸ ಹೊಸ ನೋಟಗಳು ಕಾಣುತ್ತಲೇ ಇರುತ್ತವೆ. ಮುಂದೇನು ಕಾದು ನೋಡಬೇಕು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020