ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬವೇನೂ ಹತ್ತಿರದಲ್ಲಿ ಇರಲಿಲ್ಲ. ಶಾಲೆಗೆ ರಜೆಯ ಸಮಯವೂ ಅಲ್ಲ. ಈ ಸಮಯದಲ್ಲಿ ಸಾಮಾನ್ಯವಾಗಿ ದೂರದಿಂದ ಯಾರೂ ನಮ್ಮ ಹಳ್ಳಿಗೆ ಬರುವುದಿಲ್ಲವಲ್ಲ. ಬೇಸಿಗೆ ರಜೆಯಲ್ಲೋ ದಸರಾ ರಜೆಯಲ್ಲೋ ಮಾತ್ರ ಅತ್ತೆಯರು ಮಕ್ಕಳೊಂದಿಗೆ ಬರುತ್ತಾರೆ. ಈಗ ಯಾಕೆ ಗಾಡಿ ಕಟ್ಟಿಸುತ್ತಿದ್ದಾರೆ ? ಗಾಡಿಯೇ ಮೇಲ್ಗಡೆ ಅಡಿಕೆ ದಬ್ಬೆಯ ಕಮಾನಿನಾಕಾರದ ಜೋಡಿಸಿ ಟಾರ್ಪಲ್ ಹೊದೆಸಿ ತಯಾರು ಮಾಡುತ್ತಿದ್ದಾರೆ ಎಂದರೆ ಮನೆಗೆ ಯಾರೋ ಬರುತ್ತಿದ್ದಾರೆ ಎಂದೇ ಅರ್ಥ. ತಮ್ಮ ಮತ್ತು ಪಕ್ಕದ ಮನೆಯ ಮಕ್ಕಳೊಂದಿಗೆ ಆಡುತ್ತಿದ್ದವಳಿಗೆ ಕೃಷ್ಣ ಗಾಡಿ ಕಟ್ಟುವುದನ್ನು ನೋಡಿದಾಗ ಕುತೂಹಲವಾಯಿತು. ಅಜ್ಜನ ಬಳಿ ಓಡಿ ಹೋದಳು. “ಅಜ್ಜಾ, ಕೃಷ್ಣ ಗಾಡಿ ಕಟ್ಟುತ್ತಿದ್ದಾನೆ. ಯಾರು ಬರುತ್ತಾರೆ? ಕರೆದುಕೊಂಡು ಬರಲು ಜೊತೆಯಲ್ಲಿ ನಾನು ಹೋಗಬಹುದೇ?”
ಅತ್ತೆಯರು ಆರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ಬರುವಾಗ ಅವರನ್ನು ಮೂರು ಮೈಲಿ ದೂರದಲ್ಲಿದ್ದ ಬಸ್ ನಿಲ್ಲುವ ನಿಡಗೋಡಿನಿಂದ ಕರೆತರಲು ಗಾಡಿ ಕಳಿಸುವಾಗ ತನ್ನನ್ನೂ ತಮ್ಮನನ್ನೂ ಜೊತೆಗೆ ಕಳುಹಿಸುತ್ತಿದ್ದುದು ನೆನಪಿಸಿಕೊಂಡು ಅಜ್ಜನನ್ನು ಕೇಳಿದಳು. “ಇಲ್ಲ, ಈ ಸಾರಿ ನೀವು ಮಕ್ಕಳು ಹೋಗುವಂತಿಲ್ಲ.” ಅಜ್ಜನ ಮುಖದಲ್ಲಿ ಅತ್ತೆಯರು ಬರುವಾಗ ಇರುವ ಯಾವಾಗಿನ ಸಂತೋಷ ಕಾಣಿಸಲಿಲ್ಲ. ಅದರ ಬದಲಾಗಿ ಅವರ ಧ್ವನಿಯಲ್ಲಿ ಗಾಂಭೀರ್ಯವಿತ್ತು. ಮುಖದಲ್ಲಿ ಕಳವಳವಿತ್ತು.
ಅಜ್ಜ ಗಂಭೀರವಾಗಿದ್ದಾಗ ಹೆಚ್ಚು ಮಾತನಾಡುತ್ತಾ ನಿಲ್ಲುವುದು ಸಮಂಜಸವಲ್ಲ ಎಂದು ಅರಿತ ಅವಳು ದೊಡ್ಡಮ್ಮನ ಬಳಿ ಓಡಿದಳು. “ದೊಡ್ಡಮ್ಮಾ , ಕೃಷ್ಣ ಗಾಡಿ ಕಟ್ಟುತ್ತಿದ್ದಾನೆ. ಮದ್ರಾಸಿನಿಂದ ಅತ್ತೆ ಬರುತ್ತಾರಾ? ಕರೆದುಕೊಂಡು ಬರಲು ಗಾಡಿಯಲ್ಲಿ ನಾನೂ ಹೋಗ್ಬೇಕು ?” ಅಜ್ಜನ ಬಳಿ “ಹೋಗಬಹುದೇ” ಎಂದದ್ದು ದೊಡ್ಡಮ್ಮನ ಬಳಿ ಬಂದಾಗ ಸಲಿಗೆಯಲ್ಲಿ “ಹೋಗ್ಬೇಕು” ಆಗಿತ್ತು. “ಇಲ್ಲ. ಮಕ್ಕಳು ಹೋಗುವಂತಿಲ್ಲ. ಎಲ್ಲರೂ ಬರುತ್ತಿದ್ದಾರೆ. ಗಾಡಿಯಲ್ಲಿ ಜಾಗವಿರುವುದಿಲ್ಲ. ಅಲ್ಲದೇ , ಅವರೆಲ್ಲಾ ಪೇಟೆಯಿಂದ ಬರುತ್ತಿದ್ದಾರೆ. ಪೇಟೆಯಲ್ಲಿ ಅದೇನೋ ದೊಡ್ಡ ಅಂಟುರೋಗ ಬಂದಿದೆಯಂತೆ. ಬಂದವರನ್ನು ೧೪ ದಿನ ಮುಟ್ಟಬಾರದಂತೆ. ಎಲ್ಲರೂ ಬಂದಕೂಡಲೇ ಹೋಗಿ ಮೈ ಮೇಲೆ ಬೀಳಬೇಡಿ. ತಮ್ಮನನ್ನೂ ಕರಿ. ಅವನಿಗೂ ಹೇಳಬೇಕು.” ದೊಡ್ಡಮ್ಮನೂ ಗಂಭೀರವಾಗಿ ಹೇಳಿದಾಗ ಇನ್ನು ಚರ್ಚೆ ಮಾಡಿ ಪ್ರಯೋಜನ ಇಲ್ಲ ಎಂದರಿತ ಅವಳು ಪುನಃ ಆಟಕ್ಕೆ ಓಡಿದಳು.
ಅಂಗಳದಲ್ಲಿ ಆಟವಾಡುತ್ತಿದ್ದವರನ್ನು ಚಿಕ್ಕಪ್ಪ ಕರೆದರು. ಬನ್ನಿ ಒಂದಷ್ಟು ಬೆಡ್ ಶೀಟುಗಳನ್ನು ಹಳೆಮನೆಗೆ ತೆಗೆದುಕೊಂಡು ಹೋಗಬೇಕು. ಎಲ್ಲರೂ ಎರಡೆರಡು ಬೆಡ್ ಶೀಟ್ ತೆಗೆದುಕೊಂಡು ಹೋದರೆ, ಒಮ್ಮೆಗೇ ಕೆಲಸ ಮುಗಿಯುತ್ತದೆ. ಹಳೆಮನೆಯನ್ನು ಉಪಯೋಗಿಸದ ಸಾಮಾನುಗಳನ್ನು ಇಡಲು ಬಿಟ್ಟರೆ ಬೇರೇನಕ್ಕೂ ಉಪಯೋಗಿಸುತ್ತಿರಲಿಲ್ಲ. ಈಗಿರುವ ಹೊಸಮನೆಯೇ ಸಾಕಷ್ಟು ದೊಡ್ಡ ಇದ್ದುದರಿಂದ ನೆಂಟರಿಷ್ಟರು ಬಂದರೂ ಮನೆಯ ಉಪ್ಪರಿಗೆಯ ಹಾಲಿನಲ್ಲಿ ೧೫-೨೦ ಹಾಸಿಗೆ ಹಿಡಿಯುವಷ್ಟು ದೊಡ್ದದಿದ್ದುದರಿಂದ ಹಳೆ ಮನೆಗೆ ಬೆಡ್ ಶೀಟ್ ತೆಗೆದುಕೊಂಡು ಹೋಗುವುದು ಏನಕ್ಕೆಂದು ಆಕೆಗೆ ಹೊಳೆಯಲಿಲ್ಲ. ಚಿಕ್ಕಪ್ಪ ಆಗಲೇ ಹಾಸಿಗೆಗಳನ್ನು ಎತ್ತಿಕೊಂಡು ಹಳೆಮನೆಯ ಒಳಗೆ ಹೋಗಿಯಾಗಿತ್ತು. ಮೆಟ್ಟಲಿನ ಮೇಲೆ ಇಟ್ಟಿದ್ದ ಬೆಡ್ ಶೀಟುಗಳನ್ನು ತೆಗೆದುಕೊಳ್ಳಲು ಓಡಿದ ಮಕ್ಕಳಲ್ಲಿ ನನಗೆ ಆ ಬಣ್ಣದ್ದು, ನನಗೆ ಈ ಬಣ್ಣದ್ದು ಎಂಬ ಜಗಳ ಶುರುವಾಗಿತ್ತು. ಆಕೆಗೋ, ಹಳೆ ಮನೆಯಲ್ಲಿ ಯಾರಿಗೆ ಮಲಗಲು ತಯಾರಿ ಎಂದು ಚಿಕ್ಕಪ್ಪನನ್ನು ಕೇಳಬೇಕಿತ್ತು. ಹಾಗಾಗಿ ಯಾವುದೋ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಹಳೆಮನೆಯ ಕಡೆಗೆ ಓಡಿದಳು. ಆಕೆ ಓಡಿದ್ದನ್ನು ನೋಡಿ ಉಳಿದ ಮಕ್ಕಳೂ ಕೈಗೆ ಸಿಕ್ಕ ಬೆಡ್ ಶೀಟುಗಳನ್ನು ತೆಗೆದುಕೊಂಡು ನಾನು ಮೊದಲು, ನಾನು ಮೊದಲು ಎಂದು ಹಿಂದೆ ಓಡಿದರು.
ಹಳೆಮನೆಯಲ್ಲಿ ೩ ಬೆಡ್ ರೂಮ್, ಒಂದು ವರಾಂಡ. ಚಿಕ್ಕಪ್ಪ ಆಗಲೇ ಎರಡು ಬೆಡ್ ರೂಮುಗಳಲ್ಲಿ ಹಾಸಿಗೆಗಳನ್ನು ಬಿಡಿಸಿ ಇಟ್ಟಾಗಿತ್ತು. ಈಕೆಯ ಕೈಯಿಂದ ಬೆಡ್ ಶೀಟ್ ತೆಗೆದುಕೊಂಡು ಕೊಡಕಿ ಹಾಸಿಗೆ ಮೇಲೆ ಹಾಸಿದರು. ತುದಿಗಳನ್ನು ಹಾಸಿಗೆಯ ಅಡಿಗೆ ಸಿಕ್ಕಿಸಲು ಸಹಾಯ ಮಾಡುತ್ತಾ, “ಚಿಕ್ಕಪ್ಪಾ, ಈ ಹಾಸಿಗೆ ಯಾರಿಗೆ? ” ಕೇಳಿದಳು. ಮದ್ರಾಸಿನಿಂದ, ಬೆಂಗಳೂರಿನಿಂದ ನಿನ್ನ ಅತ್ತೆಯರು ಬರುತ್ತಾರೆ. ಅವರು ಇನ್ನು ೧೪ ದಿನ ಇಲ್ಲೇ ಇರಬೇಕು. ಆಮೇಲೆ ಹೊಸ ಮನೆಗೆ ಬರುತ್ತಾರೆ. ಅವರೆಲ್ಲಾ ಬಂದ ಕೂಡಲೇ ಮೈಮೇಲೆ ಬೀಳಬೇಡಿ. ನಾವು ಹೇಳುವವರೆಗೆ ಅವರನ್ನೆಲ್ಲ ಮುಟ್ಟಬೇಡಿ.
ಮರುದಿನ ಬೆಳಿಗ್ಗೆ ತಿಂಡಿ ತಿಂದು ಮಕ್ಕಳೆಲ್ಲಾ ಅಂಗಳದಲ್ಲಿ ಆಟವಾಡುತ್ತಿದ್ದರು. ಅಜ್ಜ ದೊಡ್ಡಮ್ಮ ಆಗಾಗ ಅಂಗಳದ ತುದಿಗೆ ಹೋಗಿ ಗಾಡಿ ಬರುತ್ತಿದೆಯೇನೋ ಎಂದು ನೋಡುವುದು ಕಂಡಾಗ ಅತ್ತೆಯರು ಬರುವ ಸಂಭ್ರಮ ಪುನಃ ನೆನಪಾಗಿತ್ತು. ಆಟದ ಮಧ್ಯೆ ಆಕೆ ಕೂಡ ಆಗಾಗ ಅಂಗಳದ ತುದಿಗೆ ಹೋಗಿ ನೋಡಲು ಶುರು ಮಾಡಿದಳು. ಅಷ್ಟರಲ್ಲಿ ತೋಟದಲ್ಲಿ ತುಂಬಾ ಅಂಬರಲೇ ಹಣ್ಣು ಆಗಿದೆ. ತಿನ್ನೋಣ ಎಂದು ಚಿಕ್ಕಪ್ಪನ ಮಗಳು ರೋಹಿಣಿ ಹೇಳಿದ್ದು ಕೇಳಿ ಎಲ್ಲರೂ ಮನೆಯ ಪಕ್ಕದಲ್ಲಿದ್ದ ತೋಟಕ್ಕೆ ಓಡಿದರು.
ಬೇಲಿಯ ಬದಿಯಲ್ಲಿದ್ದ ಹಿಪ್ಪುನೇರಳೆ ಮರದಲ್ಲಿ ಕಪ್ಪು ಗೆಂಪು ಹಣ್ಣುಗಳು ತುಂಬಿ ತುಳುಕುತ್ತಿದ್ದವು. ಬೇಲಿಯ ಮೇಲೆ ಹತ್ತಿ, ಕೈಗೆ ಎಟುಕಿದವನ್ನು ಮುಳ್ಳು ಚುಚ್ಚಿಸಿಕೊಂಡು ಕೀಳುತ್ತಾ ತಿನ್ನುತ್ತಾ ಸಮಯ ಹೋಗಿದ್ದೇ ತಿಳಿಯಲಿಲ್ಲ. ದೂರದಲ್ಲಿ ಅಂಗಳದಲ್ಲಿ ಮನೆಯವರೆಲ್ಲರೂ ಕೂಡಿಕೊಂಡಿದ್ದು ನೋಡಿದಾಗ ಅತ್ತೆ ಬಂದರು ಎಂದು ತಮ್ಮ ಕೂಗಿದ. ಎಲ್ಲಾ ಮಕ್ಕಳೂ, ಅತ್ತೆ ಬಂದರು, ಅತ್ತೆ ಬಂದರು ಎಂದು ಮನೆಕಡೆಗೆ ಓಡಿದರು.
ಆಲಂಗಿಸುವ ಪದ್ದತಿಯನ್ನು ಮನೆಯಲ್ಲಿ ಮೊದಲು ತಂದಿದ್ದು ಮದ್ರಾಸ್ ಅತ್ತೆ. ಮುದ್ದಿಸಿ ಮುತ್ತಿಕ್ಕಿದರೆ ಅಮ್ಮನ ಮಡಿಲಿನಲ್ಲಿ ಕಾಣುವಂತದ್ದೇ ಸ್ವರ್ಗ. ಬಾವಿ ಕಟ್ಟೆಯ ಬದಿಯಿಂದ ಅಂಗಳಕ್ಕೆ ಓಡಿದರೆ, ಮನೆಯವರೆಲ್ಲರೂ ಅಲ್ಲೇ ನಿಂತಿದ್ದರು. ಅತ್ತೆಯರು ಹಳೆಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ, ಕೃಷ್ಣ ಕೈಗೆ ಕಂಬಳಿಯ ಚಪ್ಪನ್ನು ಸುತ್ತಿಕೊಂಡು ಸೂಟ್ ಕೇಸ್ ಮತ್ತು ಬ್ಯಾಗುಗಳನ್ನು ಇಳಿಸುವ ಪ್ರಯತ್ನ ಮಾಡುತ್ತಿದ್ದ. ಚಳಿಯಿರಲಿಲ್ಲ. ಆದರೂ ಚಳಿಯಾದವನಂತೆ ಮುಖಕ್ಕೆ ಮೂಗಿಗೆ ಬಟ್ಟೆಯನ್ನು ಸುತ್ತಿಕೊಂಡಿದ್ದ.
ಇನ್ನೇನು ಹಳೆ ಮನೆಗೆ ಓಡಬೇಕು, ಅಮ್ಮ ಮಕ್ಕಳಿಬ್ಬರ ಕೈಗಳನ್ನೂ ಗಟ್ಟಿಯಾಗಿ ಹಿಡಿದು ಎಳೆದುಕೊಂಡಳು. “ನೀವು ಅಲ್ಲಿ ಹೋಗುವಂತಿಲ್ಲ” ಇನ್ನು ನಾಲ್ಕು ದಿನ ಬಿಟ್ಟು ಅವರೆಲ್ಲಾ ಇಲ್ಲಿಗೆ ಬರುತ್ತಾರೆ. ಅಲ್ಲಿವರೆಗೆ ನೀವು ಅಲ್ಲಿಗೆ ಹೋಗುವಂತಿಲ್ಲ. ಅವರನ್ನು ಮುಟ್ಟುವಂತಿಲ್ಲ. ಹರ್ಷನೊಂದಿಗೂ ಆಡುವಂತ್ತಿಲ್ಲ”. ಉತ್ಸಾಹವೆಲ್ಲಾ ಒಂದೇ ಕ್ಷಣದಲ್ಲಿ ಠುಸ್ಸ್ ಎಂದಿತ್ತು. ಅಮ್ಮನ ಕೈ ಬಿಡಿಸಿಕೊಂಡು ಹೋಗಿ ದೊಡ್ಡಮ್ಮನ ಕೈ ಹಿಡಿದುಕೊಂಡು ನಿಂತವಳಿಗೆ ಏನು ನೆಡೆಯುತ್ತಿದೆ ಎಂದೇ ತಿಳಿಯಲಿಲ್ಲ.
ಸಂಜೆ ಚಿಕ್ಕಮ್ಮ ತಟ್ಟೆ ಲೋಟಗಳನ್ನು ಹಿಡಿದುಕೊಂಡು ಹಳೆಮನೆಕಡೆಗೆ ಹೊರಟಾಗ, ತಾನೂ ಬರುತ್ತೇನೆ ಎಂದು ಇನ್ನೆರಡು ಲೋಟಗಳನ್ನು ತೆಗೆದುಕೊಂಡು ಹಿಂದೆ ಹೊರಟರೆ, “ನೀವು ಅಲ್ಲಿಗೆ ಬರಬಾರದು. ಹೋಗು ಆಡಿಕೋ” ಎಂದು ಗದರಿದಾಗ ಅಂಗಳಕ್ಕೆ ಬಂದು ಆಡಲು ಶುರುಮಾಡಿದರೂ ಮನಸ್ಸೆಲ್ಲಾ ಹಳೆಮನೆಯಲ್ಲಿಯೇ. ಅಮ್ಮ ಚಿಕ್ಕಮ್ಮ ಮಾಡಿದ ಅಡುಗೆಯನ್ನು ಹಳೆಮನೆಗೆ ತೆಗೆದುಕೊಂಡು ಹೋಗಿ ಅಲ್ಲಿಯೇ ಬಡಿಸಿ ಬಂದಿದ್ದು ತಿಳಿದು, ಊಟಕ್ಕೂ ತಮ್ಮ ಜೊತೆ ಬರುವುದಿಲ್ಲವೆಂಬುದು ಖಚಿತವಾಗಿತ್ತು. ಹೊಸಮನೆಯ ಊಟದ ಮನೆಯಲ್ಲಿ ಉಳಿದ ಮನೆಮಂದಿಯೊಂದಿಗೆ ಊಟಕ್ಕೆ ಕುಳಿತಾಗ ಎಂದಿನಂತೆ ಮಾತು ಕಥೆ ಇರದೇ ಮೌನ. ದೊಡ್ಡಮ್ಮನ ಮುಖ ಬಾಡಿತ್ತು. ಅಜ್ಜನ ಮುಖ ಇನ್ನೂ ಗಂಭೀರವಾಗಿಯೇ ಇತ್ತು, ಆದರೆ ಮುಖದಲ್ಲಿ ವಿಷಾದ ಕಾಣಿಸುತ್ತಿತ್ತು. ಅಪ್ಪ ಚಿಕ್ಕಪ್ಪ ಮುಖ ಕೆಳಗೆ ಹಾಕಿಕೊಂಡು ಊಟ ಮಾಡುತ್ತಿದ್ದರು. ಅಮ್ಮ ಚಿಕ್ಕಮ್ಮಂದಿರ ಮುಖಗಳಲ್ಲೂ ವಿಷಾದ ತುಂಬಿತ್ತು.
ಬೆಳಿಗ್ಗೆ ಅಂಗಳದಲ್ಲಿ ಆಡುತ್ತಿದ್ದಾಗ ಮದ್ರಾಸ್ ಅತ್ತೆ ಹಳೆಮನೆಯಿಂದ ಹೊರಬಂದು ತೆಂಗಿನ ಮರದ ಅಡಿ ಇದ್ದ ಕಲ್ಲು ಚಪ್ಪಡಿ ಮೇಲೆ ಕುಳಿತು, ಮಕ್ಕಳೆಡೆಗೆ ನೋಡಿದಾಗ, ಆಕೆಯ ಹತ್ತಿರ ಓಡಿಹೋಗುವ ತಬ್ಬಿಕೊಳ್ಳುವ ಹಂಬಲ. ಹತ್ತಿರ ಹೋಗುತ್ತಿದ್ದಂತೆಯೇ, “ಅಲ್ಲೇ ನಿಲ್ಲು, ಹತ್ತಿರ ಬರಬೇಡ. ಮುಟ್ಟಬೇಡ. ” ಎಂದು ಹೇಳುವಷ್ಟರಲ್ಲಿ ಅತ್ತೆಯ ಗಂಟಲು ಗದ್ಗದಿತವಾಗಿತ್ತು. ಅಜ್ಜ ಹೊರಬಂದು ಅತ್ತೆಯ ಹತ್ತಿರ ನಿಂತು ಮಾತನಾಡತೊಡಗಿದಾಗ ಪುನಃ ಜೊತೆಯವರೊದಿಗೆ ಹೋಗಿ ಆಟವಾಡಲು ಶುರುಮಾಡಿದಳು. ಹರ್ಷ, ಆಕೆಗಿಂತ ೨ ವರ್ಷ ಚಿಕ್ಕವನು ಹಳೆಮನೆಯ ಕಿಟಕಿಯ ಬಳಿ ಕುಳಿತುಕೊಂಡು ಹೊರಗೆ ಆಟವಾಡುತ್ತಿದ್ದ ಮಕ್ಕಳನ್ನು ನೋಡುತ್ತಿದ್ದ. ಅವನ ಕೈಯಲ್ಲಿದ್ದ ಪುಸ್ತಕ ತೆರೆದಿತ್ತು, ಆದರೆ ಅವನ ನೋಟ ಕಿಟಕಿಯ ಹೊರಗಿತ್ತು. ಈ ಅಂತರ ಹೊರಗೆ ಆಡುತ್ತಿದ್ದ ಮಕ್ಕಳಿಗೂ ಹೊಸತು, ಆತನಿಗೂ ಹೊಸತು. ಬೆಂಗಳೂರು ಅತ್ತೆಯ ಮಕ್ಕಳಾದರೋ ದೊಡ್ಡವರು. ಮಕ್ಕಳ ಕಣ್ಣು ತಪ್ಪಿಸಿ, ಕಾಡು ಸುತ್ತಲ, ಹಣ್ಣು ಹುಡುಕಲು ಓಡುವವರು. ಅವರೂ ಹಳೆಮನೆಯಿಂದ ಹೊರಬಂದಿರಲಿಲ್ಲ. ಅಥವಾ ಆಗಲೇ ಕಾಡಿಗೆ ಹೋಗಿ ಆಗಿತ್ತೋ ಗೊತ್ತಿರಲಿಲ್ಲ.
ಅಪ್ಪ ಚಿಕ್ಕಪ್ಪ ಮನೆಯೊಳಗೇ ಇದ್ದ ಮರದ ಬೆಂಚನ್ನು ತಂದು ಹಳೆಮನೆಯ ಅಂಗಳದಲ್ಲಿ ಚಪ್ಪರದ ಅಡಿಯಲ್ಲಿ ಇಟ್ಟು, ಅದು ಹಳೆಮನೆಯಲ್ಲಿ ಇರುವವರಿಗೆ. ನೀವು ಅದರ ಮೇಲೆ ಕುಳಿತುಕೊಳ್ಳಬಾರದು ಎಂದು ಆಟವಾಡುತ್ತಿದ್ದ ಮಕ್ಕಳಿಗೆ ಹೇಳಿ, ಹಳೆಮನೆಯಲ್ಲಿದ್ದ ಅತ್ತೆಯರನ್ನು ಕರೆದಾಗ, ಎಲ್ಲರೂ ಹೊರಬಂದು ಅಲ್ಲಿ ಕುಳಿತು ಅಪ್ಪ ಚಿಕ್ಕಪ್ಪನೊಂದಿಗೆ ಮಾತನಾಡತೊಡಗಿದರು. ಪಕ್ಕ ಹೋಗಿ ನಿಂತುಕೊಂಡು ಕೇಳುವ ಪ್ರಯತ್ನ ಮಾಡಿದರೆ, “ನೀನು ಆಚೆ ಹೋಗು, ಆಡಿಕೋ. ದೊಡ್ಡವರು ಮಾತನಾಡುವುದು ಕೇಳಬಾರದು. ”
ದಿನಗಳೆದಂತೆ ಈ ದಿನಚರಿ ಅಭ್ಯಾಸವಾಗುತ್ತಾ ಹೋಯಿತು. ದೂರದಿಂದ ಬಂದ ಅತ್ತೆ ಮತ್ತು ಅತ್ತೆಯ ಮಕ್ಕಳಿಗೆ ಸ್ನಾನ, ಊಟ ಎಲ್ಲಾ ಹಳೆಮನೆಯಲ್ಲಿಯೇ. ಬೆಳಿಗ್ಗೆ ಸಂಜೆ ಬಿಸಿ ಬಿಸಿ ಶುಂಠಿ ಅರಿಶಿನದ ಕಷಾಯ. ಅವರುಗಳಿಗೆ ಮಾತ್ರವಲ್ಲ. ಮನೆಯವರೆಲ್ಲರಿಗೂ. ಅತ್ತೆಯರು, ಅತ್ತೆಯರ ಮಕ್ಕಳು ಆಗಾಗ ಹೊರಬಂದು ಅಲ್ಲಿ ಇಲ್ಲಿ ದೂರದಲ್ಲಿಯೇ ಕುಳಿತು ಮಾತನಾಡುವರು. ಹರ್ಷ ಒಮ್ಮೊಮ್ಮೆ ಪುಸ್ತಕ ಹಿಡಿದುಕೊಂಡು ಬೆಂಚ್ ಮೇಲೆ ಕುಳಿತು ದೂರದಿಂದಲೇ ನಮ್ಮನ್ನು ನೋಡುವನು. ದೊಡ್ಡಮ್ಮನ ಮುಖ ಮೊದಲನೇ ದಿನದಂತೆ ಬಾಡಿಯೇ ಇತ್ತು. ಅಜ್ಜನ ನಗುವೂ ಮಾಯವಾಗಿತ್ತು. ಮಾತುಗಳೂ ಕಡಿಮೆಯಾಗಿದ್ದವು. ಅಪ್ಪ ಚಿಕ್ಕಪ್ಪಂದಿರು ಕೆಲಸವಾದ ಮೇಲೆ ಹಳೆ ಮನೆಯ ಅಂಗಳದಲ್ಲಿ ಕುಳಿತು ಅತ್ತೆಯರೊಂದಿಗೆ, ಅವರ ಮಕ್ಕಳೊಂದಿಗೆ ಮಾತನಾಡುವರು. ಮಕ್ಕಳಿಗೆ ಮಾತ್ರ ಅಲ್ಲಿ ಹತ್ತಿರ ಹೋಗಲು ನಿರ್ಬಂಧ. ಗಲಾಟೆ ಮಾಡಿ ಯಾಕೆ ಎಂದು ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಹರ್ಷನನ್ನು ನೋಡುವಾಗ ದುಃಖವಾಗುತ್ತಿತ್ತು. ಅತ್ತೆಯನ್ನು ನೋಡುವಾಗ ಹತ್ತಿರ ಹೋಗುವ ಆಸೆಯಾಗುತ್ತಿತ್ತು. ಅಮ್ಮನ ಬಳಿ, “ಅವರೆಲ್ಲಾ ಇನ್ನೆಷ್ಟು ದಿನ ಹಳೆಮನೆಯಲ್ಲಿ ಇರಬೇಕು?” ಕೇಳಿದರೆ, “ಇನ್ನು ಬರೀ ೮ ದಿನ” ” ಇನ್ನು ಬರೀ ೭ ದಿನ ” ಕೌಂಟ್ ಡೌನ್ ಶುರುವಾಗಿತ್ತು.
ಅಂದು ಬೆಳಿಗ್ಗೆ ಎದ್ದು ಅಜ್ಜನ ಪಕ್ಕ ಕುಳಿತು ದೊಡ್ಡಮ್ಮ ಮಾಡಿ ಹಾಕುತ್ತಿದ್ದ ದೋಸೆ ತಿನ್ನುತ್ತಿರುವಂತೆಯೇ ಊಟದ ಮನೆಯ ಬಾಗಿಲಲ್ಲಿ ಮದ್ರಾಸ್ ಅತ್ತೆ ಪ್ರತ್ಯಕ್ಷವಾಗಿದ್ದರು. ಅಜ್ಜನ ಕಣ್ಣು ಮಿನುಗಿತ್ತು. ದೊಡ್ಡಮ್ಮ ಬೆಳಿಗ್ಗೆಯಿಂದಲೇ ಸಂಭ್ರಮದಲ್ಲಿದ್ದರ ಕಾರಣ ತಿಳಿದಿತ್ತು. ತಿನ್ನುತ್ತಿದ್ದ ದೋಸೆಯೂ ಮರೆತು ಹೋಗಿತ್ತು. ಎಂಜಲು ಕೈ ಸಹ ಮರೆತು ಹೋಗಿತ್ತು. ಎದ್ದು ಓಡಿ ಹೋಗಿ ಅಪ್ಪಿಕೊಂಡಾಗ ಅಷ್ಟೇ ಗಟ್ಟಿಯಾಗಿ ಅತ್ತೆಯೂ ಅಪ್ಪಿಕೊಂಡಿದ್ದರು. ಮುತ್ತಿಕ್ಕಿದ್ದರು. ಅದೆಂತಹ ಸಂತೋಷ ಶಬ್ಧಗಳಲ್ಲಿ ಹೇಳಲಾಗದು. ಅವರು ತರುವ ಚಾಕಲೇಟ್ ಬೇಡ, ಬಿಸ್ಕತ್ ಬೇಡ. ಅವರ ಅಪ್ಪುಗೆ ಮಾತ್ರ ಶಾಶ್ವತವಾಗಿರಬೇಕು.
ಅಷ್ಟರಲ್ಲೇ ಹರ್ಷ ನೆನಪಾಗಿದ್ದ. ಆತನನ್ನು ಕರೆತರಲು ಹಳೆಮನೆಯ ಕಡೆಗೆ ಓಡಿದರೆ ಅವನಾಗಲೇ ಉಳಿದ ಮಕ್ಕಳೊಂದಿಗೆ ಅಂಗಳದಲ್ಲಿ ಆಟಕ್ಕೆ ಸೇರಿಯಾಗಿತ್ತು. ಬೆಂಗಳೂರು ಅತ್ತೆ ಸ್ನಾನ ಮುಗಿಸಿ ಹೊಸಮನೆಗೆ ಬರುವವರು, ಮಕ್ಕಳೆಲ್ಲಾ ಒಳಗೆ ಬನ್ನಿ, ತಿಂಡಿ ತಿಂದುಕೊಂಡು ಆಮೇಲೆ ಆಟವಾಡಿದರಾಯಿತು ಎಂದು ಗದರಿಸುವ ಧ್ವನಿಯಲ್ಲಿ ಹೇಳಿದಾಗ, ಪುನಃ ಎಲ್ಲರೊಂದಿಗೆ ಒಂದೇ ಊಟದ ಕೋಣೆಯಲ್ಲಿ, ಒಟ್ಟಿಗೆ ಕುಳಿತು ತಿನ್ನುವ ಆಸೆ ಅಂಗಳದಲ್ಲಿ ಆಟವಾಡುವುದಕ್ಕಿಂತ ಹೆಚ್ಚು ಪ್ರಿಯವೆನಿಸಿತ್ತು.
———————————————————————-
ಆಫೀಸಿನವರು ಮನೆಯಿಂದಲೇ ಕೆಲಸ ಮಾಡಿ ಎಂದು ಹೇಳಿ ಒಂದು ವಾರವಾಗಿತ್ತು. ಲಾಕ್ ಡೌನ್ ಆಗುತ್ತದೆ, ಲಾಕ್ ಡೌನ್ ಆಗುತ್ತದೆ ಎಂದು ಕೇಳುತ್ತಾ ಮೂರು ದಿನಗಳಾಗಿದ್ದವು. ಇಲ್ಲಿದ್ದು ಮಾಡುವುದೇನು? ಊರಿಗೇ ಹೋಗುವುದು. ಎಲ್ಲರೊಂದಿಗೆ ಇದ್ದರಾಯಿತು. ಮಕ್ಕಳಿಗೂ ಸ್ಕೂಲ್ ಇಲ್ಲ. ಇನ್ನೆಷ್ಟು ದಿನ ಈ ಪರಿ ಎಂದು ಗೊತ್ತಿಲ್ಲ. ರಾತ್ರಿಯೇ ಹೊರಡುವುದು ಎಂದು ತರಾತುರಿಯಲ್ಲಿ ಫ್ರಿಡ್ಜ್ ಎಲ್ಲಾ ಕಾಲಿ ಮಾಡಿ, ಒಂದಷ್ಟು ಬಟ್ಟೆ ಬರೆ, ಮಕ್ಕಳಿಗೆ ಪುಸ್ತಕಗಳು, ಹೀಗೆ ನೆನಪಿಗೆ ಬಂದಿದ್ದೆಲ್ಲವನ್ನೂ ತುಂಬಿಕೊಂಡು ಕಾರ್ ತೆಗೆದು ರಾತ್ರಿ ೧೦ ಗಂಟೆಗೆ ಹೊರಟರೆ, ಜೆ ಪಿ ನಗರದಿಂದಲೇ ಟ್ರಾಫಿಕ್ ತುಂಬಿತ್ತು. ರಿಂಗ್ ರೋಡ್ ಸುತ್ತಿ ಬೆಂಗಳೂರು ಸಿಟಿಯಿಂದ ಹೊರಬರುವಷ್ಟರಲ್ಲಿ ಗಂಟೆ ಬೆಳಿಗಿನ ಜಾವ ಒಂದೂವರೆ. ಮಕ್ಕಳಿಬ್ಬರೂ ನಿದ್ದೆಗೆ ಜಾರಿದ್ದರು. ಬೆಳಿಗ್ಗೆ ಮನೆ ಸೇರಿ ಇಡೀ ದಿನ ಮಲಗಿದರಾಯಿತು. ಇನ್ನೇನು ೫-೬ ಗಂಟೆಗಳ ಪಯಣ.
ಅರಸೀಕೆರೆ, ತರೀಕೆರೆ ದಾಟಿ, ಭದ್ರಾವತಿ ತಲುಪಿ, ಶಿವಮೊಗ್ಗ ತಲುಪುವಷ್ಟರಲ್ಲಿ ಸೂರ್ಯೋದಯವಾಗಿತ್ತು. ಬಸ್ ಸ್ಟಾಂಡ್ ಸಮೀಪದ ಹೋಟೆಲೊಂದರಲ್ಲಿ ಕಾಫಿ ಕುಡಿದು ಹೊರಡುವುದು ಎಂದು ಮಕ್ಕಳನ್ನು ಎಬ್ಬಿಸಿದರೆ, ನಮಗೇನೂ ಬೇಡ. ಅಜ್ಜನ ಮನೆಗೆ ಹೋದ ಮೇಲೆ ತಿಂಡಿ ತಿಂತೀವಿ ಎಂದು ಪುನಃ ಹೊದ್ದುಕೊಂಡು ಮಲಗಿದರು. ಮಕ್ಕಳಿಬ್ಬರನ್ನೇ ಕಾರಿನಲ್ಲಿ ಮಲಗಿಸಿ ಹೋಗಲು ಮನಸು ಬಾರದೆ, “ನೀವು ಹೋಗಿ ಕಾಫಿ ಕುಡಿದುಕೊಂಡು ಬನ್ನಿ. ಡ್ರೈವ್ ಮಾಡಬೇಕಲ್ಲ. ರಾತ್ರಿ ಇಡೀ ನಿದ್ದೆ ಬಿಟ್ಟಿದ್ದು. ಕಣ್ಣು ಕೂರಿದರೆ ಕಷ್ಟ. ಇನ್ನು ತಿರುವುಗಳು ಜಾಸ್ತಿ ” ಎಂದು ಹೇಳಿದಳು. ಆಕೆಯ ಕಣ್ಣೂ ಕೂರುತ್ತಿತ್ತು.
ಸಕ್ಕರೆಬೈಲು ದಾಟಿ ಮಂಡಗದ್ದೆ ಕಡೆ ಕಾಡಿನಲ್ಲಿ ಪ್ರಯಾಣಿಸುವಾಗ ಎಂದಿನಂತೆ ಕಾರಿನ ಕಿಟಕಿಯನ್ನು ಸಂಪೂರ್ಣವಾಗಿ ತೆಗೆದಿಟ್ಟುಕೊಂಡರು. ಆ ಗಾಳಿಯಲ್ಲಿ ಅದೆಂತಹ ಸತ್ವ. ಅದನ್ನು ಉಸಿರಾಡಿದರೆ ಸಾಕು ದೇಹದಲ್ಲಿ ಜೀವ ತುಂಬಿದ ಅನುಭವ. ಗಾಳಿಗೂ ರುಚಿಯಿರುತ್ತದೆ, ಗಾಳಿಯಲ್ಲೂ ಸಿಹಿಯಿರುತ್ತದೆ ಎಂದು ತಿಳಿಯಲು ಇಲ್ಲಿಗೇ ಬರಬೇಕು. ಶಿವಮೊಗ್ಗ ದಾಟಿ ಸಕ್ಕರೆಬೈಲು ದಾಟುವವರೆಗೂ ಈ ಅನುಭವ ದೊರೆಯುವುದಿಲ್ಲ. ಗಾಜನೂರು ಡ್ಯಾಮ್ ದಾಟುತ್ತಿರುವಂತೆಯೇ ಗಾಳಿ ಬದಲಾಗುತ್ತದೆ. ಸಿಹಿಯಾಗುತ್ತದೆ. ತೆಳುವಾಗುತ್ತದೆ. ಇನ್ನು ನಿದ್ದೆ ಬಾರದು. ಮನೆ ತಲುಪುವವರೆಗೂ ಕಣ್ಣಿಗೆ ಹಬ್ಬ.
ತೀರ್ಥಹಳ್ಳಿ ದಾಟಿ, ಕೊಪ್ಪದ ಕಡೆ ತಿರುಗಿ, ನಾಲ್ಕಾರು ಮೈಲು ಬಂದು ಇನ್ನೇನು ಊರಿನ ಕಡೆಗೆ ಕೊನೆಯ ತಿರುವು. ದಾರಿಯಲ್ಲಿ ಕಲ್ಲು ಮಣ್ಣು, ಬಿದ್ದ ಮರ. ತಾನಾಗಿಯೇ ಬಿದ್ದಂತೆ ಕಾಣುತ್ತಿಲ್ಲ. ಬೇಕೆಂದೇ ಅಡ್ಡ ಹಾಕಿದ ಹಾಗೆ ಕಾಣಿಸುತ್ತಿದೆ. ಫೋನ್ ನೆಟ್ವರ್ಕ್ ಬೇರೆ ಸಿಗುತ್ತಿಲ್ಲ. ಕಾರನ್ನು ತಿರುಗಿಸಿ ತೀರ್ಥಹಳ್ಳಿ ಕಡೆ ಹೋಗಿ ನೆಟ್ವರ್ಕ್ ಸಿಕ್ಕಿದಲ್ಲಿ ಮನೆಗೆ ಫೋನ್ ಮಾಡಿದರಾಯಿತು. ಕಾರ್ ನೂರಿನ್ನೂರು ಮೀಟರ್ ಬಂದಾಗಿತ್ತು ಅಷ್ಟೇ. ಹಾಳೆ ಟೊಪ್ಪಿ ಹಾಕಿಕೊಂಡು ಊರಿನ ಕಡೆಗೆ ನೆಡೆದುಕೊಂಡು ಹೊರಟ ಕೆಲಸಗಾರ ಕಾಣಿಸಿದ್ದ.
ಕಾರನ್ನು ನಿಲ್ಲಿಸಿ, “ಏನಪ್ಪಾ ಇದು? ಮರ ಬಿದ್ದಿದೆ. ರೋಡಿನ ಮೇಲೆ ಕಲ್ಲು ಮಣ್ಣು ” ಕೇಳಿದರೆ, “ಅಯ್ಯೋ ಸ್ವಾಮಿ, ಎರಡು ದಿನದಿಂದ ಕಷ್ಟ ಪಟ್ಟು ಊರಿನವರೆಲ್ಲಾ ಸೇರಿ, ಮರ ಕಡಿದು ರಸ್ತೆ ಬಂದ್ ಮಾಡಿದ್ದೀವಿ. ಮುಂಬೈಯಿಗೆ, ಬೆಂಗಳೂರಿಗೆ ಬಂದಿದೆಯಂತಲ್ಲ, ಮಹಾಮಾರಿ. ಒಬ್ಬರಿಗೆ ಅಂಟಿದ್ದು ಇಡೀ ಊರಿಗೆ ಅಂಟುತ್ತದೆಯಂತಲ್ಲ. ಇಲ್ಲಿ ದನ ಕರು ನೋಡಿಕೊಂಡು, ಜಾಮೀನು ಕೆಲಸ ಮಾಡಿ ಬದುಕುವ ನಾವು ಅಂಟಿಸಿಕೊಂಡರೆ, ನಮಗೆ ಅನ್ನ ಹಾಕೋರ್ಯಾರು. ಅದಕ್ಕೇ ಊರಿನವರೆಲ್ಲ ಸೇರಿ ರಸ್ತೆ ಮುಚ್ಚದು ಅಂತ ನಿರ್ಧಾರ ಮಾಡಿದ್ವಿ. ನೀವ್ ಯಾವ್ ಕಡೆ?”
“ಊರಿನವರೆಲ್ಲಾ ಸೇರಿ… ” … ಯಾವ ಕಡೆ ಎಂದು ಹೇಳುವ ಅಗತ್ಯ ಕಾಣಿಸಲಿಲ್ಲ. ಗಂಟೆ ೯:೩೦ ಆಗಿತ್ತು. ತೀರ್ಥಹಳ್ಳಿಯಲ್ಲಿ ಹೋಟೆಲ್ ಯಾವುದಾದರೂ ಓಪನ್ ಇದ್ದರೆ ಒಂದು ತಿಂಡಿ ತಿಂದು ಬೆಂಗಳೂರು ತಲುಪಿದರಾಯಿತು. ಇಲ್ಲಾ, ಯಾವುದಾದರೂ ಗೂಡಂಗಡಿಯಲ್ಲಿ ಬಾಳೆ ಹಣ್ಣೋ, ಬಿಸ್ಕತ್ತೋ ಕೊಂಡುಕೊಂಡರಾಯಿತು.ಎಂದುಕೊಳ್ಳುತ್ತಿರುವಾಗಲೇ ಕಾರಿನ ಆಕ್ಸಿಲೇಟರ್ ಜೋರಾಗಿತ್ತು. ನಿದ್ದೆ ಎಂಬ ಲಗ್ಝುರಿ ಇನ್ನೂ ಎಂಟು ಹತ್ತು ಗಂಟೆಗಳ ಬಳಿಕ ಸಿಗಬಹುದಾದ ಮರೀಚಿಕೆಯಾಗಿತ್ತು.
——————————————
ಗಂಟೆ ಆರಾಯಿತು. ಸೈಕಲ್ ಹೊಡೆಯಲು ಹೋಗೋದು ಬೇಡವಾ? ಏಳು….ಮನೆಯವರು ಎಬ್ಬಿಸಿದಾಗ, ಕಣ್ಣು ಬಿಟ್ಟು ನೋಡಿದರೆ, ಇನ್ನೂ ಜರ್ಮನಿಯಲ್ಲಿದ್ದೆ. ಕಂಡಿದ್ದೆಲ್ಲಾ ಕನಸುಗಳು. ಅಜ್ಜ, ದೊಡ್ಡಮ್ಮಂದಿರೂ ಇನ್ನಿಲ್ಲ. ಅಪ್ಪ ಮತ್ತು ಮದ್ರಾಸ್ ಅತ್ತೆಯೂ ಇನ್ನಿಲ್ಲ. ಆದರೆ ಅವರೆಲ್ಲರ ನಡುವಿನ ನಂಟು, ಅವರೆಲ್ಲರ ಪ್ರೀತಿ, ವಿಶ್ವಾಸ ೩೫ ವರ್ಷಗಳ ಹಿಂದೆ, ೫-೬ ವರ್ಷದವಳಾಗಿದ್ದಾಗ ಹೇಗಿತ್ತೂ ಹಾಗೆ, ಅಂದಿನಂತೆಯೇ ಕನಸಿನಲ್ಲಿ ಬಂದಿತ್ತು. ಅತ್ತೆಯ ಅಪ್ಪುಗೆ ಇನ್ನೊಮ್ಮೆ ಸಿಕ್ಕಿತ್ತು.
ಇನ್ನೊಂದು ಮಾತ್ರ ಕೆಟ್ಟ ಕನಸು. ಆ ಸ್ಥಿತಿ ಮಾತ್ರ ಎಂದಿಗೂ ಬೇಡ ಎಂದುಕೊಳ್ಳುವಷ್ಟರಲ್ಲಿ , ಮನೆಯ ನೆನಪಾಗಿತ್ತು. ಸೈಕ್ಲಿಂಗ್ ಹೋಗುವ ಮೊದಲು ತಮ್ಮನ ಹತ್ತಿರ, ಅಣ್ಣನಂತಿರುವ ಮಾವನ ಮಗನ ಹತ್ತಿರ ಮಾತನಾಡೋಣ ಎಂದುಕೊಳ್ಳುವಷ್ಟರಲ್ಲಿ, ಕಿಶೋರನ ಫೋನ್ ಬಂದಿತ್ತು. “ಹೇಗಿದೆ ನಿಮ್ಮ ಕಡೆ. ಉಳಿದ ದೇಶಗಳಿಗೆ ಹೋಲಿಸಿದರೆ, ನಿಮ್ಮಲ್ಲಿ ಡೆತ್ ರೇಟ್ ಕಡಿಮೆ ಇದೆ. ಫುಲ್ ಲಾಕ್ ಡೌನ್ ಮಾಡಿದ್ದಾರಾ?” ಕೇಳುತ್ತಿದ್ದ.
“ಕೋರೋನಾ ಬಂದು ಆಫೀಸಿನವರು ಮನೆಯಿಂದ ಕೆಲಸ ಮಾಡಿ ಎಂದು ಹೇಳಿ ತಿಂಗಳಾಗಿದೆ. . ಲಾಕ್ ಡೌನ್ ಅಂತ ಏನೂ ಇಲ್ಲ. ಒಂದೇ ಸೂರಿನಡಿ ವಾಸಿಸದವರು ಇಬ್ಬರಿಗಿಂತ ಹೆಚ್ಚು ಮಂದಿ ಒಟ್ಟಿಗೆ ಸೇರಬಾರದು ಎಂಬ ರೂಲ್ ಮಾತ್ರ. ಮನೆಯಿಂದಲೇ ಕೆಲಸ ಮಾಡಲು ಶುರು ಮಾಡಿದಂದಿನಿಂದ ಬೆಳಿಗ್ಗೆ ಆಫೀಸಿಗೆ ಓಡುವ ಆತುರವಿಲ್ಲ. ದಿನಾ ಬೆಳಿಗ್ಗೆ ಎದ್ದು ಒಂದು ಎಂಟು ಹತ್ತು ಕಿಲೋಮೀಟರ್ ಸೈಕ್ಲಿಂಗ್ ಮಾಡುವುದು. ಆಮೇಲೆ ಬಂದು ತಿಂಡಿ ತಿಂದು ಆಫೀಸ್ ಕೆಲಸಕ್ಕೆ ಕೂರುವುದು. ಮಕ್ಕಳಿಗೂ ಮನೆಯಿಂದಲೇ ಹೋಂ ವರ್ಕ್. ಒಂದು ರೀತಿ ರಜೆ ಸಿಕ್ಕ ಅನುಭವ. ಹೊರಗೆ ಹೋದಾಗ ಯಾರಾದರೂ ಸಿಕ್ಕಿದರೆ ಹತ್ತಿರ ನಿಂತು ಮಾತನಾಡುವ ಬದಲು ದೂರ ನಿಂತು ಮಾತನಾಡುತ್ತೇವೆ ಅಷ್ಟೇ. ಕೊರೋನಾಗೆ ಥ್ಯಾಂಕ್ಸ್ ಹೇಳಬೇಕೆನಿಸುತ್ತಿದೆ.”
” ಊರಲ್ಲಿ ಲಾಕ್ ಡೌನ್ ಹೇಗೆ ನೆಡೆಯುತ್ತಿದೆ” ಕೇಳಿದೆ.
ಲಾಕ್ ಡೌನ್ ಶುರುವಾದಾಗಿನಿಂದ ಯಾರಿಗೂ ಊಟಕ್ಕೆ ತೊಂದರೆ ಆಗಬಾರದೆಂದು “ಊಟ ವಿತರಣೆ” ಕೆಲಸ ಶುರು ಮಾಡಿದ್ದೇವೆ. ೫೪ ಊಟದ ಪ್ಯಾಕುಗಳಿಂದ ಶುರುವಾಗಿದ್ದು, ಈಗ ೫೪೦-೫೭೦ ಪ್ಯಾಕ್ ಊಟ ತಯಾರು ಮಾಡುತ್ತಿದ್ದೇವೆ. ಒಳ್ಳೆಯ ರೆಸ್ಪಾನ್ಸ್ ಇದೆ. ಕೆಲವರು ಈರುಳ್ಳಿ ದಾನ ಮಾಡಿದರೆ, ಇನ್ನು ಕೆಲವರು ಅಕ್ಕಿ ಕೊಡುತ್ತಾರೆ. ಕೆಲವರು ದುಡ್ಡು.”
ಕಂಡ ಎರಡನೇ ಕನಸು ಕಲ್ಪನೆ ಮಾತ್ರ ಎಂದು ಅವನೊಂದಿಗೆ ಮಾತನಾಡಿದ ಮೇಲೆ ಸಮಾಧಾನವಾಗಿತ್ತು. ಫೇಸ್ಬುಕ್, ವಾಟ್ಸಪ್ಪ್ ನೋಡಿದ್ದು ಜಾಸ್ತಿಯಾಯಿತು. ಮೀಡಿಯಾ ತೋರಿಸುವುದೆಲ್ಲಾ ಸತ್ಯ ಎಂದುಕೊಳ್ಳಲು ಶುರು ಮಾಡಿದರೆ, ಅಂತಹ ಕನಸೇ ಬೀಳುವುದು. ಸೋಶಿಯಲ್ ಮೀಡಿಯಾ ಡಯಟ್ ಮಾಡಬೇಕು ಎಂದುಕೊಂಡು ಸೈಕ್ಲಿಂಗ್ ಹೋಗಲು ತಯಾರಾಗತೊಡಗಿದೆ.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020