2011ರಲ್ಲಿ ನಮ್ಮ ನಾರ್ವೆ ಪ್ರವಾಸದ ನಂತರ, ಒಂದು ದಿನ ಕಚೇರಿಯಲ್ಲಿ ವಿವಿಧ ಸ್ಥಳಗಳು ಮತ್ತು ವಾಯುಮಾಲಿನ್ಯದ ಬಗ್ಗೆ ಚರ್ಚೆ ಪ್ರಾರಂಭವಾಯಿತು. ನಾರ್ವೆ ದೇಶದ ಗಾಳಿಯ ಗುಣಮಟ್ಟ ಉತ್ತಮವಾಗಿದೆ ಎಂದು ನಾನು ಹೇಳುತ್ತಿದ್ದರೇ, ನನ್ನ ಸಹೋದ್ಯೋಗಿ ಸ್ಟೆಫನ್ ಟೋಬೋರ್ಗ್ ಐಸ್ಲ್ಯಾಂಡ್ ಅತ್ಯುತ್ತಮವಾದುದು ಹಾಗೂ ನಾರ್ವೆ ದೇಶಕ್ಕಿಂತಲೂ ಫ್ರೆಶ್ ಎನಿಸುತ್ತದೆ ಎಂದು ಹೇಳಿದರು. ಅವರ ಐಸ್ಲ್ಯಾಂಡ್ ಸೈಕ್ಲಿಂಗ್ ಪ್ರವಾಸದ ಕೆಲವು ಚಿತ್ರಗಳನ್ನು ತೋರಿಸಿ ಕನಸಿನ ಬೀಜವನ್ನು ಮನದಲ್ಲಿ ಬಿತ್ತಿದರು.
೨೦೧೦ ರಲ್ಲಿ ಭುಗಿಲೆದ್ದ ಜ್ವಾಲಾಮುಖಿಯ ಪರಿಣಾಮವಾಗಿ ಯೂರೋಪಿನ ಸುಮಾರು ೨೦ ದೇಶಗಳ ವಿಮಾನಗಳೆಲ್ಲಾ ರದ್ದಾಗಿ ಸುಮಾರು ೧೦ ಮಿಲಿಯನ್ ಜನರ ಪ್ರಯಾಣ ಅಸ್ತವ್ಯಸ್ಥವಾಗಿತ್ತು. ಇನ್ನೂ ಹಲವಾರು ಜ್ವಾಲಾಮುಖಿಗಳು ಭುಗಿಲೇಳಲು ಸಮಯವಾಗಿದೆ ಎಂಬ ವಿಷಯ ಗೊತ್ತಿದ್ದುಕೊಂಡು, ಐಸ್ಲ್ಯಾಂಡಿನ ಪ್ರವಾಸ ೨೦೧೪ ರಲ್ಲಿ ಕೈಗೊಳ್ಳುವುದು ಒಂದು ರೀತಿಯ ಸಾಹಸವೇ ಆಗಿತ್ತು. ಜೊತೆಯಲ್ಲಿ ೧.೫ ವರ್ಷದ ಒಂದು ಮಗು, ೬ ವರ್ಷದ ಇನ್ನೊಂದು ಮಗು ಬೇರೆ.ಹಾಗಾಗಿ ನಾವೇ ರೆಂಟಲ್ ಕಾರ್ ತೆಗೆದುಕೊಂಡು ಓಡಿಸುವ ಪ್ಲಾನ್ ಮಾಡದೆ, ಐಸ್ಲ್ಯಾಂಡಿನ ರಾಜಧಾನಿ ರೇಯ್ಕವಿಕ್ ಗೆ ಹೋಗಿ ಅಲ್ಲಿಂದ ಪ್ಯಾಕೇಜ್ ಟ್ರಿಪ್ ತೆಗೆದುಕೊಂಡು ಓಡಾಡುವುದು ಎಂದು ನಿರ್ಧರಿಸಿದೆವು.ಇರಲು ರೇಯ್ಕವಿಕ್ ನಲ್ಲಿ ಒಂದು ಅಪಾರ್ಟ್ಮೆಂಟ್ ಬುಕ್ ಮಾಡಿದೆವು. ಟ್ರಿಪ್ ಎಂದರೆ ತಯಾರಿ ಬೇಕಲ್ಲ. ಐಸ್ಲ್ಯಾಂಡ್ ಬಗ್ಗೆ ಓದಿ ತಿಳಿದುಕೊಂಡು ಎಲ್ಲೆಲ್ಲಿ ಹೋಗುವುದೆಂದು ನಿರ್ಧರಿಸಲು ಶುರುಮಾಡಿದೆವು.
ವಿಮಾನ ನಿಲ್ದಾಣದಲ್ಲಿ ಇಳಿದು, ಬಸ್ ಹತ್ತಿ ಹೋಟೆಲ್ ಗೆ ಹೋಗಲು ಹೊರಟರೆ, ಬ್ಯಾಗಿನಿಂದ ಹೊಗೆ ಬರಲು ಶುರುವಾಗಿತ್ತು. ಏನಾಯಿತೆಂದು ತೆಗೆದು ನೋಡಿದರೆ ಪ್ಯಾನಸೋನಿಕ್ ಕ್ಯಾಮೆರಾ ಬ್ಯಾಟರಿ ಸುಡಲು ಶುರುವಾಗಿತ್ತು. ಬೇಗ ಬೇಗ ಬ್ಯಾಟರಿಯನ್ನು ಕ್ಯಾಮೆರದಿಂದ ತೆಗೆದಮೇಲೆ ಹೊಗೆ ನಿಂತಿತ್ತು. ಜೊತೆಗೆ ಫೋಟೋ ತೆಗೆಯುವ ಆಸೆಗೂ ನೀರೆರೆಚಿದಂತೆ ಆಗಿತ್ತು.ಅಪಾರ್ಟ್ಮೆಂಟ್ ತಲುಪಿದ ಮೇಲೆ ಕ್ಯಾಮೆರಾ ಚೆಕ್ ಮಾಡಿದರೆ ಅದು ಇನ್ನು ಕೆಲಸ ಮಾಡುವುದಿಲ್ಲವೆಂದು ತಿಳಿಯಿತು. ಒಂದೂ ಫೋಟೋ ತೆಗೆಯದೆ ಐಸ್ಲ್ಯಾಂಡ್ ಟ್ರಿಪ್ ಮುಗಿಸುವ ಮನಸ್ಸು ನಮಗಿರಲಿಲ್ಲ. ಅಲ್ಲೇ ಒಂದು ಹೊಸ ಕ್ಯಾಮೆರಾ ಕೊಂಡುಕೊಳ್ಳುವುದು ಎಂದು ನಿರ್ಧರಿಸಿದೆವು. ಮೊದಲೇ ದುಬಾರಿಯಾಗಿದ್ದ ಐಸ್ಲ್ಯಾಂಡ್ ಟ್ರಿಪ್ ಇನ್ನೂ ದುಬಾರಿಯಾಗಿ ಪರಿಣಮಿಸಿತ್ತು.
ಮೊದಲ ದಿನದ ಟ್ರಿಪ್ “ಗೋಲ್ಡನ್ ಸರ್ಕಲ್ ಕ್ಲಾಸಿಕ್” ಸುಮಾರು ೮.೫ ಗಂಟೆಗಳ ಪ್ರವಾಸ “ಗುಲ್ಪೋಸ್” ಜಲಪಾತ, ಥಿಂಗ್ವೇಲಿರ್ ನ್ಯಾಷನಲ್ ಪಾರ್ಕ್, ಹಾಗೂ ಐಸ್ಲ್ಯಾಂಡಿನ ಫೇಮಸ್ ಗೀಸರ್ “ಬಿಸಿನೀರಿನ ಬುಗ್ಗೆಗಳನ್ನು” ಕವರ್ ಮಾಡುವಂತದ್ದಾಗಿತ್ತು. ಥಿಂಗ್ವೇಲಿರ್ ನ್ಯಾಷನಲ್ ಪಾರ್ಕ್ ಅಮೆರಿಕನ್ ಮತ್ತು ಯುರೇಷಿಯನ್ ಟೆಕ್ಟಾನಿಕ್ ಪ್ಲೇಟ್ಸ್, ಅಂದರೆ ಈ ಎರಡೂ ಖಂಡಗಳನ್ನು ಸೇರಿಸಿದ ಭೂಮಿಯ ಮೇಲ್ಪದರ ದೂರಸರಿಯುತ್ತಿರುವುದು ಕಾಣಿಸುವ ಪ್ರದೇಶವಾಗಿತ್ತು. ೨೦೧೪ ನಲ್ಲಿ ಈ ಟ್ರಿಪ್ ಗೆ ಒಬ್ಬರಿಗೆ ೬೪ ಯೂರೋಗಳು.
ಟ್ರಾವೆಲ್ ಗೈಡ್ ಐಸ್ಲ್ಯಾಂಡಿನ ಇತಿಹಾಸ, ಸಂಸ್ಕೃತಿಗಳ ಬಗ್ಗೆ ತಮಾಷೆಯಾಗಿ ವಿವರಿಸುತ್ತಿದ್ದಳು. ಬೆಂಕಿ ಮತ್ತು ಹಿಮ ಜೊತೆ ಜೊತೆಯಲ್ಲಿ ಇರುವ ದೇಶ ಒಂದಿದೆ ಅಂದರೆ ಯಾರಿಗೆ ತಾನೇ ಆಶ್ಚರ್ಯವಾಗದು ? ಯಾಕೆಂದ್ರೆ ಬೆಂಕಿ ಮತ್ತು ಹಿಮ ಸಾಮಾನ್ಯವಾಗಿ ಒಟ್ಟಿಗೆ ಇರೋದೇ ಇಲ್ಲ . ಪ್ರಕೃತಿಯ ವಿಸ್ಮಯ ಅಲ್ಲವೇ ಇದು ? ಹೌದು . ಐಸ್ಲ್ಯಾಂಡ್ ದೇಶವನ್ನು ಇದೇ ಕಾರಣಕ್ಕಾಗಿ ’ಬೆಂಕಿ ಮತ್ತು ಹಿಮದ ನಾಡು ’ ಎಂದು ಕರೆಯುತ್ತಾರೆ . ಈ ದೇಶ ಒಂದು ರೀತಿಯಲ್ಲಿ ನೋಡಿದರೆ ಯಾವ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನೂ ಹೊಂದಿಲ್ಲ . ಕಾಡುಗಳಿಲ್ಲ , ಬೇಸಾಯ ಮಾಡಲು ಸಹಾಯಕರವಾದ ಹವಾಮಾನವಿಲ್ಲ , ನೀರಿನಲ್ಲಿ ಲವಣದ ಅಂಶವೇ ಜಾಸ್ತಿ . ಜನಸಂದಣಿ ಅಂತೂ ಇಲ್ಲವೇ ಇಲ್ಲ. ಈ ದೇಶದಲ್ಲಿ ರಕ್ಷಣಾ ಪಡೆಗಳೇ ಇಲ್ಲ , ಅಂದರೆ ಭೂಪಡೆ ,ಜಲಪಡೆ , ವಾಯುಪಡೆ ಏನೂ ಇಲ್ಲ.
ಮಾತು ಕೇಳುತ್ತಾ ಥಿಂಗ್ವೇಲಿರ್ ನ್ಯಾಷನಲ್ ಪಾರ್ಕ್ ತಲುಪಿದ್ದೇ ಗೊತ್ತಾಗಿರಲಿಲ್ಲ.
ಈ ಜಾಗದ ವಿಶೇಷತೆ ಗೊತ್ತಿಲ್ಲದಿದ್ದರೆ ಇದೆಂತಹ ಕಲ್ಲಿನ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ ಎನಿಸುತ್ತಿತ್ತೋ ಏನೋ. ಅಮೆರಿಕನ್ ಮತ್ತು ಯುರೇಷಿಯನ್ ಖಂಡಗಳು ಬೇರೆ ಬೇರೆಯಾಗಿ ದೂರ ಸರಿಯುತ್ತಿರುವ ಸ್ಥಳದಲ್ಲಿ ನಿಂತಿದ್ದೇವೆಂದು ತಿಳಿದುಕೊಂಡಾಗ ಆ ಜಾಗ ವಿಶೇಷವಾಗಿ ಕಂಡಿತ್ತು.
ಥಿಂಗ್ವಲ್ಲ ವಟ್ನ್ (ವಟ್ನ್ ಎಂದರೆ ಸರೋವರ ಎಂದು ಅರ್ಥ ) ಐಸ್ಲ್ಯಾಂಡಿನ ಅತಿ ದೊಡ್ಡ ಸರೋವರ.ಅದೆಷ್ಟು ದೊಡ್ಡದಾಗಿ ಪ್ರಶಾಂತವಾಗಿತ್ತು ಎಂದರೆ, ಬಸ್ಸಿನಲ್ಲಿ ಹೋಗಿಲ್ಲದಿದ್ದರೆ ಅಲ್ಲೇ ಅರ್ಧ ದಿನ ಕಳೆಯುತ್ತಿದ್ದೇವೇನೋ.
ಗುಲ್ಫೋಸ್ ಜಲಪಾತ:
೨೦ನೇ ಶತಮಾನದ ಶುರುವಿನಲ್ಲಿ ಪರದೇಶದ ಇನ್ವೆಸ್ಟರ್ಸ್ ಈ ಗುಲ್ಪೋಸ್ ಜಲಪಾತವನ್ನು ಹೈಡ್ರೊ ಎಲೆಕ್ಟ್ರಿಕ್ ಪವರ್ ಗಾಗಿ ಉಪಯೋಗಿಸುವ ಪ್ಲಾನ್ ಮಾಡಿ, ಅದನ್ನು ಕೊಳ್ಳಲು ತಯಾರಾದರು. ಆ ಜಾಗ ತೋಮಸನ್ ಎಂಬ ಕೃಷಿಕನಿಗೆ ಸೇರಿತ್ತು. ತೋಮಸ್ ಜಲಪಾತವನ್ನು ಮಾರದೆ, ಅದನ್ನು ಲೀಸ್ ಗಾಗಿ ಹೊವೆಲ್ಸ್ ಎಂಬ ಕಂಪನಿಗೆ ಕೊಟ್ಟಿದ್ದ. ಅದನ್ನು ವಿರೋಧಿಸಿ ತೋಮಸ್ ಮಗಳು ಸಿಗ್ರಿಯೂರ್ ಕೋರ್ಟಿಗೆ ಹೋದಳು. ಹಾಗೂ ಆ ಲೀಸ್ ಕಾಂಟ್ರಾಕ್ಟ್ ಕ್ಯಾನ್ಸಲ್ ಮಾಡದಿದ್ದರೆ ತಾನು ಜಲಪಾತಕ್ಕೆ ಹಾರಿ ಜೀವ ತೆಗೆದುಕೊಳ್ಳುವುದಾಗಿ ಹೆದರಿಸಿ ಹೈಡ್ರೊ ಎಲೆಕ್ಟ್ರಿಕ್ ಪವರ್ ಪ್ಲಾಂಟ್ ಕನ್ಸ್ಟ್ರಕ್ಷನ್ ಆಗದಂತೆ ತಡೆದಳು. ಕೊನೆಗೆ ಕೋರ್ಟ್ ಆ ಜಲಪಾತವನ್ನು ಸಂರಕ್ಷಿಸುವ ನಿರ್ಧಾರ ಮಾಡಿತು. ಈ ಕಥೆಯನ್ನು ಕೇಳಿದ ಮೇಲೆ, “ಗುಲ್ಪೋಸ್” ಜಲಪಾತ ನೋಡಲೇಬೇಕೆಂಬ ಆಸೆ ನಮ್ಮದಾಗಿತ್ತು.
ನಂತರದ ಸ್ಟಾಪ್ ನಮ್ಮ ಪ್ರೀತಿಯ ಗುಲ್ಫೋಸ್ ಜಲಪಾತವಾಗಿತ್ತು. ಸಮತಲವಾಗಿದ್ದ ಆ ಪ್ರದೇಶದಲ್ಲಿ ಜಲಪಾತ ಇದೆ ಎಂದೇ ಗೊತ್ತಾಗುತ್ತಿರಲಿಲ್ಲ.
ಈ ದೇಶಕ್ಕೆ ಸಂಬಂಧಿಸಿದಂತೆ ಒಂದು ಹಾಸ್ಯವಿದೆ . ಈ ದೇಶದಲ್ಲಿ ಪ್ರವಾಸಿಗರು ಕಳೆದುಹೋದರೆ ಅಥವಾ ದಾರಿ ತಪ್ಪಿಹೋದರೆ ಏನು ಮಾಡಬೇಕಂತೆ ಗೊತ್ತಾ ? ಇದ್ದಲ್ಲೇ ನಿಂತುಕೊಂಡರೆ ಸಾಕಂತೆ . ಏಕೆಂದ್ರೆ ಇಲ್ಲಿ ದೊಡ್ಡ ದೊಡ್ಡ ಮರಗಳೇ ಇಲ್ಲ. ದೂರ ದೂರಕ್ಕೂ ಬರೀ ಲಾವಾರಸ ಗಟ್ಟಿಯಾದ ಮಣ್ಣಿನ ಗಡ್ದೆಗಳು ಅಥವಾ ಕುರುಚಲು ಗಿಡಗಳು ಮಾತ್ರ.
ಪಾರ್ಕಿಂಗ್ ಲಾಟಿನಿಂದ ಸುಮಾರು ೨೫೦ ಮೀಟರ್ ನೆಡೆದರೆ ಸಾಕು ಅಷ್ಟೇ. ಹ್ವಿಟ ಎಂಬ ನದಿ ಭೋರ್ಗರೆಯುವ ಜಲಪಾತವಾಗಿ ದುಮುಕುತ್ತಿತ್ತು.
ಬೇಸಿಗೆಯಲ್ಲಿ ನಿಮಿಷಕ್ಕೆ ೧೪೦ ಕ್ಯೂಬಿಕ್ ಮೀಟರ್ ನೀರು ಆ ಜಲಪಾತದಲ್ಲಿ ಬೀಳುತ್ತಿದ್ದರೆ, ಚಳಿಗಾಲದಲ್ಲಿ ೮೦ ಕ್ಯೂಬಿಕ್ ಮೀಟರ್ ಅಂತೆ. ಮೇಲೆ ನಿಂತು ನೋಡಿದಾಗ ಜಲಪಾತ ಭೂಗರ್ಭದಲ್ಲಿ ಮಾಯವಾಗುವಂತೆ ಕಾಣುತ್ತಿತ್ತು.
ಜಲಪಾತದ ಹತ್ತಿರ ಹೋಗಲು ದಾರಿಯಿತ್ತು. ಗಾಳಿಯಲ್ಲಿದ್ದ ತೇವ ಚಳಿ ಹುಟ್ಟಿಸಿತ್ತು. ಸುಮಾರು ಜನ ಇಳಿದುಕೊಂಡು ನೆಡೆದುಕೊಂಡು ಹೋಗುತ್ತಿದ್ದರು. ನಾವೂ ಜೊತೆಗೂಡಿದೆವು.
ನೀರು ನೊರೆನೊರೆಯಾಗಿ, ಅಗಲವಾಗಿ ಮೆಟ್ಟಲಿನಂತೆ ಇಳಿದಿಳಿದು ಕೊರಕಲಿನಲ್ಲಿ ಇಳಿಯುತ್ತಿತ್ತು.
ಸಿಗ್ರಿಯೂರ್ ಳ ಮೆಮೋರಿಯಲ್ ಕಲ್ಲು ಆ ಜಲಪಾತವನ್ನು ಪ್ರಕೃತಿಯಲ್ಲಿ ಇದ್ದಂತೆಯೇ ಇರಲು ಆಕೆ ಮಾಡಿದ ಹೋರಾಟವನ್ನು ನೆನಪಿಸಿತು.
ಅಂದು ಮೋಡ ಮುಸುಕಿದ್ದ ಕಾರಣ ಸಾಮಾನ್ಯವಾಗಿ ಐಸ್ಲ್ಯಾಂಡ್ ಜಲಪಾತಗಳಲ್ಲಿ ಕಾಣುವ ಕಾಮನಬಿಲ್ಲು ಕಾಣಿಸಿರಲಿಲ್ಲ. ನಮ್ಮ ಅದೃಷ್ಟವೇನೋ. ಕೊನೆಯ ದಿನ ಬೇರೆ ಯಾವುದೊ ಟ್ರಿಪ್ ಬುಕ್ ಮಾಡಿಕೊಂಡು ಬಸ್ಸಿನ ಬಳಿ ಬಂದಾಗ, ಗುಲ್ಫೋಸ್ ಕಡೆ ಹೋಗುವ ಬಸ್ಸಿನ ಡ್ರೈವರ್ ನನ್ನ ಜೊತೆ ಬರುವುದಿಲ್ಲವೇ? ಎಂದು ವಿಶ್ವಾಸದಲ್ಲಿ ಕೇಳಿದಾಗ, ಪುನಃ ಜಲಪಾತ ನೋಡುವ ಆಸೆಯಾಗಿ ಟ್ರಿಪ್ ಚೇಂಜ್ ಮಾಡಿಸಿಕೊಂಡು ಪುನಃ ಜಲಪಾತಕ್ಕೆ ಹೋದೆವು. ಅಂದು ನಮಗೆ ಸಂಪೂರ್ಣ ಕಾಮನಬಿಲ್ಲು ನೋಡಲು ಸಿಕ್ಕಿ ಜಲಪಾತ ಇನ್ನೂ ಸುಂದರವಾಗಿ ಕಾಣಿಸಿತು.
ಟ್ರಾವೆಲ್ ಗೈಡ್ ತಮಾಷೆ ಮಾಡಿ ಮಾತನಾಡುತ್ತಿದ್ದಳು. ಜರ್ಮನಿಯವರು ಸುರ್ರ್ ಎಂದು ಎಲ್ಲರೆದುರಿನಲ್ಲಿ ಸಿಂಬಳ ಸುರಿಯುವಂತೇ ಐಸ್ಲ್ಯಾಂಡಿನವರು ಸುರ್ರ್ ಎಂದು ಶಬ್ದ ಮಾಡಿಕೊಂಡು ಕಾಫಿ ಕುಡಿಯುತ್ತಾರೆ ಎಂದು ಹೇಳಿ ಎರಡನ್ನೂ ಶಬ್ದ ಮಾಡಿ ತೋರಿಸಿದಾಗ ಬಸ್ಸಿನಲ್ಲಿ ಇರುವವರೆಲ್ಲಾ ನಗೆಗಡಲಿನಲ್ಲಿ ತೇಲಿದ್ದರು. ಐಸ್ಲ್ಯಾಂಡಿನ ಬ್ಯಾಂಕುಗಳು ದಿವಾಳಿಯಾದ ಬಗ್ಗೆ , ಐಸ್ಲ್ಯಾಂಡಿನ ಬ್ಯಾಂಕಿನವರು ಅದೆಷ್ಟು ಇಂಟೆಲಿಜೆಂಟ್ ಎಂದು ವ್ಯಂಗ್ಯವಾಗಿ ತಿಳಿಸಿದಳು.
ಗೆಯ್ಸಿರ್ ಜಿಯೋ ಥರ್ಮಲ್ ಪ್ರದೇಶ: (ಗೆಯ್ಸಿರ್ ಬಿಸಿನೀರಿನ ಬುಗ್ಗೆಗಳ ಜಾಗ)
ಮೊದಲನೇ ದಿನದ ಕೊನೆಯ ಸ್ಟಾಪ್ ಇದಾಗಿತ್ತು. ಇಲ್ಲಿ ಹಲವಾರು ಬಿಸಿನೀರಿನ ಬುಗ್ಗೆಗಳಿವೆ. ಭೂಮಿಯ ಅಡಿಯಲ್ಲಿರುವ ಶಿಲಾದ್ರವ ಭೂಮಿಯ ಪದರಕ್ಕೆ ಅತೀ ಹತ್ತಿರದಲ್ಲಿ ಇರುವುದರಿಂದ, ಭೂಮಿಯ ಮೇಲಿನ ನೀರು ಬಿಸಿಯಾದ ಭೂಪದರದ ಒಳಗಿರುವ ಬಂಡೆಗಳನ್ನು ತಲುಪಿದಾಗ ನೀರು ಕುದ್ದು ಒತ್ತಡ ಜಾಸ್ತಿಯಾಗಿ ಕಾರಂಜಿಯಂತೆ ಚಿಮ್ಮುತ್ತದೆ. ಮೊದಲಿಗೆ ನೆಲದಲ್ಲಿರುವ ಬಾವಿಯೇನೋ ಎಂಬಂತೆ ಕಾಣುವ ಹೊಂಡದಲ್ಲಿರುವ ನೀರು ಸ್ವಲ್ಪ ಸ್ವಲ್ಪವೇ ಮೇಲೆದ್ದು ಅದ್ಯಾವುದೋ ಕ್ಷಣದಲ್ಲಿ ಡಬ್ ಎಂದು ಸುಮಾರು ೫-೬ ಮೀಟರುಗಳಷ್ಟು ಎತ್ತರಕ್ಕೆ ಚಿಮ್ಮುವುದನ್ನು ನೋಡಲು ಸುತ್ತಲೂ ನಿಂತು ಜನ ಕಾಯುತ್ತಿರುತ್ತಾರೆ. ನೋಡಲು ಸುಂದರವಾಗಿ ಕಂಡರೂ, ಒಂದು ರೀತಿಯ ಘಾಟು. ಪಂಜೇಂಟ್ ವಾಸನೆ.
ಇನ್ನೊಂದು ಕ್ಷಣದಲ್ಲಿ ನೀರು ಪುನಃ ಆ ಹೊಂಡದೊಳಗೆ ಬಿದ್ದು ಬರೀ ಆವಿ ಗಾಳಿಯಲ್ಲಿ ಉಳಿಯುತ್ತದೆ. ೨೦೧೪ ರಲ್ಲಿ “ಸ್ಟ್ರೋಕ್ಕೂರ್” ಎಂಬ ಹೆಸರಿನ ಬಿಸಿನೀರಿನ ಬುಗ್ಗೆಯ ಈ ರೀತಿಯ ಚಿಮ್ಮುವಿಕೆ ಪ್ರತಿ ೬-೭ ನಿಮಿಷಕ್ಕೊಮ್ಮೆ ನೆಡೆಯುತ್ತಿತ್ತು.
“ಸ್ಟ್ರೋಕ್ಕೂರ್” ಅಲ್ಲದೆ ಇನ್ನೂ ಹಲವಾರು ಬಿಸಿನೀರಿನ ಬುಗ್ಗೆಗಳು ಅಲ್ಲಿದ್ದವು. ಅವ್ಯಾವವೂ “ಸ್ಟ್ರೋಕ್ಕೂರ್” ನಂತೆ ಚಿಮ್ಮುವ ಬುಗ್ಗೆಗಳಾಗಿರಲಿಲ್ಲ.
ಐಸ್ಲ್ಯಾಂಡ್ ಡೇ ಟ್ರಿಪ್ಪುಗಳ ಬೆಸ್ಟ್ ಪಾರ್ಟ್ ಅಂದರೆ, ಬಸ್ಸು ಪುನಃ ನಮ್ಮನ್ನು ಬಸ್ ಸ್ಟಾಂಡ್ ನಲ್ಲಿ ಅಲ್ಲ, ನಮ್ಮ ನಮ್ಮ ಹೋಟೆಲುಗಳ ಎದುರಿಗೆ ತಂದು ಇಳಿಸುತ್ತಿತ್ತು. ೮.೫ ಗಂಟೆಗಳ ಟ್ರಿಪ್ ನಂತರ ೨ ಕಿಲೋಮೀಟರು ನೆಡೆದು ಬಸ್ ಸ್ಟಾಂಡ್ ನಿಂದ ಬರುವುದು ಕಷ್ಟ ಎನಿಸುವ ಸಮಯದಲ್ಲಿ ಈ ಸರ್ವಿಸ್ ಆನಂದದಾಯಕವಾಗಿತ್ತು. ಅಪಾರ್ಟ್ಮೆಂಟಿಗೆ ಬಂದು ತೆಗೆದುಕೊಂಡು ಚಪಾತಿಯನ್ನು ತಿಂದು ಮೊಸರು ಸೇವಿಸಿ ಟೂರಿಸ್ಟ್ ಇನ್ಫರ್ಮೇಷನ್ ಇಂದ ತೆಗೆದುಕೊಂಡು ಬಂದಿದ್ದ ಕಿರುಪುಸ್ತಿಕೆಗಳನ್ನು ಓದಿ ಮರುದಿನದ ಟ್ರಿಪ್ ಪ್ಲಾನ್ ಮಾಡಲು ಶುರು ಮಾಡಿದ್ದೆವು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020