ಕಿರ್ಕ್ಜುಬೇಜಾರ್ಕ್ಳಸ್ತೂರ್ ಎಂಬ ಹೆಸರು ಹೇಳಲೂ ಬಾರದ ಹಳ್ಳಿಯೊಂದರ ಹತ್ತಿರ ಹಲವಾರು ಕೃಷಿ ಕ್ಷೇತ್ರಗಳನ್ನು ನೋಡಿದೆವು. ನಾವು ಅಂದು ರಾತ್ರಿ ಉಳಿಯುವ ಪ್ಲಾನ್ ಮಾಡಿದ್ದ ಫಾಸ್ ಹೋಟೆಲ್ ಗ್ಲೇಸಿಯರ್ ಲಗೂನ್ ಇಲ್ಲೇ ಹತ್ತಿರದಲ್ಲೆಲ್ಲೂ ಇತ್ತು. ಆದರೆ ನಾವು ಮೊದಲು ಜೋಕುಲಸರ್ಲೊನ್ ಹೋಗಿ ವಾಪಸು ಬರುವಾಗ ಹೋಟೆಲಿಗೆ ಚೆಕ್ ಇನ್ ಮಾಡುವುದು ಎಂದು ನಿರ್ಧರಿಸಿದ್ದೆವು.
ಜೋಕುಲಸರ್ಲೊನ್ ಹತ್ತಿರ ಬಂದಂತೆ ಹಿಮಪರ್ವತಗಳು ಕಾಣತೊಡಗಿದವು.
ಜೋಕುಲಸರ್ಲೊನ್ ಸೇರುವಾಗ ಬೆಳಿಗ್ಗೆ ೧೧ ಗಂಟೆ. ಮೊದಲಿಗೇ ಆಂಫಿಬಿಯನ್ ಬೋಟ್ ರೈಡ್ ಮಾಡುವುದೆಂದು ನಿರ್ಧರಿಸಿದೆವು. ಚಕ್ರಗಳಿರುವ ಬೋಟ್ ನೆಲದ ಮೇಲೆ ಬಂದಾಗ ಚಕ್ರಗಳಿಂದ ಚಲಿಸುತ್ತದೆ. ನೀರಿಗೆ ಇಳಿದ ಮೇಲೆ ಬೋಟ್ ರೀತಿಯಲ್ಲಿ ತೇಲುತ್ತದೆ. ಅದಕ್ಕಾಗಿಯೇ ಆಂಫಿಬಿಯನ್ ಬೋಟ್ ಎಂದು ಹೆಸರು.
ಟಿಕೆಟುಗಳನ್ನು ಕೊಂಡುಕೊಂಡು ೧೨ ಗಂಟೆಯ ಟ್ರಿಪ್ಪಿಗೆ ಕಾದು ನಿಂತೆವು. ಹವಾಮಾನ ಚೆನ್ನಾಗಿತ್ತು. ಕೇಸರಿ ಬಣ್ಣದ ಸೇಫ್ಟಿ ಫ್ಲೋಟಿಂಗ್ ಜಾಕೆಟ್ಸ್ಗಳನ್ನು ವಿತರಿಸಿದರು. ಬೋಟಿನೊಳಗೆ ಹೋಗಿ ಕೂರಲು ಸ್ಥಳ ಮಾಡಿಕೊಂಡು ಕುಳಿತೆವು. ನೀರಿನಲ್ಲಿ ತೇಲುವ ಬೋಟಿನಷ್ಟೇ ದೊಡ್ಡದಾಗಿ, ಅಥವಾ ಅದಕ್ಕಿಂತ ದೊಡ್ಡದಾದ ಹಿಮಗೆಡ್ಡೆಗಳ ನಡುವೆ ಬೋಟಿನಲ್ಲಿ ಕರೆದೊಯ್ಯುತ್ತಾರೆ. ನೀರಿನ ಮೇಲೆ ಕಾಣುವುದು ಬರೀ ೨೫%. ಹಿಮಗೆಡ್ಡೆಗಳು ನೀರಿನ ಒಳಗೆ ೭೫% ಮುಳುಗಿರುತ್ತವೆ ಎಂದು ಟೂರಿಸ್ಟ್ ಗೈಡ್ ವಿವರಿಸಿದಾಗ ನಮ್ಮ ಕಣ್ಣೆದುರು ಕಾಣುತ್ತಿರುವುದೇ ಅಷ್ಟು ದೊಡ್ಡದಾಗಿದ್ದರೆ, ನೀರಿನ ಒಳಗೆ ಇನ್ನೆಷ್ಟು ದೊಡ್ಡದಿರಬಹುದು ಎಂದು ಊಹಿಸಿಕೊಂಡು ಆಶ್ಚರ್ಯವಾಯಿತು.
ಒಂದು ಹಿಮಗೆಡ್ಡೆ ತಲೆಕೆಳಗಾಗಿ ನೀಲಿ ಬಣ್ಣದ ಗಾಜನ್ನು ಯಾರೋ ಕೊರೆದು ಶಿಲ್ಪವನ್ನಾಗಿ ಮಾಡಿದ್ದಾರೆ ಎನ್ನಿಸುವಂತೆ ಕಾಣುತ್ತಿತ್ತು. ಉಳಿದವಕ್ಕೆ ಹೋಲಿಸಿದರೆ ಇದರ ನೀಲಿ ಬಣ್ಣ ಗಾಢವಾಗಿತ್ತು. ಆಕ್ಸಿಜನ್ ಜೊತೆ ಸೇರಿದಾಗ, ಬಿಳಿಯಾದ ಹಿಮ ನೀಲಿಯಾಗಿ ಬದಲಾಗುತ್ತದೆ ಎಂದು ಟೂರಿಸ್ಟ್ ಗೈಡ್ ವಿವರಿಸುತ್ತಿದ್ದ.
ಜೋಕುಲ್ಸರ್ಲೊನ್ ಬೋಟ್ ಟ್ರಿಪ್ ಮುಗಿಸಿ ಸರೋವರದ ಇನ್ನೊಂದು ಬದಿಯಲ್ಲಿ, ಸಮುದ್ರ ತೀರದಲ್ಲಿ ಇರುವ ಡೈಮಂಡ್ ಬೀಚಿಗೆ ಹೋದೆವು.
ಈ ಬಾರಿಯ ಐಸ್ಲ್ಯಾಂಡ್ ಟ್ರಿಪ್ಪಿನಲ್ಲಿ ಅತೀ ವಿಶೇಷವಾಗಿ ಕಂಡಿದ್ದು ಈ ಡೈಮಂಡ್ ಬೀಚ್. ಜೋಕುಲ್ ಸರ್ಲೊನ್ ಸರೋವರದಲ್ಲಿ ಕರಗಿ ಚಿಕ್ಕದಾದ ಹಿಮ ಗೆಡ್ಡೆಗಳು ನೀರಿನಲ್ಲಿ ತೇಲಿಕೊಂಡು ಸಮುದ್ರ ಸೇರಿದಾಗ, ಸಮುದ್ರದ ಅಲೆಗಳು ಆ ಚಿಕ್ಕ ಚಿಕ್ಕ ಹಿಮಗೆಡ್ಡೆಗಳನ್ನು ತೀರದಲ್ಲಿ ತಂದು ದೂಡುತ್ತವೆ. ಕಪ್ಪು ಮರಳಿನ ಸಮುದ್ರ ತೀರದಲ್ಲಿ ಗಾಜಿನಂತೆ ಕಾಣುವ ವಿಧ ವಿಧವಾದ ಆಕೃತಿಯಲ್ಲಿರುವ ಹಿಮಗೆಡ್ಡೆಗಳು ವಜ್ರದಂತೆ ಕಾಣುವುದು ಸಹಜವೇ. ಅದಕ್ಕೇ ಡೈಮಂಡ್ ಬೀಚ್ ಎಂದು ಹೆಸರು. ಚಿಕ್ಕ ಗೆಡ್ಡೆಗಳನ್ನು ಕೈಯಲ್ಲಿ ಎತ್ತಿ, ರುಚಿ ನೋಡಿದ್ದೂ ಆಯಿತು.
ಹಲವಾರು ಜನರು ಫೋಟೋಗ್ರಾಫರ್ಸ್ ಅಲ್ಲಲ್ಲಿ ಕುಳಿತು ಫೋಟೋ ತೆಗೆಯುವ ಪ್ರಯತ್ನ ಮಾಡುತ್ತಿದ್ದರು. ಒಬ್ಬಳು ಲೇಡಿ ಫೋಟೋಗ್ರಾಫರ್ ನೆಲದ ಮೇಲೆ ಮಲಗಿಕೊಂಡು ಅಲೆಗಳ ಫೋಟೋ ತೆಗೆಯುವ ಪ್ರಯತ್ನ ಮಾಡುವಾಗ ಜೋರಾಗಿ ಬಂದ ಅಲೆಯಲ್ಲಿ ಅವಳೂ ಸಂಪೂರ್ಣ ನೀರಿನಡಿಯಲ್ಲಿ ಇದ್ದರೂ, ಆಕೆಯ ಕೈ ಕ್ಯಾಮೆರಾವನ್ನು ಎತ್ತಿ ಹಿಡಿದು ರಕ್ಷಿಸುವ ಪ್ರಯತ್ನ ಮಾಡುತ್ತಿತ್ತು. ಜೊತೆಯಲ್ಲಿದ್ದ ಫೋಟೋಗ್ರಾಫರ್ ಆಕೆಯನ್ನು ಮೇಲೆತ್ತುವ ಪ್ರಯತ್ನ ಮಾಡದೇ , ಆಕೆಯ ಕ್ಯಾಮೆರಾ ಬ್ಯಾಗ್ ತೆಗೆದುಕೊಂಡು ತೆರೆಯಿಂದ ದೂರ ಓಡುತ್ತಿದ್ದ. ನನ್ನ ಬಳಿ ಸ್ಲೋ ಶಟರ್ ಜೊತೆಗೆ ಫೋಟೋ ತೆಗೆಯಲು ಅನುಕೂಲವಾಗುವ ಸಲಕರಣೆಗಳಿದ್ದರೆ, ನಾನೂ ಅವರಲ್ಲಿ ಒಬ್ಬಳಾಗಿರುತ್ತಿದ್ದೆ ಎಂದು ಯೋಚಿಸಿ ನಗು ಬರುತ್ತಿತ್ತು.
ನಾವು ಆಲ್ಮೋಸ್ಟ್ ೩-೪ ಗಂಟೆಗಳ ಕಾಲ ಬೀಚಿನಲ್ಲಿ ಒಂದೊಂದೇ ಹಿಮಗೆಡ್ಡೆಗಳನ್ನು ನೋಡುತ್ತಾ, ಅವುಗಳ ಸೌಂದರ್ಯವನ್ನು ಸವಿಯುತ್ತಾ ಓಡಾಡುತ್ತಿದ್ದೆವು.
ಜೋಕುಲ್ ಸರ್ಲೊನ್ ಪಕ್ಕದಲ್ಲಿಯೇ ಇರುವ ಫ್ಜಲ್ ಸರ್ಲೊನ್ ಎನ್ನುವ ಇನ್ನೊಂದು ಸರೋವರವನ್ನು ನೋಡಿ ವಾಪಸು ಹೋಗುವ ಪ್ಲಾನ್ ಮಾಡಿದ್ದೆವು. ಆ ಸರೋವರ ಜೋಕುಲ್ಸರ್ಲೊನ್ ನಿಂದ ೧೦ ಕಿಲೋಮೀಟರು ದೂರದಲ್ಲಿ ಇತ್ತು.
ಅಲ್ಲಿ ಹೋಗಿ ತಲುಪುವಾಗ ಚಳಿಯಲ್ಲಿ ನೆಡೆದಾಡಿ ಎಷ್ಟು ಸುಸ್ತಾಗಿತ್ತು ಎಂದರೆ, ಸರೋವರದ ಹತ್ತಿರ ಹೋಗಲು ಮನಸ್ಸಾಗದೆ ದೂರದಿಂದಲೇ ಫೋಟೋ ತೆಗೆದುಕೊಂಡು ವಾಪಸು ಹೊರಟೆವು.
ಸರೋವರದ ನೀರು ನದಿಯಾಗಿ ಸಮುದ್ರ ಸೇರುತ್ತಿತ್ತು. ಆ ನದಿಯಲ್ಲಿ ಕರಗುತ್ತಾ ತೇಲುವ ಹಿಮಗೆಡ್ಡೆಗಳು ನೋಡಲು ಸುಂದರವಾಗಿದ್ದರೂ, ನೀರಿನ ಬಣ್ಣ , ಆ ನೋಟ ಭಯ ಹುಟ್ಟಿಸುವಂತಿತ್ತು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020