ಕುದಿಕುದಿದು, ಉರಿದುರಿದು ಕೋಪ ಮುಗಿಯಿತೋ ಅಥವಾ ಮನೆಗೆ ಸಮಯವಾಯಿತು ಎಂದೋ ಸೂರ್ಯ ತನ್ನ ಬಿಸಿ ಕಳೆದುಕೊಳ್ಳುತ್ತಿದ್ದ.ನಡು ಆಕಾಶದಲ್ಲಿದ್ದವನು ಇಳಿಯಲು ಶುರುಮಾಡಿದ್ದ. ಇಳಿಜಾರಿನಲ್ಲಿ ವೇಗ ಹೆಚ್ಚು ಎನ್ನುವ ಹಾಗೆ ಅವನು ಚಲಿಸುವುದು ಕಾಣಿಸುತ್ತಿತ್ತು. ಒಳಗೂ ಹೊರಗೂ ಒಂದು ರೀತಿಯ ಧಗೆ.ಗಾಳಿಗೂ ತಾಕಿದ ಬಿಸಿ. ಒಳಗಿದ್ದರೆ ಸೆಕೆ ಇನ್ನೂ ಜಾಸ್ತಿ ಹೋಗಿ ಮಾವಿನಮರದ ಕೆಳಗೆ ಆದರೂ ಕುಳಿತರೆ ಜೀವ ತಣ್ಣಗೆ ಆಗಬಹುದೇನೋ ಎನ್ನಿಸಿ ಎದ್ದರೆ ಅದು ಕಾಣಿಸಿತು. ಇಳಿಯುತ್ತಿದ್ದ ಸೂರ್ಯನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಾ ಸದ್ದಿಲ್ಲದೇ ಕುಳಿತಿತ್ತು ಆ ಬೆಳ್ಳಕ್ಕಿ.
ಅದೋ ವಯಸ್ಸಾದ ತೆಂಗಿನ ಮರ. ಒಂದೊಂದೇ ಗರಿಗಳನ್ನು ಕಳಚಿಕೊಂಡು ಮತ್ತೊಂದು ಹೊಸತರ ಜವಾಬ್ದಾರಿ ಹೊತ್ತು ಎತ್ತರಕ್ಕೆ ನಿಂತಿತ್ತು. ಇಳಿಯುವ ಸೂರ್ಯನನ್ನು ದಿಟ್ಟಿಸಲು ಇಳಿವಯಸ್ಸಿನ ಮರದಲ್ಲಿ ಕಾಲೂರುವ ಮುನ್ನ ಅದು ಪ್ರಶಸ್ತವಾದ ಜಾಗವನ್ನು ಆರಿಸಿಕೊಂಡಿತ್ತು.ಮೇಲಿನ ಗರಿಯ ನೆರಳಿನ ಅಡಿಯಲ್ಲಿ ಹೆಚ್ಚು ಅಲುಗಾಡದ ಗರಿಯ ಬುಡದಲ್ಲಿ ನಿಂತಿತ್ತು. ಎತ್ತರದಲ್ಲಿ ನಿಂತಿದ್ದರೂ ಗಾಳಿಯ ಚಲನೆಗೆ, ಗರಿಯ ಅಲುಗಾಟಕ್ಕೆ, ಮರದ ತೂಗುವಿಕೆಗೆ ಎಲ್ಲವಕ್ಕೂ ಹೊರತಾಗಿ ನಿಲ್ಲುವುದೇ ತನ್ನ ಧ್ಯೇಯ ಎಂದು ಅಲುಗಾಡದೆ , ಕಾಲವೇ ಸ್ತಬ್ಧವಾಗಿ ಹೋಗಿದೆಯೇನೋ, ನಿಂತಲ್ಲೇ ಕಲ್ಲಾಗು ಎಂಬ ಶಾಪಕ್ಕೆ ತುತ್ತಾಗಿದೆಯೇನೋ ಅನ್ನಿಸುವ ಹಾಗೆ, ಕಾಲುಗಳು ಪಾತಾಳಕ್ಕೆ ಇಳಿದು ಬೇರು ಬಿಟ್ಟಿದೆಯೇನೋ ಎಂಬ ಹಾಗೆ ಕಿಂಚಿತ್ತೂ ಅಲುಗಾಡದೆ ಇಳಿಯುವ ಸೂರ್ಯನನ್ನೇ ದಿಟ್ಟಿಸುತಿತ್ತು. ಪತನ ಜೀವನವನ್ನು ಇಷ್ಟು ಸ್ತಬ್ಧ ಗೊಳಿಸಬಹುದಾ ಎನ್ನುವ ಯೋಚನೆಯಲ್ಲಿ ನಾನು ಸ್ತಬ್ಧವಾಗಿದ್ದು ಅರಿವಿಗೆ ಬಂದಿದ್ದು ತುಸು ಹೊತ್ತು ಕಳೆದ ಮೇಲೆಯೇ.
ಕಿಟಕಿಯಲ್ಲಿ ಕಂಡ ಆ ಹಕ್ಕಿ ಎಷ್ಟು ಆಕರ್ಷಿಸಿತು ಎಂದರೆ ಕೋಣೆಯಿಂದ ಹೊರಗೆ ಬಂದು ಪೋರ್ಟಿಕೋದಲ್ಲಿ ಕುರ್ಚಿ ಎಳೆದುಕೊಂಡು ರೆಪ್ಪೆ ಮಿಟುಕಿಸಿದರೆ ಏನಾಗಬಹುದೋ ಎಂಬ ಆತಂಕದಲ್ಲಿಯೇ ಅದನ್ನು ದಿಟ್ಟಿಸುತ್ತಾ ಕುಳಿತಿದ್ದೆ. ತೆಂಗಿನ ಮರ ಮಾತ್ರ ಗಾಳಿಯ ಚಲನೆಗೆ ತುಯ್ಯುತ್ತಾ ಅದರೊಟ್ಟಿಗೆ ಮೋಹಕ್ಕೆ ಬಿದ್ದಿತ್ತು. ಗರಿಗಳನ್ನು ಅದರ ನಾದಕ್ಕೆ ತಕ್ಕ ಹಾಗೆ ಕುಣಿಸುತಿತ್ತು. ಆಗಾಗ ಪಿಸುಮಾತು ಆಡುತ್ತಾ ಆಗಾಗ ಬಂದು ಹೋಗುವ ಬೇರೆ ಪಕ್ಷಿಗಳನ್ನು ಸತ್ಕರಿಸುತ್ತಾ ಬೀಳ್ಕೊಡುತ್ತಾ ಇಡೀ ಮರ ಜೀವಂತಿಕೆಯಿಂದ ಪುಟಿಯುತ್ತಿದ್ದರೂ ಇದೊಂದು ಹಕ್ಕಿ ಮಾತ್ರ ಸ್ವಲ್ಪವೂ ವಿಚಲಿತವಾಗದೆ ಸುತ್ತಲೂ ಏನು ನಡೆಯುತ್ತಿದೆ ಎನ್ನುವ ಕುತೂಹಲವಿಲ್ಲದೆ ಅಲುಗಾಡದೆ ತನ್ನ ಗಮ್ಯದತ್ತ ದೃಷ್ಟಿ ಅಲುಗಾಡಿಸದೆ ಅದು ಹಾಗು ಅದರತ್ತ ನಾನು.
ಇದ್ದಕ್ಕಿದ್ದ ಹಾಗೆ ಕಣ್ಣು ಚುಚ್ಚುವ ಬೆಳಕು ಬಿದ್ದ ಕೂಡಲೇ ಒಮ್ಮೆ ಬೆಚ್ಚಿಬಿದ್ದು ನೋಡಿದರೆ ಲೈಟ್ ಆನ್ ಆಗಿತ್ತು. ಗಂಟೆಗಳ ಕಾಲ ಬೆಳಕು ಹೋಗಿದ್ದು ಕತ್ತಲು ಆವರಿಸಿದ್ದು ಅರಿವಿಲ್ಲದೆ ನಾನು ಅದನ್ನು ಅದು ಮತ್ಯಾರನ್ನೋ ಗಮನಿಸುವುದರಲ್ಲಿ ಮಗ್ನರಾಗಿದ್ದು ಅರಿವಿಗೆ ಬಂದಕೂಡಲೇ ಗಮನಿಸುವುದು ಕೂಡಾ ಧ್ಯಾನವಾ ಅನ್ನುವ ಆಲೋಚನೆ..ಒಬ್ಬರಿಗೊಬ್ಬರು ಸಂಬಂಧವಿಲ್ಲದೆ ಬಂಧಿಸುವುದು ಸಾಧ್ಯಾವಾ ಅನ್ನುವ ಪ್ರಶ್ನೆಯೂ ಅದಕ್ಕೊಂದು ಉತ್ತರವೂ ಕೊಂಡಿಯ ಹಾಗೆ ಒಂದಕ್ಕೊಂದು ಜೋಡಿಸುತ್ತಾ ಹೋಗುವಾಗಲೇ ಪ್ರತಿ ಉತ್ತರದ ಕೊನೆಯೂ ಒಂದು ಪ್ರಶ್ನೆಯಾ ಅನ್ನಿಸಿ ನಗು …..
featured image: Sandeep_h_c
- ಬದುಕು ಸರಳ…. ನಾವೇ ಅದನ್ನು ಕ್ಲಿಷ್ಟ ಮಾಡ್ಕೊತಿವಿ ಅಷ್ಟೇ - August 10, 2020
- ಮಾತೃತ್ವಕ್ಕೆ ಜೀವ ಭೇಧವಿಲ್ಲಾ …. - July 30, 2020
- ಉಳಿಸಿಕೊಳ್ಳುವುದು ಎಷ್ಟು ಕಷ್ಟ…. - July 21, 2020