ಆ ಹುಡುಗನಿಗೆ ಅಲೆಮಾರಿ ಜೀವನವೆಂದರೆ ಬಹಳ ಇಷ್ಟ. ತಿರುಗಾಡುವಾಗ ಹಾದು ಹೋದ ಪ್ರತೀ ಪಟ್ಟಣದಲ್ಲೂ ಬಹಳಷ್ಟು ಜನರ ಪರಿಚಯವಾಗುತ್ತಿತ್ತು. ಹೊಸ ಗೆಳೆಯರು ಸಿಗುತ್ತಿದ್ದರು. ಆದರೆ ಅವರ ಜೊತೆ ಅಗತ್ಯವಿಲ್ಲದಷ್ಟು ಸಮಯವನ್ನು ಕಳೆಯುವ ಅನಿವಾರ್ಯತೆಯಿರಲಿಲ್ಲ. ಸೆಮಿನರಿಯಲ್ಲಿ ( ಪಾದ್ರಿಗಳಿಗೆ ಟ್ರೈನಿಂಗ್ ಕೊಡುವ ಶಾಲೆ) ಆದಂತೆ, ಪ್ರತಿದಿನ ಅದೇ ಜನರ ಸಾಂಗತ್ಯ ಮಾಡತೊಡಗಿದಾಗ, ಆ ಜನರು ಬಾಳಿನ ಅನಿವಾರ್ಯ ಅಂಗವಾಗಿಬಿಡುತ್ತಾರೆ. ಆನಂತರ ತನ್ನನ್ನು ಬದಲಾಯಿಸುವ ಹಂಬಲ ತೋರುತ್ತಾರೆ. ಬೇರೆಯವರು ತಾವು ಇಚ್ಚಿಸಿದಂತೆ ಇರದಿದ್ದರೆ, ಆ ಜನರಿಗೆ ಕೋಪ ಬರುತ್ತದೆ. ಎಲ್ಲರಿಗೂ ತಾವು ಹೇಗಿರಬೇಕು ಎನ್ನುವುದಕ್ಕಿಂತ ಹೆಚ್ಚು ಬೇರೆಯವರು ಹೇಗಿರಬೇಕು ಎನ್ನುವ ಸ್ಪಷ್ಟ ಕಲ್ಪನೆಯಿರುತ್ತದೆ. ಈ ಜಂಜಾಟಕ್ಕಿಯಿಂತ ಅಲೆಮಾರಿ ಜೀವನ ಸುಲಭವಾಗಿರುತ್ತದೆ ಎಂದು ಅವನ ಕಲ್ಪನೆ.
ಅವನ ತಂದೆ ಹೇಳುತ್ತಾನೆ. “ಬೇರೆ ಬೇರೆ ದೇಶಗಳಿಂದ ಜನರು ಹೊಸತನ್ನು ಹುಡುಕಿಕೊಂಡು ನಮ್ಮ ಹಳ್ಳಿಗೆ ಬರುತ್ತಾರೆ. ವಾಪಸು ಹೋಗುವಾಗ ಅವರು ಬದಲಾಗದೇ ಬಂದ ರೀತಿಯಲ್ಲಿಯೇ ವಾಪಾಸು ಹೋಗುತ್ತಾರೆ. ಬೆಟ್ಟವನ್ನು ಹತ್ತಿ ಕೋಟೆಯನ್ನು ವೀಕ್ಷಿಸುವಾಗ ಗತಕಾಲ ಪ್ರಸ್ತುತಕ್ಕಿಂತ ಉತ್ತಮವಾಗಿತ್ತು ಎಂಬ ಕಲ್ಪನೆಯಲ್ಲಿ ಮುಳುಗುತ್ತಾರೆ. ಇಲ್ಲಿಗೆ ಬಂದ ಅವರು ಇಲ್ಲಿಯೇ ಜೀವನವಿಡೀ ಬದುಕಲು ಇಚ್ಚಿಸುತ್ತಾರೆ.”
“ಆದರೆ ನಾನು ಬೇರೆ ಪಟ್ಟಣಗಳನ್ನು ನೋಡಬೇಕು. ಅರಮನೆಗಳನ್ನು ನೋಡಬೇಕು. ಬೇರೆ ಪ್ರದೇಶಗಳನ್ನು ನೋಡಬೇಕು. ಅಲ್ಲಿನ ಜನಜೀವನ ನೋಡಬೇಕು.” ಆ ಹುಡುಗ ಪ್ರತಿನುಡಿಯುತ್ತಾನೆ.
“ಆದರೆ ಆ ಪ್ರವಾಸಿಗರ ಹತ್ತಿರ ಪ್ರಯಾಣ ಮಾಡಲು ಬಹಳ ಸಂಪತ್ತಿದೆ. ನಮ್ಮಲ್ಲಿ ಕುರಿ ಕಾಯುವವರು ಮಾತ್ರ ಪ್ರಯಾಣ ಮಾಡುತ್ತಾರೆ. ಅಲೆಮಾರಿ ಜೀವನ ನೆಡೆಸುತ್ತಾರೆ. ” ತಂದೆ ಹೇಳುತ್ತಾನೆ.
“ಹಾಗಾದರೆ ನಾನು ಕುರುಬನಾಗುತ್ತೇನೆ. ” ಬಾಲಕನ ಇಚ್ಛೆ ಖಚಿತವಾಗಿರುತ್ತದೆ.
ತಂದೆ ಮೌನವಾಗುತ್ತಾನೆ. ಮರುದಿನ ೩ ಚಿನ್ನದ ನಾಣ್ಯಗಳನ್ನು ಮಗನಿಗೆ ಕೊಡುತ್ತಾ ಹೇಳುತ್ತಾನೆ.
“ಇವು ನನಗೆ ಗದ್ದೆಯಲ್ಲಿ ಸಿಕ್ಕಿದ ನಿಧಿ. ಇವನ್ನು ನಾನು ಸಾಯುವಾಗ ಆಸ್ತಿಯಾಗಿ ನಿನಗಾಗಿ ಬಿಟ್ಟು ಹೋಗಬೇಕೆಂದು ಎಂದುಕೊಂಡಿದ್ದೆ. ಇವನ್ನು ನಿನಗೆ ಬೇಕಾದ ಕುರಿಮಂದೆಯನ್ನು ಕೊಳ್ಳಲು ಉಪಯೋಗಿಸು. ಒಂದು ದಿನ ನಮ್ಮ ಹಳ್ಳಿಯೇ ಎಲ್ಲಕ್ಕಿಂತ ಸುಂದರವಾದುದೆಂದು ನಿನಗೆ ಅರಿವಾಗುತ್ತದೆ.”
ಹುಡುಗನಿಗೆ ತನ್ನ ತಂದೆಯ ಕಣ್ಣುಗಳಲ್ಲಿ “ತಾನೂ ಒಂದು ದಿನ ಪ್ರಪಂಚವನ್ನು ಸುತ್ತಬೇಕು ” ಎಂಬ ಇನ್ನೂ ಹಸಿಯಾಗಿದ್ದ, ಆದರೆ ಊಟ ಬಟ್ಟೆಗಳಿಗಾಗಿ, ಪ್ರತಿ ರಾತ್ರಿ ಒಂದೇ ಸ್ಥಳದಲ್ಲಿ ಬದುಕುವ ಸುಖಕ್ಕಾಗಿ, ಸ್ಥಿರ ಜೀವನಕ್ಕಾಗಿ ಹುಗಿದಿಟ್ಟಿದ್ದ ಪ್ರಯಾಣಿಸುವ ಬಯಕೆ ಸ್ಪಷ್ಟವಾಗಿ ಕಾಣಿಸುತ್ತದೆ.
ತನ್ನ ಮಗ ಚರ್ಚಿನಲ್ಲಿ ಪಾದ್ರಿಯಾಗಬೇಕು. ಒಳ್ಳೆಯ ಹೆಸರು ಸಂಪಾದಿಸಬೇಕು ಎಂದು ಇಚ್ಚಿಸಿದ್ದು ಸತ್ಯವೇ. ಆದರೆ ತನ್ನೊಳಗೆ ತಾನು ಚಿಕ್ಕವನಿದ್ದಾಗ ಇದ್ದ ಇಚ್ಛೆ ಬೇರೆಯೇ.
Poulo coelho ಅವರ ದಿ ಆಲ್ಕೆಮಿಸ್ಟ್ ಪುಸ್ತಕ ಎರಡನೇ ಬಾರಿ ನನ್ನ ಕೈಯಲ್ಲಿದೆ. ಪ್ರತಿ ಸಾರಿ ಓದುವಾಗಲೂ ಹೊಸತಾಗಿ ಕಾಣಿಸುತ್ತದೆ. ನಮ್ಮ ಜೀವನದ ಸತ್ಯಾಸತ್ಯತೆಗಳನ್ನು ಕಥೆಯ ರೂಪದಲ್ಲಿ ತೋರಿಸುತ್ತದೆ. ಯಾಕೋ ತುಂಬಾ ಆತ್ಮೀಯವಾಗಿ ಕಾಣಿಸುತ್ತಿದೆ.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020