Write to us : Contact.kshana@gmail.com

ಜರ್ಮನಿಯ ರಹಸ್ಯವೇನು? ಔಷಧವೇ ಅಥವಾ ರೋಗನಿರೋಧಕ ಶಕ್ತಿಯೇ?

0
(0)

ಬೇರೆ ಬೇರೆ ರಾಷ್ಟ್ರಗಳು ಕೊರೋನಾವನ್ನು ಹೇಗೆ ಎದುರಿಸುತ್ತಿವೆ ಎಂಬ ಕುತೂಹಲ ನನಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ತೆರೆದಿಟ್ಟಿದೆ. ಜೂನ್ ೩ ೨೦೨೦ ರ  ಕೊರೊನ ವರದಿಯ ಅಂಕಿ ಅಂಶಗಳು ಹೀಗಿವೆ.

ಜರ್ಮನಿಯ 184289 ಸೋಂಕಿತರಲ್ಲಿ ಮರಣ ಹೊಂದಿರುವವರು ಕೇವಲ 8682 ಹಾಗೂ ಈದಾಗ್ಯೆ 167300 ಮಂದಿ ಆಗಲೇ ಗುಣಮುಖರಾಗಿದ್ದಾರೆ. ಇದು ಹೇಗೆ ಸಾಧ್ಯ? ಇಷ್ಟು ಕಡಿಮೆ ಸಾವು ಹಾಗೂ ಇಷ್ಟು ಹೆಚ್ಚು ಗುಣಮುಖರಾದ ಜನಸಂಖ್ಯೆ ಹೊಂದಲು ಇವರೇನು ಮಾಡಿರಬಹುದು? ಪ್ರಶ್ನೆ ಉದ್ಭವವಾಯಿತು.

ಜರ್ಮನಿಯಲ್ಲಿ ಹವಾಮಾನ ವೈಪರೀತ್ಯದಿಂದ ವೈರಲ್ ಜ್ವರ, ಇನ್ಫ್ಲುಯೆಂಜಾ, ಹಾಗೂ ಆಗಾಗ ಕಾಡುವ ಬ್ಯಾಕ್ಟೇರಿಯಲ್ ಇನ್ಫೆಕ್ಷನ್ ಸರ್ವೇಸಾಮಾನ್ಯ. ಹುಷಾರಿಲ್ಲ, ೧೦೩ ಡಿಗ್ರಿ ಜ್ವರ ಇದೆಯೆಂದು ಡಾಕ್ಟರ್ ಹತ್ತಿರ ಹೋದರೆ ಮೊದಲು ನೋಡುವುದು ಗಂಟಲನ್ನು. ಜ್ವರ ಬರುತ್ತಿರುವುದು ವೈರಸ್ ನಿಂದಲೇ ಎಂದು ಖಾತರಿ ಮಾಡಿಕೊಂಡು ವೈರಲ್ ಫೀವರ್ ಆಗಿದ್ದರೆ ಡಾಕ್ಟರ್ ಹೇಳುವುದಿಷ್ಟೇ. “೧ ವಾರ ರಜೆ ತೆಗೆದುಕೊಂಡು  ವಿರಾಮಿಸಿ. ಆಗಾಗ ಬಿಸಿ ಬಿಸಿ ಟೀ, ನೀರು ಕುಡಿಯುತ್ತಿರಿ. ಸಾಕಷ್ಟು ನಿದ್ರೆ ಮಾಡಿ. ”  ಎಷ್ಟೇ ಗೋಗರೆದರೂ, ಬ್ಯಾಕ್ಟೇರಿಯಲ್ ಇನ್ಫೆಕ್ಷನ್ ಇಲ್ಲದೆ ಆಂಟಿಬಯೋಟಿಕ್ಸ್ ಕೊಡುವುದಿಲ್ಲ. ಯಾವುದೇ ಔಷದಿ ಮಳಿಗೆಗಳಲ್ಲಿಯೂ ಡಾಕ್ಟರ್ ಬರೆದುಕೊಟ್ಟ ಚೀಟಿ ಇಲ್ಲದೆ ಆಂಟಿಬಿಯೋಟಿಕ್ಸ್ ಕೊಡುವುದಿಲ್ಲ.

ಈ ರೀತಿಯ ಜರ್ಮನ್ ಡಾಕ್ಟರ್ ಅನುಸರಿಸುವ ರೀತಿ ತಿಳಿದಿದ್ದರೂ, ಕೊರೊನ ಹರಡಲು ಶುರುವಾದಾಗ ಕೊರೊನ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡವರಲ್ಲಿ ಉಸಿರಾಟದ ತೊಂದರೆ ಇಲ್ಲದಿರುವವರನ್ನು ಮನೆಯಲ್ಲಿಯೇ ಇದ್ದು ಕ್ವಾರಂಟೈನ್ ಅನುಸರಿಸಿ. 14 ದಿನಗಳ ಕಾಲ ಮನೆಯಲ್ಲಿಯೇ ಇರಿ ಎಂದು ಮನೆಗೆ ಕಳಿಸಿದ್ದು ಕೇಳಿದಾಗ, ಅದೂ ಸೋಂಕಿತರ ಸಂಖ್ಯೆ ೧೪ ರಿಂದ ೧೪೦೦೦ಕ್ಕೆ ಏರಿ ಒಂದು ಲಕ್ಷವನ್ನೂ ಮೀರಿದಾಗ ಸ್ವಲ್ಪ ಸಂದೇಹವಾದದ್ದು ಸಹಜ. ಆದರೂ ಅವರ ರೀತಿನೀತಿಗಳನ್ನು ತಿಳಿದಿದ್ದರಿಂದ ಹೆದರಿಕೆಯ ವಾತಾವರಣವಿರಲಿಲ್ಲ. ಮೀಡಿಯಾ  ತೋರಿಸಿದಂತೆ  ಜನರನ್ನು ರಸ್ತೆಯಲ್ಲಿ ಸಾಯಲು ಬಿಡುವ ಜನ ಇವರಲ್ಲ ಎಂಬುದು  ಎಮರ್ಜೆನ್ಸಿ ಗೆ ಕರೆ ಮಾಡಿದಾಗ ಮೊದಲು ಹಣದ ಮುಖ ನೋಡದೆ, ಆಂಬುಲೆನ್ಸ್ ಅಥವಾ ಬೇಕಾದಲ್ಲಿ ಹೆಲಿಕೊಪ್ಟರ್ ನಲ್ಲೂ ಬಂದು ರೋಗಿಯನ್ನು ಕರೆದೊಯ್ದು ಆ ನಂತರ ಯಾವ ಇನ್ಶೂರೆನ್ಸ್ ಇದೆ ಎಂದು ನೋಡುವ ಅಭ್ಯಾಸವಿರುವ, ಆಸ್ಪತ್ರೆಗಳಲ್ಲಿ ಎಲ್ಲಾ ರೋಗಿಗಳನ್ನೂ ಒಂದೇ ರೀತಿಯಲ್ಲಿ ಉಪಚರಿಸುವ, ಅದಕ್ಕಾಗಿ ಕೆಲಸ ಮಾಡುವ ಪ್ರತಿಯೊಬ್ಬರಿಂದಲೂ ೧೫% ತೆಗೆದುಕೊಳ್ಳುವ ಹೆಲ್ತ್ ಕೇರ್ ಸಿಸ್ಟಮ್ ಅನ್ನು  ಹಲವಾರು ವರ್ಷಗಳಿಂದ ನೋಡಿದ ಅನುಭವದಿಂದ ತಿಳಿದಿತ್ತು.    ಒಂದು ತಾಲೂಕಿನಲ್ಲಿ ಸೋಂಕಿತರಾದ 102 ಜನರಲ್ಲಿ 84 ಜನರನ್ನು ಮನೆಯಲ್ಲಿಯೇ ಇರುವಂತೆ ಹೇಳಿ, ಬರೀ ನಾಲ್ಕು ಜನರನ್ನು ಆಸ್ಪತ್ರೆಗೆ ಸೇರಿಸಿಕೊಂಡ ವಿಷಯ ಕೇಳಿದಾಗ ಇದು ವ್ಯವಸ್ಥೆ ಇಲ್ಲದೆ ಇದ್ದುದರಿಂದ ತೆಗೆದುಕೊಂಡ ನಿರ್ಧಾರವೇ? ಎಂಬ ಪ್ರಶ್ನೆ ಮನದಲ್ಲೆದ್ದರೂ , ಇರುವ ಆಸ್ಪತ್ರೆಗಳಲ್ಲಿ ರೋಗಿಗಳು ಇಲ್ಲವೆಂದು ಇಟಲಿ ಸ್ಪೇನ್ ಮುಂತಾದ ದೇಶಗಳಿಂದ ರೋಗಿಗಳನ್ನು ಕರೆತಂದು ಉಪಚರಿಸಿದ್ದನ್ನು ಕೇಳಿದಾಗ ಇದು ಅವರು ಸಾಮಾನ್ಯವಾಗಿ ಅನುಸರಿಸುವ ವಿಧಿಯೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.  ಮುಂದೇನಾಗಬಹುದು ಎಂಬ ಕುತೂಹಲ ಮಾತ್ರ ಉಳಿದಿತ್ತು.

ಎಂಬತ್ತರ ಮೇಲೆ ವಯಸ್ಸಾಗಿದ್ದರೂ ಸಾರಾಗವಾಗಿ ಸೈಕಲ್ ತುಳಿದುಕೊಂಡು ಆಚೀಚೆ ಅಡ್ಡಾಡುವ, ಹುಷಾರಿಲ್ಲದೆ ವೀಲ್ ಚೇರಿನಲ್ಲಿ ಇದ್ದರೂ, ಅದೇ ಚೇರಿನಲ್ಲಿ ಹೊರಬಂದು ಫ್ರೆಶ್ ಗಾಳಿಯಲ್ಲಿ ಸ್ವಲ್ಪ ಓಡಾಡುವ ಪ್ರಯತ್ನ ಮಾಡುವ ಜನರನ್ನು ನೋಡಿದಾಗಲೆಲ್ಲಾ ಆಶ್ಚರ್ಯವಾಗುತ್ತಿತ್ತು. ಇವರಿಗೆ ೬೦-೭೦ ವರ್ಷಗಳು ಎಂದರೆ ವಯಸ್ಸಾಗಿದೆ ಎಂದು ಎನ್ನಿಸುವುದೇ ಇಲ್ಲ. ಬರೀ ಎಪ್ಪತ್ತಾ?ಎನ್ನುವ ಸ್ವಭಾವ. ಪಕ್ಕದ ಮನೆಯಲ್ಲಿ ವಾಸಿಸುವ 67 ವರ್ಷದ ಅಜ್ಜ ಅಜ್ಜಿ, “ಎಂದು ನಮಗೆ ಒಂದು ದಿನದಲ್ಲಿ 80 ಕಿಲೋಮೀಟರು ಸೈಕಲ್ ಹೊಡೆಯುವುದು ಸಾಧ್ಯವಾಗುವುದಿಲ್ಲವೋ ಅಂದು ನಮಗೆ ವಯಸ್ಸಾಗಿದೆ ಎಂದುಕೊಳ್ಳುತ್ತೇವೆ ” ಎಂದಾಗ ನಾವು ಮುಖ ಮುಖ ಮಾಡಿಕೊಂಡು “ಹಾಗಾದರೆ ನಮಗೆ ಈಗಾಗಲೇ ವಯಸ್ಸಾಗಿದೆ ” ಎಂದು ನಕ್ಕಿದ್ದೆವು.

ಆನಿಯಾ, 53 ವರ್ಷ ವಯಸ್ಸಿನ ಮೂರು ಮಕ್ಕಳ ತಾಯಿ ಆಫೀಸಿಗೆ ಬರುವುದು 24 ಕಿಲೋಮೀಟರು ಸೈಕಲ್ ತುಳಿದುಕೊಂಡು. ಆಫೀಸಿಗೆ ಬಂದು ಡ್ರೆಸ್ ಬದಲಾಯಿಸಿ ಕೆಲಸಕ್ಕೆ ಕುಳಿತರೆ ಅವಳು ಮಾಡುವ ಪ್ರತೀ ಕೆಲಸದಲ್ಲಿಯೂ ಆಕೆಯ ಮಾನಸಿಕತೆಯಲ್ಲಿ,  ದೈಹಿಕ ವ್ಯಾಯಾಮದಿಂದ ಆಗಿರುವ ವ್ಯತ್ಯಾಸ ತಿಳಿಯುತ್ತದೆ. ಎಷ್ಟೇ ಕೆಲಸವಿರಲಿ ನಗುನಗುತ್ತಾ, ಸಂತೋಷವಾಗಿ, ಸುಸ್ತೇ ಆಗದವರಂತೆ ಇರುವುದನ್ನು ನೋಡಿದಾಗಲೆಲ್ಲಾ, ನೀನು ಮನುಷ್ಯಳೇ ಅಲ್ಲ. ಏಲಿಯನ್ ಎಂದು ತಮಾಷೆ ಮಾಡುತ್ತಿರುತ್ತೇವೆ.  ನಮ್ಮ ಪ್ರೀತಿಯ ಜರ್ಮನ್ ಮ್ಯಾನೇಜರ್ ಬೆಂಗಳೂರಿನಲ್ಲಿ ಇದ್ದಾಗ ಅವರು ಟ್ರಿಯಾತ್ಲ್ಯಾನ್ ಸ್ಪೋರ್ಟಿನ ಬಗ್ಗೆ ಹೇಳುತ್ತಿದ್ದಾರೆ ಹಿಂದಿನಿಂದ ಸುಳ್ಳು ಹೇಳುತ್ತಿದ್ದರೆಂದು ನಗುತ್ತಿದ್ದೆವು. 3.8 ಕಿಲೋಮೀಟರು ಈಜಿ, 180 ಕಿಲೋಮೀಟರು ಸೈಕ್ಲಿಂಗ್ ಮಾಡಿ, ತಕ್ಷಣ 42 ಕಿಲೋಮೀಟರು ಓಡುವುದು ಅದೂ 60-64 ವರ್ಷಗಳ ಆಸುಪಾಸಿನಲ್ಲಿ ಇರುವವರು ಎಂದರೆ ನಂಬಲಾದೀತೇ?  ನಂಬಿರಲಿಲ್ಲ. ಅವರು ಭಾಗವಹಿಸಿದ ಟ್ರಿಯಾತ್ಲ್ಯಾನ್  ನೆಡೆಸಿದವರು ತಮ್ಮ ವೆಬ್ಸೈಟಿನಲ್ಲಿ ಅವರು ಪ್ರತಿಯೊಂದಕ್ಕೂ ತೆಗೆದುಕೊಂಡ ಸಮಯವನ್ನು ಪಬ್ಲಿಶ್ ಮಾಡಿದಾಗ ಮಾತ್ರ ಗೊತ್ತಾಗಿದ್ದು ಅವರು ಹೇಳುತ್ತಿದ್ದುದು ನಿಜ ಎಂದು. ಒಂದು ಕಿಲೋಮೀಟರು ಓಡಿದರೇ ಉಬ್ಬಸ ಬಂದಂತೆ ಬಾಯಿ ಬಿಡುವಂತಾಗುತ್ತದೆ. ಅವರ ಶ್ವಾಶಕೋಶಕ್ಕೆ ಅದೆಷ್ಟು ಶಕ್ತಿಯಿರಬಹುದು ಯೋಚಿಸಿ ಆಶ್ಚರ್ಯವಾಗಿತ್ತು.

picture from Westdeutsche zeitung

ಆನಿಯಾ  ಅಥವಾ ನಮ್ಮ ಮ್ಯಾನೇಜರ್ ಆದರೂ ಮ್ಯಾರಥಾನ್ ಗಳಲ್ಲಿ ಭಾಗವಹಿಸುತ್ತಾರೆ. ಆದರೆ ಅದಿಲ್ಲದೆ,  ಪಕ್ಕದ ಮನೆಯವರಂತೆ , ದಿನದಲ್ಲಿ ನಾವು ಕಲ್ಪಿಸದಷ್ಟು ದೂರ ಓಡುವ , ಸೈಕ್ಲಿಂಗ್ ಮಾಡುವ, ಅಥವಾ ಇನ್ಯಾವುದೋ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವ ಸಹಸ್ರಾರು ಜನರನ್ನು ನೋಡಿದಾಗಲೆಲ್ಲಾ, ಆಶ್ಚರ್ಯವಾಗುತ್ತಿತ್ತು. ನಮ್ಮ ದೈಹಿಕ ಸಾಮರ್ಥ್ಯವನ್ನು ನೆನೆದು ಸಂಕೋಚವಾಗುತ್ತಿತ್ತು. ಅವರ ದಿನನಿತ್ಯದ ಜೀವನದಲ್ಲಿ ದೈಹಿಕ ಚಟುವಟಿಕೆಗಳಿಗೆ ಕೊಡುವ ಪ್ರಾಮುಖ್ಯತೆ ನೋಡಿದಾಗ ನಾವೂ ಹಾಗೆಯೇ ಇರಬೇಕೆನಿಸುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ಕೊರೋನಾ ಅಂಕಿ ಅಂಶಗಳನ್ನು ಅವಲೋಕಿಸಿದಾಗ, ಬೇರೇನೂ ವಿಶೇಷವಾದ ಔಷಧಿಗಳನ್ನು ಕೊಡದೇ , ಮನೆಯಲ್ಲಿಯೇ ಇರಲು ಹೇಳಿದ ರೀತಿಯನ್ನು ನೋಡಿ, ವ್ಯಾಯಾಮಕ್ಕೂ ರೋಗ ನಿರೋಗ ಶಕ್ತಿಗೂ ಇರುವ ಸಂಬಂಧಗಳ ಬಗ್ಗೆ ನೆಡೆದ ಸಂಶೋಧನೆಗಳನ್ನು ಕುರಿತು ಓದಲು ಶುರುಮಾಡಿದೆ.

ಡೇವಿಡ್ C ನಿಲ್ಮನ್ ಹಾಗೂ ಲಾರೆಲ್ M ವೆನ್ಟ್ಜ್  ಎಂಬಿಬ್ಬರ ಸಂಶೋಧನಾ ಲೇಖನಗಳು ಆಶ್ಚರ್ಯ ಮೂಡಿಸಿದವು. ಪೂರ್ತಿ ಲೇಖನವನ್ನು ಈ ಲಿಂಕಿನಲ್ಲಿ ಓದಬಹುದು

https://www.sciencedirect.com/science/article/pii/S2095254618301005

 


ದೈಹಿಕವಾಗಿ ಹೆಚ್ಚು ಆಕ್ಟಿವ್ ಇಲ್ಲದ ಜನರಲ್ಲಿ  UTRI – ಅಪ್ಪರ್ ರೆಸ್ಪಿರೇಟರಿ ಟ್ರ್ಯಾಕ್ ಇಂಫೆಕ್ಷನ್ಸ್ ( ಶ್ವಾಸಕೋಶಕ್ಕೆ ಸಂಬಂಧಪಟ್ಟ)  ಸಾಮಾನ್ಯವಾಗಿ ಕಂಡುಬಂದರೆ, ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡುವವರಲ್ಲಿ ಸೋಂಕು ೪೦ ರಿಂದ ೫೦% ಕಡಿಮೆಯಂತೆ. ಆದರೆ, ಅತಿರೇಕವಾಗಿ ದೈಹಿಕ ಚಟುವಟಿಕೆ ಮಾಡುವವರಲ್ಲಿ ಸೋಂಕಿನ ಸಾಧ್ಯತೆ ಜಾಸ್ತಿಯಾಗುತ್ತಾ  ಹೋಗುತ್ತದಂತೆ. ಒಟ್ಟಿನಲ್ಲಿ ಗ್ರಾಫ್ ಈ ರೀತಿ J ಆಕಾರದಲ್ಲಿ ಇರುತ್ತದಂತೆ.

೬೦ ನಿಮಿಷಗಳಿಗೂ ಒಳಗಿನ ದೈಹಿಕ ವ್ಯಾಯಾಮಕ್ಕೆ ಮಧ್ಯಮ ಎಂದು ಪರಿಗಣಿಸುತ್ತಾರೆ. ಆ ರೀತಿಯ ದೈಹಿಕ ವ್ಯಾಯಾಮಗಳನ್ನು ಮಾಡಿದಾಗ,
ಅಂಗಾಂಶಗಳಲ್ಲಿ  ಮ್ಯಾಕ್ರೋಫೇಜ್‌ಗಳ ಆಂಟಿಪಾಥೋಜೆನ್ ಚಟುವಟಿಕೆಯು  ಇಮ್ಯುನೊಗ್ಲಾಬ್ಯುಲಿನ್‌ಗಳು, ಉರಿಯೂತದ ಸೈಟೊಕಿನ್‌ಗಳು, ನ್ಯೂಟ್ರೋಫಿಲ್ಗಳು, ಎನ್‌ಕೆ ಕೋಶಗಳು, ಸೈಟೊಟಾಕ್ಸಿಕ್ ಟಿ ಕೋಶಗಳು ಮತ್ತು ಅಪಕ್ವವಾದ ಬಿ ಜೀವಕೋಶಗಳ ಪರಿಚಲನೆಯನ್ನು ವೃದ್ಧಿಸುತ್ತದೆ.  ಇವೆಲ್ಲವೂ ರೋಗನಿರೋಧಕ ರಕ್ಷಣಾ ಚಟುವಟಿಕೆ ಮತ್ತು ಚಯಾಪಚಯ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ಅವರ ಸಂಶೋಧನಾ ಪತ್ರದಲ್ಲಿ ಬರೆದಿರುವಂತೆ ನಿಯತವಾದ ದೈಹಿಕ ವ್ಯಾಯಾಮ ಇನ್ಫ್ಲುಯೆಂಜಾ , ನ್ಯುಮೋನಿಯಾ ಮುಂತಾದ ರೋಗಗಳಲ್ಲಿ ಪ್ರಾಣಹಾನಿಯನ್ನು ನಿಯಂತ್ರಿಸುತ್ತದೆಯಂತೆ.  ಅಷ್ಟೇ ಅಲ್ಲ. ಕ್ಯಾನ್ಸರ್ ನಂತಹ ಕೆಟ್ಟ ಕಾಯಿಲೆಗಳನ್ನು ತಡೆಗಟ್ಟಲೂ ವ್ಯಾಯಾಮ ಸಹಾಯ ಮಾಡುತ್ತದೆಯಂತೆ.

ಇನ್ನು ಹಲವರು “ಸಸ್ಯಾಹಾರ” ಪದ್ದತಿಯಿಂದ ಹೆಚ್ಚು ದೈಹಿಕ ವ್ಯಾಯಾಮ ಸಾಧ್ಯವಿಲ್ಲವೆಂದೋ, ಲಾಕ್ ಡೌನ್ ನಿಂದ ದೈಹಿಕ ವ್ಯಾಯಾಮ ಅಸಾಧ್ಯವೆಂದೋ ಹೇಳಬಹುದು. ಆದರೆ, ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳಿನವರೆಗೆ ಹೊರಗೆ ಕಾಲಿಡಲು ಸಾಧ್ಯವಿಲ್ಲದಷ್ಟು ಚಳಿ ಇದ್ದಾಗ ಮನೆಯಲ್ಲಿಯೇ ವ್ಯಾಯಾಮ ಮಾಡುವ ಜನರನ್ನು ನೋಡಿದಮೇಲೆ, ಅವೆಲ್ಲಾ ಬರೀ ನೆಪ ಎನಿಸುತ್ತದೆ. ಆನಿಯಾ ರೀತಿಯ ಜನರೊಂದಿಗೆ ಸೇರಿ “ಹಸಿರು ಸೊಪ್ಪನ್ನು ಹಸಿಯಾಗಿ ತಿನ್ನಲು ನಾವೇನು ದನಗಳೇ ” ಎಂದು ತಮಾಷೆ ಮಾಡುತ್ತಿದ್ದುದು “ಇದೂ ರುಚಿಯಾಗಿಯೇ ಇರುತ್ತದೆಯಲ್ಲವೇ. ಹಾಗೆಯೇ, ಬೆಂದ ಹಿಟ್ಟು ತಿನ್ನುವುದಕ್ಕಿಂತ ಹೆಚ್ಚು ಫ್ರೆಶ್ ಎನ್ನಿಸುತ್ತದೆಯಲ್ಲವೇ. ಇಡೀ ದಿನ ಚೈತನ್ಯಶೀಲತೆ ಒದಗಿಸುತ್ತದೆಯಲ್ಲವೇ?” ಎನ್ನುವ ಅನುಭವಗಳು ಆಗಲು ಕೆಲವು ವರ್ಷಗಳು ಬೇಕಾಯಿತು.

ಬಿಸಿಲಿರದಿದ್ದರೆ  ಮನೆಯಲ್ಲಿಯೇ  ಯೋಗ, ವರ್ಕ್ ಔಟ್,  ಬಿಸಿಲಿದ್ದರೆ  ಸೈಕಲ್ ಮಾರ್ಚ್ ಎಂದು ನಿರ್ಧರಿಸಿ  ಕೆಲಸದ ಮಧ್ಯೆ ಬಿಡುವಾಗದಿದ್ದರೂ ಹೇಗಾದರೂ ಸಮಯ ಮಾಡಿಕೊಂಡು ಒಂದೆರಡು ಕಿಲೋಮೀಟರು ಆದರೂ ನೆಡೆದು ಬರುವ ಅಭ್ಯಾಸವಾಗಿ ವರ್ಷಗಳಾಯಿತು. ಬೆಳಿಗ್ಗೆ ಹಣ್ಣುಗಳ ಜೊತೆಗೆ ಹಸಿ ಪಾಲಕ್ ಸೊಪ್ಪು ಸೇರಿಸಿ ಜೂಸ್ ಮಾಡಿಕೊಂಡು ಕುಡಿಯುವ ಅಭ್ಯಾಸವೂ ಕಳೆದ ೩-೪ ವರ್ಷಗಳಿಂದ ಜಾರಿಯಲ್ಲಿದೆ. ಮಧ್ಯಾಹ್ನ ಬಣ್ಣ ಬಣ್ಣದ ಹಸಿ ತರಕಾರಿ ಹಣ್ಣುಗಳನ್ನು ಒಟ್ಟುಸೇರಿಸಿ ತಿನ್ನುವ ಅಭ್ಯಾಸವೂ ಆಗಿತ್ತು.

ಹಾಗೂ  ಕೊರೊನ ಅಂಕಿ ಅಂಶಗಳನ್ನು ನೋಡಿದ ಮೇಲೆ,  ಕೈ ಮುಗಿಯುವ ನಮ್ಮ ರೀತಿಯ ಜೊತೆಗೆ ಅತಿಯಾದ ಔಷದಿಗಳ  ಮೇಲಿನ ಅವಲಂಬನೆಯಿಲ್ಲದ, ಜೈವಿಕ ಆಹಾರ ತಿನ್ನುವ, ದೈಹಿಕ ವ್ಯಾಯಾಮದಿಂದ ರೋಗನಿರೋಧಕ ಶಕ್ತಿ ಬೆಳೆಸಿಕೊಂಡು ರೋಗ ಬಂದರೂ ಅದನ್ನು ಮೀರಿ ನಿಲ್ಲುವ ರೀತಿಯನ್ನು  ಅನುಸರಿಸಬೇಕೆನಿಸುತ್ತಿದೆ.  ಜೊತೆಗೆ ” ಔಷಧಿಗಿಂತ ನಿರೋಧಕ ಶಕ್ತಿ ಒಳ್ಳೆಯದೆಂಬ ”  ಜೀವನಶೈಲಿಯ  ಬಗ್ಗೆ ನಂಬಿಕೆ ಹೆಚ್ಚಿದೆ.

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅಶ್ವಿನಿ ಕೋಟೇಶ್ವರ

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಅಂತರ (೨)