ಹಕ್ಕಿ ನಿಧಾನವಾಗಿ ನಮ್ಮೊಡನೆ ಮಾತನಾಡಲು ಶುರುಮಾಡಿತ್ತು. ಬೆಳಿಗ್ಗೆ ಸಂಜೆ ಸ್ವಲ್ಪ ಹೊತ್ತು ಕೈಯಲ್ಲಿ ಹಿಡಿದುಕೊಂಡು ಹೊರಗೆ ಕರೆದುಕೊಂಡು ಹೋಗಿ ಫ್ರೆಶ್ ಗಾಳಿಯಲ್ಲಿ ಇಟ್ಟುಕೊಂಡು ವಾಪಸು ತರುತ್ತಿದ್ದೆವು. ಅದರಂತೆ ನಾವೂ ಶಬ್ದ ಮಾಡುತ್ತಿದ್ದೆವು. ಅದಕ್ಕೆ ಏನರ್ಥ ಆಗುತ್ತಿತ್ತೋ ಗೊತ್ತಿಲ್ಲ.
ಮನೆಯ ಒಳಗೂ ಹತ್ತಿರದಲ್ಲಿಯೇ ಬಂದು ಕೂರುತ್ತಿತ್ತು. ಮೈಮೇಲೆ ಹತ್ತಿ ಕೂರುತ್ತಿತ್ತು. ಮೈ ನೇವರಿಸಿದರೆ ಹಿತವಾದಂತೆ ತೋರುತ್ತಿತ್ತು. ಆದರೆ ನೋಟವೆಲ್ಲಾ ಕಿಟಕಿಯ ಹೊರಗೆ ನೆಟ್ಟಿತ್ತು. ಪಾಪ ಎನ್ನಿಸಿದರೂ, ತಾನಾಗಿಯೇ ತಿನ್ನಲು ಅಭ್ಯಾಸವಿಲ್ಲದ, ಹಾರಲು ಬಾರದ ಹಕ್ಕಿಯನ್ನು ಹೊರಬಿಡಲು ಮನಸ್ಸಾಗುತ್ತಿರಲಿಲ್ಲ. ತಿನ್ನಲು ಹಾಗೂ ಹಾರಲು ಕಳಿಸುವುದು ಹೇಗೆ ಎಂದೂ ಗೊತ್ತಿರಲಿಲ್ಲ.
ಏಳನೆಯ ದಿನ, ದಿನದಂತೆ ಸ್ವಲ್ಪ ಹೊತ್ತು ಗೂಡಿನಲ್ಲಿ ಕೂರಿಸೋಣ ಎಂದು ಹಕ್ಕಿಗಳಿಗೆ ಊಟ ಹಾಕಲು ಇದ್ದ ಗೂಡಿನಲ್ಲಿ ಕೂರಿಸಿದಾಗ, ಪಟ್ ಎಂದು ಹಾರಿ ಪೊದೆಯೊಳಗೆ ಮರೆಯಾಗುವುದೇ?
ಎಷ್ಟು ಹುಡುಕಿದರೂ ಸಿಗಲಿಲ್ಲ. ಮಕ್ಕಳಿನ್ನೂ ಎದ್ದಿರಲಿಲ್ಲ. ಅದಕ್ಕೆ ಇದ್ದಿದ್ದೇ ಇಷ್ಟು ಅದೃಷ್ಟ. ದೇವರು ಇಚ್ಚಿಸಿದಂತೆ ಆಗಲಿ ಎಂದುಕೊಂಡು ಚಿಂತೆಯನ್ನು ಮರೆಯಲು ವಾಕಿಂಗ್ ಹೋಗುವ ನಿರ್ಧಾರ ಮಾಡಿ, ಮನೆಯ ಹಿಂಬದಿ ಇರುವ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದರೆ ನಮ್ಮ ಮನೆಯಿಂದ “ಹೋ” ಎಂದು ಬೊಬ್ಬೆ ಹೊಡೆಯುವುದು ಕೇಳಲು ಶುರುವಾಯಿತು. ಭಾನುವಾರ ಬೇರೆ. ನಿಶ್ಯಬ್ದದಲ್ಲಿ ಮಕ್ಕಳ ಅಳು ಕೇಳಿ ಅಕ್ಕ ಪಕ್ಕದವರು ಏನೆಂದುಕೊಂಡಾರು ಎಂದುಕೊಂಡು ಮನೆಗೆ ಓಡಿ ಬಂದರೆ, ಹಕ್ಕಿ ಇಲ್ಲದ್ದನ್ನು ಕಂಡು ಇಬ್ಬರೂ ಮಕ್ಕಳು ಬೊಬ್ಬೆಯಿಡುತ್ತಿದ್ದರು. ಅವರನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಗಿತ್ತು.
ಹಿತ್ತಲಿಗೆ ಹೋದರೆ ಹತ್ತಿರದಲ್ಲೇ ಎಲ್ಲೋ ಅದು ಕೂಗುವ ಶಬ್ದ ಕೇಳುತ್ತಿತ್ತು. ಪಕ್ಕದ ಮನೆಯ ಗಾರ್ಡನ್ನಿನಲ್ಲಿ ಪೊದೆಗಳ ಸಂದಿ ಅದು ಇರುವುದು ಗೊತ್ತಾದಾಗ, ಪಕ್ಕದ ಮನೆಗೆ ಹೋಗಿ ಬೆಲ್ ಮಾಡಿದೆವು. ಅವರಿಗೋ ಆಶ್ಚರ್ಯ. ಆಯಿತು ಕರೆದುಕೊಂಡು ಹೋಗಿ ಎಂದಾಗ ಹತ್ತಿರ ಹೋಗಿ ಎತ್ತಿಕೊಂಡು ಮನೆಗೆ ತಂದಿದ್ದಾಯಿತು.ಇನ್ನು ಸರಿಯಾಗಿ ತಿನ್ನಲು, ಹಾರಲು ಕಲಿಯುವವರೆಗೆ ಬೇರೆಲ್ಲಿಗೂ ಬಿಡುವುದು ಬೇಡ ಎಂದು ನಿರ್ಧರಿಸಿ, ತಿನ್ನಲು ಕಲಿಸುವ ಪ್ರಯತ್ನ ಶುರು ಮಾಡಿದೆವು.
ಮೀನಿಗೆ ಹಾಕುವ ಕ್ರಿಮಿಗಳನ್ನು ಪೆಟ್ ಶಾಪ್ ನಿಂದ ತಂದು ಪ್ಲೇಟಿನಲ್ಲಿ ಹಾಕಿ ತಿನ್ನಲು ಬಿಟ್ಟರೆ, ತಾನಾಗಿಯೇ ಎತ್ತಿಕೊಂಡು ತಿನ್ನಲು ಇನ್ನೂ ಬರುತ್ತಿರಲಿಲ್ಲ. ನನ್ನ ದೊಡ್ಡ ಮಗಳು ಟ್ರೇನಿಂಗ್ ಕೊಡಲು ಶುರು ಮಾಡಿದರೆ ನಮಗೆ ಸಂಕಟ. ಆ ಕೀಟಗಳನ್ನು ಕೈಲಿ ಎತ್ತಿ ತೋರಿಸಿ, ಪುನಃ ಪ್ಲೇಟಿನ ಮೇಲೆ ಹಾಕುವುದು. ತಿನ್ನು ಎಂದು ತೋರಿಸುವುದು. ಅರ್ಧ ಗಂಟೆಯಾದರೂ ತಿನ್ನಲು ಬರದೇ ಹಸಿವು ಎಂದು ಶಬ್ದ ಮಾಡಿದಾಗ, ಅಜ್ಜ ದೊಡ್ಡಮ್ಮಂದಿರು ಮೊಮ್ಮಕ್ಕಳಿಗೆ ಉಪಚಾರ ಮಾಡುವಂತೆ, “ಇದೊಂದು ಸಾರಿ ಕೊಟ್ಟು ಬಿಡು. ಆಮೇಲೆ ಕಲಿಸುವಂತೆ ” ಎಂದು ಒಪ್ಪಿಸುವ ಪ್ರಯತ್ನ. ಅವಳೋ ಕೋಲ್ಡ್ ಬ್ಲಡ್. ಹೀಗೆ ಮಾಡಿದರೆ ಮುಂದೆ ಅದಕ್ಕೆ ತೊಂದರೆ ಆಗುತ್ತದೆ. ಹತ್ತಿರವೇ ಬರಬೇಡಿ ಎಂದು ಖಡಾಖಂಡಿತವಾಗಿ ಹೇಳಿ ತಿನ್ನಲು ಕಲಿಸಿಯೇ ಬಿಟ್ಟಳು. ಆದರೂ ಬನಸ್ಪತ್ರೆ ಹಣ್ಣನ್ನು ನಮ್ಮ ಕೈಯಿಂದಲೇ ತಿನ್ನುತ್ತಿತ್ತು.
ನಿಧಾನವಾಗಿ ಮನೆಯೊಳಗೇ ಅಲ್ಲಿಂದಿಲ್ಲಿಗೆ ಹಾರುವುದು ಕೂರುವುದು ನೆಡೆಯುತ್ತಿತ್ತು. ಅದನ್ನೊಂದನ್ನೇ ಕೆಳಗೆ ಬಿಟ್ಟು ಅದರ ಹಿಕ್ಕೆಯ ವಾಸನೆಯಲ್ಲಿ ಕೂರಲು ಮನಸ್ಸಾಗದೇ ಉಪ್ಪರಿಗೆಗೆ ಹೋಗಿ ಕುಳಿತರೆ, ತಾನೂ ಹಾರಿಕೊಂಡು ಬರುವುದೇ?ದಿನಹೋದಂತೆ ಅದನ್ನು ನೋಡಿಕೊಳ್ಳುವುದು ಕಷ್ಟವಾಗತೊಡಗಿತು. ಪ್ರತೀ ಐದು ನಿಮಿಷಕ್ಕೊಮ್ಮೆ ತಿನ್ನುವುದು. ಚಿಕ್ಕದೊಂದು ಕುಗುರು ನಿದ್ದೆ. ಆಮೇಲೆ ಪಿಚಕ್ ಪಿಚಕ್. ಸೋಫಾ, ಟೇಬಲ್ ಮೇಲೆಲ್ಲಾ ಪೇಪರ್ ಹಾಕಿದ್ದಾಯಿತು. ಪ್ಲಾಸ್ಟಿಕ್ ಹಾಕಿದ್ದಾಯಿತು. ಅದೋ, ಯಾವ ಮೂಲೆಯಲ್ಲಿ ಪ್ಲಾಸ್ಟಿಕ್ ಇಲ್ಲವೋ ಅಲ್ಲಿಯೇ ಹೋಗಿ ಹಿಕ್ಕೆ ಹಾಕುವುದು.ಒಂದು ದಿನ ಬನಾಸ್ಪತ್ರೆ ಹಣ್ಣು ಇಲ್ಲದೆ ಕಲ್ಲಂಗಡಿ ಹಣ್ಣು ಕೊಟ್ಟರೆ ಆಗುವುದಿಲ್ಲ ಎಂದು ಮುಟ್ಟದೆ, ರಾತ್ರಿ ಒಂಬತ್ತು ಗಂಟೆಗೆ ಅಂಗಡಿಗೆ ಹೋಗಿ ಬನಸ್ಪತ್ರೆ ಹಣ್ಣು ತಂದು ತಿನ್ನಿಸಬೇಕಾಯಿತು.
ಇಂದು ಹೊರಗೆ ಬಿಡೋಣವೇ? ನಾಳೆ ಬಿಡೋಣವೇ? ಎಂಬ ಯೋಚನೆಯಲ್ಲಿ ದಿನ ದೂಡತೊಡಗಿದೆವು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020