ದೈವ ನಿಮಿತ್ತವೋ ಏನೋ ಗೊತ್ತಿಲ್ಲ, ಅಂದು ೭೦೦ ಕಿಲೋಮೀಟರು ದೂರದಿಂದ ಕಾರಿನಲ್ಲಿ ಪ್ರಯಾಣ ಮಾಡಿ ಮಧ್ಯಾಹ್ನ ೩ ರ ಸುಮಾರಿಗೆ ಮನೆ ಸೇರಿದ್ದರೂ, ಊಟ ಮಾಡಿ ಸಂಜೆ ೫ ರ ಸುಮಾರಿಗೆ ವಾಕಿಂಗ್ ಹೋಗಿ ಬರುವ ಎಂದು ಹೊರಟೆವು. ಊರಿನಿಂದ ಅಮ್ಮ ಬಂದಿದ್ದಳು. ದೊಡ್ಡಮ್ಮ ಮೊಮ್ಮಗಳ ರನ್ನಿಂಗ್ ರೇಸ್ ಶುರುವಾಯಿತು. ಮನೆಯಿಂದ ಸುಮಾರು ೫೦೦ ಮೀಟರ್ ದೂರ ಹೋಗಿದ್ದೆವು ಅಷ್ಟೇ. ಮುಂದೆ ಓಡುತ್ತಿದ್ದ ೬ ವರ್ಷದ ಮಗಳು ಥಟ್ಟನೆ ನಿಂತು ಎಂದು ತನ್ನ ಕೆನ್ನೆಗಳೆರಡನ್ನೂ ಕೈಗಳಿಂದ ಮುಟ್ಟಿಕೊಂಡು “ಒಹ್” ಎಂಬ ಉದ್ಗಾರ ತೆಗೆದಾಗ ಏನಾಯಿಯೆಂದು ನೋಡಲು ಓಡಿ ಹೋದೆವು.
ಒಂದು ಚಿಕ್ಕ ಕರಿ ಬಣ್ಣದ ಹಕ್ಕಿ. ಹುಟ್ಟಿ ನಾಲ್ಕಾರು ದಿನಗಳಾಗಿರಬಹುದಷ್ಟೆ. ಗೂಡಿನಿಂದ ಕೆಳಗೆ ನೆಲದಲ್ಲಿ ಬಿದ್ದಿತ್ತು. ಅತ್ತಿತ್ತ ನೋಡಿ ತಾಯಿ ಹಕ್ಕಿ ಏನಾದರೂ ಹತ್ತಿರದಲ್ಲಿ ಇರಬಹುದೆಂದು ಹುಡುಕಿದರೆ, ತಾಯಿ ಹಕ್ಕಿಯ ಸುಳಿವಿರಲಿಲ್ಲ. ಅಲ್ಲೇ ಪಕ್ಕದಲ್ಲಿ ಇರುವ ಕೊಟ್ಟಿಗೆಯವರ ಮನೆಯಲ್ಲಿ ಬೆಕ್ಕು ಇದ್ದುದು ನೆನಪಿಗೆ ಬಂದು ಹಕ್ಕಿಯನ್ನು ಅಲ್ಲಿ ಬಿಟ್ಟು ಬರಲು ಮನಸ್ಸಾಗದೇ , ಎರಡೂ ಕೈಗಳಲ್ಲಿ ಎತ್ತಿಕೊಂಡು ಮನೆಗೆ ತಂದೆವು.ಒಂದು ರಟ್ಟಿನ ಬಾಕ್ಸಿನೊಳಗೆ ಪೇಪರ್ ಹಾಕಿ, ಕಾಳುಗಳನ್ನು ಹಾಕಿ ಹಕ್ಕಿಯನ್ನು ಅದರೊಳಗೆ ಬಿಟ್ಟರೆ, ಅದಕ್ಕೆ ತಿನ್ನಲು ಬರುತ್ತದೆಯೇ? ಇಲ್ಲ.
ಆ ಪುಟ್ಟ ಹಕ್ಕಿಗೆ ತಿನ್ನಿಸುವುದೇನು? ಮನೆಯವರು ಹಾಗೂ ಮಗಳು ಹೋಗಿ ಹಿತ್ತಲಿನಲ್ಲಿ ಮಣ್ಣನ್ನು ಅಗೆದು ಎರೆಹುಳವನ್ನು ಆರಿಸಿಕೊಂಡು ತಂದರೆ, ಗೊಂದಲ. ಒಂದರ ಜೀವ ಉಳಿಸಲು ಇನ್ನೊಂದರ ಜೀವ ತೆಗೆಯುವ ಪರಿಸ್ಥಿತಿ. ಹಕ್ಕಿಯನ್ನು ರಕ್ಷಿಸಲು ಮನೆಗೆ ತಂದ ಮೇಲೆ, ಮಕ್ಕಳಂತೆ ನಮ್ಮ ಜವಾಬ್ದಾರಿ. ಪಾಪ ಪುಣ್ಯದ ಲೆಕ್ಕ ಮಾಡದೆ, ಅದು ಏನಾದರೂ ತಿಂದು ಬದುಕಿದರೆ ಸಾಕು ಎನ್ನುವ ಭಾವ ಒಂದೆಡೆಯಾದರೆ, ವಿಲವಿಲನೆ ಒದ್ದಾಡುವ ಎರೆಹುಳವನ್ನು ನೋಡಿದರೆ ಇನ್ನೊಂದೆಡೆ ಸಂಕಟ. ಅಪ್ಪ ಮಕ್ಕಳು ಏನಾದರೂ ಮಾಡಲಿ ಎಂದು ದೂರ ನಿಂತು ನೋಡುತ್ತಿದ್ದರೆ, ಮರಿ ಹಕ್ಕಿ ತಾಯಿ ಹಕ್ಕಿಯೇ ಗುಟುಕು ಕೊಡುತ್ತಿದೆಯೇನೋ ಎಂಬಂತೆ ಬಾಯಿ ಕಳೆದು ಎರೆಹುಳವನ್ನು ಗುಳುಂ ಮಾಡಿತ್ತು.
ಇನ್ನೂ ರೆಕ್ಕೆ ಬೆಳೆಯದ ಹಕ್ಕಿಯ ಪಕ್ಕೆಲುಬಿನ ಮೂಳೆಗಳು ಕಾಣಿಸುತ್ತಿದ್ದವು. ಆಗಾಗ ಕುಗುರಿ ಬಿದ್ದಂತೆ ಕಾಣುತ್ತಿದ್ದ ಹಕ್ಕಿ ರಾತ್ರಿ ಬೆಳಗಾಗುವುದರ ಒಳಗೆ ಉಳಿಯುತ್ತದೆಯೋ ಇಲ್ಲವೋ ಗೊತ್ತಿರಲಿಲ್ಲ. ಆಗಾಗ ಇಣುಕಿ ನೋಡುತ್ತಿದ್ದೆವು. ಬೆಳಿಗ್ಗೆ ಎದ್ದು ನೋಡಿದರೆ, ಹಸಿವು ಎಂದು ಸೂಚಿಸುವಂತೆ ಕೊಕ್ಕು ಮೇಲೆ ಮಾಡಿ ಗುಟುಕಿಗಾಗಿ ಕಾಯುತ್ತಿತ್ತು.
ಪುನಃ ಎರೆಹುಳಗಳನ್ನು ಅಗೆದು ಹುಡುಕುವ ಕೆಲಸ ಶುರು. ಗಟ್ಟಿ ಊಟಕ್ಕೇನೋ ಎರೆಹುಳವನ್ನು ಕೊಡಬಹುದು. ಆದರೆ, ನೀರನ್ನು ಹೇಗೆ ಕುಡಿಸುವುದು? ಗೊತ್ತಿರಲಿಲ್ಲ. ಮನೆಯಲ್ಲಿದ್ದ ಬನಸ್ಪತ್ರೆ ಹಣ್ಣನ್ನು ಹೆಚ್ಚಿ ಎರೆಹುಳದಷ್ಟೇ ದೊಡ್ಡ ಪೀಸ್ ಮಾಡಿ ಬಾಯಿಯ ಹತ್ತಿರ ಹಿಡಿದರೆ, ಅದನ್ನೂ ಗುಳುಂ ಎನ್ನಿಸುವುದೇ?ಕೈಯಲ್ಲಿ ಎತ್ತಿಕೊಂಡು ಹಣೆಯನ್ನು ತಿಕ್ಕಿದರೆ, ಬೆಚ್ಚಗಿನ ಅನುಭವಕ್ಕೆ ಪುನಃ ನಿದ್ದೆಗೆ ಜಾರುವುದು. ಕೈಯಿಂದ ಕೆಳಗಿಟ್ಟ ಕೂಡಲೇ ಪುನಃ ಕಣ್ಣು ಬಿಟ್ಟು, ಚೀವ್ ಚೀವ್ ಎಂದು ಕೂಗುವುದು.
ಮನೆಯಲ್ಲಿದ್ದ ಉಲ್ಲನಿನ ಟೊಪ್ಪಿ ಅದರ ಗೂಡಾಗಿ ತಯಾರಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಆದರೆ, ಕೂತಲ್ಲಿ ನಿಂತಲ್ಲಿ ಪಿಚಕ್ ಪಿಚಕ್ ಎಂದು ಹಿಕ್ಕೆ. ಅಷ್ಟು ಪುಟ್ಟ ಮರಿಯಾದರೂ, ನೀರು ನೀರಾದ ಹಿಕ್ಕೆ ಟೊಪ್ಪಿಯನ್ನು ಒದ್ದೆಮಾಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಚಿಕ್ಕ ಮಕ್ಕಳಿಗೆ ಹಾಕುವಂತೆ ಬಟ್ಟೆಯನ್ನು ಮಡಿಸಿ ಮಡಿಸಿ ಉಪಯೋಗಿಸಲು ಶುರುಮಾಡಿದೆವು.
ಶುರುವಾಗಿತ್ತು ನಿರಂತರ ಪಾಲನೆ ಪೋಷಣೆ. ಹಸಿವಾದಾಗ ಕೂಗುವುದು, ತಿಂದು ೫ ನಿಮಿಷಗಳಲ್ಲಿ ಪಿಚಕ್ ಪಿಚಕ್ ಎಂದು ಹಿಕ್ಕೆ ಹಾಕುವುದು. ೨ನೇ ದಿನ ಸಂಜೆಯೊಳಗೆ ನಮ್ಮೊಂದಿಗೆ ಹೊಂದಿಕೊಂಡು ಬೆನ್ನ ಮೇಲೆ ಹತ್ತುವುದು ,ಮನೆಯೊಳಗೇ ನೆಡೆಯಲು, ಹಾರಲು ಪ್ರಯತ್ನಿಸುವುದು ಶುರುವಾಗಿತ್ತು.
ಈ ಹಕ್ಕಿ ಮರಿ ಮುಂದಿನ ಮೂವತ್ತು ದಿನಗಳು ನಮ್ಮೊಂದಿಗೆ ಬದುಕಿ ನಮಗೆ ಬದುಕಿನ ಪಾಠ ಕಲಿಸುತ್ತದೆಂದು ನಾವು ಕಲ್ಪಿಸಿಯೂ ಇರಲಿಲ್ಲ.
ಮುಂದುವರೆಯುವುದು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020