ಬೇಕರಿಯಲಿ
ಕೇಕು ತಯಾರಿಸುವ ಆ
ಹುಡುಗನನು
ನೆನಪಿಡುವುದಕ್ಕಿಂತ
ಹೆಚ್ಚಾಗಿ ಮರೆತವರೇ ಜಾಸ್ತಿ!
ಎಲ್ಲರೂ ಅಲಂಕಾರ
ಮಾಡಿದ ಕೇಕುಗಳ
ಕೊಂಡುಯ್ಯುವಾಗ
ಇವನಿಗೊಂದು “ಥ್ಯಾಂಕ್ಸ್… ” ಕೂಡ ಹೇಳುವುದಿಲ್ಲ!
ಇಷ್ಟಕ್ಕೂ ಅವನು
ಎಲ್ಲರ ಎದುರಿಗೆ
ಹಾಗೆಲ್ಲ ಕಾಣಿಸಿಕೊಳ್ಳುವುದಿಲ್ಲ
ಅದೆಷ್ಟೋ ಸಂಭ್ರಮದ
ದಿನಗಳಿಗೆ ಆತ
ಸಾಕ್ಷಿಯಾಗಿದ್ದಾನೆ!
ಎಲ್ಲರೂ ಅದ್ದೂರಿಯಾಗಿ
ಮಧ್ಯರಾತ್ರಿ
ಜನುಮದಿನ ಆಚರಿಸುವಾಗ ಈತ
ಬೇಕರಿಯ ಮೂಲೆಯ ಇಕ್ಕಟ್ಟು
ಜಾಗದಲ್ಲಿ ಸುಮ್ಮನೆ ಮಲಗಿರುತ್ತಾನೆ
ಬಂಧು ಬಾಂದವರಿದ್ದಾರೆ
ಅಕ್ಕ ತಂಗಿಯರಿದ್ದಾರೆ,
ಅವನ ದೊಡ್ಡ ಕುಟುಂಬದಲ್ಲಿ
ಹುಡುಕಿದರೆ ಪುಟ್ಟ ಮಕ್ಕಳೂ ಸಿಗುತ್ತಾರೆ
ಮರೆತ ಗೆಳೆಯ,ಗೆಳತಿಯರು
ಅವನ ಲಿಷ್ಟಿನಲ್ಲಿದ್ದಾಳೆ!
ಆತ ಕೇಕನ್ನು ಒಪ್ಪವಾಗಿ ಸಿಂಗರಿಸುತ್ತಾನೆ
ಅದೆಷ್ಟೇ ಪ್ರಯತ್ನಿಸಿದರೂ
ರೂಪುಗೊಳ್ಳಲು ತಡವರಿಸೋ
ಅವನ ಬದುಕು, ಕನಸುಗಳ ನೆನಪಿಸಿಕೊಂಡೇ
ಕ್ರೀಮಿನ ನಳಿಕೆಯನ್ನು
ಅಲ್ಲಾಡದಂತೆ ಒತ್ತಿ ಹಿಡಿಯುತ್ತಾನೆ
ಮುದ್ದಾದ ಅಕ್ಷರ,ಚಿತ್ರಗಳು ಅವನ
ಕೈಯಿಂದ ಮೂಡುತ್ತವೆ
ಕೇಕುಗಳು ಮತ್ತಷ್ಟು ಚೆಂದವಾಗುತ್ತವೆ
ಯಾರದ್ದೋ ಜನುಮದಿನ
ಹಬ್ಬವೇ ಆಗುತ್ತದೆ
Latest posts by ಮಂಜುನಾಥ್ ಬೆಜ್ಜವಳ್ಳಿ (see all)
- ಕಳೆದುಕೊಂಡಿದ್ದು ಇಲ್ಲೇ… - June 4, 2020
- ಪುಟ್ಟ ಕತೆಗಳು… - June 3, 2020
- ಮರೆಯಾದ ಮಾಣಿಕ್ಯ…. - June 2, 2020