ಬಾಳಿನಾಹವ
ಪಿಡಿದು ಶಸ್ತ್ರಾಸ್ತ್ರಗಳ ಅಂಜುವುದೆ ರಣದಲ್ಲಿ
ಒಡನೆ ಎದುರಾಳಿ ಕಂಡೋಡುವುದು ತರವೆ !
ಅಡಿಗಡಿಗೆ ಗುರುವಿತ್ತ ಅರಿವಿನಸ್ತ್ರವ ಬಳಸು
ನಡೆ ಬಾಳಿನಾಹವದಿ ಜಾಣಮೂರ್ಖ//
ಒಬ್ಬ ಶಸ್ತ್ರಸಜ್ಜಿತನಾದ ಯೋಧನು ಎದುರಾಳಿಯನ್ನು ಕಂಡು ರಣರಂಗದಿಂದ ಓಡುವುದು ತರವೇನು !? ಮಹಾಭಾರತದ ಉತ್ತರಕುಮಾರನಂತೆ ! ಅವನನ್ನು ರಣಹೇಡಿ ಎನ್ನುತ್ತಾರೆ. ಹಾಗೇನೇ ಈ ಬದುಕೂ ಕೂಡ ಒಂದು ಯುದ್ಧರಂಗವೇ ಸರಿ. ಇಲ್ಲಿನ ಸವಾಲುಗಳನ್ನೆದುರಿಸಲು ಭೌತಿಕ ಶಸ್ತ್ರಸ್ತ್ರಗಳು ಬೇಕಿಲ್ಲ. ಇದನ್ನರಿತೇ ಗುರುವು ಅರಿವೆಂಬ ದಿವ್ಯಾಸ್ತ್ರಗಳನ್ನು ಕರುಣಿಸುವನು. ಆ ಅಸ್ತ್ರಗಳನ್ನು ಹಿಡಿದಿದ್ದರೂ ಸಹ ಅಡಿಗಡಿಗೆ ಲೌಕಿಕ ಮಾಯೆಯೆಂಬ ಶತ್ರುವಿನ ಉಪಟಳಕ್ಕೆ ಹೆದರಿ ಓಡುವುದು ಸರಿಯೆ ? ಗುರುವಿತ್ತ ಜ್ಞಾನಾಸ್ತ್ರ , ಧೈರ್ಯಾಸ್ತ್ರ , ಪ್ರಜ್ಞಾಸ್ತ್ರಗಳೇ ಮೊದಲಾದ ದಿವ್ಯಾಸ್ತ್ರಗಳನ್ನು ಸಮಯಕ್ಕೆ ಸರಿಯಾಗಿ ಬಳಸಿ ಗೆದ್ದು ಬದುಕಬೇಕು. ಅದುಬಿಟ್ಟು ಹೆದರಿ ಓಡಬಾರದು. ಅದು ಹೇಡಿಗಳ ಲಕ್ಷಣ. ಈಸಬೇಕು ಇದ್ದು ಜಯಿಸಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021