ತತ್ತ್ವ , ಸತ್ವ, ಸತ್ಯ ಸಾಕ್ಷಾತ್ಕಾರ
ತತ್ತ್ವವನು ಪೇಳ್ವೇಕೆ ತತ್ತ್ವವಾಗೆಲ್ಲರ್ಗೆ
ತತ್ತ್ವವೇ ಬಾಳಾಗೆ ತತ್ತ್ವಾರ್ಥವೇಕೆ?
ತತ್ತ್ವವಿರೆ ಸತ್ವಕಾಣ್ ಸತ್ಯಸಾಕ್ಷಾತ್ಕಾರ
ತತ್ತ್ವವಾಗುವ ಬಾರೊ ಜಾಣಮೂರ್ಖ//
ಸ್ನೇಹಿತರೇ , ಸುಮ್ಮನೇ ತತ್ತ್ವ , ಸಿದ್ಧಾಂತಗಳನ್ನು ಹೇಳುವುದನ್ನು ಬಿಡೋಣ. ನಾವೇ ತತ್ತ್ವವಾಗೋಣ. ನಮ್ಮ ಬದುಕನ್ನು ನೋಡಿಯೇ ಜಗತ್ತು ಕಲಿಯುವಂತಾಗಲಿ. ಬದುಕೇ ಒಂದು ತತ್ತ್ವರೂಪಿಯಾದಾಗ ಮತ್ತೆ ಬಿಡಿಸಿ ಹೇಳೋ ಪ್ರಮೇಯವೇ ಇರೋದಿಲ್ಲ. ಉದಾಹರಣೆಗೆ – ಸ್ವಚ್ಛತೆಯನ್ನು ಕಾಪಾಡೋಣ ಎಂದು ಹೇಳೋ ಬದಲು ನಾವು ಭೌತಿಕವಾಗಿ ಮತ್ತು ಮಾನಸಿಕವಾಗಿ ಶುದ್ಧರಾಗಿದ್ದು , ಶುದ್ಧತೆಯನ್ನು ಕಾಪಾಡುತ್ತಿದ್ದರೆ ಅಷ್ಟು ಸಾಕು. ಜಗತ್ತು ನಿಮ್ಮನ್ನು ಮೌನವಾಗಿ ಅನುಸರಿಸುತ್ತದೆ. ಅಲ್ಲಿ ಏನೂ ಅಬ್ಬರಿಸೋದು ಬೇಡ. ತತ್ತ್ವ ತಾನಾಗಿಯೇ ಗೋಚರಿಸುತ್ತಿರುತ್ತದೆ.ಇದರಿಂದ ಅದರ ಬೋಧನೆಯಾಗಲಿ ಸಾರುವಿಕೆಯಾಗಲಿ ಬೇಕಿಲ್ಲ. ಅದರಿಂದ ಬನ್ನಿ ಗೆಳೆಯರೇ ಏನನ್ನೂ ಹೇಳುವುದು ಬೇಡ. ಪ್ರಾಯೋಗಿಕವಾಗಿ ಆಚರಿಸೋಣ. ಜಗತ್ತಿಗೆ ಮಾದರಿಯಾಗಿ ಬದುಕೋಣ. ಆಗ ನೋಡಿ ಅದೇ ತತ್ತ್ವ, ಸತ್ವ ಹಾಗೂ ಸತ್ಯಗಳ ನಿಜವಾದ ಸಾಕ್ಷಾತ್ಕಾರ. ಸ್ವಾಮಿ ವಿವೇಕಾನಂದರು – “ಒಂದು ಟನ್ ನಷ್ಟು ವೇದಾಂತ ಹೇಳುವುದಕ್ಕಿಂತ ಒಂದನ್ನು ಪಾಲಿಸು” ಎಂದಿದ್ದಾರೆ. ಈ ಮಾತು ಎಷ್ಟು ಸತ್ಯ ಅಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021