ಧ್ಯಾನವಾಗಿಸೊ ಬದುಕ
ಧ್ಯಾನಗೈಯ್ಯಲು ಮನವನಣಿಗೊಳಿಸಲೇಕೆ ನೀ ಧ್ಯಾನವಾಗಿಸೊ ಬದುಕ ಮೌನದೊಳಗಿದ್ದು!
ಮೌನದೊಳಗೀಕ್ಷಿಸುತ ಬಾಳಿನೀ ನಾಟಕವ
ಮೌನದಿಂ ತಾಳೇಳೊ ಜಾಣಮೂರ್ಖ//
‘ಧ್ಯಾನ’ ಎಂತಹಾ ಪರಿಕಲ್ಪನೆ ! ಎಂತಹಾ ಸ್ಥಿತಿ ! ಇದಕ್ಕೆ ಮನಸ್ಸನ್ನು ಅಣಿಗೊಳಿಸೋದು ಅವಶ್ಯವೇ ! . ಆದರೆ ಹೇಗೆ ? ಪೂರ್ವಾಭಿಮುಖವಾಗಿ , ಮಣೆಯನ್ನೋ ಚಾಪೆಯನ್ನೋ ಹಾಕಿಕೊಂಡು , ಇಷ್ಟದೈವವನ್ನು ಸ್ಮರಿಸಿಕೊಂಡು ,ನಿಶ್ಯಬ್ದವಾದ ನಿಗದಿತ ಸ್ಥಳದಲ್ಲಿ ಕುಳಿತು ಹೀಗೇ ಏನೇನೋ ವ್ಯವಸ್ಥೆಗಳೆಲ್ಲಾ ಆಗಬೇಕು. ಅದೆಲ್ಲಕ್ಕಿಂತ ಮುನ್ನ ಧ್ಯಾನದ ಅರ್ಥ ಮತ್ತೆ ಗುರಿಯನ್ನು ಅರಿಯಬೇಕಲ್ಲವೇ !? ಗುರಿಯನರಿಯದೆ ಇವೆಲ್ಲಾ ವ್ಯವಸ್ಥೆಗಳಿದ್ದರೂ ಪ್ರಯೋಜನವಾಗದು ! ಹಾಂ ಅಂದಹಾಗೆ ಬದುಕನ್ನೇ ಧ್ಯಾನವಾಗಿಸಿಬಿಟ್ಟರೆ ! ಮೌನವಾಗಿ ಕಾಯಕದಲ್ಲಿ ತನ್ಮಯನಾಗಿಬಿಟ್ಟರೆ ! ಸಂದೇಹವೇ ಬೇಡ. ಅದು ಉನ್ನತಮಟ್ಟದ ಧ್ಯಾನ. ಬದುಕಿನ ಈ ನಾಟಕವನ್ನು ಮೌನವಾಗಿ ಹಾಗೇ ಸುಮ್ಮನೆ ವೀಕ್ಷಿಸಿ. ಎಂತೆಂತಹಾ ಪಾತ್ರಗಳಿವೆ ಗೊತ್ತೆ ? ನೋಡಿ ಅನುಭವಿಸಿ. ಅಂಟಿಕೊಳ್ಳಬೇಡಿ ಅಷ್ಟೆ. ಬೇಡೆಂದರೂ ನಿಮಗೂ ನಿಮ್ಮದೇ ಆದ ಪಾತ್ರಗಳು ಬರುತ್ತವೆ. ನಿರ್ಲಿಪ್ತತೆಯಿಂದ , ಮರೆವಿಗೆ ಈಡಾಗದೆ ತಾಳ್ಮೆಯಿಂದ, ಎಚ್ಚರಿಕೆಯಿಂದ ನಿರ್ವಹಿಸಿ. ಪಥ ಬಿಡಬಾರದಷ್ಟೆ. ಇದೇ ಧ್ಯಾನ. ಇದರಿಂದ ಸಿಗುವ ಆನಂದವನ್ನು ಅನುಭವಿಸಿ. ನೋಡಿ ಧ್ಯಾನದ ಫಲಿತವೆಂತಿರುತ್ತದೆ ಎಂದು !!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021