ಗರ್ಭದಲಿ ನೀ ಮೂಡಿದಾಗಲೇ ಮನದಲ್ಲಿ ಕನಸೂ ಚಿಗುರೊಡೆದಿತ್ತು…
ನಿನ್ನದೆ ಬಡಿತ ಕೇಳುವಾಗ
ಒಡಲೊಳಗೆ ನೀ ಮೃದುವಾಗಿ ಒದ್ದಾಗ
ಹೃದಯವೀಣೆ ಖುಷಿಯಲ್ಲಿ ಮಿಡಿದಿತ್ತು…
ಉಬ್ಬಿದ ಹೊಟ್ಟೆಯ ಮೇಲೆ ಕೈಆಡಿಸುತ್ತಾ ನಿನ್ನೊಡನೆ ಮಾತಾಡಿದಾಗ
ನನ್ನೆಲ್ಲಾ ಮಾತಿಗೆ ಉತ್ತರವೋ ಎಂಬಂತೆ ಮಿಸುಕಾಡಿ ನೀ ಸ್ಪಂದಿಸುತ್ತಿದ್ದೆ…
ಹೆರಿಗೆ ಕಷ್ಟವಾಗಿ…ಸಾವಿನೊಡನೆ ಸೆಣಸಾಡಿ…ಕಣ್ಣುಬಿಟ್ಟಾಗ…ನೀ ಪಕ್ಕದಲ್ಲಿ ಮಲಗಿದ್ದೆ…
ನನ್ನೆಲ್ಲ ಹೋರಾಟ ಸಾರ್ಥಕವೆಂಬಂತೆ ನಿದ್ದೆ ಕಣ್ಣಲ್ಲೆ ನಕ್ಕಿದ್ದೆ…
ಅದ ನೋಡಿ ನಾ ನೋವೆಲ್ಲ ಮರೆತಿದ್ದೆ…
ಪ್ರತಿ ದಿನ…ಪ್ರತಿ ಕ್ಷಣವೂ ನಿನ್ನೆಲ್ಲ ಬೆಳವಣಿಗೆಗಳಲಿ ಜೊತೆಯಾಗಿ ನಿಂತಿದ್ದೆ…
ನಿನ್ನೆಲ್ಲ ಆಟಪಾಠಗಳ ಆಸ್ವಾದಿಸಿದ್ದೆ…
ನನ್ನನ್ನೇ ನಾನು ಮರೆತಿದ್ದೆ…ನೀನೆ ನಾನಾಗಿದ್ದೆ…
ಸಮಯ ಉರುಳಿದ್ದೇ ತಿಳಿಯಲಿಲ್ಲ….
ಹಸುಗೂಸಾಗಿದ್ದವಳು ಹರೆಯದ ಹುಡುಗಿಯಾಗಿದ್ದೆ…
ಮಡಿಲಲ್ಲಿ ಮಲಗಿದ್ದ ನೀನು…ಆತ್ಮೀಯ ಗೆಳತಿಯಾದೆ…ನನ್ನೊಳಗೆ ಮತ್ತೆ ಹರೆಯ ತಂದೆ…..
ಖುಷಿಯ ಉತ್ತುಂಗದಿಂದ ನನ್ನ ಹಠಾತ್ತಾಗಿ ನೋವಿನ ಪ್ರಪಾತಕ್ಕೆ ತಳ್ಳಿದೆ ಯಾಕೆ…..
ಅಮ್ಮನ ಪ್ರೀತಿಗಿಂತ ಸೋಲು ನಿರಾಸೆಯೆ ಮೇಲುಗೈ ಸಾಧಿಸಿತೆ…
ಪ್ರಾಣವೇ ನೀನಾಗಿದ್ದ ಅಮ್ಮನಿಗೆ ಕಣ್ಣೀರ ಕಾಣಿಕೆಯೆ…
ಯಾರ ದೂರಲಿ ಹೇಳು…
ನಿನ್ನ ಆತುರದ ನಿರ್ಧಾರವನ್ನೋ…
ನನ್ನ ಹಣೆಬರಹವನ್ನೋ…
ಇಲ್ಲಾ ವಿಧಿಯ ಅಟ್ಟಹಾಸವನ್ನೋ…
ಸರಿತಪ್ಪುಗಳ ವಾದವೇಕಿನ್ನು
ಪುತ್ರಶೋಕ ನಿರಂತರವೆಂಬುದು ಸುಳ್ಳಾದೀತೆ….
ನೀ ಜೊತೆಗಿದ್ದಷ್ಟು ಕಾಲ ತಾಯ್ತನದ ಸುಖವ ಯಥೇಚ್ಛವಾಗಿ ಅನುಭವಿಸಿರುವೆ…
ಹೊಟ್ಟೆಯಮೇಲಿನ ನೆರಿಗೆಗಳು…
ಜೊತೆಯಾಗಿ ನಡೆದ ಕ್ಷಣಗಳು…
ಹಂಚಿಕೊಂಡ ಎಲ್ಲ ಖುಷಿಗಳು…
ಪ್ರತಿಕ್ಷಣ ನಿನ್ನ ನೆನಪಿಸುತಿದೆ….
ಒಮ್ಮೊಮ್ಮೆ ಕಣ್ಣೀರಾಗಿ…
ಮಗದೊಮ್ಮೆ ಕಿರುನಗೆಯಾಗಿ..