ಸಿದ್ಧ
ಅಧ್ಯಾತ್ಮ ಪೇಳ್ದೊಡೇಂ! ಸಿದ್ಧನಂತಿರ್ದೊಡೇಂ!
ಅಧ್ಯಯನದಿಂ ದಿವ್ಯ ಸಿದ್ಧಿಗಳ ಪಡೆಯೆ!
ಅಧ್ಯಾತ್ಮ ಸಿದ್ಧಿಯಿಂ ಮೃತ್ಯುಭಯವಳಿಯದಿರೆ
ಸಿದ್ಧನೆಂತಾದಾನೊ ಜಾಣಮೂರ್ಖ//
ಇಂದು ಎಲ್ಲರೂ ಅಧ್ಯಾತ್ಮದ ಬಗ್ಗೆ ಮಾತನಾಡುತ್ತಾರೆ . ಇದು ತುಂಬಾ ಒಳ್ಳೆಯ ಬೆಳವಣಿಗೆ. ಮನಶ್ಶಾಂತಿಗೆ ಇದು ತುಂಬಾ ಅಗತ್ಯ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಿವ್ಯ ಸಿದ್ಧಿಗಳನ್ನು ಪಡೆದು ಸಿದ್ಧರೇ ಆಗುತ್ತಾರೆ. ಅದು ಅವರ ಪೂರ್ವಜನ್ಮದ ಸಂಸ್ಕಾರ ಬಲ . ಕೆಲವರು ಹೆಚ್ಚಿನ ಅಧ್ಯಯನ ಮಾಡಿ ಸಿದ್ಧರು ಎನಿಸಿಕೊಳ್ಳುತ್ತಾರೆ ! ಕೆಲವರು ಸಿದ್ಧರಂತೆ ಸೋಗು ಹಾಕುತ್ತಾರೆ! ಮತ್ತೆ ಕೆಲವರು ಸ್ವಯಂ ಘೋಷಿತ ದೇವಮಾನವರೇ ಆಗಿಬಿಡುತ್ತಾರೆ. ಕೆಲವರು ತಾನು ದೈವಚಿತ್ತಕೆ ಪ್ರಿಯನು ಎಂದುಕೊಂಡರೆ ಮತ್ತೆ ಕೆಲವರಿಗೆ ಈ ಭಾವವೇ ಉದರ ಪೋಷಣೆಯ ಮಾರ್ಗವಾಗಿಬಿಡುತ್ತದೆ ! ಇವರನ್ನು ನಂಬಿ ನಡೆಯುವುದು ಕುರುಡನೊಬ್ಬನು ಮತ್ತೊಬ್ಬ ಕುರುಡನ ಕೈಹಿಡಿದು ನಡೆದಂತೆ!! ಅದರೆ ಯಾರಲ್ಲಿ ದೇಹಭಾವವು ಅಳಿದಿರುವುದೋ , ಮೃತ್ಯುಭಯವು ಇರುವುದಿಲ್ಲವೋ ಅವರೇ ನಿಜವಾದ ಸಿದ್ಧರು. ಇಂತಹಾ ಅಧ್ಯಾತ್ಮ ಗುರು ಸಿಗುವುದು ಬಹು ದುರ್ಲಭ. ಅಧ್ಯಯನವೋ , ಅನುಭವವೋ , ಸಿದ್ಧಿಯೋ ಆತ್ಮಜ್ಞಾನವಾಗಿ ಅಳವಟ್ಟಾಗ ಅದೇ ನಿಜವಾದ ಸಿದ್ಧಿ.ಅಂತಹಾ ಅರಿವು ಸಿದ್ಧಿಸಿದವರು ನಿರ್ಲಿಪ್ತರು ! ಸದಾ ಸುಖಿಗಳು ! ನಿಜವಾದ ಸಿದ್ಧರು ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021