ಮುಟ್ಟೇಳೊ ದೈವತ್ವ
ಬಿಟ್ಟು ನೋಡೊಳಗಣ್ಣನಟ್ಟಿಬಿಡು ಮನಮೃಗವ
ಕಟ್ಟಿಬಿಡು ಕನವರಿಕೆ ಸುಟ್ಟುರುಹೊ ಕೊಳೆಯ
ಹುಟ್ಟು ಮಾನವ ನೀನು ಕೆಟ್ಟು ಪೋಗದಿರಯ್ಯೊ
ಮುಟ್ಟೇಳೊ ದೈವತ್ವ ಜಾಣಮೂರ್ಖ //
ತತ್ರಾಪಿ ಜನ್ಮ ಶತಕೋಟಿಷು ಮಾನುಷತ್ವಂ ಎಂದು ಶ್ರುತಿ ಪುರಾಣಗಳು ಸಾರುತ್ತವೆ.ಮನುಷ್ಯ ಅನೇಕ ಜನ್ಮಗಳನ್ನು ಕಳೆದು ತನ್ನ ಪ್ರಾರಬ್ಧಕರ್ಮಾನುಸಾರ ಬಹಳ ಕಷ್ಟ ಪಟ್ಟು ಸಕೃತ ಫಲದಿಂದ ಈ ಮಾನವ ಜನ್ಮವನ್ನು ಪಡೆದಿದ್ದಾನೆ. ಮಾನವತ್ವದ ಮೂಲಕ ದೈವತ್ವಕ್ಕೆ ಸಾಗಬೇಕು. ಅದಕ್ಕೆ ಬಹಳಷ್ಟು ಅಡ್ಡಿಗಳು. ಮೊದಲನೆಯ ಅಡ್ಡಿಯೇ ನಮ್ಮ ಮನಸ್ಸು , ಈ ಮನಸ್ಸಿಗಂಟಿದ ಮಾಯೆ , ಚಾಂಚಲ್ಯ , ಲೋಲುಪತೆ ಹೀಗೇ ಏನೇನೋ ತುಂಬಾ ಅಡ್ಡಿಗಳು. ಓ ಗೆಳೆಯಾ , ಒಮ್ಮೆ ಒಳಗಣ್ಣ ತೆರೆದು ನೋಡು ! ಮನಮೃಗವನ್ನು ಹೊರಗೆ ಅಟ್ಟಿಬಿಡಯ್ಯಾ ! ಮನದ ಕ್ಷುಲ್ಲಕ ಕನವರಿಕೆಗಳನ್ನು ಕಟ್ಟಿದೂಡಯ್ಯಾ ! ಮನದ ಮಲಿನತೆಯನ್ನು ಸುಟ್ಟು ಬಿಡಯ್ಯ ! ಶುದ್ಧನಾಗಿಬಿಡು, ಇವುಗಳೆಲ್ಲದರ ಹೊಡೆತಕ್ಕೆ ಸಿಕ್ಕಿ ಕೆಟ್ಟು ಹೋಗದಿರಯ್ಯಾ ! ಮಾಡಬೇಕಾದ ಕರ್ತವ್ಯಗಳನ್ನು ಮಾಡು. ಫಲಾಫಲಗಳನ್ನು ಭಗವಂತನಿಗೆ ಬಿಡು. ಯೋಗ್ಯತಾನುಸಾರ ಕೊಡುವುದು ಅವನಿಗೆ ಗೊತ್ತಿದೆ. ಲೋಕ ಕಲ್ಯಾಣವೇ ಬಾಳಿನ ಗುರಿಯಾಗಿರಲಿ. ಎಲ್ಲದರಲ್ಲೂ ಒಳ್ಳೆಯ ಉದ್ದೇಶವಿರಲಿ ಸಾಕು. ವ್ಯಕ್ತಿತ್ವವು ದೈವತ್ವಕ್ಕೇರುವ ಸುಲಭ ಮಾರ್ಗ ಇದೇ ಆಗಿದೆ. ಈ ಮಾರ್ಗವೇ ಇಹಕ್ಕೂ ಪರಕ್ಕೂ ಸಾಧನವು. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021