ಬೆಳಕಿನೆಡೆಗೆ
ಲೋಕದುದ್ಧಾರಕ್ಕೆ ಸೃಷ್ಟಿಸಿದ ಶಕ್ತಿಯಿದೆ
ಸಾಕು ಉದ್ಧರಿಸೇಳು ನಿನ್ನ ನೀ ಮೊದಲು
ಹಾಕು ಕಡಿವಾಣ ನಿನ್ನಾಸೆ ಕುದುರೆಯ ನಿಲಿಸೆ
ಬೇಕಾದುದೇನರಿಯೊ ಜಾಣಮೂರ್ಖ//
ಈ ಜಗತ್ತಿನ ಉದ್ದಾರ ನಾನು ಮಾಡುತ್ತಿದ್ದೇನೆ ಎಂಬ ಹುಂಬತನ ಬೇಡ. ಹುಟ್ಟಿಸಿದ ದಿವ್ಯ ಶಕ್ತಿಗೆ ಅದರ ಜವಾಬ್ದಾರಿ ಇದೆ. ಆ ಶಕ್ತಿಯ ಎದಿರು ಏನಿದು ಪೊಳ್ಳು ಅಹಂಕಾರ ! ಅದೂ ಮಾನವನಂತಹಾ ಸಂಸ್ಕಾರವಂತ ಜೀವಿಗೆ !? ಮೊದಲು ನಮ್ಮ ಉದ್ಧಾರವಾಗಬೇಕಿದೆ. ಅಂದರೆ ಆತ್ಮೋದ್ಧಾರವಾಗಲಿ , ಆತ್ಮಸಂಸ್ಕಾರವಾಗಲಿ. ಮೊದಲು ನಮ್ಮ ಆಸೆ ಕುದುರೆಯ ಓಟವನ್ನು ನಿಯಂತ್ರಿಸೋಣ. ಅದಕ್ಕೆ ಕಡಿವಾಣ ಹಾಕೋಣ. ನಮಗೆ ನಿಜವಾಗಿ ಬೇಕಾದುದೇನೆಂದು ಅರಿಯೋಣ. ಅದರೆಡೆಗೆ ಸಾಗೋಣ. ಅದುಬಿಟ್ಟು ಬೇಡದುದನ್ನೆಲ್ಲಾ ಬಯಸಿ , ಅದಕ್ಕಾಗಿ ಮಾಡಬಾರದುದನ್ನೆಲ್ಲಾ ಮಾಡಿ ಈ ಲೌಕಿಕ ಬದುಕಿನಲ್ಲಿ ಯಾಕಯ್ಯಾ ಗೆಳೆಯ ಇಷ್ಟೊಂದು ಹಾರಾಟ ! ಅಯ್ಯೋ, ಇದಕ್ಕೆ ಕೊನೆಯಾದರೂ ಎಂದು !? ನಮಗೆ ಬೇಕಾದುದೇನೆಂದರಿತು ಮೊದಲು ನಾವು ಬೆಳಕ ಕಾಣೋಣ. ಆಮೇಲೆ ನೀನೇ ಬೆಳಕಾಗುವೆ ! ಆಗ ಜಗವ ಬೆಳಗುವ ! ಈಗ ಮೊದಲು ಅಂಧಕಾರವನ್ನು ಬಿಟ್ಟು ಬೇಳಕಿನೆಡೆಗೆ ಸಾಗಬೇಕಿದೆ ಅಷ್ಟೆ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021