ಸತ್ಯ ಮುಕ್ತಿಯ ಹೇತು
ನಿತ್ಯ ನೇಮಗಳೆಲ್ಲ ತತ್ತ್ವಕಳವಟ್ಟಿರಲು
ಸತ್ಯ ಒಂದೇ ಬಾಳಿನುಸಿರಾಗಿ ಬರಲು
ಅತ್ಯಾಸೆಯಳಿಯೆ ತಾ ತತ್ತ್ವ ಕಾಯ್ವುದು ದಿಟದಿ
ಸತ್ಯ ಮುಕ್ತಿಯ ಹೇತು ಜಾಣಮೂರ್ಖ //
ನಮ್ಮ ಬದುಕು ಒಂದು ಒಳ್ಳೆಯ ತತ್ತ್ವಕ್ಕೆ ಬದ್ಧವಾಗಿರಬೇಕು. ಪ್ರಾಣ ಹೋಗುವ ಸ್ಥಿತಿ ಬಂದರೂ ಹಾಗೆಯೇ ನಡೆಯಬೇಕು. ಸ್ವಧರ್ಮೇ ನಿಧನಂ ಶ್ರೇಯಃ ಎಂದಿದ್ದಾನೆ ಗೀತಾಚಾರ್ಯ ಶ್ರೀಕೃಷ್ಣ . ಮಾಡುವುದು ಅನಾಚಾರ ಮನೆಯ ಮುಂದೆ ಬೃಂದಾವನ ಎಂಬಂತಾಗಬಾರದು ಈ ಬದುಕು ! ಸತ್ಯ ಬಾಳಿನ ಉಸಿರಾಗಿರಬೇಕು. ಅತಿಯಾದ ಅಸೆಯಾದರೂ ಏಕೆ ? ನಶ್ವರ ತತ್ತ್ವ ತಾನು ಬದುಕಿನಲ್ಲಿ ಅಳವಟ್ಟಾಗ ಅತ್ಯಾಸೆ ಬರುವುದಾದರೂ ಹೇಗೆ !? ಅಂತಹಾ ಸತ್ ತತ್ತ್ವಗಳು ನಿಜವಾಗಿ ನಮ್ಮನ್ನು ಬಿಡದೆ ಕಾಯುತ್ತವೆ. ಸತ್ಯವು ಮೋಕ್ಷಕ್ಕೆ ಕಾರಣವಾಗುತ್ತದೆ. ಇಂದಿನ ಸಮಕಾಲೀನ ಬದುಕಿನಲ್ಲಿ ಇದೆಲ್ಲಾ ಅಳವಡಿಕೆ ಸಾಧ್ಯವೇ ಎಂಬ ಪ್ರಶ್ನೆ ಮೂಡಬಹುದು. ಸ್ವಲ್ಪ ಅಂತರಾವಲೋಕನ ಮಾಡಿಕೊಂಡರೆ ಎಲ್ಲವೂ ಸಾಧ್ಯ. ಮನಸ್ಸು ಮಾಡಬೇಕು. ತತ್ತ್ವಾನುಷ್ಠಾನದಲ್ಲಿ ಬದ್ಧತೆ ಮೂಡಬೇಕು ಮತ್ತು ನಿತ್ಯವೂ ಅಂತರ್ವಿಮರ್ಶೆ ನಡೆಯುತ್ತಲೇ ಇರಬೇಕು. ಆಗಲೇ ಶುದ್ಧಿಕಾರ್ಯ (Refresh) ಆಗಲು ಸಾಧ್ಯ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021