ಕಿತ್ತು ಬಿಸುಡಾ ಭಯವ
ಕತ್ತಲೆಯೊಳೊರ್ವನೇ ನಡೆವಾಗಲಾರಿಹರು?
ಅತ್ತಲೇನಿಹುದೆಂಬ ಭಯವೊಂದನುಳಿದು !
ಇತ್ತ ಸಂಸಾರದೊಳಗಂತೆ ಕಾಣೈ ಕೆಳೆಯ
ಕಿತ್ತು ಬಿಸುಡಾ ಭಯವ ಜಾಣಮೂರ್ಖ//
ಕತ್ತಲೆ ಎಂದರೇನೇ ಭಯ ! ಮತ್ತೆ ಆ ಕತ್ತಲಲ್ಲಿ ಒಬ್ಬರೇ ನಡೆಯಬೇಕೆಂದರೆ ! ಕತೆ ಮುಗಿಯಿತು ಬಿಡಿ. ಏನೇನೋ ಕಲ್ಪನೆಗಳು ! ಎಂದೂ , ಯಾವಾಗಲೂ ಕೇಳದ ಗೆಜ್ಜೆಯ ಸದ್ದು ಆಗ ಕೇಳಿಸುತ್ತದೆ. ಮುಂದೆ ಏನೋ ಬರಬಹುದು ಎಂಬ ಭಯ ! ಭಯ ! ಭಯ ಮಾತ್ರ ಅಷ್ಟೆ. ಆದರೆ ಸತ್ಯ ಏನೆಂದರೆ ಏನೂ ಬರುವುದಿಲ್ಲ. ಋಣಾತ್ಮಕ ಶಕ್ತಿಗಳ , ಕ್ರೂರ ಮೃಗಗಳ ಎಂತೆಂತದೋ ಭಯದ ಕಾರಣದಿಂದ ಬೇರೆ ಯಾವ ಧನಾತ್ಮಕ ಅಂಶವೂ ಆಗ ನಮ್ಮಲ್ಲಿ ಕೆಲಸ ಮಾಡುವುದಿಲ್ಲ ! ಹಾಗೇನೇ ಈ ಸಂಸಾರದ ರಾಗದ್ವೇಷಾದಿಗಳು ! ನಮ್ಮಲ್ಲಿ ಅತೀವ ಭಯವನ್ನು ಹುಟ್ಟಿಸುತ್ತವೆ. ಆಗ ನಮ್ಮಲ್ಲಿ ಇರುವ ಆ ಭಯವನ್ನು ಮೆಟ್ಟಿ ನಿಲ್ಲುವ ಶಕ್ತಿಯೂ ಕೆಲಸ ಮಾಡುವುದಿಲ್ಲ ! ಆಗುವುದು ಆಗುತ್ತದೆ. ದೈವನಿಯಾಮಕವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲವೆಂಬ ದೃಢವಾದ ವಿಶ್ವಾಸದಿಂದ , ನಂಬಿಕೆಯಿಂದ ಆ ಭಯವನ್ನು ಕಿತ್ತೊಗೆದು ಮುಂದೆ ಸಾಗಿದರೆ ಬದುಕಿನ ಯಾವ ಭಯವೂ ನಮ್ಮನ್ನು ಏನೂ ಮಾಡಲಾರದು ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021