ಅಂತರ್ಮುಖಿ
ಗುರುಮೂಲ ನದಿಮೂಲ ದೈವಮೂಲವ ಬೆದಕಿ
ಪರಿಕಿಸುತ ಗೆದ್ದವನದಾರು ಜಗದೊಳಗೆ !
ಅರಿತವನು ಮೌನಿ ಮಿಗೆ ತರ್ಕಿಸಲು ಮಾಗದಲೆ
ಜರೆ ಮರಣ ಗೆದ್ದನೈ ಜಾಣಮೂರ್ಖ //
ಈಗ ನೋಡಿ ಗೆಳೆಯರೇ ಪೂರ್ವಕಾಲದಿಂದಲೂ ಅಂದರೆ ಋಷಿಗಳೂ , ಮುನಿಪುಂಗವರೂ ಈ ಭುವಿಯಲ್ಲಿ ಯಜ್ಞಯಾಗಾದಿಗಳನ್ನು ಮಾಡುತ್ತಿದ್ದ ಕಾಲದಿಂದಲೂ ಋಷಿಮೂಲ , ಗುರುಮೂಲ , ನದಿಮೂಲ , ದೈವಮೂಲ ಹೀಗೆ ಕೆಲವರ ಮೂಲ ಹುಡುಕೋದು ಬೇಡ ಎಂದರು. ಈ ಮನಸ್ಸು ಸುಮ್ಮನಿರಬೇಕಲ್ಲಾ ! ಏನಾಗುತ್ತೆ ಹುಡುಕಿದರೆ ಅಂತ ಹಠಯೋಗಿಗಳ ತರಹ ಹುಡಕ ಹೊರಟರು ! ಪರೀಕ್ಷಿಸ ಹೊರಟರು ! ಏನಾಯಿತು !? ಅವರಿಗೆ ಏನು ತಿಳಿಯಿತೋ ಗೊತ್ತಿಲ್ಲ. ಆದರೆ ಪೂರ್ಣ ಅರಿತವರು ಮಾತ್ರ ಮೌನಿಗಳಾದರು. ಅದರ ಬಗ್ಗೆ ತರ್ಕಿಸಲು ಆಗಲಿಲ್ಲ. (ಮನಸ್ಸು ಆ ಪಥದಲ್ಲಿ ಸಾಗಿತು. ಆದರೆ ಅಷ್ಟು ಎತ್ತರಕ್ಕೆ ಮಾಗಬೇಕಲ್ಲ !) ಏಕೆಂದರೆ ಅವೆಲ್ಲಾ ತರ್ಕವನ್ನು ಮೀರಿದ ಮತ್ತು ಮಾನಸಿಕವಾಗಿ ಅನುಭವ ಯೋಗ್ಯವಾದವುಗಳಷ್ಟೆ ಎಂಬ ಸತ್ಯ ಅವರಿಗೆ ಗೋಚರಿಸಿತೇನೋ ! ಆದರೆ ಒಂದಂತೂ ಸತ್ಯ ಅರಿತವರು ಅಂತರ್ಮುಖಿಗಳಾದರು. ಜರಾಮರಣಗಳ ಭಯ , ಭ್ರಮೆಗಳನ್ನು ಮೆಟ್ಟಿ ನಿಂತರು ! ಸಾಧಕರಾದರು , ಅವರೇ ಒಂದು ಅಗಾಧ ಅಂತೆಯೇ ಸುಂದರ ಪ್ರಪಂಚವಾದರು ! ಓಹ್ ! ಎಂತಹಾ ಸ್ಥಿತಿ ! ಬದುಕಿನಪರಮೋಚ್ಛ ಸ್ಥಿತಿ ! ಅಲ್ಲವೇ ಗೆಳೆಯರೇ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021