ಪರೋಪಕಾರಾರ್ಥಮಿದಂ
ಮಣ್ಣಲ್ಲೆ ಮೊಳೆತು ತಾ ಗಿಡವಾಗಿ ಕಾಯಾಗಿ
ಹಣ್ಣಾಗುತಳ್ಳೆಯಾ ರೂಪಿಂದಲೊಪ್ಪಿ
ಚಿಣ್ಣರಿಂದೆಲ್ಲರ್ಗೆ ವಸ್ತ್ರವಾಗುತ ನಮೆದು
ಮಣ್ಣ ಸೇರ್ವುದೆ ಚೋದ್ಯ ಜಾಣಮೂರ್ಖ //
ಇದೊಂದು ದೃಷ್ಟಾಂತವಷ್ಟೆ . ಅದರೆ ಎಲ್ಲವೂ ಹೀಗೆಯೇ ! ಎಲ್ಲಿಂದ ಬಂದೆವೋ ಅಲ್ಲಿಗೇ ನಿರ್ಗಮನ ! ಮಣ್ಣಲ್ಲೇ ಮೊಳಕೆಯೊಡೆದು , ಗಿಡವಾಗಿ , ಕಾಯ್ಬಿಟ್ಟು , ಹಣ್ಣಾಗಿ ಅಳ್ಳೆಯ ಅಂದರೆ ಹತ್ತಿಯ ರೂಪಪಡೆದು ಚಿಕ್ಕವರಿಂದ ಹಣ್ಣು ಹಣ್ಣು ಮುದುಕರ ವರೆಗೆ ಎಲ್ಲರಿಗೂ ವಸ್ತ್ರವಾಗುತ್ತದೆ. ಆ ವಸ್ತ್ರ ಹಾಗೇನೇ ಇರೋದಿಲ್ಲ. ಕಾಲಕ್ರಮೇಣ ನವೆದು ಹೋಗುತ್ತದೆ. ಆಮೇಲೆ ನಾವದನ್ನು ಅಷ್ಟಕ್ಕೇ ಬಿಡದೆ ನೆಲ ಒರೆಸೋಕೂ ಬಳಸುತ್ತೇವೆ. ನಂತರ ತಿಪ್ಪೆಗೆ ಎಸೆದುಬಿಡುತ್ತೇವೆ ತಾನೆ !? ಅದು ಅಲ್ಲಿಯೇ ಮಣ್ಣು ಸೇರಿ ಮಣ್ಣಲ್ಲಿ ಮಣ್ಣಗಿಬಿಡುತ್ತೆ ! ಮಣ್ಣಲ್ಲಿಯೇ ಹುಟ್ಟಿ ಮಣ್ಣನ್ನೇ ಸೇರೋ ಹತ್ತಿಯ ಈ ಬದುಕಿನ ಚಕ್ರ ಜಗತ್ತಿನ ಎಲ್ಲ ಜೀವಿಗಳ ಬದುಕಿಗೂ ಎಷ್ಟು ಹತ್ತಿರ ! ಎಂತಹಾ ಅಚ್ಚರಿ ! ಆದರ್ಶ! ಅಲ್ಲವೇ ? ಪಂಚಭೂತಗಳಿಂದಾದ ಶರೀರ ಕೊನೆಗೆ ಪಂಚಭೂತಗಳಲ್ಲೇ ಲೀನವಾಗುತ್ತದೆ ! ಆದರೆ ಈ ನಡುವಿನ ಬದುಕು ಮಾತ್ರ ಹತ್ತಿಯ ಬದುಕಿನಂತೆಯೇ ಇದ್ದರೆ ಎಷ್ಟು ಚಂದ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021