ಪದ್ಮಪತ್ರನಾಗುವ ಬಗೆ
ಪದ್ಮಪತ್ರರ ಸಂಗ ದೊರೆಕೊಂಡು ಗುರುಪಾದ
ಪದ್ಮದೊಳು ಸುಖಿಯಪ್ಪುದೈ ಆತ್ಮ ಕೆಳೆಯ
ಛದ್ಮವೇಷದ ಮರೆವ ಗುರು ಕರುಣೆಯಿಂ ಕಳೆದು
ಪದ್ಮಪತ್ರನೆ ಆಗೊ ಜಾಣಮೂರ್ಖ //
ಗುರುಪಥದಲ್ಲಿದ್ದರೆ ಸಾಕು ! ನಾವು ಪದ್ಮಪತ್ರರಾದೆವೆಂದೇ ಅರ್ಥ. ಬದುಕಿನಲ್ಲಿ ಹೀಗಿರಬೇಕು ಎನ್ನುವುದಕ್ಕೆ ಪದ್ಮಪತ್ರವು ಒಂದು ಉಪಮಾನವಾದರೂ ಆ ತತ್ತ್ವ ಮಾತ್ರ ಉನ್ನತವಾದದ್ದು. ಅರಿತೋ ಅರಿಯದೆಯೋ ಈ ಜನ್ಮದೊಳಂಟಿದ ಮರೆವನ್ನು ಗುರುಕರುಣಾಮೃತದಿಂದ ತೊಳೆದು ಮತ್ತೆ ಮತ್ತೆ ಅದಕ್ಕೆ ಅಂಟದೇ ಬದುಕೋದಿದೆಯಲ್ಲಾ ಅದೇ ಪದ್ಮಪತ್ರರಾಗುವ ಬಗೆ. ಆದರೆ ಇಂತಹಾ ಚಿಂತನೆಗಳೆಡೆಗೊಯ್ದ ಗುರು ಬಂಧುಗಳು ನಿಜಕ್ಕೂ ಪದ್ಮಪತ್ರರೇ ಸರಿ. ಅಂತಹವರ ಸತ್ಸಂಗದಿಂದ ಸದ್ಗುರುವಿನ ದಿವ್ಯ ಚರಣಾರವಿಂದ ಸಾನಿಧ್ಯದಲ್ಲಿ ಆತ್ಮ ಸುಖಿಯಾಗುತ್ತದೆ. ಈ ಶರೀರ ಧಾರಣೆ ಒಂದು ಛದ್ಮವೇಷವೇ ಸರಿ ! ಇದಕ್ಕೆ ಮಾಯೆಯ ಮರೆವು ಬೇರೆ ! ಬಿಟ್ಟಂತೆ ಕಂಡರೂ ಮತ್ತೆ ಮತ್ತೆ ಅಂಟಿಕೊಳ್ಳುವ ಮಾಯೆ ! ದ್ವಂದ್ವಗಳ ನಡುವಿನ ಬದುಕು ! ಇದರಿಂದ ಹೊರಬರಲು ನಾವು ಪದ್ಮಪತ್ರರಾಗಬೇಕು ! ಮಾಯೆಯ ಬದುಕಿಗೆ ಅಂಟಿಯೂ ಅಂಟದಂತಿರಬೇಕು. ಹೇಳುವುದು ಸುಲಭ ! ಆದರೆ ಆಚರಣೆಗೆ ತರುವುದು ಕಷ್ಟ. ಆದರೆ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ದೃಢವಾದ, ಅಚಲವಾದ ಮನಸ್ಸಿನಿಂದ ನಿಲ್ಲಬೇಕು ಅಷ್ಟೆ ! ಆಗ ಎಲ್ಲರೂ ಪದ್ಮಪತ್ರರೇ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021