ಆಸೆಯೆಂಬುಗಿಬಂಡಿ
ಆಸೆಯೆಂಬುಗಿಬಂಡಿಗೇಸೊಂದು ಬೋಗಿಗಳು
ಲೇಸಾಗಿ ಎಳೆಯಲಾಗದು ಬಾಳ ರಥವ
ದಾಸ್ಯದಾ ಕೊಂಡಿಗಳನೊಂದೊಂದೆ ಕಳಚೇಳು
ಲೇಸಾಗಿ ಸಾಗುವುದೊ ಜಾಣಮೂರ್ಖ//
ಈ ಬದುಕಿನ ರಥವನ್ನು ಎಳೆಯುತ್ತಿರೋದು ಆಸೆಯೆಂಬ ಉಗಿಬಂಡಿ (ರೈಲುಗಾಡಿ). ಇದಕ್ಕೆ ತುಂಬಾ ಬೋಗಿಗಳು ! ಒಂದೊಂದೂ ದಾಸ್ಯದ ಬೋಗಿಗಳವು ! ಆ ಬೋಗಿಗಳು ಯಾವುವು ಅಂತ ನಾ ಬೇರೆ ಹೇಳಬೇಕಿಲ್ಲ! ಅರಿಷಡ್ವರ್ಗಗಳು ! ಅಷ್ಟ ಮದಗಳು ! ಜೊತೆಗೆ ರಾಗ ದ್ವೇಷ ಅತಿಸ್ವಾರ್ಥಾದಿ ಬೇರೆ ಬೇರೆ ಬೋಗಿಗಳು ! ಸಲೀಸಾಗಿ ಗುರಿ ಸೇರಲು ಈ ಬೋಗಿಗಳ ಭಾರ ತೀರಾ ಹೆಚ್ಚಾಗಿದೆ. ಗುರಿ ಮುಟ್ಟಲು ಒಂದೊಂದೇ ಬೋಗಿಯ ಕೊಂಡಿಯನ್ನು ಕಳಚಿದರಾಯ್ತು ಅಷ್ಟೆ ! ಬಾಳ್ಬಂಡಿ ಶಾಂತಿಯಿಂದ ಸುಗಮವಾಗಿ ಸಾಗುತ್ತದೆ. ಲೇಸಾಗಿ ಗುರಿ ಮುಟ್ಟುತ್ತದೆ ! ಬೇಡವಾದವರಿಗೆ , ಬೇಡವಾದುದಕ್ಕೆಲ್ಲಾ ದಾಸರಾಗಿ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಧರ್ಮ, ನ್ಯಾಯ, ನಿಸ್ವಾರ್ಥ, ನಿರಹಂಕಾರ, ಸತ್ಪರಂಪರೆ , ಭಗವಂತಚ್ಚಿಂತನೆಗಳೆಂಬಿತ್ಯಾದಿ ಬೋಗಿಗಳನ್ನು ಅಳವಡಿಸಿಕೊಂಡು ಬದುಕಿ, ಬಾಳ್ಬಂಡಿಯನ್ನು ಎಳೆಯೋದು ಬಹು ಸುಲಭ ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021